Thursday, July 28, 2011

ವಿಧಿ ವಿಲಾಸ.........

ಆಘಾತ!!!!
ಅನಿರೀಕ್ಷಿತ!!!!
ನಂಬಲೂ ಆಗದ ಆಘಾತ!!!!

ಅಲ್ಲದೆ ಮತ್ತೇನು? ಪಾದರಸದಂತೆ ಚುರುಕಾಗಿ ಓಡಾಡಿಕೊಂಡು ವ್ಯವಹಾರದ ಬಗ್ಗೆಯೇ ಸದಾ ಯೋಚಿಸುತ್ತಾ, ಐದು ನಿಮಿಷಕ್ಕೊಂದರಂತೆ ಸಿಗರೆಟ್ ಸುಟ್ಟು ಒಗೆಯುತ್ತಿದ್ದ ನಮ್ಮ ಬಾಸ್ ಇಂದು ಇಹ ಲೋಕ ತ್ಯಜಿಸಿದ್ದು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ!!!

ಅಂದು ನನ್ನ ಪಾಡಿಗೆ ದುರ್ದಿನ. ಸುಮಾರು ಮಧ್ಯಾಹ್ನ 12 ಘಂಟೆಯ ಸಮಯ. ಇತ್ತೀಚೆಗಷ್ಟೇ ತೆರೆದ ಹೊಸ ರೆಸ್ಟೋರೆಂಟಿನ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ಫೋನ್ ಮಾಡಿದರು ಬಾಸ್. ಇಂದು ನಾನು ಬರುವುದಿಲ್ಲ, ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತೇನೆ, ಎಲ್ಲಾ ಕಡೆ ನೋಡಿಕೋ ಎಂದು ಹೇಳಿದ್ದರು, 15 ನಿಮಿಷದ ನಂತರ ಮ್ಯಾನೇಜರ್ ಫೋನ್ ಮಾಡಿ ' ಸರ್, ಅನಿಲ್ ಸರ್ ಗೆ ಹುಷಾರಿಲ್ಲ, ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ, ನೀವು ಬೇಗ ಬನ್ನಿ' ಎಂದ. ಅರ್ಧ ಗಂಟೆಯಲ್ಲೇ ಆಸ್ಪತ್ರೆ ತಲುಪಿ ನೋಡಿದರೆ ಸರ್ ನಾಲ್ಕು ಜನ ಡಾಕ್ಟರ್ ಮತ್ತು ಮಿಶಿನ್ನುಗಳ ಮಧ್ಯೆ ಮಲಗಿದ್ದರು.
ಹೊರ ಬಂದ ವೈಧ್ಯರು ಹೇಳಿದ್ದು ಕೇಳಿದಾಗಲೇ ಆಘಾತ! Brain Hemorrhage ಎಂಬ ಹೆಮ್ಮಾರಿಗೆ  ಬಲಿಯಾಗಿದ್ದರು ನಮ್ಮ ಮಾಲೀಕರು! ಮೆದುಳಿನಲ್ಲಿ ರಕ್ತ ಹರಿದು ಹೆಪ್ಪುಗಟ್ಟಿ ಇಡೀ ಮೆದುಳೇ ಕಪ್ಪಾಗಿ ಹೋಗಿದ್ದು CT Scan ರಿಪೋರ್ಟಿನಲ್ಲಿ ನೋಡಿ ಮಾತೇ ಹೊರಡಲಿಲ್ಲ.

Medanta Medicity ಆಸ್ಪತ್ರೆಯಲ್ಲಿ ನಾಲ್ಕು ದಿನ ಕೊಮಾ ದಲ್ಲಿದ್ದು ಐದನೇ ದಿನ ಹೊರ ಬಂದಿದ್ದು ನಿರ್ಜೀವವಾಗಿ. ಹೆಂಡತಿ ಮತ್ತು ಎಂಟು ವರ್ಷದ ಮಗಳ ಅಳು, ಗೋಳಾಟ ಹೃದಯ ವಿದ್ರಾವಕ ಸನ್ನಿವೇಶ. ಏನು ಹೇಳುವುದು? ಅವರಿಗೆ ಧೈರ್ಯ ಯಾವರೀತಿ ಹೇಳಬೇಕೆಂಬುದೇ ತಿಳಿಯದ ಪರಿಸ್ಥಿತಿ.

ನಮ್ಮ ಹತ್ತಿರದವರ ಸಾವು ನಮ್ಮನ್ನೆಷ್ಟು ತಲ್ಲಣಗೊಳಿಸುತ್ತದೆ ಎಂಬುದು ನನಗೆ ಅರಿವಾಗಿತ್ತು. ಆರು ವರ್ಷದಿಂದ ನಾನು ಅವರೊಂದಿಗಿದ್ದು ಕಲಿತಿದ್ದು, ಪಡೆದಿದ್ದು ಬಹಳ. ಎಂದೆಂದೂ ತೀರಿಸಲಾಗದ ಋಣ ನಾ ಹೊತ್ತಿದ್ದೇನೆ. ನನಗೆ ಗುರುವಾಗಿ, ಅಣ್ಣನಾಗಿ ತಿದ್ದಿ ತೀಡಿ ದೆಹಲಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊತ್ತವರು ನಮ್ಮ ಬಾಸ್.

ಊಟ ತಿಂಡಿ ನಿದ್ದೆ ಮರೆತು ನಾಲ್ಕು ದಿನವೂ ಆಸ್ಪತ್ರೆಯಲ್ಲೇ ಇದ್ದು ನೋಡಿಕೊಂಡೆವು. ಆದರೆ ಎಂದೂ ತಿರುಗಿ ಬಾರದ ಲೋಕಕ್ಕೆ ಹೊರಟು ಹೋದರು. ಶನಿವಾರ ಅವರು ಮರಣ ಹೊಂದಿದ ದಿನ. ವಿಪರ್ಯಾಸ ಅಂದರೆ ಅಂದೇ ಅವರ ಜನ್ಮ ದಿನ ಕೂಡಾ! ಸರಿಯಾಗಿ ನಲವತ್ತ ನಾಲ್ಕು ವಸಂತಗಳನ್ನು ಪೂರೈಸಿ ಈ ಲೋಕದ ಜಂಜಡಗಳಿಂದ ಮುಕ್ತಿ ಪಡೆದರು.

ಆ ದಿನ ಅವರ ಕಳೆಬರದ ಮುಂದೇ ಶೋಕತಪ್ತರಾಗಿ ಕುಳಿತಿದ್ದಾಗ ನನಗೆ ವಿಪರೀತ ಹಸಿವು! ಒಮ್ಮೆ ಪ್ರಕಾಶಣ್ಣನ ಬ್ಲಾಗಿನಲ್ಲಿ ಸಾವಿನಲ್ಲಿ ಹಸಿವಾದರೆ ಆಗುವ ಕಷ್ಟ ಏನೆಂದು ಓದಿದ್ದೆ. ಆದರೆ ಅಂದು ನನಗೆ ಆ ಸತ್ಯದ ಅರಿವಾಗಿತ್ತು. ನಾಲ್ಕು ದಿನ ಉಪವಾಸ ಇದ್ದರೂ ಒಮ್ಮೆಯೂ ಕೂಡ ಹಸಿವಾಗಲಿಲ್ಲ ಆದರೆ ಆ ಸಮಯದಲ್ಲಿ ಮಾತ್ರ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಪ್ರಕಾಶಣ್ಣ ಹೇಳುವಂತೆ ಅತೀ ಕಷ್ಟದ ಸಮಯವೆಂದರೆ ಇದೇ!

ಈಗ ಉಳಿದಿರುವುದು ಅವರ ನೆನಪು, ಅವರು ಬಿಟ್ಟು ಹೋದ ವ್ಯವಹಾರ. ಜೊತೆಗೆ ಹಲವಾರು ನಿಗೂಡ ಪ್ರಶ್ನೆಗಳನ್ನು ಮಾತ್ರ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂಬುದೊಂದೇ ನಮ್ಮೆಲ್ಲರ ಹಾರೈಕೆ...........