Sunday, January 31, 2010

"ನಮನ"

   


    ಗೆಳೆಯರೇ, ನಮಗೆಲ್ಲ ತಿಳಿದಿರುವಂತೆ ಯಕ್ಷಗಾನ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕಲೆಗಾಗಿ ದುಡಿದ ಕೆರೆಮನೆ ಕುಟುಂಬದ ಇನ್ನೊಂದು ಕೊಂಡಿ ಕಳಚಿ ಬಿದ್ದಿದೆ.


       ಯಕ್ಷಗಾನವೇ ತಮ್ಮ ಜೀವನ ಎಂದುಕೊಂಡು ಹೋರಾಡಿದ, ಯಕ್ಷಗಾನಕ್ಕೆ ಒಂದು ಹೊಸ ಹುಟ್ಟು ತಂದುಕೊಟ್ಟ ಕುಟುಂಬ ಕೆರೆಮನೆ ಕುಟುಂಬ. ಕೆರೆಮನೆ ಮಹಾಬಲ ಹೆಗಡೆಯವರ ಮರಣದೊಂದಿಗೆ ಈ ಕುಟುಂಬದ ಇನ್ನೊಂದು ಕಿರೀಟ ವೇಷ ಕಳಿಚಿದಂತಾಗಿದೆ. ಕೆಲವಾರು ಸಮಯಗಳ ಹಿಂದೆ ಶಂಬು ಹೆಗಡೆಯವರು ಇಹಲೋಕದ ಯಾತ್ರೆ ಮುಗಿಸಿದ್ದರು. ಈಗ ಮಹಾಬಲ ಹೆಗಡೆಯವರ ಮರಣದಿಂದಾಗಿ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
        
           ಯಕ್ಷಗಾನ ಎಂದರೆ ತೆಂಕುತಿಟ್ಟು ಎಂಬ ಪರಿಕಲ್ಪನೆ ಹೊಂದಿದ್ದ ಕಾಲವೊಂದಿತ್ತು. ಅಂತ ಸಮಯದಲ್ಲಿ ಬಡಗುತಿಟ್ಟಿಗೆ ಮರುಜನ್ಮ ಕೊಟ್ಟಿದ್ದು ಕೆರೆಮನೆ ಕುಟುಂಬ. ಇಂದು ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಇಡುಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ದಕ್ಷಿಣ ಕನ್ನಡದಲ್ಲಿ ಬಡಗುತಿಟ್ಟಿನ ಕಲಾವೈಭಾವವನ್ನೇ ಉಣಬಡಿಸಿತು. ಇದರ ಉಗಮಕ್ಕೆ ಕಾರಣರಾದವರು ಕೆರೆಮನೆ ಶಿವರಾಮ ಹೆಗಡೆ. ಬಡಗುತಿಟ್ಟಿನ ಯಕ್ಷಗಾನಕ್ಕೆ ಹೊಸ ರೂಪುರೆಶುಗಳನ್ನು ತಂದು, ಯಕ್ಷಗಾನಕ್ಕೊಂದು ಪುನರ್ಜನ್ಮ ಕೊಟ್ಟವರು.
           
ಇಂದಿನ ಯಕ್ಷಗಾನದ ಜನಪ್ರಿಯತೆಗೆ ಕೆರೆಮನೆ ಕುಟುಂಬದ ಸಾದನೆ ಹೇರಳವಾಗಿದೆ.ಸಿನಿಮಾ, ಟೀವಿ ಮುಂತಾದ ಅದುನಿಕ ಮನರಂಜನಾ ಮಾದ್ಯಮಗಳ ಪೈಪೋಟಿಯ ಸಮಯದಲ್ಲಿ, ರಾತ್ರಿ ಪೂರ್ತಿ ಯಕ್ಷಗಾನಕ್ಕೆ ಬರುವವರ ಸಂಖ್ಯೆ ಇಳಿಮುಖಗೊಂಡಿತ್ತು. ಅಂತಸಮಯದಲ್ಲಿ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಮಹಾಭಾಲ ಹೆಗಡೆಯವರಂತ ದಿಗ್ಗಜರು ತಮ್ಮ ಜೀವವನ್ನು ಕಲೆಗಾಗಿಯೇ ಮೀಸಲಿಟ್ಟು ಯಕ್ಷಗಾನವನ್ನು ಉಳಿಸಲು ಶ್ರಮಿಸಿದರು.
ಆಧುನಿಕ ಯುಗದಲ್ಲಿ ಯಕ್ಷಗಾನ ಕಲೆ ತನ್ನ ನೆಲೆ ಉಳಿಸಿಕೊಳ್ಳಲು ಮಹಾಬಲ ಹೆಗಡೆಯವರ ಸೇವೆ ಅತೀತವಾದದ್ದು. ಭಜನೆ, ಸಂಗೀತ, ನಾಟಕ, ಯಕ್ಷಗಾನ ಮುಂತಾದ ಎಲ್ಲ ಕಲೆಗಳಲ್ಲಿಯೂ ಮಿಂದವರು ಮಹಾಬಲ ಹೆಗಡೆಯವರು.ಯಕ್ಷಗಾನದಲ್ಲಿ ಅವರು ನಿರ್ವಹಿಸುತ್ತಿದ್ದ ಭೀಷ್ಮ, ಕರ್ಣ, ದುರ್ಯೋದನ, ಕಂಸ, ರಾವಣ, ಅರ್ಜುನ ಮುಂತಾದ ಪಾತ್ರಗಳು ನೋಡುಗರ ಮನದಲ್ಲಿ ಇಂದಿಗೂ ಅಚ್ಚಳಿಯದೆ ನಿಂತಿವೆ. ಪ್ರೇಕ್ಷಕನಿಗೆ ಅಲ್ಲಿ ಪಾತ್ರ ಮಾತ್ರ ಕಾಣುತಿದ್ದನೇ ಹೊರತು ಪಾತ್ರದಾರಿಯಲ್ಲ! ಆ ಮಟ್ಟದಲ್ಲಿ ಪ್ರೇಕ್ಷಕರನ್ನು  ತಲ್ಲೀನಗೊಳಿಸುತಿದ್ದರು.
ಯಾವುದೇ ಪಾತ್ರವಾದರೂ ಆ ಅದರಲ್ಲೇ ತನ್ಮಯರಾಗಿ  ಆ ಪಾತ್ರಕ್ಕೆ ಜೀವ ತುಂಬುತ್ತಿದ್ದರು.

          ಮೂಲ ವಕ್ತಿತ್ವವನ್ನು ಕಾಯ್ದುಕೊಂಡು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಪಾತ್ರ ಬೆಸೆಯುತ್ತಿದ್ದ ಅವರ ಶೈಲಿ, ಪಾತ್ರಕ್ಕೆ ತಕ್ಕಂತೆ ಬದಲುತ್ತಾ ಸಾಗುವ ಅವರ ಅವರ ಕಂಠ, ಪಾತ್ರಕ್ಕೆ ತಕ್ಕಂತ ಅವರ ವಾಕ್ಚಾತುರ್ಯ, ಭಾವ ತುಂಬಿದ ಅಭಿನಯ, ನೃತ್ಯ, ಅದೆಲ್ಲಕ್ಕಿಂತಲೂ ಮಿಗಿಲಾದ ಅವರ ಪಾತ್ರಪೂರ್ವ ಅಧ್ಯಯನ ಇವೆಲ್ಲಾ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕರೆದೊಯ್ಯುತ್ತಿದ್ದವು.
        
          ನಿರಂತರ ಚಿಂತನ, ಅಧ್ಯಯನದಲ್ಲಿ ತಲ್ಲೀನರಾಗಿರುತ್ತಿದ್ದ ಹೆಗಡೆಯವರು ಓದಿದ್ದು ಕೇವಲ ನಾಲ್ಕನೇ ತರಗತಿವರೆಗೆ ಮಾತ್ರ! ಆದರೆ ಅವರಿಗಿದ್ದ ಪ್ರಪಚ ಜ್ಞಾನ, ಪೌರಾಣಿಕ ಜ್ಞಾನ ಅಗಾಧ!

        ಅವರ ಲಯಬದ್ದ ಕುಣಿತ, ಮಾತುಗಾರಿಕೆ, ಪ್ರೇಕ್ಷಕರನ್ನು ಸಮ್ಮೋಹನಗೊಳಿಸುತ್ತಿದ್ದ ಅಭಿನಯ ಸಾಮರ್ಥ್ಯ ಮೂಡಿಬಂದಿದ್ದು ಕೇವಲ ಯಕ್ಷಗಾನದಲ್ಲಿ ಬೆಳೆಯಬೇಕೆಂಬ ತುಡಿತದಿಂದ. ಸತ್ವಯುತವಾದ ಪಾತ್ರಪೋಷಣೆ, ಅರ್ಥಗಾರಿಕೆ ಹಾಗೂ ನಾಟ್ಯದೊಂದಿಗಿನ ಸಮನ್ವಯತೆಯೇ  ಹೆಗಡೆಯವರ ಪಾತ್ರಗಳಿಗೆ ವಿಶೇಷ ಜೀವ ತುಂಬಿದ್ದು. ಯಕ್ಷಗಾನ ಕಲಾವಿದನೆಂದರೆ ಹೇಗಿರಬೇಕು ಎಂಬುದನ್ನು ಅವರು ಹೇಳಿಕೊಟ್ಟವರು. ಕೇವಲ ನಾಲ್ಕು ಮಾತನಾಡುವ ಸಾಮರ್ಥ್ಯ, ಎರೆಡು ಹೆಜ್ಜೆ ಹಾಕುವುದರಿಂದ ಯಕ್ಷಗಾನವಾಗುವುದಿಲ್ಲ, ಅದಕ್ಕೆ ತನ್ನದೇ  ಆದ ರೀತಿ, ಪದ್ದತಿಗಳಿವೆ ಎಂಬುದನ್ನು ಮಹಾಬಲರು ತೋರಿಸಿಕೊಟ್ಟರು.
         
            ಕಲೆಯ ಎಲ್ಲಾ ವಿಭಾಗಗಳಲ್ಲಿಯೂ ಆಸಕ್ತಿ ಹೊಂದಿದ್ದ ಶ್ರೀಯುತರು, 
ಚಿತ್ರಾಪುರದ ಶ್ರೀಪಾದರಾಯರು, ದಾರವಾಡದ ಮುಜುಂದಾರರಿಂದ ಸಂಗೀತ ಅಭ್ಯಾಸ ನಡೆಸಿದರು. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. 
ಯಕ್ಷಗಾನ ಸಂಗೀತದ ಪರಂಪರೆಯನ್ನು ಉಳಿಸಿಕೊಂಡು, ಅದರಲ್ಲೇ 
ಹೊಸತನದ ಪ್ರಯೋಗಕ್ಕೆ ಸಾಕಷ್ಟು ಅಧ್ಯಯನ ನಡೆಸಿದ್ದರು. 

         1927ರಲ್ಲಿ ಜನಿಸಿದ ಇವರನ್ನು ಚಿಕ್ಕಪ್ಪ ಕೆರೆಮನೆ ಶಿವರಾಮ ಹೆಗಡೆಯವರೇ ಯಕ್ಷರಂಗಕ್ಕೆ ಎಳೆದು ತಂದವರು. ಇಡಗುಂಜಿ, ಸಾಲಿಗ್ರಾಮ, ಅಮೃತೇಶ್ವರಿ, ಕಮಲಶಿಲೆ, ಬಚ್ಚಗಾರು ಮುಂತಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು, ನಾಟಕ ಕ್ಷೇತ್ರದಲ್ಲಿಯೂ ತಮ್ಮ ಸ್ತ್ರೀಪಾತ್ರಕ್ಕಾಗಿ ಪ್ರಸಿದ್ಧಿ ಗಳಿಸಿದ್ದರು.

       ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ಅವರ ಕಲಾಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

          ಯಕ್ಷಗಾನ ರಾತ್ರಿಗಳ ವೈಭವದ ದಿನಗಳಲ್ಲಿ ಮೆರೆದ ಹೆಗಡೆಯವರು ಇಂದು ನಮಗೆ ಕೇವಲ ನೆನಪು ಮಾತ್ರ. ವರ್ತಮಾನದಿಂದ ಪೌರಾಣಿಕ ಲೋಕಕ್ಕೆ ಕರೆದೊಯ್ಯುವ ಅವರ ವಾಕ್ಚಾತುರ್ಯ, ಕಲಾಬಿಲಾಷೆ, ಕಲೆಯ ಬಗೆಗಿನ ಗೌರವ ಎಲ್ಲವೂ ಸ್ಮರಣಾರ್ಹ.ಈ ಕಲಾವಿದನ ರಂಗ ಪಯಣದ ಅನುಭವ ಇಂದಿನ ಯುಗದ ಯಕ್ಷಗಾನ ಕಲಾವಿದರ ಆದರ್ಶವಾಗಲಿ, ಅವರ ನಡೆ ನುಡಿ, ಸೇವಾ ಮನೋಬಾವನೆ, ಕಲೆಯ ಬಗ್ಗೆ ಗೌರವ ನಮಗೆಲ್ಲಾ ಆದರ್ಶವಾಗಲಿ. ಯಕ್ಷಗಾನ ಚಿರಾಯುವಾಗಲಿ.

ಬನ್ನಿ ಬ್ಲಾಗ್ ಲೋಕದ ಗೆಳೆಯರೇ,
ನಮ್ಮನ್ನೆಲ್ಲ ಅಗಲಿದ ಬಡಗುತಿಟ್ಟು ಯಕ್ಷಗಾನ ಲೋಕದ ದಿಗ್ಗಜ ಕೆರೆಮನೆ ಮಹಾಬಲ ಹೆಗಡೆ ಅವರಿಗೆ ಹೀಗೊಂದು ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸೋಣ,ಯಕ್ಷಗಾನಂ ಗೆಲ್ಗೆ.

4 comments:

 1. ಕೆರೆಮನೆ ಮಹಾಬಲ ಹೆಗಡೆಯವರ ಆತ್ಮಕ್ಕೆ ಶಾ೦ತಿ ದೊರಕಲಿ ಎ೦ದು ಭಗವ೦ತನಲ್ಲಿ
  ಪ್ರಾರ್ಥಿಸುತ್ತೇನೆ.
  ಮತ್ತೆ ಮತ್ತೆ ಇ೦ತಹ ಕಲಾವಿದರು ಹುಟ್ಟಿಬರಲಿ.
  ಯಕ್ಷಗಾನ ಕಲೆಯು ಜಗತ್ತಿನಾದ್ಯ೦ತ ಹರಡಲಿ.

  ReplyDelete
 2. ಪ್ರವೀಣ್, ಚೆನ್ನಾಗಿದೆ, ಯಕ್ಷಗಾನದ ಬಗ್ಗೆ ಅದರಲ್ಲೋ ಕೆರೆಮನೆ ಕುಟುಂಬದವರ ಬಗ್ಗೆ ಏನು ಬರೆದರೂ ಕಮ್ಮಿ, ಮಹಾಬಲ ಹೆಗಡೆಯವರ ಫೋಟೋ ನೋಡಿ ಸ್ವಲ್ಪ ಖುಷಿ ಮತ್ತು ಅತಿ ದುಃಖ ಆಯ್ತು, ಇದಕ್ಕೆ ಕಾರಣ ನಿಮಗೆ ತಿಳಿದಿದೆ !

  ReplyDelete
 3. ಪ್ರವೀಣ್...

  ಮಹಾಬಲ ಅಜ್ಜ ನೆನಪಾದರೆ ಅವರ ಭೀಷ್ಮನ ಪಾತ್ರ ಕಣ್ಣಿಗೆ ಕಟ್ಟುತ್ತದೆ..
  ಅವರ ಮಾತುಗಾರಿಕೆ ಇಷ್ಟವಾಗುತ್ತಿತ್ತು..
  ಅವರ ಧ್ವನಿಯಲ್ಲೇನೋ ಆಕರ್ಷಣೆ..!!

  ಅದಕ್ಕಿಂತ ಅವರ ಸುಶ್ರಾವ್ಯ ಕಂಠ...!!

  ಭಾಗವತರ ಸಂಗಡ ಅವರ ಆಲಾಪನೆ ಮರೆಯಲು ಅಸಾಧ್ಯ..!

  ಭಾಗವತರ ಸಂಗಡ ಹಾಡಿನ ಆಲಾಪನೆ ಮಾಡುವ ಹೊಸ ಸಂಪ್ರದಾಯ ಅವರಿಂದಲೇ ಶುರುವಾಗಿರ ಬಹುದು..

  ನಿಜಕ್ಕೂ ದೊಡ್ಡ ವ್ಯಕ್ತಿ...
  ಮೇರು ನಟ...

  ಅವರಿಗೆ ದೇವರು ಚಿರ ಶಾಂತಿ ಕರುಣಿಸಲಿ...

  ReplyDelete
 4. ಮಹಾಬಲ ಹೆಗಡೆ-ಯವರ ಪರಿಚಯ ಹಾಗೂ ಅವರಿಗೆ ನುಡಿನಮನ ಸಲ್ಲಿಸುತ್ತಿರುವ ತಮ್ಮ ಲೇಖನ ಸು೦ದರವಾಗಿ ಹೊಮ್ಮಿದೆ. ಅವರನ್ನು ಕಳೆದುಕೊ೦ಡ ಯಕ್ಷಗಾನ ಲೋಕ ಬಡವಾಯಿತು.

  ReplyDelete