Friday, February 10, 2012

ಸಾವು ಅಷ್ಟು ಕಷ್ಟವೇ?(ಚಿತ್ರ ಕೃಪೆ : ಅಂತರ್ಜಾಲ)


ಶೀರ್ಷಿಕೆ ನೋಡಿ ವಿಚಿತ್ರ ಅನ್ನಿಸ್ತಾ ಇದೆಯಾ?

ಹೌದು, ಒಂತರಾ ವಿಚಿತ್ರವೇ! ಅಪರೂಪಕ್ಕೆ ಬ್ಲಾಗಿನತ್ತ ಬಂದು ವಿಚಿತ್ರ ಪ್ರಶ್ನೆ ಕೇಳ್ತಾ ಇದ್ದಾನೆ ಅನ್ಕೋಬೇಡಿ. ಮುಂದೆ ಓದಿ ನೀವೇ ನಿರ್ದರಿಸಿ :)
ಅದು ದ್ವಿತೀಯ  ಪಿ. ಯು. ಸಿ. ಓದುತ್ತಿದ್ದ ಸಮಯ.  ವಿಧ್ಯಾರ್ಥಿ ಜೀವನದ ಸುಂದರ ಕ್ಷಣಗಳು. ಅಷ್ಟೇನೂ ಜವಾಬ್ಧಾರಿ ಇಲ್ಲದೆ ಬರಿ ಜಮೀನಿನ ಕೆಲಸ, ಜೊತೆಗೊಂದಿಷ್ಟು ಓದು, ಬದುಕಿಗಾಗಿ ಊಟ, ನೆಮ್ಮದಿಯ ನಿದ್ದೆ ಅಷ್ಟೇ. 

ಆಗ ಬೀಸಿತು ನೋಡಿ ಪ್ರೇಮದ ಬಿರುಗಾಳಿ! ಸ್ವಾತಂತ್ರ್ಯ ದಿನಾಚರಣೆಯ ದಿನ ಚಾಕ್ಲೆಟ್ ಹಂಚಲು ಹೋಗಿ ಒಡ್ಡಿದ ಮುದ್ದಾದ ಕೈಗೆ ಬೆರಗಾಗಿ ಹೃದಯ ಕಳೆದುಕೊಂಡೇ ಬಿಟ್ಟೆ! 
ಹೌದು ಸ್ವಾಮಿ.........
ಊಟ ಬೇಡ, ನಿದ್ದೆ ಬೇಡ, ಪಾಠವಂತೂ ಬೇಡವೇ ಬೇಡ, ಆ ವಯಸ್ಸೇ ಅಂತಹದ್ದು, ಕುತೂಹಲ ಹೆಚ್ಚಾಗಿ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ವಿಲವಿಲನೆ ಒದ್ದಾದತೊಡಗಿದೆ. ಜೊತೆಗೆ ತಂಗಿಯ ಸಹಾಯ ಬೇರೆ! ಇನ್ನೇನು ಬೇಕು? ಸ್ವರ್ಗಕ್ಕೆ ಮೂರೇ ಗೇಣು! 

ಕಾಲೇಜು ೨ ಘಂಟೆಗೆ ಮುಗಿದ ಮೇಲೂ ಹೈಸ್ಕೂಲು ಬಿಡುವವರೆಗೂ ಬಸ್ ಸ್ಟ್ಯಾಂಡಿನಲ್ಲಿ ಕಾಯುವಿಕೆ(ಆಕೆ ೧೦ನೆ ತರಗತಿ ಓದುತ್ತಿದ್ದಳು!) ಪ್ರೀತಿಸಿದಮೇಲೆ ಕಾಯಲೇ ಬೇಕಲ್ವಾ? ಕಾದಿದ್ದೂ ಆಯ್ತು, ಕೈ ಕೈ ಹಿಡಿದು ಮಾತಾಡಿದ್ದು ಆಯ್ತು, ಬಸ್ ಸ್ಟ್ಯಾಂಡಿನ ಇಟ್ಟಿಗೆ ಕಲ್ಲುಗಳಲ್ಲೆಲ್ಲಾ ನಮ್ಮ  ಪ್ರೀತಿಯ ಮೂಕ ಸಾಕ್ಷಿಗಲಾದವು.

ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸಬೂಬು! ಇವತ್ತು ಕ್ರಿಕೇಟ್ ಆದ್ರೆ ನಾಳೆ ವಾಲಿಬಾಲ್, ನಾಡಿದ್ದು ಸ್ಪೆಷಲ್ ಕ್ಲಾಸ್! ಪ್ರೀತಿ ಪರೀಕ್ಷೆಯಲ್ಲಿ ಪಾಸಾದರೆ, ಫೆಲಾಗದ ಸರದಾರ ದ್ವಿತೀಯ ಪಿ ಯು ಸಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಫೇಲಾಗಿ ಹೋದ. ಎಲ್ಲಾ ಪ್ರೀತಿಯ ಮಹಿಮೆ ಸ್ವಾಮೀ. ಪ್ರೀತಿ ಏನನ್ನೂ ಬದಲಾಯಿಸಬಲ್ಲದು ಅಲ್ವಾ? ನನ್ನ ದಿನಚರಿಯೂ ಬದಲಾಯ್ತು. ದಿನಾ ಅವಳ ಧ್ಯಾನ ಶುರುವಾಯ್ತು.

ಹಾಗೂ ಹೀಗೂ ಒಂದು ವರ್ಷ ಕಳೆದು ಹೋಯ್ತು. ಬಸ್ ಸ್ಟ್ಯಾಂಡಿನ ಗೋಡೆ ಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಪ್ರೀತಿಯ ಸುದ್ಧಿ ನಮ್ಮೂರ ಜನರ ಬಾಯಲ್ಲಿ ಹರಿದಾದತೊದಗಿತ್ತು. ಕೆಲವರಿಗೆ ಖುಷಿಯಾದ್ರೆ ಕೆಲವರಿಗೆ ಹೊಟ್ಟೆ ಉರಿ. ಹಲವರಿಗೆ ಬಿಸಿ ಕಜ್ಜಾಯ ಸವಿದಂತ ಸುದ್ಧಿ!

ಹೆಣ್ಣಿನ ಮನಸ್ಸು ಚಂಚಲ ಅಂತ ಅದ್ಯಾವ ಬ್ರಹ್ಮಜ್ಞಾನಿ ನುಡಿದನೋ ಅವನೇ ಬಲ್ಲ! ಆದರೆ  ಬ್ರಹ್ಮವಾಕ್ಯ ಸತ್ಯವೂ ಆಯಿತು. ಬಣ್ಣದ ಮಾತಿಗೆ ಹೆಣ್ಣು ಮರುಳಾದಳು. ಮೋಟಾರು ಬೈಕಿಗೆ ಆಕೆ ಮನಸೋತಳು. ಅದೊಂದು ಕರಾಳ ದಿನ ಹದಿನಾರರ ಚಲುವೆ ನಲವತ್ತರ ಯುವಕ(?)ನೊಂದಿಗೆ ಪರಾರಿಯಾದಳು!!!!

ಆ ಕ್ಷಣದಲ್ಲಿ ನಾನು ಏನಾಗಿರಬೇಡ ನೀವೇ ಯೋಚಿಸಿ! ಎದೆ ಒಡೆದು ಹೋಗಿತ್ತು, ಕಣ್ಣೀರು ಬತ್ತಿ ಹೋಗಿತ್ತು, ಹಸಿವು ನಿದ್ದೆಗಳಂತೂ ಮರೆತೇ ಹೋಗಿದ್ದವು. ಶತ್ರುಗಳು(?) ತಮಗೆ ಸಿಗದಿದ್ದರೂ ಪರವಾಗಿಲ್ಲ ಕೊನೆಗೆ ಅವನಿಗೂ ಸಿಗಲಿಲ್ವಲ್ಲಾ ಅಂತಾ ದಿನಾ ಸಂತೋಷದಲ್ಲಿ ಹಾಲು ಕುಡಿದು ಕೇಕೆ ಹಾಕಿ ನಗುತ್ತಿದ್ದರು.

ಇಷ್ಟೆಲ್ಲಾ ಅನುಭವಿಸಿದ ಮೇಲೆ ಯಾವ ಮನುಷ್ಯನಿಗೆ ತಾನೇ ಬದುಕು ಬೇಕು ಸ್ವಾಮಿ? ಬದುಕೇ ದುಸ್ತರವಾಯ್ತು, ಕುಂತಲ್ಲಿ ನಿಂತಲ್ಲಿ ಅವಳದೆ ಯೋಚನೆಯಾಯ್ತು. ಅವಳ ಆ ಮೀನ ಕಣ್ಣುಗಳು, ಮೊದಲ ಬಾರಿ ಕಂಡ ತ್ರಿವರ್ಣದ ಬಳೆ ದರಿಸಿದ್ದ ಬೆಳ್ಳನೆ ಕೈ, ಕಿವಿಯಲ್ಲೇ ನಾದಗೈವ ಮಧುರವಾದ ಅವಳ ಧ್ವನಿ,  ಒಂದಾ ಎರಡಾ? ದಿನಕ್ಕೊಂದು ಕತೆ ಹೇಳುವ ಬಸ್ ಸ್ಟ್ಯಾಂಡು, ಅವಳು ಬರೆದು ಕೊಟ್ಟಿದ್ದ ಪ್ರೇಮ ಪತ್ರಗಳು, ಅವಳ ನೆನಪಿಗೆಂದೇ ಕೇಳಿ ಪಡೆದಿದ್ದ ಅವಳ ಕಾಲ್ಗೆಜ್ಜೆ ನನ್ನನ್ನು ನೋಡಿ ಅಣಕಿಸುತ್ತಿದ್ದವು!

ಹಾಗೂ ಹೀಗೂ ಒಂದು ವಾರ ಕಳೆಯುವುದರಲ್ಲಿ ಹೈರಾಣಾಗಿ ಹೋದೆ. ಗುಡ್ಡದ ಮೇಲಿನ ಮಾವಿನ ಮರದ ಬುಡದಲ್ಲಿ ನಾ ಸುರಿಸಿದ ಕಣ್ಣೀರು ಬಹುಶಃ ಆ ಮರದ ಜೀವಮಾನಕ್ಕೆ ಸಾಕಾಗುವಷ್ಟು ನೀರಾಯ್ತೇನೋ! ಆದರೂ ಮನಸ್ಸು ತಣ್ಣಗಾಗಲಿಲ್ಲ. ನನ್ನ ನೋವಿಗೆ ತಂಗಾಳಿಯೂ ಬೀಸದೆ  ಮೌನವಾಯ್ತು. ಹೃದಯರೋಧನೆ ನಿಲ್ಲಲಿಲ್ಲ!

ಕೊನೆಗೂ ಅಂತಿಮ ನಿರ್ಧಾರಕ್ಕೆ ಬಂದೆ. ಆತ್ಮಹತ್ಯೆ! ಹೌದು, ದಿನಾ ನೋವಿನಲ್ಲಿ ಉಸಿರಾಡಿ ಸಾಯುವುದಕ್ಕಿಂತ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎಂಬ ದೃಢ ನಿಶ್ಚಯ ಮಾಡಿಕೊಂಡೆ.

ಆಗ ಶುರುವಾಗಿದ್ದು ನೋಡಿ ನಿಜವಾದ ಸಮಸ್ಯೆ. ಹೇಗೆ ಸಾಯುವುದು? ಬಲು ದೊಡ್ಡ ಪ್ರಶ್ನೆ. ನನಗೆ ಅನುಭವ ಇಲ್ಲ. ಇದೇ ಮೊದಲ ಪ್ರಯತ್ನ. ಹಾಗಾದ್ರೆ ಯಾರನ್ನು ಕೇಳುವುದು, ಆತ್ಮಹತ್ಯೆ ಮಾಡಿಕೊಂಡು ಯಾರಾದ್ರೂ ಬದುಕಿದ್ದರೆ ಅದು ಯಶಸ್ವೀ ಅಲ್ವಲ್ಲ. ಅದೂ ಇದೂ ಓದುವ ಆಸಕ್ತಿ ಈಗ ಕೆಲಸಕ್ಕೆ ಬಂತು ನೋಡಿ!  ಸರಿ, ಒಂದೊಂದೇ ರೀತಿಯ ಬಗ್ಗೆ ಆಲೋಚನೆ ಶುರು.
ರೇಲ್ವೆ ಟ್ರ್ಯಾಕ್ ಅಂತೂ ನಮ್ಮಲ್ಲಿಲ್ಲ, ಬೆಂಕಿ ಹಾಕಿಕೊಳ್ಳೋಣ ಅಂದ್ರೆ ಸೀಮೆಣ್ಣೆ ವಾಸನೆ ಥೂ! ಅದೂ ಬೇಡ. ವಿಷ (ಮೆಟಾಸಿಡ್) ಕುಡಿಯಬಹುದಲ್ವಾ? ಗದ್ದೆಗೆ ಔಷದಿ ಹೊಡೆಯುವಾಗಲೇ ತಲೆ ತಿರುಗುತ್ತದೆ, ಇನ್ನು ಕುಡಿದರೆ ತಲೆ ತಿರುಗುವುದಿಲ್ವಾ? ಅದೂ ಬೇಡ..........
ಹಾಗಾದ್ರೆ ನೇಣು ಹಾಕಿ ಕೊಳ್ಳುವುದೇ ಸರಿ! ಹೌದು, ಆದ್ರೆ ನನ್ನ ಭಾರ ತಡೆಯಲು ಆಗದೆ ಹಗ್ಗ ತುಂಡಾದರೆ? ಮತ್ತೆ ಕೆಳಗೆ ಬಿದ್ದು ಕೈ ಕಾಲು ಮುರಿದರೆ ಇನ್ನೊಂದು ಸಮಸ್ಯೆ.  ಛೆ! ಸಾಯಲೂ ಏನೂ ದಾರಿಯೇ ಇಲ್ವೆ?

ಆಗ ಹೊಳೆದದ್ದೇ ಹೊಳೆಗೆ ಹಾರುವುದು! ಅದೇ ಸರಿ, ಹೇಗಿದ್ದರೂ ಹತ್ತಿರದಲ್ಲೇ ಹೊಳೆ ಇದೆ. ಭೀಮನರೆ ಗುಂಡಿಯಲ್ಲಿ ಕಡಿಮೆ ಅಂದ್ರೂ ೫-೬ ಆಳು ಗುಂಡಿ ಇರಬಹುದು. ಅಪ್ಪನ ಭಯವಿದ್ದರೂ ಒಮ್ಮೆ ಈಜಲು ಹೋಗಿ ಅಪ್ಪನಲ್ಲಿ ಪೆಟ್ಟು ತಿಂದಿದ್ದು ಇನ್ನೂ ಮರೆತಿರಲಿಲ್ಲ. ಅಲ್ಲಿ ಹಾರಿದರೆ ಸಾವು ಗ್ಯಾರಂಟಿ!

ಹುಟ್ಟಿದ ಆರು ವರ್ಷದಿಂದ ಎಮ್ಮೆ ಬಾಲ ಹಿಡಿದು ಈಜು ಕಲಿತ ಹೊಳೆ ಅದು. ಏನೋ ಒಂತರ ತಾಯಿ ಪ್ರೀತಿ, ಭಾಂಧವ್ಯ. ಅಂದಿನಿಂದ ಇಂದಿನವರೆಗೂ ತನ್ನ ಒಡಲಲ್ಲಿ ನಮ್ಮನ್ನು ಆಡಿಸಿಕೊಂಡ ತಾಯಿಯ ಮಮತೆ ಆ ಹೊಳೆಯದು. ಅಲ್ಲೇ ಹೊಳೆಯ  ತಿರುವು ಇರುವಲ್ಲಿ ಭೀಮನರೆ ಗುಂಡಿ ಇದೆ. ಭೀಮನರೆ ಗುಂಡಿ ಅಂದರೆ ಆ ಹೊಳೆಯಲ್ಲೇ ಒಂದು ಭಯಾನಕ ಜಾಗ! ಮಕ್ಕಳಾದ ನಮಗೆ ಅಲ್ಲಿ ಈಜಲು ನಿಷೇಧ! ಅಪಾಯಕಾರಿ ಜಾಗ ಎಂದು ಅಲ್ಲಿ ಈಜಲು ಎಲ್ಲರೂ ಹೆದರುತ್ತಿದ್ದರು. 

ಅಮ್ಮ, ಬಂದುಗಳು, ಆ ಹುಡುಗಿ ಎಲ್ಲವೂ ಹಳೆ ಕಪ್ಪು ಬಿಳುಪು ಚಿತ್ರದಂತೆ ಮನದಲ್ಲಿ ನಾ ಮುಂದು ತಾ ಮುಂದು ಎನ್ನುತ್ತಾ ನುಗ್ಗ ತೊಡಗಿದವು. ನನ್ನ ಶವದ ಮುಂದೆ ಅಮ್ಮ ಅಳುತ್ತಿರುವಂತೆ ಭಾಸವಾಯ್ತು. 

ನನ್ನ ಶವ ನೋಡಲು ಆ ಹುಡುಗಿಯೂ ಬರಬಹುದೇ? ಬಂದರೆ ಯಾಕೆ ಹೀಗೆ ಮಾಡಿದೆ ಅಂತ ಕೇಳಲು ತಂಗಿಗೆ ಹೇಳಿ ಬರಬೇಕಿತ್ತು, ಛೆ! ಮೊದಲು ನೆನಪೇ ಆಗಲಿಲ್ಲ. ಈ ವಾಪಾಸು ಹೋಗಿ ಹೇಳಿ ಬರಲು ಸಾಧ್ಯವಿಲ್ಲ. ಇರಲಿ, ಅವಳು ಚನ್ನಾಗಿರಲಿ ಬಿಡಿ.
ಹೊಳೆಯ ದಂಡೆಯ ಮೇಲೆ ನಿಂತು ಕೆಳಗೆ ನೋಡಿದಾಗ ಒಮ್ಮೆ ಭಯವಾಗಿ ಮೈ ಜುಮ್ ಎಂದಿತು. ಸಾಯುವವನಿಗೆ ಭಯ ಯಾಕೆ? ಅವಳನ್ನೇ ನೆನೆಯುತ್ತ ಧೈರ್ಯ ಮಾಡಿ ನೀರಿಗೆ ಹಾರೇ ಬಿಟ್ಟೆ! 

ಸಮಸ್ಯೆ ಶುರು ಆಗಿದ್ದೇ ಇಲ್ಲಿ ನೋಡಿ. ನೀರಿಗೆ ಹಾರಿ ತಳಭಾಗಕ್ಕೆ ಹೋದದ್ದೇನೋ ಸರಿ. ಉಸಿರು ಬಿಗಿಹಿಡಿದಂತೆ  ನನ್ನ ಅಪ್ಪಣೆ ಮೀರಿ ಕೈ ಕಾಲುಗಳು ಬಡಿಯಲಾರಂಬಿಸಿದವು! ಉಸಿರು ನಿಲ್ಲುವ ಮೊದಲೇ ಬಡಿಯುತ್ತಾ ಬಡಿಯುತ್ತಾ ಮೇಲೇರಿ ಬಂದೆ. ಛೆ! ಮಿಸ್ಸಾಗಿ ಹೋಯ್ತು. ಪರವಾಗಿಲ್ಲ, ಮತ್ತೊಮ್ಮೆ ಹಾರಿದೆ. ಎಷ್ಟೇ ಕಷ್ಟಪಟ್ಟರೂ ಊಂ ಹ್ಞೂಂ.........ಆಗಲೇ ಇಲ್ಲ! ಮತ್ತೆ ಮೇಲೆ ಬಂದೆ! ಆದರೆ ಪ್ರಯತ್ನ ನಿಲ್ಲಿಸುವ ಮಗನಲ್ಲ ನಾನು. ಇವತ್ತು ಸಾಯಲೇ ಬೇಕು. ಮತ್ತೆ ಹಾರಿದೆ ನೀರಿಗೆ. ಅದೇ ಪುನರಾವರ್ತನೆ. ಸಾವು ಹತ್ತಿರ ಸುಳಿಯುತ್ತಿಲ್ಲ. 

ಇದರ ಮಧ್ಯೆ ಯಾಕೆ ಹೀಗೆ ಎನ್ನುವ ಕುತೂಹಲದಲ್ಲಿ ಸಾಯಲು ಇದ್ದ ಕಾರಣ ಮರೆತೇ ಹೋಗಿತ್ತು, ಸಾಯಲು ಬಂದವ ಮುಳುಗದಿರಲು ಕಾರಣ ಹುಡುಕುತ್ತಾ ಸಂಶೋಧನೆ ಮಾಡತೊಡಗಿದೆ. ಹೆಚ್ಚು ಕಡಿಮೆ ೨೦-೨೨ ಬಾರಿ ಹಾರಿದರೂ ಯಾಕೆ ಮುಳುಗಲಿಲ್ಲ? ಈಜು ಕಲಿತಿದ್ದೇ ಇದಕ್ಕೆ ಕಾರಣ. ಒಂದೊಮ್ಮೆ ಈಜಲು ಬರದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂಬ ಸತ್ಯ ಗೋಚರವಾಯ್ತು. ಆತ್ಮಹತ್ಯೆ ಮರೆತು ಹೊಸ ವಿಷಯದ ಜ್ಞಾನೋದಯವಾದ ಖುಷಿಯಲ್ಲಿ ನಗುನಗುತ್ತಾ ಮನೆಯ ಕಡೆ ಹೆಜ್ಜೆ ಹಾಕಿದ್ದೆ.

ಅಂತೂ ಇಂತೂ ಆತ್ಮಹತ್ಯೆಯ ಕೊನೆ ಪ್ರಯತ್ನವೂ ಹೀಗಾಗಿ ಹೋಯ್ತು. ಜೊತೆಗೆ ಆತ್ಮಹತ್ಯೆಯ ಯೋಚನೆಯೂ ಕೊನೆಯಾಯ್ತು. ಅಂದಿನಿಂದ ಹೊಸ ಜೀವನ ಶುರು ಆಯ್ತು. ಅಂದೇನಾದ್ರೂ ಆತ್ಮಹತ್ಯೆ ಯಶಸ್ವಿಯಾಗಿದ್ದರೆ ಇಂದು ನೀವು ಇದನ್ನು ಓದಲು ಸಾಧ್ಯವಿತ್ತಾ?


ಈಗ ನೀವೇ ಹೇಳಿ, ಆತ್ಮಹತ್ಯೆ ಸುಲಭವಾ? ಸಾಯುವುದು ಅಂದ್ರೆ ಎಷ್ಟು ಕಷ್ಟ ಅಲ್ವಾ?:- ಬಹಳ ದಿನಗಳ ನಂತರ ಬ್ಲಾಗಿನತ್ತ ತಲೆ ಹಾಕಿದ್ದೇನೆ. ಇದು ನನ್ನ ಜೀವನದಲ್ಲಿ ನಡೆದ ನಿಜವಾದ ಘಟನೆ! ಅದನ್ನೇ ನಿಮ್ಮ ಮುಂದೆ ಸಂಕೋಚವಿಲ್ಲದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಸಹಿಸಿಕೊಳ್ಳುವ ಜವಾಬ್ಧಾರಿ ನಿಮ್ಮದು!

(ಆಗೊಮ್ಮೆ ಈಗೊಮ್ಮೆ ಆಕೆಯನ್ನು ಮನ ನೆನೆಯುವುದು ಸುಳ್ಳಲ್ಲ!)