Friday, February 10, 2012

ಸಾವು ಅಷ್ಟು ಕಷ್ಟವೇ?(ಚಿತ್ರ ಕೃಪೆ : ಅಂತರ್ಜಾಲ)


ಶೀರ್ಷಿಕೆ ನೋಡಿ ವಿಚಿತ್ರ ಅನ್ನಿಸ್ತಾ ಇದೆಯಾ?

ಹೌದು, ಒಂತರಾ ವಿಚಿತ್ರವೇ! ಅಪರೂಪಕ್ಕೆ ಬ್ಲಾಗಿನತ್ತ ಬಂದು ವಿಚಿತ್ರ ಪ್ರಶ್ನೆ ಕೇಳ್ತಾ ಇದ್ದಾನೆ ಅನ್ಕೋಬೇಡಿ. ಮುಂದೆ ಓದಿ ನೀವೇ ನಿರ್ದರಿಸಿ :)
ಅದು ದ್ವಿತೀಯ  ಪಿ. ಯು. ಸಿ. ಓದುತ್ತಿದ್ದ ಸಮಯ.  ವಿಧ್ಯಾರ್ಥಿ ಜೀವನದ ಸುಂದರ ಕ್ಷಣಗಳು. ಅಷ್ಟೇನೂ ಜವಾಬ್ಧಾರಿ ಇಲ್ಲದೆ ಬರಿ ಜಮೀನಿನ ಕೆಲಸ, ಜೊತೆಗೊಂದಿಷ್ಟು ಓದು, ಬದುಕಿಗಾಗಿ ಊಟ, ನೆಮ್ಮದಿಯ ನಿದ್ದೆ ಅಷ್ಟೇ. 

ಆಗ ಬೀಸಿತು ನೋಡಿ ಪ್ರೇಮದ ಬಿರುಗಾಳಿ! ಸ್ವಾತಂತ್ರ್ಯ ದಿನಾಚರಣೆಯ ದಿನ ಚಾಕ್ಲೆಟ್ ಹಂಚಲು ಹೋಗಿ ಒಡ್ಡಿದ ಮುದ್ದಾದ ಕೈಗೆ ಬೆರಗಾಗಿ ಹೃದಯ ಕಳೆದುಕೊಂಡೇ ಬಿಟ್ಟೆ! 
ಹೌದು ಸ್ವಾಮಿ.........
ಊಟ ಬೇಡ, ನಿದ್ದೆ ಬೇಡ, ಪಾಠವಂತೂ ಬೇಡವೇ ಬೇಡ, ಆ ವಯಸ್ಸೇ ಅಂತಹದ್ದು, ಕುತೂಹಲ ಹೆಚ್ಚಾಗಿ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ವಿಲವಿಲನೆ ಒದ್ದಾದತೊಡಗಿದೆ. ಜೊತೆಗೆ ತಂಗಿಯ ಸಹಾಯ ಬೇರೆ! ಇನ್ನೇನು ಬೇಕು? ಸ್ವರ್ಗಕ್ಕೆ ಮೂರೇ ಗೇಣು! 

ಕಾಲೇಜು ೨ ಘಂಟೆಗೆ ಮುಗಿದ ಮೇಲೂ ಹೈಸ್ಕೂಲು ಬಿಡುವವರೆಗೂ ಬಸ್ ಸ್ಟ್ಯಾಂಡಿನಲ್ಲಿ ಕಾಯುವಿಕೆ(ಆಕೆ ೧೦ನೆ ತರಗತಿ ಓದುತ್ತಿದ್ದಳು!) ಪ್ರೀತಿಸಿದಮೇಲೆ ಕಾಯಲೇ ಬೇಕಲ್ವಾ? ಕಾದಿದ್ದೂ ಆಯ್ತು, ಕೈ ಕೈ ಹಿಡಿದು ಮಾತಾಡಿದ್ದು ಆಯ್ತು, ಬಸ್ ಸ್ಟ್ಯಾಂಡಿನ ಇಟ್ಟಿಗೆ ಕಲ್ಲುಗಳಲ್ಲೆಲ್ಲಾ ನಮ್ಮ  ಪ್ರೀತಿಯ ಮೂಕ ಸಾಕ್ಷಿಗಲಾದವು.

ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸಬೂಬು! ಇವತ್ತು ಕ್ರಿಕೇಟ್ ಆದ್ರೆ ನಾಳೆ ವಾಲಿಬಾಲ್, ನಾಡಿದ್ದು ಸ್ಪೆಷಲ್ ಕ್ಲಾಸ್! ಪ್ರೀತಿ ಪರೀಕ್ಷೆಯಲ್ಲಿ ಪಾಸಾದರೆ, ಫೆಲಾಗದ ಸರದಾರ ದ್ವಿತೀಯ ಪಿ ಯು ಸಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಫೇಲಾಗಿ ಹೋದ. ಎಲ್ಲಾ ಪ್ರೀತಿಯ ಮಹಿಮೆ ಸ್ವಾಮೀ. ಪ್ರೀತಿ ಏನನ್ನೂ ಬದಲಾಯಿಸಬಲ್ಲದು ಅಲ್ವಾ? ನನ್ನ ದಿನಚರಿಯೂ ಬದಲಾಯ್ತು. ದಿನಾ ಅವಳ ಧ್ಯಾನ ಶುರುವಾಯ್ತು.

ಹಾಗೂ ಹೀಗೂ ಒಂದು ವರ್ಷ ಕಳೆದು ಹೋಯ್ತು. ಬಸ್ ಸ್ಟ್ಯಾಂಡಿನ ಗೋಡೆ ಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಪ್ರೀತಿಯ ಸುದ್ಧಿ ನಮ್ಮೂರ ಜನರ ಬಾಯಲ್ಲಿ ಹರಿದಾದತೊದಗಿತ್ತು. ಕೆಲವರಿಗೆ ಖುಷಿಯಾದ್ರೆ ಕೆಲವರಿಗೆ ಹೊಟ್ಟೆ ಉರಿ. ಹಲವರಿಗೆ ಬಿಸಿ ಕಜ್ಜಾಯ ಸವಿದಂತ ಸುದ್ಧಿ!

ಹೆಣ್ಣಿನ ಮನಸ್ಸು ಚಂಚಲ ಅಂತ ಅದ್ಯಾವ ಬ್ರಹ್ಮಜ್ಞಾನಿ ನುಡಿದನೋ ಅವನೇ ಬಲ್ಲ! ಆದರೆ  ಬ್ರಹ್ಮವಾಕ್ಯ ಸತ್ಯವೂ ಆಯಿತು. ಬಣ್ಣದ ಮಾತಿಗೆ ಹೆಣ್ಣು ಮರುಳಾದಳು. ಮೋಟಾರು ಬೈಕಿಗೆ ಆಕೆ ಮನಸೋತಳು. ಅದೊಂದು ಕರಾಳ ದಿನ ಹದಿನಾರರ ಚಲುವೆ ನಲವತ್ತರ ಯುವಕ(?)ನೊಂದಿಗೆ ಪರಾರಿಯಾದಳು!!!!

ಆ ಕ್ಷಣದಲ್ಲಿ ನಾನು ಏನಾಗಿರಬೇಡ ನೀವೇ ಯೋಚಿಸಿ! ಎದೆ ಒಡೆದು ಹೋಗಿತ್ತು, ಕಣ್ಣೀರು ಬತ್ತಿ ಹೋಗಿತ್ತು, ಹಸಿವು ನಿದ್ದೆಗಳಂತೂ ಮರೆತೇ ಹೋಗಿದ್ದವು. ಶತ್ರುಗಳು(?) ತಮಗೆ ಸಿಗದಿದ್ದರೂ ಪರವಾಗಿಲ್ಲ ಕೊನೆಗೆ ಅವನಿಗೂ ಸಿಗಲಿಲ್ವಲ್ಲಾ ಅಂತಾ ದಿನಾ ಸಂತೋಷದಲ್ಲಿ ಹಾಲು ಕುಡಿದು ಕೇಕೆ ಹಾಕಿ ನಗುತ್ತಿದ್ದರು.

ಇಷ್ಟೆಲ್ಲಾ ಅನುಭವಿಸಿದ ಮೇಲೆ ಯಾವ ಮನುಷ್ಯನಿಗೆ ತಾನೇ ಬದುಕು ಬೇಕು ಸ್ವಾಮಿ? ಬದುಕೇ ದುಸ್ತರವಾಯ್ತು, ಕುಂತಲ್ಲಿ ನಿಂತಲ್ಲಿ ಅವಳದೆ ಯೋಚನೆಯಾಯ್ತು. ಅವಳ ಆ ಮೀನ ಕಣ್ಣುಗಳು, ಮೊದಲ ಬಾರಿ ಕಂಡ ತ್ರಿವರ್ಣದ ಬಳೆ ದರಿಸಿದ್ದ ಬೆಳ್ಳನೆ ಕೈ, ಕಿವಿಯಲ್ಲೇ ನಾದಗೈವ ಮಧುರವಾದ ಅವಳ ಧ್ವನಿ,  ಒಂದಾ ಎರಡಾ? ದಿನಕ್ಕೊಂದು ಕತೆ ಹೇಳುವ ಬಸ್ ಸ್ಟ್ಯಾಂಡು, ಅವಳು ಬರೆದು ಕೊಟ್ಟಿದ್ದ ಪ್ರೇಮ ಪತ್ರಗಳು, ಅವಳ ನೆನಪಿಗೆಂದೇ ಕೇಳಿ ಪಡೆದಿದ್ದ ಅವಳ ಕಾಲ್ಗೆಜ್ಜೆ ನನ್ನನ್ನು ನೋಡಿ ಅಣಕಿಸುತ್ತಿದ್ದವು!

ಹಾಗೂ ಹೀಗೂ ಒಂದು ವಾರ ಕಳೆಯುವುದರಲ್ಲಿ ಹೈರಾಣಾಗಿ ಹೋದೆ. ಗುಡ್ಡದ ಮೇಲಿನ ಮಾವಿನ ಮರದ ಬುಡದಲ್ಲಿ ನಾ ಸುರಿಸಿದ ಕಣ್ಣೀರು ಬಹುಶಃ ಆ ಮರದ ಜೀವಮಾನಕ್ಕೆ ಸಾಕಾಗುವಷ್ಟು ನೀರಾಯ್ತೇನೋ! ಆದರೂ ಮನಸ್ಸು ತಣ್ಣಗಾಗಲಿಲ್ಲ. ನನ್ನ ನೋವಿಗೆ ತಂಗಾಳಿಯೂ ಬೀಸದೆ  ಮೌನವಾಯ್ತು. ಹೃದಯರೋಧನೆ ನಿಲ್ಲಲಿಲ್ಲ!

ಕೊನೆಗೂ ಅಂತಿಮ ನಿರ್ಧಾರಕ್ಕೆ ಬಂದೆ. ಆತ್ಮಹತ್ಯೆ! ಹೌದು, ದಿನಾ ನೋವಿನಲ್ಲಿ ಉಸಿರಾಡಿ ಸಾಯುವುದಕ್ಕಿಂತ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎಂಬ ದೃಢ ನಿಶ್ಚಯ ಮಾಡಿಕೊಂಡೆ.

ಆಗ ಶುರುವಾಗಿದ್ದು ನೋಡಿ ನಿಜವಾದ ಸಮಸ್ಯೆ. ಹೇಗೆ ಸಾಯುವುದು? ಬಲು ದೊಡ್ಡ ಪ್ರಶ್ನೆ. ನನಗೆ ಅನುಭವ ಇಲ್ಲ. ಇದೇ ಮೊದಲ ಪ್ರಯತ್ನ. ಹಾಗಾದ್ರೆ ಯಾರನ್ನು ಕೇಳುವುದು, ಆತ್ಮಹತ್ಯೆ ಮಾಡಿಕೊಂಡು ಯಾರಾದ್ರೂ ಬದುಕಿದ್ದರೆ ಅದು ಯಶಸ್ವೀ ಅಲ್ವಲ್ಲ. ಅದೂ ಇದೂ ಓದುವ ಆಸಕ್ತಿ ಈಗ ಕೆಲಸಕ್ಕೆ ಬಂತು ನೋಡಿ!  ಸರಿ, ಒಂದೊಂದೇ ರೀತಿಯ ಬಗ್ಗೆ ಆಲೋಚನೆ ಶುರು.
ರೇಲ್ವೆ ಟ್ರ್ಯಾಕ್ ಅಂತೂ ನಮ್ಮಲ್ಲಿಲ್ಲ, ಬೆಂಕಿ ಹಾಕಿಕೊಳ್ಳೋಣ ಅಂದ್ರೆ ಸೀಮೆಣ್ಣೆ ವಾಸನೆ ಥೂ! ಅದೂ ಬೇಡ. ವಿಷ (ಮೆಟಾಸಿಡ್) ಕುಡಿಯಬಹುದಲ್ವಾ? ಗದ್ದೆಗೆ ಔಷದಿ ಹೊಡೆಯುವಾಗಲೇ ತಲೆ ತಿರುಗುತ್ತದೆ, ಇನ್ನು ಕುಡಿದರೆ ತಲೆ ತಿರುಗುವುದಿಲ್ವಾ? ಅದೂ ಬೇಡ..........
ಹಾಗಾದ್ರೆ ನೇಣು ಹಾಕಿ ಕೊಳ್ಳುವುದೇ ಸರಿ! ಹೌದು, ಆದ್ರೆ ನನ್ನ ಭಾರ ತಡೆಯಲು ಆಗದೆ ಹಗ್ಗ ತುಂಡಾದರೆ? ಮತ್ತೆ ಕೆಳಗೆ ಬಿದ್ದು ಕೈ ಕಾಲು ಮುರಿದರೆ ಇನ್ನೊಂದು ಸಮಸ್ಯೆ.  ಛೆ! ಸಾಯಲೂ ಏನೂ ದಾರಿಯೇ ಇಲ್ವೆ?

ಆಗ ಹೊಳೆದದ್ದೇ ಹೊಳೆಗೆ ಹಾರುವುದು! ಅದೇ ಸರಿ, ಹೇಗಿದ್ದರೂ ಹತ್ತಿರದಲ್ಲೇ ಹೊಳೆ ಇದೆ. ಭೀಮನರೆ ಗುಂಡಿಯಲ್ಲಿ ಕಡಿಮೆ ಅಂದ್ರೂ ೫-೬ ಆಳು ಗುಂಡಿ ಇರಬಹುದು. ಅಪ್ಪನ ಭಯವಿದ್ದರೂ ಒಮ್ಮೆ ಈಜಲು ಹೋಗಿ ಅಪ್ಪನಲ್ಲಿ ಪೆಟ್ಟು ತಿಂದಿದ್ದು ಇನ್ನೂ ಮರೆತಿರಲಿಲ್ಲ. ಅಲ್ಲಿ ಹಾರಿದರೆ ಸಾವು ಗ್ಯಾರಂಟಿ!

ಹುಟ್ಟಿದ ಆರು ವರ್ಷದಿಂದ ಎಮ್ಮೆ ಬಾಲ ಹಿಡಿದು ಈಜು ಕಲಿತ ಹೊಳೆ ಅದು. ಏನೋ ಒಂತರ ತಾಯಿ ಪ್ರೀತಿ, ಭಾಂಧವ್ಯ. ಅಂದಿನಿಂದ ಇಂದಿನವರೆಗೂ ತನ್ನ ಒಡಲಲ್ಲಿ ನಮ್ಮನ್ನು ಆಡಿಸಿಕೊಂಡ ತಾಯಿಯ ಮಮತೆ ಆ ಹೊಳೆಯದು. ಅಲ್ಲೇ ಹೊಳೆಯ  ತಿರುವು ಇರುವಲ್ಲಿ ಭೀಮನರೆ ಗುಂಡಿ ಇದೆ. ಭೀಮನರೆ ಗುಂಡಿ ಅಂದರೆ ಆ ಹೊಳೆಯಲ್ಲೇ ಒಂದು ಭಯಾನಕ ಜಾಗ! ಮಕ್ಕಳಾದ ನಮಗೆ ಅಲ್ಲಿ ಈಜಲು ನಿಷೇಧ! ಅಪಾಯಕಾರಿ ಜಾಗ ಎಂದು ಅಲ್ಲಿ ಈಜಲು ಎಲ್ಲರೂ ಹೆದರುತ್ತಿದ್ದರು. 

ಅಮ್ಮ, ಬಂದುಗಳು, ಆ ಹುಡುಗಿ ಎಲ್ಲವೂ ಹಳೆ ಕಪ್ಪು ಬಿಳುಪು ಚಿತ್ರದಂತೆ ಮನದಲ್ಲಿ ನಾ ಮುಂದು ತಾ ಮುಂದು ಎನ್ನುತ್ತಾ ನುಗ್ಗ ತೊಡಗಿದವು. ನನ್ನ ಶವದ ಮುಂದೆ ಅಮ್ಮ ಅಳುತ್ತಿರುವಂತೆ ಭಾಸವಾಯ್ತು. 

ನನ್ನ ಶವ ನೋಡಲು ಆ ಹುಡುಗಿಯೂ ಬರಬಹುದೇ? ಬಂದರೆ ಯಾಕೆ ಹೀಗೆ ಮಾಡಿದೆ ಅಂತ ಕೇಳಲು ತಂಗಿಗೆ ಹೇಳಿ ಬರಬೇಕಿತ್ತು, ಛೆ! ಮೊದಲು ನೆನಪೇ ಆಗಲಿಲ್ಲ. ಈ ವಾಪಾಸು ಹೋಗಿ ಹೇಳಿ ಬರಲು ಸಾಧ್ಯವಿಲ್ಲ. ಇರಲಿ, ಅವಳು ಚನ್ನಾಗಿರಲಿ ಬಿಡಿ.
ಹೊಳೆಯ ದಂಡೆಯ ಮೇಲೆ ನಿಂತು ಕೆಳಗೆ ನೋಡಿದಾಗ ಒಮ್ಮೆ ಭಯವಾಗಿ ಮೈ ಜುಮ್ ಎಂದಿತು. ಸಾಯುವವನಿಗೆ ಭಯ ಯಾಕೆ? ಅವಳನ್ನೇ ನೆನೆಯುತ್ತ ಧೈರ್ಯ ಮಾಡಿ ನೀರಿಗೆ ಹಾರೇ ಬಿಟ್ಟೆ! 

ಸಮಸ್ಯೆ ಶುರು ಆಗಿದ್ದೇ ಇಲ್ಲಿ ನೋಡಿ. ನೀರಿಗೆ ಹಾರಿ ತಳಭಾಗಕ್ಕೆ ಹೋದದ್ದೇನೋ ಸರಿ. ಉಸಿರು ಬಿಗಿಹಿಡಿದಂತೆ  ನನ್ನ ಅಪ್ಪಣೆ ಮೀರಿ ಕೈ ಕಾಲುಗಳು ಬಡಿಯಲಾರಂಬಿಸಿದವು! ಉಸಿರು ನಿಲ್ಲುವ ಮೊದಲೇ ಬಡಿಯುತ್ತಾ ಬಡಿಯುತ್ತಾ ಮೇಲೇರಿ ಬಂದೆ. ಛೆ! ಮಿಸ್ಸಾಗಿ ಹೋಯ್ತು. ಪರವಾಗಿಲ್ಲ, ಮತ್ತೊಮ್ಮೆ ಹಾರಿದೆ. ಎಷ್ಟೇ ಕಷ್ಟಪಟ್ಟರೂ ಊಂ ಹ್ಞೂಂ.........ಆಗಲೇ ಇಲ್ಲ! ಮತ್ತೆ ಮೇಲೆ ಬಂದೆ! ಆದರೆ ಪ್ರಯತ್ನ ನಿಲ್ಲಿಸುವ ಮಗನಲ್ಲ ನಾನು. ಇವತ್ತು ಸಾಯಲೇ ಬೇಕು. ಮತ್ತೆ ಹಾರಿದೆ ನೀರಿಗೆ. ಅದೇ ಪುನರಾವರ್ತನೆ. ಸಾವು ಹತ್ತಿರ ಸುಳಿಯುತ್ತಿಲ್ಲ. 

ಇದರ ಮಧ್ಯೆ ಯಾಕೆ ಹೀಗೆ ಎನ್ನುವ ಕುತೂಹಲದಲ್ಲಿ ಸಾಯಲು ಇದ್ದ ಕಾರಣ ಮರೆತೇ ಹೋಗಿತ್ತು, ಸಾಯಲು ಬಂದವ ಮುಳುಗದಿರಲು ಕಾರಣ ಹುಡುಕುತ್ತಾ ಸಂಶೋಧನೆ ಮಾಡತೊಡಗಿದೆ. ಹೆಚ್ಚು ಕಡಿಮೆ ೨೦-೨೨ ಬಾರಿ ಹಾರಿದರೂ ಯಾಕೆ ಮುಳುಗಲಿಲ್ಲ? ಈಜು ಕಲಿತಿದ್ದೇ ಇದಕ್ಕೆ ಕಾರಣ. ಒಂದೊಮ್ಮೆ ಈಜಲು ಬರದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂಬ ಸತ್ಯ ಗೋಚರವಾಯ್ತು. ಆತ್ಮಹತ್ಯೆ ಮರೆತು ಹೊಸ ವಿಷಯದ ಜ್ಞಾನೋದಯವಾದ ಖುಷಿಯಲ್ಲಿ ನಗುನಗುತ್ತಾ ಮನೆಯ ಕಡೆ ಹೆಜ್ಜೆ ಹಾಕಿದ್ದೆ.

ಅಂತೂ ಇಂತೂ ಆತ್ಮಹತ್ಯೆಯ ಕೊನೆ ಪ್ರಯತ್ನವೂ ಹೀಗಾಗಿ ಹೋಯ್ತು. ಜೊತೆಗೆ ಆತ್ಮಹತ್ಯೆಯ ಯೋಚನೆಯೂ ಕೊನೆಯಾಯ್ತು. ಅಂದಿನಿಂದ ಹೊಸ ಜೀವನ ಶುರು ಆಯ್ತು. ಅಂದೇನಾದ್ರೂ ಆತ್ಮಹತ್ಯೆ ಯಶಸ್ವಿಯಾಗಿದ್ದರೆ ಇಂದು ನೀವು ಇದನ್ನು ಓದಲು ಸಾಧ್ಯವಿತ್ತಾ?


ಈಗ ನೀವೇ ಹೇಳಿ, ಆತ್ಮಹತ್ಯೆ ಸುಲಭವಾ? ಸಾಯುವುದು ಅಂದ್ರೆ ಎಷ್ಟು ಕಷ್ಟ ಅಲ್ವಾ?:- ಬಹಳ ದಿನಗಳ ನಂತರ ಬ್ಲಾಗಿನತ್ತ ತಲೆ ಹಾಕಿದ್ದೇನೆ. ಇದು ನನ್ನ ಜೀವನದಲ್ಲಿ ನಡೆದ ನಿಜವಾದ ಘಟನೆ! ಅದನ್ನೇ ನಿಮ್ಮ ಮುಂದೆ ಸಂಕೋಚವಿಲ್ಲದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಸಹಿಸಿಕೊಳ್ಳುವ ಜವಾಬ್ಧಾರಿ ನಿಮ್ಮದು!

(ಆಗೊಮ್ಮೆ ಈಗೊಮ್ಮೆ ಆಕೆಯನ್ನು ಮನ ನೆನೆಯುವುದು ಸುಳ್ಳಲ್ಲ!)


32 comments:

 1. ಈಗ ನಿಶ್ಚಿ೦ತೆಯಿ೦ದ ಇದ್ದೀರಲ್ಲ....!! ಸಾಕು ಬಿಡಿ ಜೀವನದ ನದಿಯನ್ನು ಸರಾಗವಾಗಿ ಈಜಿ ದಡ ಸೇರುವ ಟೆಕ್ನಿಕ್ ಗೊತ್ತಾಯ್ತಲ್ಲ... ಚಿ೦ತೆಯಿಲ್ಲ...:)ಒಳ್ಳೆಯದಾಗಲಿ..

  ReplyDelete
 2. ಜೀವನದಲ್ಲಿ ಬೇಸರತರುವ ಅಂಶಗಳಲ್ಲಿ ಈ ಪ್ರೀತಿಯೂ ಒಂದು. ಯಾವುದೋ ಗಳಿಗೆಯಲ್ಲಿ ಯಾವುದೋ ಸ್ವರ್ಷಕ್ಕೆ ಎಚ್ಚರವಿಲ್ಲದೆ ಸೋತುಬಿಡುತ್ತೇವೆ. ಆ ಕ್ಷಣದಲ್ಲಿ ನಮಗೆ ಎಲ್ಲವನ್ನೂ ಗೆದ್ದ ಸಂಭ್ರಮದಂತಿರುತ್ತದೆ ಆದರೆ ಕಾಲ ಕಳೆದಂತೆ ಒಂದೊಂದಾಗಿ ಒತ್ತರಿಸಿ ಬರುವ ಕಷ್ಟಗಳಿಗೆ ನಮ್ಮ ಬೆಲೆಯನ್ನೇ ನಾವು ಮರೆತುಹೋಗುತ್ತೇವೆ. ಒಟ್ಟಿನಲ್ಲಿ ಈ ಕಥೆ ಕಡೆಯ ಗಳಿಗೆಯವರೆಗೂ ಸಾವಿಗಾಗಿ ಪರಿತಪಿಸಿದ ರೀತಿ ರೋಚಕವಾದದ್ದೇ ಅನ್ನಿ ಆದರನೀವು ಎಲ್ಲವನ್ನು ಅಳೆದೂ ತೂಗಿ ನಿರ್ಧರಿಸಿದ್ದರಿಂದ ಇಲ್ಲಿ ಯಾವುದೇ ಅನಾಹುತವಾಗಲಿಲ್ಲ ಇದೇ ಸಂಭ್ರಮದ ವಿಷಯವೆಂದರೆ. ಕಡೆಗೂ ನಿಮ್ಮ ಕಳೆದು ಹೋದ ಉತ್ಸಾಹವನ್ನು ನೀರಿಗೆ ಜಿಗಿಯುವುದರ ಮೂಲಕ ಪಡೆದದ್ದು ಪವಾಡವೇ ಸರಿ. ಒಟ್ಟಿನಲ್ಲಿ ಈ ಯ್ಯೂಹದಿಂದ ಪಾರಾದ ಬಗೆ ನಿಜಕ್ಕೂ ಅದ್ಭುತ ಸಂಗತಿ ಧನ್ಯವಾದಗಳು ಸರ್ ...

  ReplyDelete
 3. ಪ್ರವೀಣು....

  ಬಿಡ್ತು ಅನ್ನು...

  ಆತ್ಮ ಹತ್ಯೆ ಹೇಡಿಗಳ ನಿರ್ಧಾರ...
  ಅದನ್ನು ಗೆದ್ದು ಬಂದಿದ್ದೀಯಲ್ಲ...

  ಹಳೆಯದೆಲ್ಲ ಈಗ ಯಾಕೆ...

  ಇಷ್ಜ್ಟದ ಹುಡುಗಿ ...
  ಕಷ್ಟ, ಸುಖದಲ್ಲಿ ಜೊತೆಯಾಗಲು ಬರುವ ಸಂದರ್ಭದಲ್ಲಿ

  ಪ್ರೀತಿಯ ಕವನ ಬರಿ... ಪ್ರೇಮ ಕಥೆ ಬರಿ...

  ReplyDelete
 4. ಪ್ರವೀಣರೆ,
  ಬದುಕಿದರೆ ಸಾವಿರ ಸುಖಗಳನ್ನು ನೋಡಬಹುದು. ಮತ್ತು ಆತ್ಮಹತ್ಯೆ ಸುಲಭವೂ ಅಲ್ಲ. Dorothy Parker ಎನ್ನುವ ಅಮೇರಿಕನ್ ಕವಯಿತ್ರಿ ಹೀಗೆ ಕವನಿಸಿದ್ದಾಳೆ:
  “Guns aren't lawful;
  Nooses give;
  Gas smells awful;
  You might as well live.”

  ReplyDelete
 5. ವಿಜಯಶ್ರೀ ಮೇಡಂ,
  ಹೌದು, ಈಗ ಯಾವುದೇ ಚಿಂತೆ ಇಲ್ಲ!
  ಬದುಕಿನ ಪ್ರತಿಯೊಂದು ಕ್ಷಣಗಳೂ ಪಾಠವೇ ಅಲ್ಲವೇ,
  ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. ವಸಂತ್, ನಾವು ಜೀವನದಲ್ಲಿ ಭವಿಷ್ಯದ ಬಗ್ಗೆ ಯೋಚಿಸದೆ ಕೇವಲ ವರ್ತಮಾನದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆದ್ದರಿಂದಲೇ ಈ ಆತ್ಮಹತ್ಯೆ, ಕೊಲೆ, ಮೋಸ ಎಲ್ಲಾ. ನನ್ನ ಪರಿಸ್ಥಿತಿಯೂ ಬೇರೆ ಆಗಿರಲಿಲ್ಲ. ಕೊನೆಗೆ ಸಾಯುವ ಯೋಚನೆಯನ್ನೇ ಮರೆತು ಹೊಸ ವಿಷಯವೊಂದನ್ನು ಅರಿತುಕೊಂಡೆ!

  ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

  ReplyDelete
 7. ಪ್ರಕಾಶಣ್ಣ,
  ಆ ಕ್ಷಣದಲ್ಲಿ ಪ್ರೀತಿಯನ್ನು ಕಳೆದುಕೊಂಡಿದ್ದ ನಾನು ಏನು ಮಾಡಬೇಕೆಂದು ಗೊತ್ತಾಗದೆ ಸಹಜವಾಗಿ ಪಲಾಯನ ಸೂತ್ರಕ್ಕೆ ಮನಸೋತಿದ್ದೆ. ಒಳಿತು ಕೆಡುಕುಗಳು ಆ ಸಂದರ್ಭದಲ್ಲಿ ಅರ್ಥವಾಗುತ್ತಿರಲಿಲ್ಲ. ಹುಡುಗಿ ಕೈಕೊಟ್ಟಳು ಎಂಬುದೇ ಹೆಚ್ಚಾಗಿತ್ತು.
  ಆಗೊಮ್ಮೆ ಈಗೊಮ್ಮೆ ಹಳೆಯ ನೆನಪುಗಳು ಮೆಲುಕು ಹಾಕಿದಾಗ ಏನೋ ಒಂದು ರೀತಿಯ ಸುಖ ಮನಸ್ಸಿಗೆ ಅಲ್ವಾ?

  ನಿಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ.

  ReplyDelete
 8. ಸುನಾಥ್ ಜೀ,
  ನಿಮ್ಮ ಮಾತು ಅಕ್ಷರಃ ಸತ್ಯ, ಇಂದಿನವರೆಗೂ ಸಿಕ್ಕ ಬದುಕಿನ ಹಲವಾರು ಸುಂದರ ಕ್ಷಣಗಳು ಸತ್ತರೆ ಸಿಗುತ್ತಿದ್ದವೆ? ಆ ಗಳಿಗೆಯಲ್ಲಿ ಆತ್ಮಹತ್ಯೆಯ ನಿರ್ಧಾರ ಕೈಗೊಂಡವ ನಾನೇ ಎಂಬುದು ಇಂದು ನಂಬಲು ಸಾಧ್ಯವಾಗುತ್ತಿಲ್ಲ!

  ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 9. ಪ್ರವೀಣ್, ಬಹಳದಿನಗಳ ನಂತರ ನಾನೂ ನಿಮ್ಮ ಬ್ಲಾಗಿಗೆ ಬಂದೆ! |ಸ್ತ್ರೀ ಬುದ್ಧಿ ಪ್ರಳಯಾಂತಕಃ| ಎನ್ನುತ್ತಾರೆ ಯಾಕೆಂದರೆ ಸ್ತ್ರೀಗೆ ಜನ್ಮ ಸಹಜ ಚಂಚಲ ಸ್ವಭಾವ ಪ್ರಾಪ್ತವಾಗಿರುತ್ತದೆ. ಅದರಲ್ಲೂ ಹದಿಹರೆಯದ ದಿನಗಳ ಹೆಣ್ಣುಮಕ್ಕಳ ಮನಸ್ಸು ಆಕಾಶದ ಎತ್ತರಕ್ಕೆ ರೆಕ್ಕೆ-ಪುಕ್ಕ ಹಚ್ಚಿಕೊಂಡು ಹಾರುತ್ತಿರುತ್ತದೆ. ನೀವು ಹೇಳಿದಂತೇ ಯಾವುದೋ ಘಳಿಗೆಯ ಲಲನೆಯರ ಕುಡಿನೋಟ ಗಂಡುಮಕ್ಕಳ ಮನಸ್ಸನ್ನು ಕದ್ದುಬಿಡುತ್ತದೆ! ಅಲ್ಲಿ [ಬೇಸರಿಸಬೇಡಿ] ಪ್ರೀತಿಗಿಂತಾ ದೈಹಿಕವಾಗಿ ಪಡೆದುಕೊಳ್ಳುವ ಚಿತ್ತಭಿತ್ತಿಯಿರುತ್ತದೆ; ಆದರೆ ಹುಡುಗರು ಅದನ್ನು ಸಸಾರಕ್ಕೆ ಒಪ್ಪುವುದಿಲ್ಲ. ಹುಡುಗಿ ತನ್ನ ಮುಂದಿನ ಬದುಕಿನ ಆರ್ಥಿಕ ಸ್ಥಿರತೆಯ ಬಗ್ಗೆಯೂ ಯೋಚಿಸುತ್ತಾಳೆ. ಅಂದಕಾಲತ್ತಿಲ್ ನಡೆಯುತ್ತಿದ್ದ ಬೇಡಿಕೆ ರಹಿತ ಪ್ರೀತಿ ಈಗಂತೂ ಇಲ್ಲವೇ ಇಲ್ಲ. ಅದು ನಮ್ಮ-ನಿಮ್ಮ ಕಾಲೇಜಿನ ಕಾಲಕ್ಕೂ ಹಿಂದೆ ನಮ್ಮ ರಾಜಣ್ಣೋರು ಸಿನಿಮಾಕ್ಕೆ ಇಳಿಯುವ ಕಾಲಕ್ಕೇ ಮುಗಿದು ಹೋಗಿದೆ! ನೀವು ಏಕಮುಖವಾಗಿ ಸಾಯಲು ಹೋಗದೇ ಅದರ ಜೊತೆಜೊತೆಗೇ ಬದುಕಲು ಇಷ್ಟಪಟ್ಟಿರಿ. ನಿಜವಾಗಿ ನೀವು ಸಾಯ ಹೊರಟಿದ್ದರೆ ಆ ಆವೇಶದಲ್ಲಿ ಮತ್ತೇನೋ ಕಾಣದೇ ಜಗತ್ತೇ ಶೂನ್ಯ ಎಂಬ ಭಾವ ಇರುತ್ತಿತ್ತು. ಅಪ್ಪ-ಅಮ್ಮ, ಮನೆಯವರು, ಹುಡುಗಿ ಈ ಯಾರ ನೆನಪೂ ಆಗುತ್ತಿರಲಿಲ್ಲ. ಅಕೆ ಹೋದರೆ ಹೋಗಲಿ ಬದುಕಿ ಇನ್ನೇನನ್ನೋ ಮಾಡೋಣ ಎಂಬ ಎರಡನೇ ಮನಸ್ಸು ನಿಮ್ಮಲ್ಲಿತ್ತು; ಅದು ನಿಮ್ಮನ್ನು ಸಾವಿನಿಂದ ವಿಮುಖರನ್ನಾಗಿಸಿತ್ತು. ಹೇಳಿದೆನಲ್ಲಾ ಆಕೆ ಸಿಗದಿದ್ದರೆ ಇನ್ನೊಬ್ಬಳು ಸಿಗುತ್ತಾಳೆ ಎಂಬ ಆ ಅನಿಸಿಕೆಯೇ ನಮ್ಮ ಪಡೆದುಕೊಳ್ಳುವಿಕೆ ಎನಿಸುತ್ತದೆ. ಏನೇ ಇರಲಿ ಸಾವಿನಿಂದ ಮರಳಿದ್ದು ಬಹಳ ಒಳ್ಳೆಯದು. ನಿಮಗಾಗಿ ಇನ್ಯಾರೋ ಕಾದಿದ್ದಾರೆ ಎಂಬ ಭಾವ ಒಳ್ಳೆಯದು. ಮದುವೆಗೂ ಮುನ್ನದ ಪ್ರೀತಿಗಿಂತಾ ಮದುವೆಯಾದಮೇಲಿನ ಅಜೀವ ಪರ್ಯಂತ ಪ್ರೀತಿ ಒಳ್ಳೆಯದು. ಅದು ನಿಮಗೆ ಸಿಕ್ಕಲಿ ಎಂದು ಅಡ್ವಾನ್ಸ್ ಆಗಿ ಶುಭಹಾರೈಸುತ್ತೇನೆ, ಧನ್ಯವಾದಗಳು.

  ReplyDelete
 10. ವಿ. ಆರ್. ಭಟ್ ಸರ್,
  ನಿಮ್ಮ ಮಾತು ನಿಜ. ವಯೋಸಹಜವಾದ ಆಕರ್ಷಣೆಯನ್ನು ನಾವು ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಂಡು ಅದು ಸಿಗದಿದ್ದಾಗ ಏನೆಲ್ಲಾ ಅನಾಹುತ ಮಾಡಿಕೊಳ್ಳುತ್ತೇವೆ. ಆ ಒಂದು ಕ್ಷಣ ನಾವು ಯೋಚಿಸಿದರೆ ಬದುಕಿನ ದಿಕ್ಕೇ ಬದಲಾಗಬಹುದು.
  ನನಗೆ ಆ ಸಮಯದಲ್ಲಿ ಆದ ನೋವಿಗಿಂತ ಅವಳ ಮೇಲೆ ಕೋಪ ಹೆಚ್ಚಾಗಿತ್ತೇನೋ, ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿದ ರೀತಿ ಸರಿ ಇರಲಿಲ್ಲವೇನೋ. ಹಾಸ್ಯದ ವಿಷಯವೆಂದರೆ ಕಲ್ಲು ಕಟ್ಟಿಕೊಂಡು ನೀರಿಗೆ ಹಾರಬೇಕೆಂಬ ಕನಿಷ್ಠ ಬುದ್ಧಿ ಇರದೇ ಇದ್ದುದು!. ಅನುಭವ ಇರಲಿಲ್ಲ ನೋಡಿ, ಒಟ್ಟಿನಲ್ಲಿ ಬದುಕಿದೆ. ಬದುಕು ಕಂಡುಕೊಂಡೆ.

  ಧನ್ಯವಾದಗಳು ನಮ್ಮ ಪ್ರತಿಕ್ರಿಯೆಗೆ.

  ReplyDelete
 11. ಪ್ರವೀಣ..ಏನೋ ಇದು ,...??? ಅಂತೂ ರಾಜಧಾನಿ ನೋಡ್ಬೇಕಿತ್ತು ನೀನು ಅದಕ್ಕೇ ನಿನ್ನ ದುಸ್ಸಾಹಸ ಸಕ್ಸೆಸ್ ಆಗ್ಲಿಲ್ಲ...ಹಹಹ...ನಿಜ ನೊಡು ಆ ವಯಸ್ಸಲ್ಲಿ ಹುಡ್ಗಿ ಬಿಟ್ರೆ ಬೇರೆ ಏನೂ ಕಾಣೊಲ್ಲ ಅನ್ನೋದರ ಅನುಭವ ಎಲ್ರಿಗೂ ಆಗಿರುತ್ತೆ...ನೀನು ಸ್ವಲ್ಪ ದೂರಕ್ಕೆ ಸಾಗಿದೆ ನಾವೆಲ್ಲಾ ಏನೋ ಒಂದು ಆಗೋದೊಳಗೆ...ಏನೋ ಒಂಥರಾನ ಮರ್ತ್ ಬಿಟ್ವು ಅಷ್ಟೇ ವ್ಯತ್ಯಾಸ... ನನಗೆ ನಗು ಬಂತು ನಿನ್ನ ಮುಳುಗಿ ಸಾಯುವ ವಿಫಲ ಪ್ರಯಾಸದ ದೃಶ್ಯ ಹೇಗಿದ್ದಿರಬಹುದು ಅಂತ ಕಲ್ಪನೆ ಮಾಡ್ಕೊಂಡು...ಹಹಹಹ ....ಚನ್ನಾಗಿದೆ ಅನುಭವ...ಸಾಯೋಪ್ರಯತ್ನದ ಅನುಭವ... ಒಬ್ಬ ಸೈಯನೈಡ್ ರುಚಿ ಹೇಗಿರುತ್ತೆ ಅಂತ ಮೊದಲಿಗೆ ನಾನೇ ಕಂಡುಹಿಡೀತೀನಿ ಅಂತ ಹೇಳಿ ನಾಲಗೆಗೆ ತಾಕಿಸಿ ಪೇಪರ್ ಮೇಲೆ S ಬರೆಯೋವೇಳೆಗೆ ಗೊಟಕ್... Salty?? seet?? sour??? ಛೇ ಅವನ ಸ್ನೇಹಿತರಿಗೆ ಗೊತ್ತಾಗ್ಲೇ ಇಲ್ಲ...ಅವನ ಕಡೆಯ ಸಂಶೋಧನೆ ಫಲಿತಾಂಶವೂ ???? ಆಯ್ತು..

  ReplyDelete
  Replies
  1. ಅಜಾದ್ ಭಯ್ಯಾ,
   ರಾಜಧಾನಿ ನೋಡಬೇಕಿತ್ತು, ನಿಮ್ಮನ್ನೆಲ್ಲಾ ನೋಡಬೇಕಿತ್ತು. ಅದಕ್ಕೆ ಸಕ್ಸಸ್ ಆಗಿಲ್ಲ,
   ಜೊತೆಗೆ ಈಜು ಬರುವವರು ಕಲ್ಲು ಕಟ್ಟಿಕೊಂಡು ನೀರಿಗೆ ಹಾರಬೇಕು ಅಂತ ಆಮೇಲೆ ಗೊತ್ತಾಯ್ತು!!!!

   ಆ ವಯಸ್ಸಲ್ಲಿ ಹುಡುಗಿಯೇ ಸರ್ವಸ್ವ ಅಲ್ವಾ? ಎಲಾ ವಯಸ್ಸಿನ ಮಹಿಮೆ!!!!!
   ನಿಮ್ಮ ಚಂದದ ಪ್ರತಿಕರಿಯೆಗೆ ಮತ್ತು ಸಯನೈಡ್ ಕತೆಗೆ ಧನ್ಯವಾದಗಳು

   Delete
 12. ಪ್ರವೀ,
  ಬ್ಲಾಗ್ ಟೈಟಲ್ ನೋಡೀಯೇ ಹೆದರಿದೆ..!!! ಒಟ್ಟಲ್ಲಿ ಸಾವನ್ನೇ ಗೆದ್ದು ಬಂದ ತಮ್ಮ ಎಂದುಕೊಳ್ಳಬಹುದು... ಜೀವನದ ಮಧ್ಯದಲ್ಲಿ ಬಂದು ಹೋದವರಿಗೆ ಜೀವ ಕೊಟ್ಟರೆ ಜೀವ ಕೊಟ್ಟ ತಂದೆ ತಾಯಿಗೆ ಏನು ಕೊಟ್ಟಂತಾಗುತ್ತದೆ... ಒಟ್ಟಲ್ಲಿ ಇದು ನಿನ್ನ ಜೀವನದ ಅತಿ ದೊಡ್ಡ ಪಾಠ.. ಇಂತಹ ಯೋಚನೆಗಳು ಯಾರಲ್ಲೂ ಸುಳಿಯದಿರಲಿ ಎಂದು ಕೇಳಿಕೊಳ್ಳುತ್ತೇನೆ.

  ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತೇನೆ.

  ReplyDelete
  Replies
  1. ಸಧ್ಯ! ಅಂತಹ ದುರ್ಬಲ ಗಳಿಗೆಯಿಂದ ಪಾರಾಗಿ ಗಟ್ಟಿಗೊಂಡಿರಲ್ಲ ನಿಮ್ಮ ಅಮ್ಮನ ಪುಣ್ಯ ದೊಡ್ಡದು . ಮುಂದೆ ನಿಮ್ಮ ಬಾಳಿನಲ್ಲಿ ಬರುವ ಹುಡುಗಿ ನಿಮ್ಮ ಕಹಿ ನೆನಪುಗಳನ್ನು ಅಳಿಸಿಹಾಕುತ್ತಾಳೆ ಬಿಡಿ :)

   Delete
  2. ಅಕ್ಕಾ,
   ಹದಿ ವಯಸ್ಸಿನ ಆ ದಿನಗಳಲ್ಲಿ ಆಕರ್ಷಣೆಯ ಕಪ್ಪುಪಟ್ಟಿ ಪ್ರೀತಿಯ ಹೆಸರಲ್ಲಿ ನಮ್ಮನ್ನು ಅಂಧವಾಗಿಸಿರುತ್ತದೆ. ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಯೋಚಿಸುವಷ್ಟು ವ್ಯವಧಾನ ನಮ್ಮಲ್ಲಿರುವುದಿಲ್ಲ. ಅಲ್ವಾ?

   ಒಟ್ಟಿನಲ್ಲಿ ಅದೊಂದು ದೊಡ್ಡ ಪಾಠ ಎಂಬುವುದರಲ್ಲಿ ಸಂಶಯವಿಲ್ಲ.
   ನಿಮ್ಮ ಪ್ರತಿಕ್ರಿಯೆಗೆ, ಕಿವಿಮಾತಿಗೆ ಧನ್ಯವಾಧಗಳು.

   Delete
  3. ಸುಮಕ್ಕ,
   ಅಮ್ಮನ ಪುಣ್ಯವೇ ಹೌದು. ಇಲ್ಲವಾದರೆ ಸತ್ತು ಏನು ಸಾಧಿಸಿಯಾಗುತ್ತಿತ್ತು?
   ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 13. Replies
  1. ಭಾಶೇ,
   i think Tanks to God & Swimming Both :)

   ಧನ್ಯವಾದಗಳು.

   Delete
 14. ಚಂಚಲತೆ ಮತ್ತ್ತು ನಿಶ್ಚಲತೆ ಹುಡುಗಿಯರಲ್ಲೂ ಇದೆ ಮತ್ತು ಹುಡುಗರಲ್ಲೂ ಇದೆ. ನಿಮ್ಮ ದುರಾದೃಷ್ಟ ಚಂಚಲೆ ಹುಡುಗಿ ಸಿಕ್ಕಳು. ಹಾಗಂಥ ಹುಡುಗಿಯರು ಚಂಚಲರು, ಸ್ತ್ರೀ ಭುದ್ಧಿ ಪ್ರಳಯಾಂತಕ ಅನ್ನುವ ಕೂಪಮಂಡುಕ ವಿಚಾರಕ್ಕೆ ತಲೆ ಕೊಡುವದು ಬೇಡ,
  ಆದರೆ ಆತ್ಮಹತ್ಯೆ ಬಲು ಕಷ್ಟದ ವಿಷಯವಂತೂ ನೂರಕ್ಕೆ ನೂರು ಸತ್ಯ.
  ಎಲ್ಲರ ತಲೆಯಲ್ಲೂ ಒಂದಿಲ್ಲೊಮ್ಮೆ ಈ ವಿಚಾರ ಬರುವ ಪರಿಸ್ಥಿತಿಗಳು ಸಹಜ. ಹೆಚ್ಚಿನವರು ನಿಮ್ಮಂತೆ ಪಾರಾಗಿ ಬರುತ್ತಾರೆ. ಕೆಲವೊಮ್ಮೆ ಈಜು ಗೊತ್ತಿರದವರು ನೀರಿಗೆ ಬೀಳುವ ತಪ್ಪು ಯೋಚನೆ ಮಾಡಿ ಸಾಯುತ್ತಾರೆ.
  ಸಾಯಲೇ ಬೇಕೆಂದು ನಿರ್ಧರಿಸಿ ಸಂತೋಷದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಜನ ತುಂಬಾ ಕಡಿಮೆ.
  ತುಂಬಾ ಚೆನ್ನಾಗಿ ಬರೆದಿದ್ದೀರಿ.

  ReplyDelete
  Replies
  1. ಸೀತಾರಾಮ್ ಸರ್,
   ಆ ಗಳಿಗೆ ನನ್ನ ತಲೆಯಲ್ಲಿ ಅವಳ ಹೊರತು ಬೇರೇನೂ ಯೋಚನೆ ಇರಲಿಲ್ಲ. ಮೋಸ ಆಗಿದ್ದು ಹೃದಯಕ್ಕೆ ಬಹಳ ನೋವಾಗಿತ್ತು. ಆತ್ಮಹತ್ಯೆ ಅದಕ್ಕೆ ಪರಿಹಾರ ಎಂದು ದುರ್ಬಲ ಮನ ಯೋಚಿಸಿತ್ತು. ಆದರೆ ಆತ್ಮಹತ್ಯೆಗೆ ಎಷ್ಟೆಲ್ಲಾ ಕಷ್ಟಗಳಿವೆ ಅಂತ ಸತ್ಯ ನನಗೆ ಗೊತ್ತಾಯ್ತು.

   ಚಂಚಲೆ ಎಂಬುದು ಪುರಾಣದಿಂದಲೂ ಹೆಣ್ಣಿಗೆ ಬಂದ ಅಪವಾದ. ಆದರೂ ಹೆಣ್ಣು ಗಂಡು ಇಬ್ಬರೂ ಚಂಚಲರು ಎಂಬುದು ಅಷ್ಟೇ ಸತ್ಯ!

   ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

   Delete
 15. ಹಾಯ್ ಪ್ರವೀಣ್......

  ಓದುವಾಗ ಮನಸ್ಸಿಗೆ ಬೇಜಾರ್ ಆಗಿದ್ದಕ್ಕಿಂತ ನಗು ಬಂದದ್ದೆ ಹೆಚ್ಚು....."ಗದ್ದೆಗೆ ಔಷದಿ ಹೊಡೆಯುವಾಗಲೇ ತಲೆ ತಿರುಗುತ್ತದೆ, ಇನ್ನು ಕುಡಿದರೆ ತಲೆ ತಿರುಗುವುದಿಲ್ವಾ? ಅದೂ ಬೇಡ..........
  ಹಾಗಾದ್ರೆ ನೇಣು ಹಾಕಿ ಕೊಳ್ಳುವುದೇ ಸರಿ! ಹೌದು, ಆದ್ರೆ ನನ್ನ ಭಾರ ತಡೆಯಲು ಆಗದೆ ಹಗ್ಗ ತುಂಡಾದರೆ? ಮತ್ತೆ ಕೆಳಗೆ ಬಿದ್ದು ಕೈ ಕಾಲು ಮುರಿದರೆ ಇನ್ನೊಂದು ಸಮಸ್ಯೆ. ಛೆ! ಸಾಯಲೂ ಏನೂ ದಾರಿಯೇ ಇಲ್ವೆ?"-

  ಸಾಯೋಕೆ ಹೋಗೋರು ಈ ತರಾನು ಯೋಚನೆ ಮಾಡ್ತಾರೆ ಅಂತ ಗೊತ್ತಿರ್ಲಿಲ್ಲ....ಹಾಗೆ ಈಜೋಕೆ ಚೆನ್ನಾಗಿ ಬರುವ ಅಸಾಮಿ ಹೊಳೆ ಹಾರಿ ಸಾಯೋಕೆ ಪ್ರಯತ್ನಿಸಿದ್ದು ...ಓದಿ ನಗು ಬಂತು.....ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ........ಆದದ್ದು ಆಯಿತು......ಈಗ ಸಂತೋಷವಾಗಿದ್ದೀರಲ್ಲ ...ನಿಮ್ಮ ಹಳೆ ಕಥೆ ನ ನಮ್ ಜೊತೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.....ಆದರೂ wrong timing ಅನ್ಸುತ್ತೆ.....

  ReplyDelete
  Replies
  1. ಅಶೋಕ್ ಸರ್, ಮನೆಗೆ ಹೋದಾಗ ಗದ್ದೆಗೆ ಔಷದಿ ಹೊಡೆಯುವ ಸಂದರ್ಭದಲ್ಲಿ ಮೆಟಾಸಿಡ್ ವಾಸನೆ ನನಗೆ ಈ ಆತ್ಮಹತ್ಯೆಯ ಪ್ರಯತ್ನದ ನೆನಪನ್ನು ಹಸಿಗೊಳಿಸುತ್ತದೆ. ನೆನೆದು ನಗು ಕೂಡಾ ಬರುತ್ತದೆ :) (ಈಗಲೂ ಆ ವಾಸನೆಯಿಂದ ತಲೆ ತಿರುಗುವುದು ನಿಂತಿಲ್ಲ!)

   ಇನ್ನೂ ಪ್ರಬುದ್ಧಗೊಳ್ಳದ ವಯಸ್ಸು ಅದಾಗಿತ್ತು. ಯಾವುದು ಸರಿ ಯಾವುದು ತಪ್ಪು ಅಂತ ಅಷ್ಟೇನೂ ಗೊತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆತ್ಮಹತ್ಯೆಯ ಪ್ರಯತ್ನ ವಿಫಲವಾಗಿ ಮನೆಯಲ್ಲಿ ಗೊತ್ತಾದರೆ ಎಂಬ ಭಯವೂ ಇತ್ತು. ಹಾಗಾಗಿ ಅಷ್ಟೆಲ್ಲಾ ಯೋಚಿಸಲು ಸಾಧ್ಯವಾಯ್ತು.

   ಈಗ ಯಾವುದೇ ತೊಂದರೆಗಳಿಲ್ಲ! ಆಗೊಮ್ಮೆ ಈಗೊಮ್ಮೆ ಅವಳ ಆ ಪ್ರೀತಿಯ ನೆನಪು ನಗು ತರಿಸುತ್ತದೆ!
   ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 16. Dear Praveen:
  Alfred Tennyson en hELtaare keLi: "Tis better to have loved and lost than never to have loved at all".
  All the best to you for a 'brightest' future!!
  akka

  ReplyDelete
  Replies
  1. ಅಕ್ಕಾ,
   ಸತ್ಯವಾದ ಮಾತು.
   ನಿಮ್ಮ ಹಾರೈಕೆಗೆ ಧನ್ಯವಾದಗಳು.

   Delete
 17. ಸಾವಿನ ಸಮೀಪ ಹೋಗಿ ಗೆದ್ದು ಬಂದ ಅನುಭವ ಕೇಳಿ ಮೈ ಜುಮ್ ಎನಿಸಿತು.

  ReplyDelete
  Replies
  1. ಈಶ್ವರ್ ಪ್ರಸಾದ್ ಸರ್,
   ಮನದಾಳದಿಂದ ಬ್ಲಾಗಿಗೆ ಮನದಾಳದ ಸ್ವಾಗತ!

   ಒಂದು ರೀತಿಯಲ್ಲಿ ಸಾವನ್ನು ಗೆದ್ದು ಬಂದಿದ್ದೆ ಹೌದು....:)
   ಧನ್ಯವಾದಗಳು.

   Delete
 18. ಪ್ರವೀಣ್,

  ಏನಾದರೂ ಮಾಡಿ ಸಾಯುವ ಆಸೆಯನ್ನು ಬಿಟ್ಟು...ಅಂತ ಪರಿಸ್ಥಿತಿಯಿಂದ ಗೆದ್ದಿರಲ್ಲ ಅಷ್ಟೇ ಸಾಕು. ನೋಡಿದ್ರಾ..ಈಜು ಕಲಿತಿದ್ದು ಎಷ್ಟು ಒಳ್ಳೆಯದಾಯ್ತು...ಹಳೆಯ ನೆನಪುಗಳ ಬರಹ ತುಂಬಾ ಚೆನ್ನಾಗಿದೆ...ನಾನು ನಿಮ್ಮ ಹಾಗೆ ಈಗ ಬರೆಯಲು ಮತ್ತು ಓದಲು ಪ್ರಯತ್ನಿಸಿದ್ದೇನೆ..

  ReplyDelete
  Replies
  1. ಶಿವಣ್ಣ,
   ಈಜು ಕಲಿತ ಕಾರಣ ಸಾಯಲು ಆಗಲಿಲ್ಲ!!!!! ಕೆಟ್ಟ ಗಳಿಗೆಯಲ್ಲಿ ತೆಗೆದು ಕೊಂದ ನಿರ್ಧಾರ ವಿಫಲವಾಗಿ ಬದುಕಿಕೊಂಡೆ.
   ಹಳೆಯ ನೆನಪುಗಳು ಆಗಾಗ ಮರುಕಲಿಸುತ್ತಿದ್ದರೆ ಚೆನ್ನ!
   ಧನ್ಯವಾದಗಳು

   Delete
 19. ಪ್ರವೀಣ್ ಅಬ್ಬಬ್ಬ ಎಂತಹ ತಪ್ಪು ನಿರ್ಧಾರ ಆಗಿತ್ತು ನಿಮ್ಮಿಂದ ,ಬಹಳಷ್ಟು ತಪ್ಪು ನಿರ್ಧಾರಗಳು ತಪ್ಪು ತಿಳುವಳಿಕೆಯಿಂದ ಆಗುತ್ತದೆ.ಪುಣ್ಯ ಅನಾಹುತ ಆಗಿಲ್ಲ ಅಷ್ಟೇ.ನನಗನ್ನಿಸುತ್ತೆ ಅಂದಿನದು ಆಕರ್ಷಣೆ ಪ್ರೀತಿ , ಜೀವನ ಅರ್ಥಮಾಡಿಕೊಳ್ಳದ ವಯಸ್ಸು ಆ ನಿರ್ಧಾರಕ್ಕೆ ಕಾರಣ ಆಗಿತ್ತು.ಕೆಟ್ಟ ಕನಸನ್ನು ಮರೆತುಬಿಡಿ , ನಿಮ್ಮ ಜೀವನದ ಹಾದಿಯಲ್ಲಿ ಶ್ರುತಿಯಾಗಳು ಬಂದಿರುವ ಜೀವದ ಗೆಳತಿಯ ವರಿಸಿ ಸುಖದ ಹಾದಿಯಲ್ಲಿ ಮುನ್ನಡೆಯಿರಿ. ನಿಮಗೆ ಶುಭವಾಗಲಿ. ನಿಮ್ಮ ಈ ಲೇಖನ ಹಲವರ ಕಣ್ತೆರೆಸಲಿ
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 20. ಅಬ್ಬಾ!!..ಪ್ರವೀಣ್, ದೇವರ ಕೃಪೆ, ಅಮ್ಮನ ಆಶೀರ್ವಾದ ನಿಮ್ಮನ್ನು ಕಾಪಾಡಿತು. ಹರೆಯದ ವಯಸ್ಸಿನ ಅಪಕ್ವ ಮನಸ್ಸಿನ ಉದ್ವೇಗಕ್ಕೆ ಜೀವನವನ್ನೇ ಒಪ್ಪಿಸಿದಂತಾಗುತ್ತಿತ್ತು. ಆ ಕೆಟ್ಟ ಗಳಿಗೆಯ ನೆನಪೂ ಬರದಂತೆ ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ. :)

  ReplyDelete
 21. hai esht chandage bardidera nanng antu thumbane hedsedire..................

  ReplyDelete
 22. hai esht chandage bardidera nanng antu thumbane hedsedire..................

  ReplyDelete