Wednesday, June 13, 2012

ಕುಶಲವೇ.........? ಕ್ಷೆಮವೇ............?

                ಒಂದು ವಾರದ ರಜೆ ಮುಗಿಸಿ ಮುಂಗಾರು ಮಳೆಯ ಸುಂದರ ಕ್ಷಣಗಳನ್ನು ಸಂತೋಷದಿಂದ ಅನುಭವಿಸಿ, ನಿನ್ನೆ ತಾನೇ ದೆಹಲಿಗೆ ಮರಳಿ ಬಂದಿದ್ದೆ. ಮಲೆನಾಡಿನ ಮಳೆಗಾಲದ ವಾತಾವರಣದಿಂದ ಮತ್ತೆ ದೆಹಲಿಯ ಬಿಸಿಲಿಗೆ ದೇಹ ತಕ್ಷಣ ಹೊಂದಿಕೊಳ್ಳದೆ ತುಂಬಾ ಸುಸ್ತಾಗಿತ್ತು. ಗಡದ್ದಾಗಿ ಒಂದು ನಿದ್ದೆ ಮುಗಿಸಿ ಎದ್ದಾದ ಮೇಲೆ ರೂಮನ್ನು ಶುಚಿಗೊಳಿಸುವ ಕಾರ್ಯ ಶುರುಮಾಡಿಕೊಂಡೆ. ಹಾಗೆ ಹಳೆಯ ಪೆಟ್ಟಿಗೆಯಲ್ಲಿದ್ದ ಹತ್ತಾರು ಪತ್ರಗಳು ಹತ್ತು ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದವು.

          ಆಲ್ಲಿದ್ದ ಪತ್ರಗಳು ಒಂದೋ ಎರೆಡೋ? ಅಪ್ಪ ಬರೆದ ಪ್ರೀತಿಯ ಪತ್ರ, ಅಕ್ಕನ ವಾತ್ಸಲ್ಯದ ಪತ್ರ, ತಮ್ಮ ಏಳನೇ ಕ್ಲಾಸಲ್ಲಿ ಪಾಸಾದಾಗ ಬರೆದ ಹೆಮ್ಮೆಯ ಪತ್ರ, ಗೆಳೆಯ-ಗೆಳತಿಯರ ಸ್ನೇಹದ ಪತ್ರ, ಪೋಸ್ಟ್ ಮಾಡದೆ ಇಟ್ಟುಕೊಂಡ ಹಲವು ಹುಡುಗಿಯರಿಗೆ ಬರೆದ ಪ್ರೇಮ ಪತ್ರ, ನಿಯತಕಾಲಿಕ ಪತ್ರಿಕೆಗಳಿಗೆನಗಳಿಗೆ ಕಳುಹಿಸಲು ಬರೆದು ಭಯದಿಂದ ಪೋಸ್ಟ್ ಮಾಡದಿದ್ದ ಕತೆ ಕವನಗಳು..............    ಹೀಗೇ ಸಾಲು ಬೆಳೆಯುತ್ತ ಹೋಗುತ್ತದೆ.

           ಆ ದಿನಗಳೇ ಚನ್ನಾಗಿದ್ದವು, ಪತ್ರಕ್ಕಾಗಿ ಕಾಯುವ ಆ ಸುಖ ಇನ್ನೂ ಚನ್ನಾಗಿತ್ತು. ನಮಗೆ ಪತ್ರ ಓದಲು ಬರೆಯಲು ಸಾಕಷ್ಟು ಸಮಯವೂ ಇತ್ತು. ತಾಳ್ಮೆಯೂ ಇತ್ತು. ಅಪ್ಪನ ಪತ್ರ ತಿಂಗಳು ಕಳೆದರೂ ಬರದಿದ್ದಾಗ ಭಯ ಆಗುತ್ತಿತ್ತು. ಅಕ್ಕ ಪತ್ರ ಬರೆದು ಬುದ್ಧಿವಾದ ಹೇಳದಿದ್ದರೆ ಏನೋ ಕಳೆದು ಕೊಂಡಂತ ಅನುಭವವಾಗುತ್ತಿತ್ತು. ನಾನಾ ಊರುಗಳಲ್ಲಿ ನೆಲೆಸಿದ ಸ್ನೇಹಿತರ ಬಳಗದಿಂದ ದಿನಕ್ಕೆ ಒಬ್ಬರ ಪತ್ರವಾದರೂ ಇರುತ್ತಿತ್ತು. ಅವರ ಶಾಲಾ ಕಾಲೇಜಿನ ಅನುಭವಗಳು, ಪ್ರೇಮ ಪ್ರಸಂಗಗಳು ವಿನಿಮಯವಾಗುತ್ತಿದ್ದವು.

             ಈಗಿನ ಪಾಠ ಕ್ರಮದಲ್ಲಿ ಪತ್ರ ಬರೆಯುವ ಬಗ್ಗೆ ಬೋಧನೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕಾಲದಲ್ಲಂತೂ ಇತ್ತಪ್ಪ! ಆದರೂ ಅದಕ್ಕೂ ಮೊದಲೇ ನಮಗೆ ಪತ್ರ ಬರೆಯುವ ಕ್ರಮ ತಿಳಿದಿರುತ್ತಿತ್ತು. ಹಿರಿಯರಿಗೆ ಬರೆಯುವಾಗ, ಕಿರಿಯರನ್ನು ಸಂಬೋಧಿಸುವಾಗ, ಸಮವಯಸ್ಕರೊಡನೆ........... ಹೀಗೆ ನಾನ ವಿಧಾನಗಳು ನಮಗೆ ಗೊತ್ತಿರುತ್ತಿತ್ತು.

            ಪ್ರೌಢ ಶಾಲೆಯ ಮೆಟ್ಟಿಲು ಹತ್ತುವುದರೊಳಗೆ ಪ್ರೀತಿ ಪ್ರೇಮದ ನಾನ ಕನಸುಗಳು ನಮಗೆ ಶುರು ಆಗಿರುತ್ತಿದ್ದವು. ಎಲ್ಲಾ ಹೆಣ್ಣುಗಳಲ್ಲೂ ನಮ್ಮ ಸಂಗಾತಿಯನ್ನು ಹುಡುಕುತ್ತಿದ್ದೆವು. ಚಂದ ಕಂಡ ಮನಸ್ಸು ಒಪ್ಪಿದ ಎಲ್ಲರಿಗೂ ಪ್ರೇಮಪತ್ರ ಬರೆಯುತ್ತಿದ್ದೆವು. ಆದರೆ ಒಂದಾದರೂ ಪೋಸ್ಟ್ ಮಾಡಿದ್ದು ಇದೆಯಾ? ಊಹ್ನೂಂ........... ಎಲ್ಲವೂ ನಮ್ಮ ಪೆಟ್ಟಿಗೆಯ ಮೂಲೆಯಲ್ಲೇ ಉಳಿಯುತ್ತಿರಲಿಲ್ಲವೇ? ಪ್ರೇಮಪತ್ರ ಬರೆದ ಎಲ್ಲವೂ ಪ್ರಕಟಗೊಂಡಿದ್ದರೆ ಅದೆಷ್ಟು ಸಾಹಿತಿಗಳ ಉದ್ಭವ ಆಗುತ್ತಿತ್ತೋ. ಆದರೆ ಹಾಗಾಗುತ್ತಿರಲಿಲ್ಲ. ಯಾಕೆಂದರೆ ಪತ್ರ ಬರೆದವನಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ! (ನಾನು ಬರೆದ ಐದಾರು ಪತ್ರಗಳು ಈಗಲೂ ನನ್ನ ಬಳಿ ಇವೆ!)


           ನನ್ನ ಅತ್ತೆಯ ಮಗಳು ಮತ್ತು ನನ್ನ ನಡುವೆ ವಾರಕ್ಕೊಂದು ಪತ್ರ ವಿನಿಮಯವಾಗುತ್ತಿತ್ತು. ನನ್ನ ಅಕ್ಕನ ಸ್ಥಾನದಲ್ಲಿದ್ದ ಆಕೆ ಪ್ರತೀ ವಾರ ನನಗೆ ಪತ್ರ ಬರೆಯುತ್ತಿದ್ದಳು. ನಾನು ಅದಕ್ಕೆ ಉತ್ತರ ಬರೆಯುತ್ತಿದ್ದೆ. ವಿಷಯಗಳಿಗೇನು ಬರ ಇರಲಿಲ್ಲ.ಬರೆದಷ್ಟೂ ಇರುತ್ತಿದ್ದವು. (ಈಗ ಫೋನಲ್ಲಿ ಮಾತಾಡುವಾಗ ಎರೆಡು ನಿಮಿಷಕ್ಕೆ ಮತ್ತೆ ಮತ್ತೆ ಎಂದು ತೊದಲುತ್ತೇವೆ!) ಕೆಲವೊಮ್ಮೆ ಜಾಗ ಸಾಲದಾಗಿ ಪತ್ರದೊಳಗೊಂದು ಪತ್ರ ಕೂಡಾ ಇರುತ್ತಿತ್ತು. ಇತ್ತೀಚಿನವರೆಗೂ ಅಂದರೆ ಐದು ವರ್ಷದ ಹಿಂದಿನವರೆಗೂ ಈ ಕ್ರಮ ತಪ್ಪದೆ ನಡೆದುಬಂದಿತ್ತು. ನಂತರ ಕ್ಷಿಪ್ರಗತಿಯಲ್ಲಿ ಮೊಬೈಲ್ ಉಪಯೋಗ ಬೆಳೆದ ಮೇಲೆ ಈ ಕ್ರಮ ನಿಧಾನಕ್ಕೆ ನಿಂತು ಹೋಯಿತು.ಮೊನ್ನೆ ಹಲವು ದಿನಗಳ ನಂತರ ಫೋನ್ ಮಾಡಿದ್ದಾಗ ಆ ಸುಂದರ ಕ್ಷಣಗಳನ್ನು ನೆನೆದು ಸಂತೋಷ ಪಟ್ಟಿದ್ದೆವು.


          ಇದು ಮೊಬೈಲ್ ಯುಗ. ಕ್ಷಣ ಮಾತ್ರದಲ್ಲಿ ಪ್ರಪಂಚದ ಮೂಲೆಯಲ್ಲಿ ಯಾರೊಂದಿಗೆ ಬೇಕಾದರೂ ಸಂಪರ್ಕ ಸಾಧಿಸಬಹುದು. ಇಂಟರ್ನೆಟ್ಟಿನಲ್ಲಿ ವೀಡಿಯೋ ಛಾಟ್ ಮಾಡಬಹುದು. ಆದರೂ ನಮಗೆ ಸಂಬಂಧಗಳ ಭೆಲೆ ಗೊತ್ತಿಲ್ಲ. ಬ್ಯುಸಿ ದಿನಗಳಲ್ಲಿ ಯಾರೊಂದಿಗೂ ಮಾತನಾಡಲು ಸಮಯವೂ ಸಾಲುವುದಿಲ್ಲ. ಅಪ್ಪ ಅಮ್ಮನೊಂದಿಗೆ ಮಾತನಾಡಲು ನಮಗೆ ವಿಷಯಗಳೇ ಇರುವುದಿಲ್ಲ, ಗೆಳೆಯರ ಬಹುದೊಡ್ಡ ಗುಂಪೇ ಇದ್ದರೂ ಕನಿಷ್ಠ ವಾರಕ್ಕೊಂದು ಫೋನೂ ಮಾಡುವುದಿಲ್ಲ. ಯಾಕೆಂದರೆ ನಾವು ಬಹಳ ಮುಂದುವರೆದಿದ್ದೇವೆ. ಅಭಿವೃದ್ಧಿ ಹೊಂದಿದ್ದೇವೆ, ಹೆಸರು ದುಡ್ಡು ನಮ್ಮ ಕೈ ಸೇರುತ್ತಿದೆ.

          ಬಹುಶಃ ಇದು ನಮ್ಮ ಜನರೇಶನ್ ಗೆ ಮುಗಿಯಿತು ಎನಿಸುತ್ತದೆ. ಮುಂದಿನ ಪೀಳಿಗೆಗೆ ಪತ್ರ ವ್ಯವಹಾರ ಎಂದರೆ ಎಂಟನೆ ಅದ್ಭುತವಾಗಿ ತೋರಬಹುದು. ಮುಂದೆ ನಮ್ಮ ಮೊಮ್ಮಕ್ಕಳಿಗೆ ಕತೆ ಹೇಳುವಾಗ ಪುರಾಣಗಳ ಬದಲಾಗಿ ಇದನ್ನೇ ಹೇಳಬಹುದೇನೋ! ನೀವು ಏನಂತೀರಿ?