Wednesday, June 13, 2012

ಕುಶಲವೇ.........? ಕ್ಷೆಮವೇ............?

                ಒಂದು ವಾರದ ರಜೆ ಮುಗಿಸಿ ಮುಂಗಾರು ಮಳೆಯ ಸುಂದರ ಕ್ಷಣಗಳನ್ನು ಸಂತೋಷದಿಂದ ಅನುಭವಿಸಿ, ನಿನ್ನೆ ತಾನೇ ದೆಹಲಿಗೆ ಮರಳಿ ಬಂದಿದ್ದೆ. ಮಲೆನಾಡಿನ ಮಳೆಗಾಲದ ವಾತಾವರಣದಿಂದ ಮತ್ತೆ ದೆಹಲಿಯ ಬಿಸಿಲಿಗೆ ದೇಹ ತಕ್ಷಣ ಹೊಂದಿಕೊಳ್ಳದೆ ತುಂಬಾ ಸುಸ್ತಾಗಿತ್ತು. ಗಡದ್ದಾಗಿ ಒಂದು ನಿದ್ದೆ ಮುಗಿಸಿ ಎದ್ದಾದ ಮೇಲೆ ರೂಮನ್ನು ಶುಚಿಗೊಳಿಸುವ ಕಾರ್ಯ ಶುರುಮಾಡಿಕೊಂಡೆ. ಹಾಗೆ ಹಳೆಯ ಪೆಟ್ಟಿಗೆಯಲ್ಲಿದ್ದ ಹತ್ತಾರು ಪತ್ರಗಳು ಹತ್ತು ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದವು.

          ಆಲ್ಲಿದ್ದ ಪತ್ರಗಳು ಒಂದೋ ಎರೆಡೋ? ಅಪ್ಪ ಬರೆದ ಪ್ರೀತಿಯ ಪತ್ರ, ಅಕ್ಕನ ವಾತ್ಸಲ್ಯದ ಪತ್ರ, ತಮ್ಮ ಏಳನೇ ಕ್ಲಾಸಲ್ಲಿ ಪಾಸಾದಾಗ ಬರೆದ ಹೆಮ್ಮೆಯ ಪತ್ರ, ಗೆಳೆಯ-ಗೆಳತಿಯರ ಸ್ನೇಹದ ಪತ್ರ, ಪೋಸ್ಟ್ ಮಾಡದೆ ಇಟ್ಟುಕೊಂಡ ಹಲವು ಹುಡುಗಿಯರಿಗೆ ಬರೆದ ಪ್ರೇಮ ಪತ್ರ, ನಿಯತಕಾಲಿಕ ಪತ್ರಿಕೆಗಳಿಗೆನಗಳಿಗೆ ಕಳುಹಿಸಲು ಬರೆದು ಭಯದಿಂದ ಪೋಸ್ಟ್ ಮಾಡದಿದ್ದ ಕತೆ ಕವನಗಳು..............    ಹೀಗೇ ಸಾಲು ಬೆಳೆಯುತ್ತ ಹೋಗುತ್ತದೆ.

           ಆ ದಿನಗಳೇ ಚನ್ನಾಗಿದ್ದವು, ಪತ್ರಕ್ಕಾಗಿ ಕಾಯುವ ಆ ಸುಖ ಇನ್ನೂ ಚನ್ನಾಗಿತ್ತು. ನಮಗೆ ಪತ್ರ ಓದಲು ಬರೆಯಲು ಸಾಕಷ್ಟು ಸಮಯವೂ ಇತ್ತು. ತಾಳ್ಮೆಯೂ ಇತ್ತು. ಅಪ್ಪನ ಪತ್ರ ತಿಂಗಳು ಕಳೆದರೂ ಬರದಿದ್ದಾಗ ಭಯ ಆಗುತ್ತಿತ್ತು. ಅಕ್ಕ ಪತ್ರ ಬರೆದು ಬುದ್ಧಿವಾದ ಹೇಳದಿದ್ದರೆ ಏನೋ ಕಳೆದು ಕೊಂಡಂತ ಅನುಭವವಾಗುತ್ತಿತ್ತು. ನಾನಾ ಊರುಗಳಲ್ಲಿ ನೆಲೆಸಿದ ಸ್ನೇಹಿತರ ಬಳಗದಿಂದ ದಿನಕ್ಕೆ ಒಬ್ಬರ ಪತ್ರವಾದರೂ ಇರುತ್ತಿತ್ತು. ಅವರ ಶಾಲಾ ಕಾಲೇಜಿನ ಅನುಭವಗಳು, ಪ್ರೇಮ ಪ್ರಸಂಗಗಳು ವಿನಿಮಯವಾಗುತ್ತಿದ್ದವು.

             ಈಗಿನ ಪಾಠ ಕ್ರಮದಲ್ಲಿ ಪತ್ರ ಬರೆಯುವ ಬಗ್ಗೆ ಬೋಧನೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕಾಲದಲ್ಲಂತೂ ಇತ್ತಪ್ಪ! ಆದರೂ ಅದಕ್ಕೂ ಮೊದಲೇ ನಮಗೆ ಪತ್ರ ಬರೆಯುವ ಕ್ರಮ ತಿಳಿದಿರುತ್ತಿತ್ತು. ಹಿರಿಯರಿಗೆ ಬರೆಯುವಾಗ, ಕಿರಿಯರನ್ನು ಸಂಬೋಧಿಸುವಾಗ, ಸಮವಯಸ್ಕರೊಡನೆ........... ಹೀಗೆ ನಾನ ವಿಧಾನಗಳು ನಮಗೆ ಗೊತ್ತಿರುತ್ತಿತ್ತು.

            ಪ್ರೌಢ ಶಾಲೆಯ ಮೆಟ್ಟಿಲು ಹತ್ತುವುದರೊಳಗೆ ಪ್ರೀತಿ ಪ್ರೇಮದ ನಾನ ಕನಸುಗಳು ನಮಗೆ ಶುರು ಆಗಿರುತ್ತಿದ್ದವು. ಎಲ್ಲಾ ಹೆಣ್ಣುಗಳಲ್ಲೂ ನಮ್ಮ ಸಂಗಾತಿಯನ್ನು ಹುಡುಕುತ್ತಿದ್ದೆವು. ಚಂದ ಕಂಡ ಮನಸ್ಸು ಒಪ್ಪಿದ ಎಲ್ಲರಿಗೂ ಪ್ರೇಮಪತ್ರ ಬರೆಯುತ್ತಿದ್ದೆವು. ಆದರೆ ಒಂದಾದರೂ ಪೋಸ್ಟ್ ಮಾಡಿದ್ದು ಇದೆಯಾ? ಊಹ್ನೂಂ........... ಎಲ್ಲವೂ ನಮ್ಮ ಪೆಟ್ಟಿಗೆಯ ಮೂಲೆಯಲ್ಲೇ ಉಳಿಯುತ್ತಿರಲಿಲ್ಲವೇ? ಪ್ರೇಮಪತ್ರ ಬರೆದ ಎಲ್ಲವೂ ಪ್ರಕಟಗೊಂಡಿದ್ದರೆ ಅದೆಷ್ಟು ಸಾಹಿತಿಗಳ ಉದ್ಭವ ಆಗುತ್ತಿತ್ತೋ. ಆದರೆ ಹಾಗಾಗುತ್ತಿರಲಿಲ್ಲ. ಯಾಕೆಂದರೆ ಪತ್ರ ಬರೆದವನಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ! (ನಾನು ಬರೆದ ಐದಾರು ಪತ್ರಗಳು ಈಗಲೂ ನನ್ನ ಬಳಿ ಇವೆ!)


           ನನ್ನ ಅತ್ತೆಯ ಮಗಳು ಮತ್ತು ನನ್ನ ನಡುವೆ ವಾರಕ್ಕೊಂದು ಪತ್ರ ವಿನಿಮಯವಾಗುತ್ತಿತ್ತು. ನನ್ನ ಅಕ್ಕನ ಸ್ಥಾನದಲ್ಲಿದ್ದ ಆಕೆ ಪ್ರತೀ ವಾರ ನನಗೆ ಪತ್ರ ಬರೆಯುತ್ತಿದ್ದಳು. ನಾನು ಅದಕ್ಕೆ ಉತ್ತರ ಬರೆಯುತ್ತಿದ್ದೆ. ವಿಷಯಗಳಿಗೇನು ಬರ ಇರಲಿಲ್ಲ.ಬರೆದಷ್ಟೂ ಇರುತ್ತಿದ್ದವು. (ಈಗ ಫೋನಲ್ಲಿ ಮಾತಾಡುವಾಗ ಎರೆಡು ನಿಮಿಷಕ್ಕೆ ಮತ್ತೆ ಮತ್ತೆ ಎಂದು ತೊದಲುತ್ತೇವೆ!) ಕೆಲವೊಮ್ಮೆ ಜಾಗ ಸಾಲದಾಗಿ ಪತ್ರದೊಳಗೊಂದು ಪತ್ರ ಕೂಡಾ ಇರುತ್ತಿತ್ತು. ಇತ್ತೀಚಿನವರೆಗೂ ಅಂದರೆ ಐದು ವರ್ಷದ ಹಿಂದಿನವರೆಗೂ ಈ ಕ್ರಮ ತಪ್ಪದೆ ನಡೆದುಬಂದಿತ್ತು. ನಂತರ ಕ್ಷಿಪ್ರಗತಿಯಲ್ಲಿ ಮೊಬೈಲ್ ಉಪಯೋಗ ಬೆಳೆದ ಮೇಲೆ ಈ ಕ್ರಮ ನಿಧಾನಕ್ಕೆ ನಿಂತು ಹೋಯಿತು.ಮೊನ್ನೆ ಹಲವು ದಿನಗಳ ನಂತರ ಫೋನ್ ಮಾಡಿದ್ದಾಗ ಆ ಸುಂದರ ಕ್ಷಣಗಳನ್ನು ನೆನೆದು ಸಂತೋಷ ಪಟ್ಟಿದ್ದೆವು.


          ಇದು ಮೊಬೈಲ್ ಯುಗ. ಕ್ಷಣ ಮಾತ್ರದಲ್ಲಿ ಪ್ರಪಂಚದ ಮೂಲೆಯಲ್ಲಿ ಯಾರೊಂದಿಗೆ ಬೇಕಾದರೂ ಸಂಪರ್ಕ ಸಾಧಿಸಬಹುದು. ಇಂಟರ್ನೆಟ್ಟಿನಲ್ಲಿ ವೀಡಿಯೋ ಛಾಟ್ ಮಾಡಬಹುದು. ಆದರೂ ನಮಗೆ ಸಂಬಂಧಗಳ ಭೆಲೆ ಗೊತ್ತಿಲ್ಲ. ಬ್ಯುಸಿ ದಿನಗಳಲ್ಲಿ ಯಾರೊಂದಿಗೂ ಮಾತನಾಡಲು ಸಮಯವೂ ಸಾಲುವುದಿಲ್ಲ. ಅಪ್ಪ ಅಮ್ಮನೊಂದಿಗೆ ಮಾತನಾಡಲು ನಮಗೆ ವಿಷಯಗಳೇ ಇರುವುದಿಲ್ಲ, ಗೆಳೆಯರ ಬಹುದೊಡ್ಡ ಗುಂಪೇ ಇದ್ದರೂ ಕನಿಷ್ಠ ವಾರಕ್ಕೊಂದು ಫೋನೂ ಮಾಡುವುದಿಲ್ಲ. ಯಾಕೆಂದರೆ ನಾವು ಬಹಳ ಮುಂದುವರೆದಿದ್ದೇವೆ. ಅಭಿವೃದ್ಧಿ ಹೊಂದಿದ್ದೇವೆ, ಹೆಸರು ದುಡ್ಡು ನಮ್ಮ ಕೈ ಸೇರುತ್ತಿದೆ.

          ಬಹುಶಃ ಇದು ನಮ್ಮ ಜನರೇಶನ್ ಗೆ ಮುಗಿಯಿತು ಎನಿಸುತ್ತದೆ. ಮುಂದಿನ ಪೀಳಿಗೆಗೆ ಪತ್ರ ವ್ಯವಹಾರ ಎಂದರೆ ಎಂಟನೆ ಅದ್ಭುತವಾಗಿ ತೋರಬಹುದು. ಮುಂದೆ ನಮ್ಮ ಮೊಮ್ಮಕ್ಕಳಿಗೆ ಕತೆ ಹೇಳುವಾಗ ಪುರಾಣಗಳ ಬದಲಾಗಿ ಇದನ್ನೇ ಹೇಳಬಹುದೇನೋ! ನೀವು ಏನಂತೀರಿ?


27 comments:

 1. ಪ್ರವೀಣ್ ಸರ್ , ಬಹಳ ತಿಂಗಳ ನಂತರ ಬ್ಲಾಗ್ ಬರಹಕ್ಕೆ ಮತ್ತೆ ವಾಪಸ್ಸು ಬಂದ ನಿಮಗೆ ಅಭಿನಂದನೆಗಳು ಹಾಗು ಸ್ವಾಗತ. ಒಳ್ಳೆಯ ವಿಷಯದ ಲೇಖನ ಬಂದಿದೆ. ಹೌದು ಅಂದು ನಾವುಗಳು ಬರೆದ ಪಾತ್ರಗಳಲ್ಲಿ ಅಕ್ಷರದ ಮೂಲಕ ಭಾವನೆ ವ್ಯಕ್ತ ಪಡಿಸುತ್ತಿದ್ದ ರೀತಿ, ಇಂದು ಯಾವುದೇ ಮಾಧ್ಯಮದಲ್ಲಿಯೂ ಸಾಧ್ಯವಿಲ್ಲ, ನಮಗೆ ಬಂದ ಪತ್ರಗಳನ್ನು ಓದುವಾಗಿನ ಸಂಭ್ರಮ , ಎಸ.ಎಂ.ಎಸ. ಅಥವಾ ಈ ಮೇಲ್ ನಲ್ಲಿ ಸಿಗದು,ನಿಮ್ಮ ಅನುಭವ ನಮ್ಮೆಲ್ಲರದೂ ಕೂಡ. ಪ್ರವೀಣ್ ಜೀ ಮತ್ತೆ ಮತ್ತೆ ಬರೆಯುತ್ತಿರಿ ಜೈ ಹೋ.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
  Replies
  1. ಬಾಲಣ್ಣ,
   ಯಾರದೋ ಪತ್ರ ಬಂದಾಗ ನಮಗೆಷ್ಟು ಸಂತೋಷ ಅಲ್ವಾ?
   ನಿಮ್ಮ ಚಂದದ ಪ್ರತಿಕ್ರಿಯೆಗೆ, ಪ್ರೀತಿಗೆ ಅನಂತಾನಂತ ಪ್ರಣಾಮಗಳು.

   Delete
 2. ಪ್ರವೀಣು..

  ಮದುವೆಗೂ ಮುಂಚೆ ನಾನು ಪತ್ರ ಬರಿತಿದ್ದೆ..

  ಪತ್ರ ಬರೆಯುವುದೊಂದು ಸುಂದರ ಅನುಭವ..

  ನಮಗಿಷ್ಟವಾದವರನ್ನು ಎದುರಿಗಿ ಇಟ್ಟುಕೊಂಡು..
  ಕಲ್ಪನೆಯಲ್ಲಿ ಅವರೊಂದಿಗೆ ಮಾತನಾಡುವ ರೀತಿ ನಿಜಕ್ಕೂ ಅವರ್ಣನೀಯ...

  ಚಂದದ ಲೇಖನ... ಅಭಿನಂದನೆಗಳು...

  ReplyDelete
  Replies
  1. ಪ್ರಕಾಶಣ್ಣ,
   ಮದುವೆಗೂ ಮುಂಚೆ ಪತ್ರಗಳೆಂದರೆ ಅಲ್ಲಿ ಕವನಗಳೇ ಹೆಚ್ಚು. (ಆಗಿನ ನಿಮ್ಮ ಪತ್ರಗಳ ಬಗ್ಗೆ ಈಗಿನ ನಿಮ್ಮ ಕವನಗಳೇ ಹೇಳುತ್ತವೆ!) ಎಲ್ಲರೂ ಒಂದರ್ಥದಲ್ಲಿ ಅನಭಿಷಿಕ್ತ ಕವಿಗಳೇ!!!
   ನಿಮ್ಮ ಚಂದದ ಪ್ರತಿಕ್ರಿಯೆಗೆ ವಂದನೆಗಳು.

   Delete
 3. ಪತ್ರಗಳು ಕೊಡುತ್ತಿದ್ದ ಅನುಭವ, ಸಂತೋಷ ಹೇಳತೀರದು..
  ತಾಂತ್ರಿಕತೆ ಏನೇ ಬಂದಿದ್ದರು..ನಮ್ಮ ಪೀಳಿಗೆಯ ಮನಸು ಪತ್ರಗಳ ಕಡೆ ಹರಿಯುವುದು ನಿಜಕ್ಕೂ ಖುಷಿ ಕೊಡುವ ವಸ್ತು..
  ನಮ್ಮ ಮಕ್ಕಳಿಗೆ ಬರೆಯುವ ಹುಚ್ಚು ಹತ್ತಿಸಿಬಿಟ್ಟರೆ ಸಾಕು..ಪತ್ರಗಳು, ಲೇಖನಗಳು ಉರಿತ ಇರ್ತಾವೆ..
  ನಿಮ್ಮ ಮನದಾಳದ ಮಾತು..ಆಳವಾಗಿದ್ದರು ಭಾವನಾತ್ಮಕ ಅಲೆಗಳ ಮೇಲೆ ತೇಲಿಸುತ್ತದೆ..
  ತುಂಬಾ ಸೊಗಸಾದ ಲೇಖನ..

  ReplyDelete
  Replies
  1. ಶ್ರೀಕಾಂತ್ ಮಂಜುನಾಥ್,
   ನನ್ನ ಬ್ಲಾಗಿಗೆ ಸ್ವಾಗತ,
   ಅಂದದ ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 4. ಈಗಿನ ಜನ ಪತ್ರ ಬರೆಯುವುದರ ಬಗೆಗಿನ ನಿಮ್ಮ ವಿಚಾರ ಅಹುದಹುದು.
  ”ಪೋಸ್ಟ್ ಮಾಡದೆ ಇಟ್ಟುಕೊಂಡ ಹಲವು ಹುಡುಗಿಯರಿಗೆ ಬರೆದ ಪ್ರೇಮ ಪತ್ರ,” ಅಯ್ಯೋ ಅಯ್ಯೋ..! ಅವರಿಗೆಲ್ಲಾ ಈಗ ಮದುವೆಯಾಯಿತಾ...:) ನಿಮ್ಮ ಮೊಮ್ಮಕ್ಕಳಿಗೆ ಈ ಕಥೆಗಳನ್ನೇ ರಸವತ್ತಾಗಿ ಹೇಳಬಹುದು...!!

  ಚ೦ದ ಬರೆದಿದ್ದೀರಿ..

  ReplyDelete
  Replies
  1. ಚುಕ್ಕಿಚಿತ್ತಾರ,
   ಅವರಿಗೆಲ್ಲಾ ಮದುವೆಯಾಗಿ ಹೆಚ್ಚು ಕಡಿಮೆ ಮಕ್ಕಳಿಗೂ ಮದುವೆ ವಯಸ್ಸು ಬಂದಿದೆ!!!!

   ಧನ್ಯವಾದಗಳು...........

   Delete
 5. ಪ್ರವೀಣ್ ನಾವು ಹೊಸದಾಗಿ ಬಹರೈನ್ ಗೆ ಬಂದಾಗ ಪುಟಗಟ್ಟಲೆ ಪತ್ರ ಬರಿತಾ ಇದ್ದ್ವಿ ಈಗ ಎಲ್ಲಾ ನಿಂತುಹೋಗಿದೆ ಹಹ... ಮೊಬೈಲ್ ನಲ್ಲೇ ನಮ್ಮ ಸಂಭಾಷಣೆಗಳು ನೆಡೆಯುತ್ತವೆ. ಒಳ್ಳೆಯ ಲೇಖನ

  ReplyDelete
  Replies
  1. ಅಕ್ಕಾ,
   ಆ ದಿನಗಳು ಅದೆಷ್ಟು ಸುಂದರವಾಗಿರುತ್ತಿದ್ದವು, ಪತ್ರ ಬರೆಯುವ ಆ ಖುಷಿ, ಪದಗಳ ಜೋಡಣೆ.............
   ಇಂದಿನ ಮುಂದುವರೆದ ಯುಗದಲ್ಲಿ ಯಾವುದೂ ಬೇಡ, ಬರೀ ಮೊಬೈಲು, ಇಂಟರ್ನೆಟ್ಟು ಅಷ್ಟೇ.........

   ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 6. Praveen!
  ನಮ್ಮ ನಿಶ್ಚಿತಾರ್ಥ ಆದಮೇಲೆ ಮದುವೆಗೆ ಎರಡು ತಿಂಗಳು ಇತ್ತು. ನಾನು ಶ್ರೀಕಾಂತ ಗೆ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಹೀಗೆ ದಿನಕ್ಕೆ ಮೂರು ಮೂರು ಪತ್ರ ಬರೀತಿದ್ದೆ. ಸುಮ್ಮನೆ ನೆನಪಾಯಿತು. ಎಲ್ಲ ಪತ್ರಗಳು safe ಆಗಿ ಇಟ್ಟಿದ್ದೇನೆ.
  anyways what u have written is reality..
  :-)
  ಅಕ್ಕ

  ReplyDelete
  Replies
  1. ಅಕ್ಕಾ,
   ಪತ್ರ ವಿನಿಮಯದ ಆ ಅನುಭವಗಳು ವರ್ಣನಾತೀತ! ಬಹುಶಃ ನಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ಕತೆಯಾಗಿ ಹೇಳಬಹುದೇನೋ ಅಷ್ಟೇ!

   ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 7. ತುಂಬ ಚೆನ್ನಾಗಿ ಬರೆದ್ದಿದ್ದೀರಿ ಪ್ರವೀಣ. that is the reality ...
  :-)
  ಮಾಲತಿ ಎಸ್

  ReplyDelete
 8. ಪತ್ರಗಳು ನಮಗೆ ನೀಡುತ್ತಿದ್ದ ನವರಸಭರಿತ ಭಾವಯಾನ ಈಗಿನ ಹೈಟೆಕ್ ಯುಗದಲ್ಲಿ ಇಂದಿನ ಪೀಳಿಗೆಗೆ ಅಪರಿಚಿತ.

  ಒಳ್ಳೆಯ ಬರಹಗಾರನನ್ನು ಭೇಟಿಯಾದ ಸಂಭ್ರಮ ನನ್ನದಾಯಿತು.

  ನನ್ನ ಅಜ್ಞಾತ ಬ್ಲಾಗಿಗೂ ಬನ್ನಿರಿ.

  ReplyDelete
  Replies
  1. ಬದರಿ ಸರ್,
   ನಿಮ್ಮ ಮಾತು ಅಕ್ಷರಃ ಸತ್ಯ.........
   ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 9. ಪ್ರವೀಣ,
  ನನ್ನ ಮನದ ಮಾತುಗಳನ್ನು ಹೇಳಿದ್ದೀರಿ. ನಾನು ಚಿಕ್ಕವನಿದ್ದಾಗ ನನ್ನ ಗೆಳೆಯರಿಂದ ಬಂದ ಅನೇಕ ಪತ್ರಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದೆ. ಓದಿದಾಗೊಮ್ಮೆ, ಭಾವನೆಗಳು ಮರುಜನ್ಮ ಪಡೆಯುತ್ತಿದ್ದವು. ನಿಮ್ಮ ಲೇಖನದಿಂದ ಅದೆಲ್ಲ ನೆನಪಾಯಿತು.

  ReplyDelete
  Replies
  1. ಸುನಾಥ್ ಜೀ,
   ಆ ನೆನಪುಗಳು ಚಿರನೂತನ.........

   ಧನ್ಯವಾದಗಳು.

   Delete
 10. ಪ್ರವೀಣ್;ಬಹಳ ದಿನಗಳ ಮೇಲೆ ಸುಂದರ ಲೇಖನ ಬರೆದಿದ್ದೀರಿ.ನಮ್ಮ ಪೀಳಿಗೆಯವರು ಪತ್ರ ಸಂಸ್ಕೃತಿಯ ಜೊತೆ ಜೊತೆಗೆ ಬೆಳೆದವರು.ಈಗ ಅದು ಒಂದು ನೆನಪು ಮಾತ್ರ!1978-1981 ಮೂರು ವರ್ಷ ನಾನು ಸ್ನೇಹಿತರೊಬ್ಬರಿಗೆ ವಾರಕ್ಕೆ ಮೂರರಿಂದ ನಾಲಕ್ಕು ಪತ್ರ ಬರೆಯುತ್ತಿದ್ದೆ.ಅವರಿಂದಲೂ ಅಷ್ಟೇ ಪತ್ರಗಳು ಬರುತ್ತಿದ್ದವು.ಅದರಲ್ಲಿ ನಾವು ಓದಿದ ಸಾಹಿತ್ಯ,ಮತ್ತೆಲ್ಲಾ ವಿಷಯಗಳೂ ಚರ್ಚೀತವಾಗುತ್ತಿದ್ದವು.ಪ್ರತಿಯೊಂದು ಪತ್ರದಲ್ಲೂ ಒಂದು ವೈವಿಧ್ಯತೆ ಇರುತ್ತಿತ್ತು.ಮುಂದಿನ ಪತ್ರ ಹೇಗಿರಬಹುದು ಎನ್ನುವ ಕುತೂಹಲ ಸದಾ ಇರುತ್ತಿತ್ತು.ಧನ್ಯವಾದಗಳು.

  ReplyDelete
  Replies
  1. ಡಾಕ್ಟ್ರೆ,
   ನಮ್ಮ ಪೀಳಿಗೆಗೆ ಪತ್ರ ಸಂಸ್ಕೃತಿ ಅಂತ್ಯ ಕಾಣುತ್ತಿರುವುದು ಬಹಳ ದುರದೃಷ್ಟಕರ............
   ನಾವು ನಮ್ಮ ಮಕ್ಕಳಿಗೆ ಅದರ ಮಹಿಮೆಯನ್ನು ತಿಳಿಸಿ ಅಭ್ಯಾಸ ಮಾಡಿದರೆ ಮುಂದುವರೆಯಬಹುದೇನೋ............

   ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 11. ನಮ್ಮದು ಸಹಾ ನಿಮ್ಮುರೇ ಪ್ರತಿಯೊಬ್ಬರ ವಿದ್ಯಾರ್ಥಿ ಜೀವನ ಸುಮದುರ ಬಾವನೆಗಳನ್ನ ಬಿತ್ತಿ ಹೋದನೆಲ ಇಲ್ಲಿ ಪ್ರತಿವಿಶಯ ಮನಸಲ್ಲಿ ಅಳಿಯದೆ ಉಳಿಯುವ ದಿನಗಳು ಅವು
  ಅಂತ ದಿನಗಳನ್ನ ನೆನಪಿಸಿದಕ್ಕೆ ಧನ್ಯವಾದಗಳು

  ReplyDelete
  Replies
  1. ಅನಾಮಿಕರೆ,
   ನನ್ನ ಬ್ಲಾಗಿಗೆ ಸ್ವಾಗತ.
   ಅವು ನಮಗೀಗ 'ಆ ದಿನಗಳು!'

   ಧನ್ಯವಾದಗಳು.

   Delete
 12. ಓ ಪ್ರವೀಣ್ ಅಣ್ಣ ಚೆನ್ನಾಗಿದೆ ನಿಮ್ಮ ''ಆ ದಿನಗಳು", ಊರಿಂದ ಏನಾದರೂ ತಂದು ಹಂಚುತ್ಹಿರ ಅಂದುಕೊಂಡರೆ ಬರಿ ಕೈಯಲ್ಲಿ ಬಂದು ಕಥೆ ಹೇಳ್ತಿರ ,,,,,,,,,,,,,,,!
  ....................................................!
  ಒಂದಂತು ನಿಜ ಈಗಿನ ಜನ ರೆಸನ್ ಪತ್ರ ಅಂದ್ರೆ........ ಏನು ಅಂತ ........? ಕೇಳ್ತಾರೆ
  ನಿಜ ನಾವು ಆಗ ಪತ್ರ ಬರೆಯುತ ಇದ್ರೆ ಕಾಗದ ಮುಗಿಯುತಿತ್ತೆ ಹೊರತು ವಿಷಯಗಳು ಇನ್ನು ಬಾಕಿ ಇರುತ್ತಿದ್ದವು ಕಾಗದ ಸಾಕಾಗದೆ ಗಮ್ಮು ಹಚ್ಹುವಲ್ಲು ಬರೆಯುತಿದ್ದೆವು ....... ಅಂತ ನೆನಪನ್ನ ಮರುಕಳಿಸುವಂತೆ ಮಾಡಿದಿರಿ ನಿಮಗೆ ದನ್ಯವಾದ ಗಳು .......................!

  ReplyDelete
 13. howdu..praveen sir. patravyavahaarave manasige
  mudakoduttittu,aaptavaagiruttittu.
  nimma uttama lekhanakkaagi dhanyavaadagalu.

  ReplyDelete
 14. ಹಳೆಯ ನೆನಪುಗಳ ಮರುಕಳಿಸುವ ನಿಮ್ಮ ಲೇಖನಕ್ಕೆ ಆಭಿನಂದನೆ

  ReplyDelete
 15. ಹಳೆಯ ನೆನಪುಗಳ ಮರುಕಳಿಸುವ ನಿಮ್ಮ ಲೇಖನಕ್ಕೆ ಆಭಿನಂದನೆ

  ReplyDelete