Thursday, November 18, 2010

ವಿಪರ್ಯಾಸ.........

ಗೆಳತಿ,
ಹೂವಾಗಿ, ಹಣ್ಣಾಗಿ
ಕನಸಾಗಿ, ಕಣ್ಣಾಗಿ
ಹಿತದ ಗೆಳತಿಯಾಗಿ
ನನಗೆಲ್ಲಾ ನೀನಾಗಿ
 ದೇವತೆಯಾಗಿ 
ನನ್ನ ಮನದಲ್ಲಿ ನೀನಿದ್ದೆ............


ಆ ಒಂದು ಕ್ಷಣ
ಬಿಟ್ಟೆ ಎಲ್ಲಾ ಚಿಂತೆ
ಬಾಳ ಗುರಿಯ ಕತೆ
ಭವಿಸಿದ ಎಲ್ಲಾ ವ್ಯಥೆ
ಕೊನೆಗೆ ನನ್ನನ್ನೇ ಮರೆತೆ
ಆದರೂ
ಕೆಡಿಸಿ ಬಿಟ್ಟೆಯಲ್ಲೆ ನೀ ನಿದ್ದೆ.............!ಸ್ನೇಹಿತರೇ,
ಬ್ಲಾಗ್ ಲೋಕದಿಂದ ದೂರ ಉಳಿದು ತುಂಬಾ ದಿನಗಳಾದವು. ಎಂದೋ ಗೀಚಿದ್ದ ಈ ಸಾಲುಗಳು ಇಂದು ನೆನಪಾಗಿ ನಿಮ್ಮ ಮುಂದಿಟ್ಟಿದ್ದೇನೆ.
ಈ ಮಧ್ಯೆ ದೀಪಾವಳಿ ಬಂದು ಹೋಯಿತು, ಕನ್ನಡ ರಾಜ್ಯೋತ್ಸವ ಆಚರಣೆಯಾಯ್ತು, ಆದರೂ ನನ್ನ ಬ್ಲಾಗ್ ಮನೆಯ ಶೃಂಗಾರವಿಲ್ಲ, ತಳಿರು ತೋರಣಗಳಿಲ್ಲ. ಹಬ್ಬವಿಲ್ಲ, ನಿಮಗೆಲ್ಲ ಶುಭಾಷಯಗಳನ್ನೂ ಹೇಳಲಿಲ್ಲ. ಯಾರ ಮನೆಗೂ ಭೇಟಿಯಿಲ್ಲ, ನಿಮ್ಮ ಬರಹಗಳನ್ನೆಲ್ಲ ಓದಲೂ ಇಲ್ಲ.
ಹೌದು ನಾನು ತಪ್ಪು ಮಾಡಿದ್ದೇನೆ. 
ಆದರೆ ಏನು ಮಾಡುವುದು ಹೇಳಿ, ಕೆಲಸದ ಒತ್ತಡ ಅದೆಷ್ಟಿದೆಯೆಂದರೆ ಊಟ ನಿದ್ದೆಗೂ ಸಮಯವಿಲ್ಲ. ಹೊತ್ತು ಗೊತ್ತೆಂಬುದಿಲ್ಲ. ಹೊಸದಾಗಿ ಆರಂಭಗೊಂಡ 3 ತಾರಾ ಹೋಟೆಲ್ಲಿನ ಸಂಪೂರ್ಣ ಜವಬ್ದಾರಿ ನನಗೆ ಸಿಕ್ಕಿದ್ದರ ಕೊಡುಗೆ ಇದು! ಕೋಟ್ಯಾಂತರ ಖರ್ಚು ಮಾಡಿ ಪ್ರಾರಂಭಿಸಿದ ಈ ಹೋಟೆಲ್ಲನ್ನು ಮಗುವಿನಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯ ಅಲ್ಲವಾ? ಮಗು ಬೆಳೆದು ದೊಡ್ಡದಾದ ಮೇಲೆ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಇದೂ ಕೂಡ!
ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಇಣುಕಿ ಹೋಗುತ್ತಿದ್ದೇನೆ. ಆದಷ್ಟು ಬೇಗ ಸಮಯ ಮಾಡಿಕೊಂಡು ಎಲ್ಲರ ಮನೆಗೂ ಬಂದು ತರ್ಲೆ ಮಾಡುತ್ತಾ ಇರುತ್ತೇನೆ! ಉದಾಹರಣೆಗೆ 
ತಡವಾಗಿ ಮತ್ತು ಮುಂದಿನ ವರ್ಷಕ್ಕೆ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು!

ಅಲ್ಲಿಯವರೆಗೂ ಪ್ರೀತಿ ಮಮತೆ ಇಂದಿನಂತೆಯೇ ಇರಲಿ!
ನಿಮ್ಮವ........
ಮನದಾಳದಿಂದ.....   ಪ್ರವೀಣ್....

Sunday, September 26, 2010

ಭತ್ತದ ನಾಟಿ(ನಟ್ಟಿ)             ಸಾಸಿರಾರು ನೆನಪುಗಳನ್ನು ಹೊತ್ತು ಊರಿನಿಂದ ಮರಳಿ ಬಂದು ಹಲವು ದಿನಗಳೇ ಕಳೆದು ಹೋದವು. ದುಡಿಮೆಯ ನಿರಂತರ ಓಟದಲ್ಲಿ ಸುಂದರ ಕ್ಷಣಗಳಿಗಾಗಿ ಹುಡುಕಾಟ ನಡೆದೇ ಇದೆ. ಆದರೂ ನೆನಪುಗಳು ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುತ್ತವೆ. ನೆನಪುಗಳ ಹರಿವಿನ ನಡುವೆ ಜೀವನಕ್ಕಾಗಿ ಪರದಾಟ ಇದ್ದೇ ಇದೆ. 
             ಮಲೆನಾಡು ಎಂದರೆ ಸುಂದರ ಪ್ರಕೃತಿಯ ಬೀಡು. ದೇವರು ತನ್ನ ಶಕ್ತಿಯನ್ನೆಲ್ಲಾ ಸೌಂದರ್ಯದ ರೂಪದಲ್ಲಿ ಮಲೆನಾಡಿಗೇ ರವಾನಿಸಿರಬಹುದೇನೊ ಎಂಬ ಅನುಮಾನ ಬರುವುದು ಸಹಜ. ಸದಾ ಕಾಲವೂ ಹಸಿರಾಗಿ ಸುಂದರವಾಗಿ, ತಂಪಾಗಿ, ಸಮಾನ ಉಷ್ಣಾಂಶದಿಂದ ನಳನಳಿಸೊ ಸೌಂದರ್ಯ ರಾಶಿ ನಮ್ಮ ಮಲೆನಾಡು.
             ಮಲೆನಾಡಿನ ರೈತರಿಗೆ ವರ್ಷವಿಡೀ ಕೆಲಸವೇ. ಎಂದಿಗೂ ಕೆಲಸ ಇಲ್ಲ ಎಂಬ ದಿನವೇ ಇಲ್ಲ. ಜೂನ್ ತಿಂಗಳಿನಿಂದ ಶುರು ಆಗುವ ಕೆಲಸಗಳು ಮೇ ಅಂತದ ವರೆಗೂ ಇರುತ್ತವೆ. ಭತ್ತದ ನಾಟಿಯ ಕೆಲಸ, ತೋಟದ ಕಳೆ, ಅಡಕೆಯ ಔಷದಿ, ಗದ್ದೆ ಕೊಯ್ಲು, ಅಡಕೆ ಸುಲಿತ, ಎರಡನೆ ಬೆಳೆಯಾಗಿ ಮತ್ತೆ ಭತ್ತ, ಹುರುಳಿ, ಎಳ್ಳು, ಹೆಸರು, ಉದ್ದಿನಂತ ಬೇಳೆಕಾಳುಗಳು, ಬೇಸಿಗೆಯಲ್ಲಿ ಸೌತೆ, ಬದನೆ, ಕುಂಬಳ, ಮೆಣಸು, ಬೆಂಡೆ ಮುಂತಾದ ತರಕಾರಿಗಳ ಹಿತ್ತಿಲು, ಮಳೆಗಾಲಕ್ಕೆ ಕಟ್ಟಿಗೆಯ ಸಂಗ್ರಹ.............ಹೀಗೆ ನಿರಂತರ ಕೆಲಸಕಾರ್ಯಗಳೇ!
              ಇಂತಹ ಕೆಲಸಗಳಲ್ಲೇ ಭತ್ತದ ನಾಟಿ(ನಟ್ಟಿ) ಮುಖ್ಯವಾದ ಕೆಲಸ. ಮೊದಲೆಲ್ಲಾ ಮಳೆಯ ಕಣ್ಣುಮುಚ್ಚಾಲೆ ಅಷ್ಟಾಗಿ ಇರಲಿಲ್ಲ. ಅದ್ದರಿಂದ ಮೇ ತಿಂಗಳಲ್ಲೇ ಬೀಜ ಹಾಕಿ ಆಗಿರುತ್ತಿತ್ತು. ಜುಲೈ ಅಂತ್ಯದಲ್ಲಿ ನಟ್ಟಿಯ ಕೆಲಸ ಮುಗಿದಿರುತ್ತಿತ್ತು. ಮಳೆಗಾಲದ ಕಾಲಚಕ್ರ ಬದಲಾದಂತೆ, ನಿಯಮಗಳೂ ಬದಲಾದವು. ಈಗ ಮಳೆ ಶುರು ಆದ ನಂತರವೇ ಬೀಜ ಹಾಕುತ್ತಾರೆ. ಹಾಗಾಗಿ ಸೆಪ್ಟೆಂಬರ್ ಬಂದರೂ ನಟ್ಟಿ ಮುಗಿದಿರುವುದಿಲ್ಲ! 
               ಬೀಜ ಹಾಕಿ ತಿಂಗಳು ಕಳೆಯುವಷ್ಟರಲ್ಲಿ ಸಸಿ ಬೆಳೆದು ನಾಟಿಯ ಹಂತಕ್ಕೆ ಬರುತ್ತದೆ. ಅಷ್ಟರಲ್ಲಾಗಲೇ ಗದ್ದೆ ಉಳುಮೆ ಮಾಡಿ ಹದಗೊಳಿಸಿರಲಾಗುತ್ತದೆ. ಮೂರರಿಂದ ನಾಲ್ಕು ಸಾಲು ಹೂಟೆ ಮುಗಿದಿರುತ್ತದೆ. ಆಮೇಲೆ ಶುರು ಆಗುವುದೇ ನಿಜವಾದ ನಟ್ಟಿಯ ಚಿತ್ರಣ! ಗದ್ದೆಯಲ್ಲಿ ಎಲ್ಲಿ ನೋಡಿದರೂ ಗೊರಬು, ಕಂಬಳಿ ಕೊಪ್ಪೆ, ಎತ್ತು ಕೋಣಗಳು.....!ಜನರಲ್ಲಿ ಏನೋ ಉತ್ಸಾಹ, ಇಡೀ ವರ್ಷದ ಅನ್ನಕ್ಕಾಗಿ ಬೆವರಿಳಿಸುವ ತವಕ! 
               ಈಗ ಕೂಲಿಕಾರ್ಮಿಕರ ಸಮಸ್ಯೆ ನಮಗಿಲ್ಲ. ಏಕೆಂದರೆ ನಮ್ಮಲ್ಲಿ ಕೂಲಿಗಳೇ ಇಲ್ಲ! ಅನಿಯಮಿತ ಸಹಕಾರ ಪದ್ಧತಿ ನಮ್ಮ ಮಲೆನಾಡಿನಲ್ಲಿದೆ. ಅದಂರತೆ ಊರಲ್ಲಿ ಕೆಲವಷ್ಟು ಮನೆಯವರೆಲ್ಲಾ ಸೇರಿ ಒಟ್ಟಾಗಿ ಕೆಲಸಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಾವು ಹೋಗುವುದು, ನಮ್ಮ ಕೆಲಸಕ್ಕೆ ಅವರು ಬರುವುದು. ಮಲೆನಾಡಿನಲ್ಲಿ ಪರಸ್ಪರ ಮನೆಗಳ ಅಂತರ ಬಹಳ ದೂರ. ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಅಥವಾ ಮೂರು ಮನೆಗಳು ಸಿಗಬಹುದು. ಹಾಗಾಗಿ ಆದಷ್ಟು ಹತ್ತಿರದ ಮನೆಗಳ ಜನರು ಒಂದಾಗಿ ಕೆಲಸ ಮಾಡುತ್ತಾರೆ. ಯಾವುದೇ ಕೆಲಸವಾದರೂ ಸೈ, ಎಲ್ಲರೂ ಒಟ್ಟಾಗಿ ಕೆಲಸ ಮುಗಿಸುತ್ತಾರೆ.
               ಈಗೀಗ ಇನ್ನೊಂದು ಸಮಸ್ಯೆ ಎಲ್ಲಾ ಹಳ್ಳಿ ರೈತರಿಗೂ ತಲೆದೋರುತ್ತಿದೆ. ಅದೇನೆಂದರೆ ನಮ್ಮಂತ ಯುವ ಪೀಳಿಗೆಯ ನಗರ ಪಲಾಯನ ಸೂತ್ರ! ನಾಲ್ಕಕ್ಷರ ಕಲಿತ ಕೋಡು ಮೂಡಿ ನಾವು ನಗರಕ್ಕೆ ಪಲಾಯನ ಮಾಡುತ್ತಿದ್ದೇವೆ. ಕಾರಣ ಹಳ್ಳಿಯಲ್ಲಿ ಭವಿಷ್ಯ ಇಲ್ಲ ಎಂಬ ದೂರು. ರೈತ ಕೆಲಸಕ್ಕೆ ಯಾರೂ ಇಲ್ಲ. ಕೆಲವಷ್ಟು ಕಾರ್ಯಗಳನ್ನು ಯಂತ್ರಗಳು ನಿರ್ವಹಿಸಬಲ್ಲವು. ಆದರೆ ಸಂಪೂರ್ಣ ಕೆಲಸಗಳನಲ್ಲ!
ಇರಲಿ, ವಿಷಯಕ್ಕೆ ಬರೋಣ!
             ನಟ್ಟಿಯ ಮೊದಲ ದಿನ ಸಸಿ ಕೀಳುವ ಕಾರ್ಯ. ಕಿತ್ತ ಸಸಿಯನ್ನು ಕಟ್ಟು ಮಾಡಿ ಇಡುವುದು. ಹೀಗೆ ಒಬ್ಬ ಹೆಂಗಸು ಒಂದು ದಿನದಲ್ಲಿ ಕೀಳುವ ಸಸಿ ಕಟ್ಟಿನ ಸಂಖ್ಯೆ ಸುಮಾರು 9 ರಿಂದ 11 ಮೆದೆ(ಒಂದು ಮೆದೆ ಎಂದರೆ ಇಪ್ಪತ್ತು ಕಟ್ಟು). ಸಾದಾರಣವಾಗಿ ಹೆಂಗಸರೇ ಸಸಿ ಕೀಳುವುದು ಹೆಚ್ಚು! ಕಿತ್ತ ಸಸಿಗಳನ್ನು ನೀರಿಂದ ಮೇಲೆ ಎತ್ತಿಡುವುದು , ಹಾಗೆ ಎತ್ತಿಟ್ಟ ಸಸಿ ಕಟ್ಟಿನ ನೀರು ಇಳಿದ ಮೇಲೆ ಹೆಡಗೆ(ಬುಟ್ಟಿ)ಯಲ್ಲೋ, ಹಗ್ಗ ಕಟ್ಟಿಯೋ ನೆಡುವ ಜಾಗಕ್ಕೆ ಕೊಂಡೊಯ್ದು ಹಾಕುವುದು ಗಂಡಸರ ಕೆಲಸ! ಇದಿಷ್ಟು ಮೊದಲ ದಿನದ ಚಿತ್ರಣ.
             ನಾಟಿಯ ದಿನ ಹೂಟೆ ಮುಂಚಿತವಾಗಿ ಆರಂಭವಾಗುತ್ತದೆ.  ಎತ್ತು/ಕೋಣಗಳ ಜೋಡಿ ಸಾಲು ಹೂಟೆಯಲ್ಲಿ ಕಂಡುಬರುತ್ತವೆ. ನಾಟಿ ಮಾಡಲು ಇರುವ ಜನರ ಸಂಖ್ಯೆಯ ಮೇಲೆ ಎಷ್ಟು ಜೋಡಿ ಎತ್ತುಗಳು ಬೇಕೆಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ೧೨ರಿಂದ ೧೫ ಜನರಿಗೆ ೪ರಿಂದ ೫ ಜೋಡು ಬೇಕಾಗುತ್ತದೆ.(ಹೂಟೆಯ ಜೋಡಿ ಎತ್ತು/ಕೋಣಗಳಿಗೆ ಜೋಡು ಎಂದು ಕರೆಯುತ್ತಾರೆ.) ಹೂಟೆಯು ಮುಂದುವರೆದಂತೆ ನಟ್ಟಿ ಶುರು ಆಗುತ್ತದೆ. ನಳ್ಳಿ ಹೊಡೆದು ಸಮತಟ್ಟಾದ ನಂತರ ಸಸಿ ಕಟ್ಟಿನ ತಲೆಭಾಗ ಸ್ವಲ್ಪ ಕೊಯ್ದು ಗದ್ದೆಗೆ ಎಸೆಯಲಾಗುತ್ತದೆ. ಆ ಕಟ್ಟುಗಳನ್ನು ಬಿಚ್ಚಿ ೩-೫ ಸಸಿಗಳನ್ನು ಒಟ್ಟೊಟ್ಟಿಗೆ ನೆಡುತ್ತಾರೆ. 
ಈಗಲೂ ಕೂಡಾ ನಮ್ಮಲ್ಲಿ ನಟ್ಟಿ, ಗದ್ದೆಕೊಯ್ಲಿನ ಸಂದರ್ಭದಲ್ಲಿ ಹೆಂಗಸರು ಹಾಡು ಹೇಳುತ್ತಾರೆ. ಆದರೆ ವ್ಯತ್ಯಾಸ ಇಷ್ಟೆ. ಹಿಂದೆ ಜನಪದ ಗೀತೆಗಳ ಸೊಗಡು ತುಂಬಿದ್ದರೆ ಈಗ ಚಲನಚಿತ್ರ ಗೀತೆಗಳು. ಆಗೊಮ್ಮೆ ಈಗೊಮ್ಮೆ ಹಳೆಯ ತಲೆಗಳಿಂದ ಜಾನಪದ ಗೀತೆಗಳೂ ಕೇಳಿ ಬರುವುದುಂಟು. ಆದರೆ ತುಂಬಾ ಕಡಿಮೆ. ಈಗಿನ ಹೆಣ್ಣುಮಕ್ಕಳು ಹಳಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ಬೆಳೆಸಿಕೊಳ್ಳದೆ ತಿರಸ್ಕಾರ ಮಾಡಿದ್ದು ನಾನು ಕಣ್ಣಾರೆ ಕಂಡ ಸತ್ಯ! ಆದರೂ ಒಂದು ತೃಪ್ತಿ ಎಂದರೆ ಎಲ್ಲವೂ ಕನ್ನಡ ಹಾಡುಗಳೇ ಎಂಬುದು. ಮುಂದೊಂದು ದಿನ ಆ ಸ್ಥಾನವನ್ನು ಹಿಂದಿಯ ಹಾಡುಗಳೋ, ಅಥವಾ ತಮಿಳು ತೆಲುಗಿನ ಹಾಡುಗಳು ಆಕ್ರಮಿಸಿಕೊಂಡರೆ ಆಶ್ಚರ್ಯವೇನಿಲ್ಲ! ಬದಲಾವಣೆ ಪ್ರಕೃತಿಯ ನಿಯಮ.......
            ನಟ್ಟಿಯ ಸಂದರ್ಭದಲ್ಲಿ ಊಟ ತಿಂಡಿಗಳು ಗದ್ದೆಯಲ್ಲಿಯೇ ನದೆಯುತ್ತವೆ. ಸಾಧಾರಣವಾಗಿ ತಿಂಡಿಯೆ ಹೆಚ್ಚು. ಬೆಳಿಗ್ಗೆ ಊಟ ಮಾಡುವ ಪದ್ಧತಿಯನ್ನು ನಮ್ಮೂರಲ್ಲಿ ನೋಡಬಹುದು. ಕುಚ್ಚಲಕ್ಕಿಯ ಗಂಜಿ ಈಗ ಅಲ್ಲಲ್ಲಿ ಮರೆಯಾಗಿದೆ. ಮೊದಲೆಲ್ಲಾ ಬೆಳಿಗ್ಗೆ ಕಂಚಿನ ಬಟ್ಟಲಲ್ಲಿ ಎರಡುಬಟ್ಟಲು ಗಂಜಿ ಉಂಡು ಗದ್ದೆಗೆ ಹೋಗುತ್ತಿದ್ದರು. ಈಗ ಕುಚ್ಚಲಕ್ಕಿ ಊಟ ಕಡಮೆಯಾಗಿದೆ. ಬೆಳಗ್ಗಿನ ಊಟದ ಪದ್ದತಿ ಇದೆ. ಗದ್ದೆಗೆ ಮಧ್ಯಾಹ್ನ ಕಡುಬು ತಿಂಡಿಯ ರೂಪದಲ್ಲಿ ತರಲಾಗುತ್ತದೆ. ಕಡುಬು ಸಕಲರಿಗೂ ಮೆಚ್ಚು, ಮಾಡುವುದೂ ಸುಲಭ. ಏನಾದರೂ ಒಂದು ಸಾರು ಮಾಡಿದರೆ ಆಯ್ತು. ಹೆಚ್ಚು ಕಷ್ಟವೇ ಇಲ್ಲ.
ಬಿಸಿ ಬಿಸಿ ಕಾಫಿಯ ಸೇವೆ ಮಧ್ಯ ಒಂದೆರೆಡು ಬಾರಿ ಇರುತ್ದೆ. ಆಗಾಗ ಎಲೆ ಅಡಿಕೆಯಂತೂ ಇದ್ದೇ ಇರುತ್ತದೆ. ಬಿರುಮಳೆಯಿಂದ ಉಂಟಾದ ಚಳಿಯ ರಕ್ಷಣೆಗೆ ಎಲೆ ಅಡಿಕೆ ಸರ್ವೋಚ್ಛ ಸಾಧನ. ಎಳೆಯರಿಂದ ಮುದುಕರವರೆಗೂ ಎಲ್ಲರೂ ಎಲೆ ಅಡಿಕೆಯ ದಾಸಾನುದಾಸರೇ!  
             ಅದೇ ಮೊದಲ ದಿನದ ನಟ್ಟಿಯಾದರೆ "ದೊಡ್ನಟ್ಟಿ" ಎಂದು ಕರೆಸಿಕೊಳ್ಳುತ್ತದೆ. ಸಂಜೆ ನಟ್ಟಿ ಮುಗಿದ ನಂತರ ಗದ್ದೆ ಮಧ್ಯೆ ಮುಂಡುಗವನ್ನು ನೆಟ್ಟು ಹಲಸಿನ ಹಣ್ಣನ್ನು ಕಡಿದು ಎಲ್ಲರಿಗೂ ಹಂಚಲೇ ಬೇಕು. ಆ ದಿನ ಹಲಸಿನ ಹಣ್ಣಂತೂ ಇರಲೇಬೇಕು!
             ಅಂತೂ ನಟ್ಟಿಯನ್ನು ಮುಗಿಸಿ, ಜೋಪಾನವಾಗಿ ನೋಡಿಕೊಂಡು ಬರಲಾಗುತ್ತದೆ. ಹತ್ತರಿಂದ ಹದಿನೈದು ದಿನಗಳಲ್ಲೆ ಹೊಸ ಚಿಗುರು ಬರಲಾರಂಭಿಸುತ್ತದೆ. ಎರೆಡು ತಿಂಗಳು ಕಳೆಯುವಷ್ಟರಲ್ಲಿ ತನೆಗಳು ಮೂಡಲಾರಂಭಿಸುತ್ತವೆ. 
ಮಧ್ಯದಲ್ಲಿ ಎಲ್ಲಾದರೂ ಮಳೆ ಕೈ ಕೊಟ್ಟು ಹೆಚ್ಚೊ  ಕಡಿಮೆಯೋ ಆದರೆ ಮುಗಿಯಿತು. ರೈತ ರಕ್ತದಂತೆ ಇಳಿಸಿದ ಬೆವರಿಗೆ ಕವಡೆ ಕಿಮ್ಮತ್ತೂ ಇಲ್ಲದಂತಾಗುತ್ತದೆ. ಪಟ್ಟ ಕಷ್ಟಕ್ಕೆ ಬೆಲೆಯೆ ಇಲ್ಲವಾಗುತ್ತದೆ. ಆದರೂ ದೇಶದ ಬೆನ್ನೆಲುಬಾಗಿ ರೈತ ನಾಳೆಯ ಭರವಸೆಯೊಂದಿಗೆ ಬದುಕುತ್ತಾನೆ. ಈ ವರ್ಷ ಏನೂ ತೊಂದರೆ ಆಗಲಾರದು ಎಂಬ ನಂಬಿಕೆ ತುಂಬಿರುತ್ತದೆ. ಚೌಡಿಗೆ ಕೊಡುವ ಹರಕೆಯಲ್ಲಿ ಒಂದು ಸಂಖ್ಯೆ ಹೆಚ್ಚಾಗುತ್ತದೆ. ಕಾಕತಾಳೀಯವೋ ಎಂಬಂತೆ ಅತೀ ಹೆಚ್ಚಲ್ಲದಿದ್ದರೂ ತೊಂದರೆಯಿಲ್ಲದೆ ಈ ವರ್ಷ ಕೆಲಸ ಕಾರ್ಯಗಳು ಮುಗಿದು ಬೆಳೆ ಕೈಗೆ ಸಗುತ್ತದೆ. ಚೌಡಿಗೆ ಒಂದು ಜಾಸ್ತಿ ಕೊಟ್ಟಿದ್ದು ವ್ಯರ್ಥವಾಗಲಿಲ್ಲ ಎಂಬ ಸಂತೋಷ ರೈತನ ಮೊಗದಲ್ಲಿ ನಲಿದಾಡುತ್ತದೆ.


ನಮ್ಮ ಮನೆಯ ನಟ್ಟಿಯ ಸಮಯದ ಕೆಲವು ಚತ್ರಗಳು ಇಲ್ಲಿ ನಿಮಗಾಗಿ, ನೊಡಿ.........ನಳ್ಳಿ ಹೊಡೆಯುತ್ತಿರುವ ನನ್ನ ತಮ್ಮ (ನಳ್ಳಿ ಎಂದರ ಹೂಟೆ ಮಾಡಿದ ಭೂಮಿಯ ಉಬ್ಬುತಗ್ಗುಗಳನ್ನು ಮುಚ್ಚಲು ಬಳಸುವ ಸಾಧನ)
ಸಸಿ ಕೀಳುತ್ತಿರುವ ನಮ್ಮೂರ ಮಹಿಳೆಯರುಕಿತ್ತಿಟ್ಟ ಸಸಿ ಕಟ್ಟುಗಳು.


 
ನೀವು ಕಾಫಿ ಕುಡೀರಿ, ನಾನು ಹಾಗೆ ಸ್ವಲ್ಪ ಹುಲ್ಲು ಮೇಯ್ತೇನೆ. ಆಮೇಲೆ ಬರಲು ಆಗಲ್ಲ!
ಅಬ್ಬ....ಎಷ್ತು ತಣ್ಣಗಾಗ್ತ ಇದೆ ಈ ಕೆಸರಲ್ಲಿ.......
ಎತ್ತು ಮತ್ತು ಕೋಣಗಳು ವಿಶ್ರಾಂತಿಯಲ್ಲಿ.


 
 ನೆಗಿಲ ಯೋಗಿ........
ಸೀನಣ್ಣ ಮತ್ತು ನಮ್ಮ ಚಿಕ್ಕಪ್ಪ ಹೂಟೆಯಲ್ಲಿ ನಿರತ....
  ಹೀಗೆ ನಮ್ಮಲ್ಲಿ ನಾಟಿ ಮಾಡುವುದು......

   ತಲೆ ಕತ್ತರಿಸಿಕೊಂಡ ಭತ್ತದ ಸಸಿ ಕಟ್ಟುಗಳು.

 ನೀವು ಎಲೆ ಅಡಿಕೆ ತಿನ್ನಿ, ನಾವು ಹಾಗೆ ಸ್ವಲ್ಪಹೊತ್ತು ಕೆಸರಲ್ಲಿ ಮಲಗಿ ವಿಶ್ರಮಿಸುತ್ತೇವೆ ಎನ್ನುವ ಕೋಣಗಳು
ಇರಿ ಬಂದೆ, ತಮ್ಮ ಒಬ್ನೆ ಹೂಡ್ತಾ ಇದ್ದಾನೆ, ನಾನು ಸ್ವಲ್ಪ ಹೊತ್ತು ನಳ್ಳಿ ಹೊಡಿತೀನಿ
ನಾನೂ ಕೆಲ್ಸ ಮಾಡ್ತಾ ಇದ್ನಪ್ಪಾ.......ತಿಂಡಿ, ಎಲೆಅಡಿಕೆ ಎಲ್ಲ ಗದ್ದೆಯಲ್ಲೇ.....!

Thursday, September 16, 2010

ಮರೆಯಲಾಗದ ಅನುಭವ.....

.ಗೆಳೆಯರೇ,
ಸಾವಿರಾರು ನೆನಪುಗಳ ಹೊತ್ತು, ಅನಿವಾರ್ಯದ ಕರೆಗೆ ಓಗೊಟ್ಟು ಊರನ್ನು ಬಿಟ್ಟು ನಗರವನ್ನು ಸೇರಿದ್ದೇನೆ. ಊರಲ್ಲಿ ಇದ್ದ ಒಂದು ತಿಂಗಳಲ್ಲಿ ಎಲ್ಲವೂ ಸಂತೋಷದ ಕ್ಷಣಗಳೇ,  ಬೆಂಗಳೂರಿನಲ್ಲಿ ಶುರುವಾದ ಸಂತೋಷ ಇಂದಿನವರೆಗೂ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಬೆಂಗಳೂರಿನಲ್ಲಿ ಬ್ಲಾಗ್ ಮಿತ್ರರೆಲ್ಲರ ಒಡನಾಟ ಎಂದೂ ಮರೆಯಲಾಗದ ಅನುಭವ. ನಗೆಗಡಲಲ್ಲಿ ತೇಲಿಸುವ ಪಕ್ಕು ಮಾಮ(ಪ್ರಕಾಶಣ್ಣ) ಆಶಾಕ್ಕ, ಸಜ್ಜನ ಸರ್ಜನರು ನಮ್ಮ ಡಾಕ್ಟರ್ ಅವರು, ಮುಗುಳ್ನಗೆಯ ಮಾಂತ್ರಿಕ ಪರಾಂಜಪೆ ಸರ್, ನಾರಾಯಣ ಭಟ್ಟರು, ಜ್ಞಾನ ಸಾಗರ ವಿ ಆರ್ ಭಟ್ಟರು, ಅನಿಲ್ ಬೆಡಗೆ, ನಾಗರಾಜ್, ಶಿವು ಮತ್ತು ಹೇಮಶ್ರೀ ಮೇಡಂ(ಮತ್ತು ಅವರ ಮನೆ ಊಟ!)............ಜೊತೆಗೆ ಸುಗುಣಕ್ಕ ಮಹೇಶ್ ಸರ್ ಮನೆಯ ಹಬ್ಬದ ಊಟ! ಪಕ್ಕು ಮಾಮನ ಜೊತೆ ಸುತ್ತಾಟ, ಸಿನಿಮಾ ನೋಡಾಟ, ಹುಡುಗಿ ನೋಡಾಟ,  ಅದಕ್ಕೂ ಕಿತ್ತಾಟ!
ಇವರೆಲ್ಲರೊಂದಿಗೆ ಕಳೆದ ಆ ಮಧುರ ಕ್ಷಣಗಳು ಮತ್ತೆ ಮರುಕಳಿಸುವುದು ಯಾವಾಗ? ಶಿವು ಮತ್ತು ಅಜಾದ್ ಅವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮವಂತೂ ನಮ್ಮ ಮನೆಯ ಕಾರ್ಯಕ್ರಮದಂತೆ ನಡೆದು ಹೋಯಿತು. ಅಲ್ಲಿ ಎಲ್ಲರೂ ಅಪರಿಚಿತರೇ, ಆದರೆ ಯಾರಲ್ಲೂ ಆ ಬಾವನೆಯೇ ಇಲ್ಲ! ಒಟ್ಟಿಗೆ ತಿಂದು ಉಂಡು ಬೆಳೆದ ಸ್ನೇಹಿತರಿಗಿಂತಲೂ ಪರಿಚಯಸ್ತರು! ಸೀತಾರಾಂ ಸರ್, ನಮ್ಮೊಳಗೊಬ್ಬ ಬಾಲು ಸರ್, ಹಳ್ಳಿಮೇಷ್ಟ್ರು ನವೀನ್, ಬ್ರಹ್ಮಚಾರಿ ಶಿವಪ್ರಕಾಶ್,  ಚೇತನಾ, ನಂಜುಂಡ ದಂಪತಿಗಳು, ಶಿವಶಂಕರ್ ಯಳವತ್ತಿ, ದಿನಕರ್ ದಂಪತಿಗಳು, ಅಶೋಕ್ ಶೆಟ್ಟಿ, ನಗುಮೊಗದ ಹುಡುಗ ನಮ್ಮವ ರಾಘು, ದಿಲೀಪ್ ಹೆಗ್ಡೆ, ಪ್ರಗತಿ, ದಿವ್ಯ ಹೆಗ್ಡೆ, ಶೋಭಾ, ಶಶಿ ಅಕ್ಕ, ನಿಶಾ ಅಕ್ಕ, ಸುಮನ ವೆಂಕಟ್ ಜೋಡಿ................ಒಬ್ಬರ ಇಬ್ಬರಾ! 
ನಂತರ ನಡೆದ ಬಹುಮಾನ ವಿತರಣೆ! ಈ ಪ್ರೀತಿ, ಅಧರ, ಖುಷಿ, ಬೇರೆಲ್ಲೂ ಸಿಗಲಾರದೇನೋ..........ಎಲ್ಲಾ ಬ್ಲೋಗ್ ಮಿತ್ರರಿಗೂ ನಾನು ಚಿರಋಣಿ.

ಇನ್ನು ಮನೆಯಲ್ಲಿದ್ದ ಕ್ಷಣಗಳೆಲ್ಲವು  'ಆ ಸಮಯ......... ಆನಂದಮಯಾ............!' ಧೋ ಎಂದು ಸುರಿವ ಮಳೆ, ನಾಟಿ ಕೆಲಸ, ತೋಟದ ಕೆಲಸ, ದನ ಮೇಯಿಸುವ ಕೆಲಸ ಜೊತೆಯಲ್ಲೇ ಆಗಾಗ ತಿರುಗಾಟ! ಆಗುಂಬೆ, ಜೋಗ, ಕವಿಶೈಲ, ಶೃಂಗೇರಿ, ಮಾವನ ಮನೆ, ಚಿಕ್ಕಮ್ಮನ ಮನೆ ಎಲ್ಲಾ ಕಡೆ ತಿಂದು ಉಂಡು ತಿರುಗಿದ್ದೇ! ಶ್ರಾವಣ, ಗೌರಿ ಹಬ್ಬ, ಗಣೇಶ ಚತುರ್ಥಿ ಮುಂತಾದ ಹಬ್ಬಗಳ ಸರಮಾಲೆ! ಈಗ ಎಲ್ಲಾ ಬಿಟ್ಟು ನೆನಪುಗಳನ್ನು ಹೊತ್ತು ಮತ್ತೆ ದೆಹಲಿಗೆ ಬಂದಿದ್ದೇನೆ ಹೊಟ್ಟೆಪಾಡಿಗಾಗಿ!ಹಲವಾರು ದಿನಗಳಿಂದ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಿರಲಿಲ್ಲ. ಈಗ ಒಂದೊಂದಾಗಿ ಓದುತ್ತೇನೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. 

ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ
ನಿಲ್ಲದ ಓಟಕ್ಕೆ 
ದುಡಿಯುವ ಛಲಕ್ಕೆ
ಗಳಿಸುವ ತವಕಕ್ಕೆ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಹಕ್ಕಿ ಪಕ್ಷಿಗಳ ಕಲರವ ಬಿಟ್ಟು
ಜುಳು ಜುಳು ನೀರಿನ ಸದ್ದನು ಮರೆತು
ತಂಗಾಳಿಯ ಸಹವಾಸ ದೂಡಿ
ಕಾರ್ಮುಗಿಲು ಬಿರುಮಳೆಗಂಜಿ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಹಳ್ಳಿಯ ಮುಗ್ಧ  ಮುಖಗಳ
ತಾಯಿಯಂತ ಮನೆಯ ಹಸುಗಳ
ಪ್ರೀತಿ ತೋರುವ ನಾಯಿಗಳ 
ಹಂಚಿನ ಬೆಚ್ಚನೆ ಮನೆಯ 
ಎಲ್ಲವ ಬಿಟ್ಟುಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಮಲೆನಾಡ ಮಣ್ಣಿನ ಸುವಾಸನೆಯಂತ
ಅಮ್ಮನ ಪ್ರೀತಿಯ ಕೈತುತ್ತ ತಿಂದು 
ಅಪ್ಪನ ಕಣ್ಣನಚ ನೀರನು ಕಾಣದೆ
ತಮ್ಮನೊಂದಿಗಿನ ಆಟವ ನೆನೆಯುತ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ,

ಗಡಿಬಿಡಿಯ ಪ್ರಪಂಚದಲ್ಲಿ 
ದುಡಿಮೆಯ ಗುರಿಯ ಬೆನ್ನಟ್ಟಿ
ಎಲ್ಲಾ ನೆನಪನು ಗಳಿಗೆ ಮರೆತು
ಯಂತ್ರದಂತೆ ತಿರುಗಲೆಂದು
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ,
ನಿಲ್ಲದ ಓಟಕ್ಕೆ 
ದುಡಿಯುವ ಛಲಕ್ಕೆ
ಗಳಿಸುವ ತವಕಕ್ಕೆ!

Tuesday, August 10, 2010

"ಗುಟ್ಟು"

ನಲ್ಲೆ,
ನಿನಗೆ ಯಾಕೇ
ಬೇಕು
ಚಂದದ
ಆಭರಣ
                  ಒಡವೆಗಳು...........?

ನಿನ್ನಲ್ಲೇ 
ಇವೆಯಲ್ಲಾ 
ಮುಖದ 
ತುಂಬಾ
ಅಂದದ 

                  ಮೊಡವೆಗಳು........!ಗೆಳೆಯರೇ,
ಬಹಳ ದಿನಗಳ ಆಸೆಯಂತೆ ನಾನು ಮನೆಗೆ ಹೊರಟಿದ್ದೇನೆ. ಪೂರ್ಣ ಒಂದು ತಿಂಗಳ ರಜೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ್ದೇನೆ. ಬೆಂಗಳೂರಲ್ಲಿ ಒಂದು ವಾರ ಇದ್ದು ಆಮೇಲೆ ಮನೆಗೆ ಹೋಗುವ ಆಲೋಚನೆ ನನ್ನದು. ಇಂದಿನಿಂದ ಶ್ರಾವಣ ಮಾಸ ಆರಂಭಗೊಂಡು ಸಂತಸದ ಹಬ್ಬದ ವಾತಾವರಣವನ್ನು ತಂದಿದೆ, ಒಂದೊಂದೇ ಹಬ್ಬಗಳು ಸರತಿ ಸಾಲಿನಲ್ಲಿ ನಿಂತಿವೆ. ಹಬ್ಬದಲ್ಲಿ ಮನೆಯಲ್ಲಿದ್ದರೆ ಮನೆಮಂದಿಯೆಲ್ಲಾ ಅದೆಷ್ಟು ಖುಷಿ ಪಡುತ್ತಾರೆ ಅಲ್ವಾ? ಹಬ್ಬದ ದಿನ ನೀವು ನಿಮ್ಮ ಮನೆಗೆ ಹೋಗಿ ಬನ್ನಿ. ಮನೆಯಲ್ಲಿ ಹಬ್ಬದ ಸಂತೋಷವನ್ನು ಹೆಚ್ಚಿಸಿ.

ನಮಗೆಲ್ಲಾ ತಿಳಿದಿರುವಂತೆ ಅಗಸ್ಟ್ 22ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಜಾದ್ ಸರ್ ಅವರ "ಜಲನಯನ" ಮತ್ತು ಶಿವು ಸರ್ ಅವರ "ಗುಬ್ಬಿ ಎಂಜಲು" ಪುಸ್ತಕಗಳ ಬಿಡುಗಡೆ ಸಮಾರಂಭ ಇದೆ. ಎಲ್ಲರೂ ಬನ್ನಿ, ಒಟ್ಟಿಗೆ ಸೇರಿ ನಮ್ಮ ಗೆಳೆಯರನ್ನು ಹಾರೈಸೋಣ, ಎಲ್ಲರೂ ಒಂದಾಗಿ ಈ ಸಮಾರಂಭದ ಅಂದ ಹೆಚ್ಚಲು ಕಾರಣರಾಗೋಣ.
ಪ್ರೀತಿ ಇರಲಿ,
ಪ್ರವೀಣ್ ಆರ್ ಗೌಡ 
ಫೋನ್: 09873837353
            09582199937
                      08880348815(ಬೆಂಗಳೂರಿನಲ್ಲಿ ಇರುವಾಗ)

Wednesday, August 4, 2010

ಹೇಳುವೆಯಾ ಕಾರಣಾ.............

ಪ್ರೀತಿಯೇ ನೀನೇಕೆ ಹೀಗೆ?
ಒಂದೂ ಅರಿಯದ ಭಾವದ ಹಾಗೆ...........
ಮುಡಿದ ಹೂ ಬಾಡಿದ ಮೇಲೆ
ಕಸವಾಗಿ ಹೋಯಿತು ಅದಕ್ಕೆಲ್ಲಿ ಬೆಲೆ..........?

 ಅಂದು ನಿನ್ನ ಕಂಡಾಗ ನನಗಾದ ಪರಿಣಾಮ
 ನಿದೆರೆ ಹಸಿವು ಮರೆತ ನಿನ್ನ ಗುಲಾಮ............
 ನೀನೇ ಉಸಿರು, ನೀನೇ ನನ್ನ ಪ್ರಾಣ
ಎಂದುಕೊಂಡು ಮನ ಕಟ್ಟಿತ್ತು ತೋರಣ.............

ಇಂದೇಕೆ ಬೇಡ ನಾ ನಿನಗೆ
ಗೆದ್ದಿತೆ ಆಸೆ ಲೋಭವು ಕೊನೆಗೆ............
 ಇದರ ಕಾರಣ ತಿಳಿಯುವುದೇ ಅನುಮಾನ
ಒಳಗೂ ಹೊರಗೂ ಬರೀ ಮೌನ......

ಮುಳ್ಳಿನ ನಡುವೆ ಹೂ ನಗುವಂತೆ
ನೋವಲ್ಲೂ ನಗುವ ಈ ಮುಖವಾಡದಂತೆ........
ನಾಟಕವಾಡಿದೆ ಬದುಕ ರಂಗದಲಿ
ಕಳೆದುಹೋದ ಪ್ರೀತಿಯ ನೆನಪಿನಲ್ಲಿ...........

ಈ ಪ್ರೀತಿ ನನ್ನ ಸಾಯಿಸಲಿಲ್ಲ
ನೆಮ್ಮದಿಯಲಿ ಬದುಕಲೂ ಬಿಡಲಿಲ್ಲ........
ಆದರೂ ಜೀವಿಸಿದೆ ಜೀವನಕಾಗಿ
ಕಾಣದ ಪ್ರೀತಿಯ ಭರವಸೆಗಾಗಿ...........


Tuesday, July 20, 2010

ರತಿದೇವಿಯ ತಂಗಿಯೇ

ಆರೋಗ್ಯ ಕೈಕೊಟ್ಟು  ಹತ್ತು ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಬ್ಲಾಗ್ ಲೋಕದತ್ತ ಬರಲಾಗಿರಲಿಲ್ಲ. ಯಾರ ಬ್ಲಾಗಿಗೂ ಬೇಟಿ ಕೊಡಲಿಲ್ಲ. ದಯವಿಟ್ಟು ಕ್ಷಮಿಸ್ತೀರಲ್ಲ!ಈಗ ಮನೆಯಲ್ಲಿ ಬೆಡ್ ರೆಸ್ಟ್ ತೆಗೆದುಕೊಳ್ತಾ ಇದ್ದೇನೆ. ಜೊತೆಗೇ ನನ್ನ ಲ್ಯಾಪ್ ಕೂಡ ನನ್ನ ಕೈ ಸೇರಿದೆ! ಇನ್ನು ಎಲ್ಲಾ ಗೆಳೆಯರ ಬ್ಲಾಗಿಗೂ ಬರುತ್ತೇನೆ.

ಈ ಕವನ ಸುಮಾರು ಎಂಟು ವರ್ಷಗಳ ಹಿಂದೆ ಅವಳನ್ನು ನೋಡಿದಾಗ ಬರೆದದ್ದು. ಡೈರಿಯ ಯಾವುದೋ ಮೂಲೆಯಲ್ಲಿದ್ದ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ. ಹೇಗಿದೆ ಅಂತ ಹೇಳಿ. 
ಆಕೆಯಿಂದ ಬಂದ ಅಭಿಪ್ರಾಯ ಏನು ಗೊತ್ತಾ?
"ತುಂಬಾ ಕೆಟ್ಟದಾಗಿದೆ"
ನಿಜವಾಗಿಯೂ ಅಷ್ಟು ಕೆಟ್ಟದಾಗಿದೆಯಾ? ನೀವೇ ಹೇಳ್ಬೇಕು.................


ಆಕೆಯ  ಕುಡಿನೋಟಕೆ .....
ಬಳುಕುವ  ವಯ್ಯಾರಕೆ..........
ನಾ ಮರೆತು ಹೋದೆ ಜಗವಾ
ನಾ ಮರೆತು ಹೋದೆ ಜಗವಾ

ಮನ್ಮನ ರಾಣಿಯ ಹೋಲುವ ನೀನು
ರತಿದೇವಿಯ ತಂಗಿಯೇ
ಆಗಸದಿಂದ ಧರೆಗಿಳಿದ ರಂಭೆ
ಊರ್ವಶಿಯ ಪ್ರತಿರೂಪವೇ...........

ನವಿಲ ನಾಟ್ಯದಂತೆ ನಿನ್ನ ನಡಿಗೆ
ಲತೆಯು ಬಳುಕುವಂತೆ ನಿನ್ನ ನಡುಗೆ
ನವಿಲೇ ಸೋತು ನಾಟ್ಯವ ಮರೆತು
ನಿನಗಾರು ಸಾಟಿ ಚಲುವೆ ಎಂದಿತು............

ಮೋಹದ ಆಸೆಯ ಕಂಗಳ ಕಾಂತಿಗೆ 
ನಾ ಸೋತೆ ನಿನ್ನದರಕೆ
ಸೇಬಿನ ಬಣ್ಣದ ಕೆಂಪು ಕೆನ್ನೆಗೆ
ಬೆರಗಾದೆ ಸೌಂದರ್ಯಕೆ..............

ಹೃದಯವು ಹಾಡಿತು ಮೋಹದಿಂದಲಿ
ಪ್ರೀತಿ ತುಂಬಿದ ಬಯಕೆಯಿಂದಲಿ
ಸಹಿಸಲಾರೆ ನಾ ಈ ತವಕ 
ನೀ ಒಲಿದರೆ ಜನುಮ ಸಾರ್ಥಕ................

 ಚಲುವೆ ಮೋಹದೀ ನುಡಿಸು ನೀ 
ನನ್ನ ಹೃದಯದ ವೀಣೆಯಾ 
 ಹೊಸಹೊಸ ರಾಗವ ಹಾಡುತ ಗೆಳತಿ
ಈ ಜೀವ ಉಳಿಸುವೆಯಾ............

ಒಲಿದು ಬಾರೆ ರತಿಯ ತಂಗಿಯೇ
ಪ್ರೀತಿ ತಾರೆ ಈ ಬರಡು ಜೀವಕೆ
ದೀಪವಾಗಿ ಬಾಳ ಬೆಳಗಿಸು 
ಬೇಡವಾದರೆ ಈ ಉಸಿರ ನಿಲ್ಲಿಸು................

Tuesday, July 6, 2010

ಸವಿನೆನಪು

ನಾವೂ ಅಲ್ಪಸ್ವಲ್ಪ ಪುಣ್ಯವಂತರು ಅಂತ ಸಾಬೀತಾಯಿತು. ಬೆಂಕಿಯಂತೆ ಸುಡುತ್ತಿದ್ದ ದೆಹಲಿ ಈಗ ಧೋ ಎಂದು ಸುರಿವ ಮಳೆಗೆ ತಣ್ಣಗಾಗಿದೆ. ಮೋರಿಯಿಂದ ಹರಿದ ನೀರಿನಿಂದ ತುಂಬಿರುತ್ತಿದ್ದ ಯಮುನೆ ಮಳೆನೀರಿನಿಂದ ಶುದ್ಧವಾಗುತ್ತಿದೆ! ರಸ್ತೆಗಳೇ ನಡಿಯಾಗುತ್ತಿವೆ. ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲೇ ನಿಲ್ಲುವಂತಾಗಿದೆ.
ಇಂದು ಯಾಕೋ ಮನೆಯ ನೆನಪು ತುಂಬಾ ಕಾಡ್ತಾ ಇದೆ. ಮಲೆನಾಡಿನ ಮಳೆಗಾಲದ ಸುಂದರ ದೃಶ್ಯಗಳು ಅತಿಯಾಗಿ ನೆನಪಾಗುತ್ತಿವೆ. ಎಡೆಬಿಡದೆ ಧೋ ಎಂದು ಸುರಿವ ಬಿರುಮಳೆ, ಕುಳಿರ್ಗಾಳಿ ಮಿಂಚು ಗುಡುಗು ಸಿಡಿಲು, ತುಂಬಿಹರಿವ ಹಳ್ಳ ಕೊಳ್ಳ ಹೊಳೆ ನದಿಗಳು, ಕಂಬಳಿ ಕೊಪ್ಪೆ ಹೊದ್ದು ಹೊಲ ಉಳುವ ರೈತ, ನಾಟಿ ಮಾಡುವ ಹೆಂಗಸರು, ಅಡಿಕೆ ತೋಟದ ಔಷಧಿ ಹೊಡೆಯುವ ಕಾರ್ಯದಲ್ಲಿ ನಿರತ ಗಂಡಸರು, ಹೆಮ್ಮೆಯಿಂದ ಹಸಿರು ಹುಲ್ಲು ಮೇಯುವ ದನಕರುಗಳು..............ಒಂದಾ ಎರೆಡಾ?
ಹೀಗೆ ಮಲೆನಾಡಿನ ಸೌಂದರ್ಯಗಳನ್ನು ವರ್ಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ!ಸದಾ ಬೆಳ್ಮುಗಿಲು ಮುಚ್ಚಿಕೊಂಡಿರುವ ಕುಂದಾದ್ರಿ ಬೆಟ್ಟ, ಬರೆ ಬೆಟ್ಟ, ಕೆಂಪಗೆ ಬಣ್ಣದೋಕುಳಿ ಹರಿದಂತೆ ಕಾಣುವ ಮಾಲತಿ ನದಿ, ತಾ ಸಾಗುವ ದಾರಿಯಲ್ಲಿ ನೂರಾರು ಜಲಪಾತಗಳನ್ನು ಸೃಷ್ಟಿಸಿಕೊಂಡು ಕಣ್ಮನ ತಣಿಸುವ ನಮ್ಮೂರ ಹೊಳೆ, ಬರೆ ಬೆಟ್ಟದ ಹೆಬ್ಬಂಡೆಯ ಮೇಲಿಂದ ನೀರಿಳಿಯುವಾಗ ಆಗಸದಿಂದ ಹಾಲಿನ ಹೊಳೆ ಹರಿದಂತೆ ಕಾಣುವ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ಪ್ರಾಕೃತಿಕ ಸೌಂದರ್ಯ ಕಾಂಕ್ರೀಟ್ ಕಾಡಿನಲ್ಲಿ ಎಲ್ಲಿಂದ ಬರಲು ಸಾಧ್ಯ!ನಾವು ಚಿಕ್ಕವರಿದ್ದಾಗ ನಮ್ಮ ಆಟ ಪಾಠಗಳೇನು. ತಿನ್ನುವ ಯಂತ್ರಗಳು ನಾವು! ಈಗಿನ ಹಾಗೆ ತಿಂದಿದ್ದು ಸ್ವಲ್ಪ ಹೆಚ್ಚು ಕಡಿಮೆಯಾದರೆ  ಅಜೀರ್ಣ ಆಗ್ತಾ ಇರ್ಲಿಲ್ಲ. ತಣ್ಣಗೆ ಕೊರೆವ ಚಳಿಗೆ ಬೇಯಿಸಿದ ಬಿಸಿಬಿಸಿ ಗೆಣಸು ತಿನ್ನುವಾಗ ಎಷ್ಟು ಸುಖ! ಸಂಗ್ರಹಿಸಿಟ್ಟ ಹಲಸಿನ ಬೀಜಗಳನ್ನು ಸುಟ್ಟೋ, ಬೇಯಿಸಿಯೋ ತಿನ್ನುವಾಗ ಸ್ವರ್ಗ ಯಾಕೆ ಬೇಕು? ಜಾಯಮಾನವೆಲ್ಲ ಹೀಗೆ ಕಳೆಯುವ ಆಸೆ ಯಾರಿಗೆ ಆಗುವುದಿಲ್ಲ ಹೇಳಿ? ಏನಾದರೂ ತಿನ್ನುವ ಮನಸಾದಾಗ ಕುಚ್ಚಲಕ್ಕಿ ಹುರಿದು ಬೆಲ್ಲದೊಂದಿಗೆ ಕಲಸಿ ಬಿಸಿಬಿಸಿ ಉಂಡೆ ಮಾಡಿ ತಿಂದರೆ ಆಹಾ! ಓಹೋ! ಈಗಿನ ಡೈರಿ ಮಿಲ್ಕು, ಫೈ ಸ್ಟಾರೂ, ಕ್ರಂಚು, ಮಂಚುಗಳೆಲ್ಲ ನಮಗೆಲ್ಲಿತ್ತು ಸ್ವಾಮಿ, ಇವುಗಳೇ ನಮಗೆ ಸರ್ವಸ್ವ ಅಲ್ವಾ? ದೊಡ್ಡವರೆಲ್ಲ ಗದ್ದೆ ತೋಟಕ್ಕೆಂದು ಕೆಲಸಕ್ಕೆ ಹೋಗಿ ಸಂಜೆ ಬರುವುದರೊಳಗೆ ನಮ್ಮ ಲೂಟಿಗಳೇನು ಕಡಿಮೆ ಅಗ್ತಿತ್ತೆ? ಹರವೆ, ಬುಟ್ಟಿ ಸಂದು ಗೊಂದುಗಳಲ್ಲಿ ಮುಚ್ಚಿಟ್ಟ ಹಲಸಿನಕಾಯಿ ಹಪ್ಪಳ, ಅಕ್ಕಿ ಹಪ್ಪಳಗಳು ಕೆಮು ಕೆಂಡದಲ್ಲಿ ಬೆಚ್ಚಗಾಗಿ ನಮ್ಮ ಬಾಯಿ ಸೇರುತ್ತಿದ್ದವು.ಅಮ್ಮ ಹಬ್ಬದಲ್ಲಿ ಮಾಡಿ ತುಂಬಿಟ್ಟ ಅತ್ರಸ, ಕಜ್ಜಾಯ ಚಕ್ಕುಲಿಗಳು ಸದ್ದಿಲ್ಲದೇ ಹೊಟ್ಟೆ ಸೇರುತ್ತಿದ್ದವು. ಮಳೆಯ ತಣ್ಣಗಿನ ಚಳಿಗೆ ಇಂತಹ ತಿಂಡಿಗಳೇ ನಮ್ಮ ಬೆಚ್ಚಗಿನ ಜೊತೆಗಾರ! ತಿಂಗಳಿಗೊಮ್ಮೆ ಅಪ್ಪ ತರುತ್ತಿದ್ದ ಶುಂಟಿ ಪೆಪ್ಪರಮೆಂಟು ಮಾತ್ರ ಆಗಿನ ನಮ್ಮ ಕ್ರಂಚು ಮಂಚು ಎಲ್ಲಾ!

ಅಪ್ಪ ಬುದ್ಧಿವಂತರು! ಸುಮಾರು ಎಂಟತ್ತು ಮಕ್ಕಳು ತುಂಬಿದ್ದ ಅವಿಭಕ್ತ ಕುಟುಂಬ ನಮ್ಮದು(ಈಗ ಇಲ್ಲ ಬಿಡಿ). ಅದಕ್ಕೆಂದೇ ಅಪ್ಪ ಶುಂಟಿ ಪೆಪ್ಪರಮೆಂಟು ತರ್ತಾ ಇದ್ದಿದ್ದು. (ಆಗ ಒಂದು ರುಪಾಯಿಗೆ ೨೦ ಪೆಪ್ಪರಮೆಂಟುಗಳು ಬರ್ತಾ ಇದ್ದವು!)  ಎಲ್ಲರಿಗೂ ಒಂದೊಂದು ಕೊಡ್ತಾ ಇದ್ದರು!ಮಳೆಗಾಲವೆಂದರೆ ನನಗಂತೂ ಬಹಳ ಅಚ್ಚುಮೆಚ್ಚು. ನೀರಿನಲ್ಲಿ ಕುಣಿದು ಕುಪ್ಪಳಿಸಿ ಆಡಿದ ದಿನಗಳೇನು, ಬಿರುಮಳೆಯಲ್ಲಿ ಗಾಳಿಗೆ ಛತ್ರಿ ಹಾರಿ ಹೋದರೆ ಅಪ್ಪನ ಬೆತ್ತದ ಪೆಟ್ಟು ಬೀಳುವುದೆಂಬ ಭಯದಿಂದ ಶಾಲೆಯಿಂದ ಮನೆಯವರೆಗೂ ಎಂಟು ಕಿ. ಮೀ. ನಡೆದು ಬರುವಾಗ ದಿನಾ ನೆನೆದೇ ಸಾಗುವ ಕ್ಷಣಗಳೇನು? ಯಾವ ಶೀತ ಜ್ವರಗಳೂ ನಮ್ಮ ಹತ್ತಿರ ಸುಳಿಯುತ್ತಿರಲಿಲ್ಲ. ದಿನಾ ಶಾಲೆಗೇ ಹೋಗುವಾಗ ಹಲವಾರು ಹಳ್ಳ ಹೊಳೆಗಳನ್ನು ದಾಟಿ ಹೋಗುವ ಸಂದರ್ಭ ಅದೇನು ಖುಶಿ! ಒಮ್ಮೊಮ್ಮೆ ಎದೆಯವರೆಗೂ ತುಂಬಿ ರಭಸದಿಂದ ಹರಿವ ನೀರಿನಲ್ಲಿ ದಾಟಿ ಬರುತ್ತಿರಲಿಲ್ಲವೇ? ಮರದ ದಿಮ್ಮಿಯ ಸಾರವೋ ಅಥವಾ ಎರಡು ಮೂರು ಅಡಿಕೆ ಮರದಿಂದ ಮಾಡಿದ ಸಾರ(ಸಂಕ)ವೋ ಸುಲಲಿತವಾಗಿ ದಾಟುತ್ತಿರಲಿಲ್ಲವೇ? ಯಾವ ಮಕ್ಕಲಾದರೂ  ಹಳ್ಳ ಹೊಳೆಯಲ್ಲಿ ತೇಲಿ ಹೋದ ಪ್ರಸಂಗಗಳಿವೆಯೇ? ಯಾರೋ ಕೊಚ್ಚಿಹೋದ ಕತೆ ಇದೆಯೇ? ಇಡೀ ನಮ್ಮೂರಿನ ಇತಿಹಾಸದಲ್ಲಿ ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ! ನಾವು ಆಗಾಗ ಕೇಳುತ್ತಿರುತ್ತೇವೆ. ಈಜಲು ಹೋದ ಬಾಲಕರು ನೀರುಪಾಲು, ಮಳೆಯ ರಭಸಕ್ಕೆ ಕೊಚ್ಚಿಹೋದ ಬಾಲಕ, ನದಿ ವಿಹಾರಕ್ಕೆ ಹೋದ ದಂಪತಿಗಳು ನೀರಿನಲ್ಲಿ ಕಾಲು ಜಾರಿ ಬಿದ್ದು ದುರ್ಮರಣ! ಇದೆಲ್ಲಾ ನಗರ ಪೇಟೆಗಳಲ್ಲಿ ಹುಟ್ಟಿ ಬೆಳೆದವರ ದುರಾದೃಷ್ಟ! ಅರ್ಧ ಜಾಯಮಾನವನ್ನು ನೀರಿನಲ್ಲೇ ಕಳೆಯುವ ಒಬ್ಬ ಮಲೆನಾಡಿಗ ನೀರಿನಲ್ಲಿ ಆಕಸ್ಮಿಕ ಅಂತ್ಯಕಂಡ ಉದಾಹರಣೆ ಒಂದಾದರು ಇವೆಯಾ?  ನಾನು ಇದುವರೆಗೆ ಕೇಳಿಲ್ಲ!

ಕಂಪ್ಯೂಟರ್, ಟ್ಯುಶನ್, ಸ್ಕೂಲು, ಹೋಂ ವರ್ಕು ಅಂತ ಸದಾ ನಿರತರಾಗುವ ಪೇಟೆಯ ಮಕ್ಕಳಿಗೆ ಮಲೆನಾಡಿನ ಹಳ್ಳಿಯ ಸುಖದ ಕಲ್ಪನೆ ಇದೆಯಾ? ಒಮ್ಮೆ ಆ ರುಚಿ ಹತ್ತಿದರೆ ಎಂದೆಂದೂ ಬಿಡಲಾರರು. ಏನಂತೀರಾ?

ಅದಕ್ಕೆ ಆದಷ್ಟು ಬೇಗ ಊರಿಗೆ ಹೊರಡಲು ಯೋಚಿಸುತ್ತಿದ್ದೇನೆ. ಅಮ್ಮ ಒಂದಿಷ್ಟು ಹಲಸಿನ ಬೀಜಗಳನ್ನು ಸಂಗ್ರಹಿಸಿ ಇಟ್ಟಿದ್ದಾಳೆ. ತಮ್ಮ ಮುರುಗನ ಹುಳಿಯನ್ನು ಒಟ್ಟು ಮಾಡಿದ್ದಾನೆ. ಹುಳಿ  ಸಿಪ್ಪೆ ಅವನಿಗೆ ಮಾರಲು, ಅದರ ಬೀಜ ಎಣ್ಣೆ ತೆಗೆಯಲು! ಮನೆ ಖರ್ಚಿಗೆ ಇದೇ ಎಣ್ಣೆ ನಾವು ಉಪಯೋಗಿಸುವುದು! ನನ್ನ ಮುದ್ದಿನ ಬಂಗಾರಿ (ನಾನು ಹಾಲುಂಡು ಬೆಳೆದ ಗೌರಿಯ ಮರಿಮಗಳು!) ಕರು ಹಾಕಿದೆ. ಅದರ ಜೊತೆಗೇ ಮಂಗಳಾ ಕೂಡಾ ಮುದ್ದಾದ ಹೆಣ್ಣು ಕರುವಿನ ತಾಯಿಯಾಗಿದ್ದಾಳಂತೆ! ಅಮ್ಮ ಈಗಿಂದಲೇ ನನಗಾಗಿ ತುಪ್ಪ ಸಂಗ್ರಹಿಸುತ್ತಿದ್ದಾರಂತೆ.

ನನ್ನದೊಂದು ಅಭ್ಯಾಸ ಇದೆ ಗೊತ್ತಾ?

ಅದೇನಪ್ಪಾ ಅಂದ್ರೆ................

ನಗಬಾರದು ಮತ್ತೆ............!

ನಾನು ಸಣ್ಣವನಿದ್ದಾಗ ನನ್ನ ಅಜ್ಜಿ ಕಲಿಸಿದ್ದು!ಅಜ್ಜಿ ಹಾಲು ಕರೆಯುವಾಗ ನನ್ನನ್ನು ಕೊಟ್ಟಿಗೆಗೆ ಕರೆದು ಆಗಷ್ಟೇ ಕರೆದ  ಬಿಸಿ ಬಿಸಿ ನೊರೆ ಹಾಲನ್ನು ಕುಡಿಸುತ್ತಿದ್ದಳು! ಮಾವ ನೋಡಿದರೆ ಬಯ್ಯುವ ಭಯದಿಂದ!  ಆ ಬೆಚ್ಚಗಿನ ನೊರೆಹಾಲ ರುಚಿ ಕಂಡುಕೊಂಡ ನಾನು ಮುಂದೇ ನಾನೇ ಹಾಲು ಕರೆಯುವ ನೆಪವೊಡ್ಡಿ ನೇರವಾಗಿ ಗೌರಿಯ ಕೆಚ್ಚಲಿಗೆ ಬಾಯಿ ಹಾಕುತ್ತಿದ್ದೆ! ಎಷ್ಟಾದರೂ ಅವಳು ನನ್ನ ತಾಯಿ ಅಲ್ವಾ? ಆ ಅಭ್ಯಾಸ ಈಗಲೂ ಮುಂದುವರೆದಿದೆ. ಮನೆಗೆ ಹೋದರೆ ದನದ ಹಾಲು ಕರೆಯುವುದು ನಾನೇ, ನಾನು ಹಾಲು ಕರೆದರೆ ಅಮ್ಮ ಏನಂತಾರೆ ಗೊತ್ತಾ? "ಪವಿ, ಯಾಕೋ ನೀನು ಹಾಲು ಕರೆದರೆ ಕಡಿಮೆ ಹಾಲು ಕೊಡ್ತಾವೆ ದನಗಳು. ಪರಿಚಯ ಆಗದೆ ಹೀಗೆ ಮಾಡ್ತಾವಾ?" ಅಂತ!  ಮುಂದಿನದ್ದು ನಿಮಗೆ ಅರ್ಥ ಆಯ್ತಲ್ವಾ? ಪಾಪ ಅಮ್ಮನಿಗೆಲ್ಲಿ ಗೊತ್ತು ಮಗನ ಕಲ್ಯಾಣ ಗುಣ!
ಈ ಗುಟ್ಟನ್ನು ಎಲ್ಲಾದರು ಅಮ್ಮನಿಗೆ ಹೇಳೀರಾ  ಕೊನೆಗೆ, ಆಮೇಲೆ ಕೊಟ್ಟಿಗೆಗೆ ಪ್ರವೇಶ ನಿಷೇಧವಾಗುತ್ತದೆ!

Sunday, June 13, 2010

ಮಲ್ಲಣ್ಣನ ಮಹಾ ಮಾನವೀಯತೆ!....

ನಮ್ಮ ಮಲ್ಲಣ್ಣ ಒಂತರಾ ವಿಚಿತ್ರ ಮನುಷ್ಯ. ಅವನಿಗೆ ಯಾವಾಗ ಏನೇನು ವಿಚಾರಗಳು ಹೊಳೆಯುತ್ತವೆಯೋ 
ಅವನಿಗೂ ಗೊತ್ತಿಲ್ಲ. ಸದಾ ಒಂದಲ್ಲ ಒಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ತಾ ಇರ್ತಾನೆ....

ಇಂತಿರಲೊಂದು ದಿನ  ಮೂರ್ಖ ಪೆಟ್ಟಿಗೆಯಲ್ಲಿ ಯಾವುದೋ ಕಣ್ಣೀರು ತುಂಬಿದ ದಾರವಾಹಿ ನೋಡಿ ನಗುತ್ತಾ 
ಕುಳಿತಿದ್ದ(?) ನಮ್ಮ ಮಲ್ಲರ ಮಲ್ಲ!
ಇದ್ದಕ್ಕಿದ್ದಂತೆ ಜಾಹಿರಾತು ಶುರು! ಎಷ್ಟಾದರೂ ದಾರಾವಾಹಿಗಳು ಜಾಹಿರಾತಿನ ಒಂದು ಭಾಗ ತಾನೇ? ಅದ್ಯಾವುದೋ
ಧ್ವಿಚಕ್ರ ವಾಹನದ ಪ್ರಚಾರ! ಟ್ರಾಫಿಕ್ ಸಿಗ್ನಲ್ ನಲ್ಲಿ ಒಂದು ಹುಡುಗ ಹುಡುಗಿ ನಳನಳಿಸುವ ಚಂದದ ದ್ವಿಚಕ್ರ ವಾಹನದಲ್ಲಿ
ಕುಳಿತಿದ್ದಾರೆ. ಅವರ ಪಕ್ಕದಲ್ಲಿದ್ದ ಕಾರಿನಿಂದ ನೀರು ಕುಡಿದು ಖಾಲಿ ಬಾಟಲಿ ಹೊರಗೆಸೆದು ಕಾರು ಮುಂದೆ ಹೋಗುತ್ತದೆ. 
ಖಾಲಿ ಬಾಟಲಿ ಎತ್ತಿಕೊಂಡು ಅವರಿಬ್ಬರೂ ಕಾರನ್ನು ಹಿಂಬಾಲಿಸುತ್ತಾರೆ. ಹೊಂಡ  ಗುಂಡಿ ಮೆಟ್ಟಿಲು ಚರಂಡಿ ಎಲ್ಲೆಲ್ಲೂ 
ಸಲೀಸಾಗಿ ಓಡುವ  ಬಂಡಿ! ಅಂತೂ ಕೊನೆಗೆ ಇನ್ನೊಂದು ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರು ನಿಂತಿರುತ್ತದೆ. ಆ ಹುಡುಗಿ ಖಾಲಿ
ಬಾಟಲಿಯನ್ನು ಅದೆ ಕಾರಿನೊಳಗೆ ಹಾಕಿ ಟಾಟ ಮಾಡಿ ಹೋಗುತ್ತಾರೆ!

ಇದಿಷ್ಟು ಆ ಜಾಹಿರಾತು! ಈ ಜಾಹಿರಾತಿನಿಂದ ಮಲ್ಲಣ್ಣ ಬಹಳ ಪ್ರೇರಿತನಾಗುತ್ತಾನೆ. ಏನಾದರೂ ಸಮಾಜ ಕಲ್ಯಾಣ
ಕಾರ್ಯ ಮಾಡಬೇಕೆಂಬ ಮಹದಾಸೆ ಮಲ್ಲಣ್ಣನ ಮನದಲ್ಲಿ ಮೂಡುತ್ತದೆ.

ಎಂದಿನಂತೆ ಮಲ್ಲಣ್ಣ ಆಫೀಸಿಗೆ ಬೈಕಿನಲ್ಲಿ ಹೋಗ್ತಾ ಇದ್ದ. ಸಿಗ್ನಲ್ಲಿನಲ್ಲಿ ನಿಂತಿದ್ದ ಅವನ ಪಕ್ಕ ಒಂದು ಕಾರು ಬಂದು ನಿಂತಿತು.
ಅದರಲ್ಲಿ ಮೂರ್ನಾಲ್ಕು ಹುಡುಗರು ಜೋರಾಗಿ ಮ್ಯುಸಿಕ್ ಹಾಕಿಕೊಂಡು ತಾವೂ ಹಾಡುತ್ತಾ ಕೇಕೆ ಹಾಕುತ್ತಿದ್ದರು. ಕುಡಿದ ನೀರಿನ
 ಖಾಲಿ ಬಾಟಲಿಯೊಂದನ್ನು ಹೊರಗೆಸೆದ ಹುಡುಗರು ಕಾರನ್ನು ರೊಯ್ಯನೆ ಮುಂದಕ್ಕೆ ಓಡಿಸಿದರು.

ಈ ದೃಶ್ಯವನ್ನು ಕಂಡ ನಮ್ಮ ಮಲ್ಲಣ್ಣನ ಮಾನವೀಯತೆ ಜಾಗೃತಗೊಳ್ಳುತ್ತದೆ. ಜಾಹಿರಾತು ಸ್ಮೃತಿ ಪಟಲದ ಮೇಲೆ ಮೂಡಿ
ಮರೆಯಾಗುತ್ತದೆ. ಬಾಟಲಿ ಎತ್ತಿಕೊಂಡು ಕಾರಿನ ಹಿಂದೆ ಓಡುವ ಮನಸ್ಸು ಮಾಡುತ್ತಾನೆ. ಆದರೆ ಆ ಬಾಟಲಿಯೇ ಬಿದ್ದ ಸ್ಥಳದಲ್ಲಿ
ಇರಲಿಲ್ಲ! ಎಲ್ಲಾ ವಾಹನಗಳ ಚಕ್ರದಡಿ ಸಿಕ್ಕಿ ರಸ್ತೆಯ ಯಾವ ಮೂಲೆ ಸೇರಿತ್ತೋ ಬಲ್ಲವರಾರು?

ಆ ಬಾಟಲಿ ಇಲ್ಲದಿದ್ದರೇನಂತೆ? ಖಾಲಿ ಬಾಟಲಿಗಳಿಗೆ ಬರವೇ......! ರಸ್ತೆಬದಿಯಲ್ಲಿ ಬಿದ್ದಿದ್ದ ಹಳೆ ಬಾಟಲಿಯನ್ನೇ ಎತ್ತಿಕೊಂಡು
ಹೊರಟ ಮಲ್ಲಣ್ಣ.

ಬೈಕ್ ವೇಗವಾಗಿ ಓಡಿಸುತ್ತಾ ಕಾರನ್ನು ಹಿಂಬಾಲಿಸಿದ. ಹೊಂಡ ಗುಂಡಿ ಮೆಟ್ಟಿಲುಗಳ ಮೇಲೆ ಬೈಕ್ ಓಡಿಸುವ ಸಾಹಸ ಮಾತ್ರ 
ಮಾಡಲಿಲ್ಲ!
ಅಂತೂ ಕೊನೆಗೆ ಆ ಕಾರನ್ನು ಹಿಡಿದೇ ಬಿಟ್ಟ. ನಿಂತ ಕಾರಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾರಿನ ಗಾಜು ತಟ್ಟಿದ ಥೇಟ್ ಜಾಹಿರಾತಿನ 
ಶೈಲಿಯಲ್ಲಿ! ಕಿಟಕಿ ಗಾಜು ಕೆಳಗಿಳಿಯುತ್ತಿದ್ದಂತೆ ಬಾಟಲಿಯನ್ನು ಕಾರೊಳಗೆ ಎಸೆದು ಟಾಟಾ ಮಾಡಿ  ಬೈಕ್ ಮುಂದಕ್ಕೆ ಓಡಿಸಿದ 
ಮಲ್ಲಣ್ಣ!

ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಪಜೀತಿ ಶುರು ಆಗಿದ್ದೇ ಆಗ!

ಕಾರಿನೊಳಗೆ ಇದ್ದ ಹುಡುಗರ ಪಿತ್ತ ನೆತ್ತಿಗೇರಿತು. ಜೊತೆಗೇ ಬೀರಿನ ಕುಮ್ಮಕ್ಕು ಇತ್ತೆನ್ನಿ! ಮಲ್ಲಣ್ಣನ ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿದ
ಹುಡುಗರು ಕಾರಿನಿಂದ ಕೆಳಗಿಳಿದರು. ಬಲವಾದ ಹಸ್ತವೊಂದು ಮುಖಕ್ಕೆ ಅಪ್ಪಳಿಸಿದ್ದಷ್ಟೇ ಗೊತ್ತು. ಮುಂದೇ ಮಲ್ಲಣ್ಣ ಆಸ್ಪತ್ರೆಯ
ಹಾಸಿಗೆಯಲ್ಲೇ ಕಣ್ ತೆರೆದಿದ್ದು! ಆಸ್ಪತ್ರೆಯಿಂದ ಮೂರು ದಿನದ ನಂತರ ಮನೆಗೆ ಬಂದ ಮಲ್ಲಣ್ಣ ಮತ್ತೆ ಆ ಜಾಹಿರಾತನ್ನು ನೋಡಲೇ ಇಲ್ಲ! 

ಒಂದು ವಿಷಯ ಅವನಿಗೆ ಅರ್ಥವಾಗದೆ ಉಳಿದಿತ್ತು. ಅದೇನೆಂದರೆ ಜಾಹಿರಾತಿನಲ್ಲಿ ಈ ಭಾಗವನ್ನು ಯಾಕೆ ತೋರಿಸಲಿಲ್ಲ?
ನಿಮಗೇನಾದರೂ ಕಾರಣ ಗೊತ್ತಿದ್ದರೆ ಪಾಪ ನಮ್ಮ ಮಲ್ಲಣ್ಣನಿಗೆ ಸ್ವಲ್ಪ ತಿಳಿಸ್ತೀರಾ? ಬಾರೀ ತಲೆ ಕೆಡಿಸಿಕೊಂಡು ಯೋಚಿಸ್ತಿದ್ದಾನೆ!

Sunday, June 6, 2010

ಪರಿಣಾಮ.........?

 ನನ್ನೆದೆಯ ಮೇಲೆ 
ಒರಗಿದ್ದ ನನ್ನಾಕೆ
ಮುಂಗುರುಳ ತೀಡಿ 
ಸಿಹಿಮುತ್ತನಿತ್ತಳು...........!

ಪರಿಣಾಮ...........?
 ಅತಿ ಮಧುರ 
ಸುಖದಲ್ಲಿ
ಮೈಮರೆತಿದ್ದಾಗ
ತಣ್ಣೀರ ತಂದು 
ತಲೆಮೇಲೆ ಸುರಿದಿದ್ದಳು........!

ಸುಂದರ ಸವಿಗನಸು
ಕಂಡು ಕಣ್ ಬಿಟ್ಟರಲ್ಲಿ
ಕೆಂಗಣ್ಣ ಮೀನಾಕ್ಷಿಯ
 ದುರುಗುಟ್ಟುತ್ತಿದ್ದಳು..........!
 ಖಾಲಿ ಬಿಂದಿಗೆ 
ಹಿಡಿದ ನನ್ನಾಕೆ
ಕನಸಿಗೂ ವಾಸ್ತವಕೂ
ಹೋಲಿಕೆಯೇ ಇಲ್ಲದಂತೆ...........!
Sunday, May 30, 2010

"ಹೀಗೊಬ್ಬಳು ಮದುಮಗಳು"


ಹುಡು ಹುಡುಕಿ ದಣಿದ ಮೇಲೆ 
ಸಿಕ್ಕಳಾಕೆ ಕಡು ಕಷ್ಟದಲ್ಲಿ......!
ಜೊತೆ ಹಿಡಿದೇ ನಡೆದೆ
ಬಿಡಲಾರದ ಪ್ರೀತಿಯಿಂದಲಿ......!

ಆಕೆಯೋ ಮದುಮಗಳು 
ವರಕವಿಯ ಪ್ರೀತಿಯ ಮಗಳು.......!
ಅವಳೆಂದರೆ ನನಗೆ ಬಹಳ ಪ್ರೀತಿ 
ಬಿಡಿಸಲಾಗದ ನಂಟು ಯಾಕೋ ಆ ರೀತಿ.......!

ಕುಂತಲ್ಲಿ ನಿಂತಲ್ಲಿ ಅವಳದೇ ಧ್ಯಾನ
ಮಲಗಿದರೂ ನಾ ಬಿಡಲಾರೆ ಅವಳನ್ನ....!
ಕೆಲಸದಲ್ಲೂ ಕಾಡುವಳು ನೆನಪಾಗಿ 
ಮಲಗಿದರೂ ಕಚಗುಳಿಯಿಡುವಳು ತುಂಟಿಯಾಗಿ......!

ಮದುಮಗಳ ಸ್ನೇಹ ನಾ ಬಿಡಲಾರೆ
ಉಸಿರಿರುವವರೆಗೂ ನಾ ಮರೆಯಲಾರೆ......
ಅವಳೇ ರಾಷ್ಟ್ರಕವಿಯ ನಲ್ಮೆಯ ಮಗಳು
ಜ್ಞಾನಪೀಠ ತಂದಿತ್ತ  "ಮಲೆಗಳಲ್ಲಿ ಮದುಮಗಳು!"

Wednesday, May 26, 2010

ಶಿಕಾರಿ (ಭಾಗ 3)

ಇತ್ತ ಇದ್ಯಾವುದನ್ನೂ ಅರಿಯದ ನಾವು ಉತ್ಸಾಹ ಕಳೆದುಕೊಂಡು ಕಾಡಿನಲ್ಲಿ ಸೋಯುತ್ತಾ ಹೋಗುತ್ತಿದ್ದೆವು. ಎರಡು ಈಡು ಹೊಡೆದರೂ ಹಂದಿ ಸಿಗಲಿಲ್ಲ ಎಂಬ ಬೇಸರ ಮನದಲ್ಲಿ ಮನೆಮಾಡಿತ್ತು. ಪೂರ್ತಿ ಕಾಡೇ ನಡುಗಿಸುವಂತೆ ಕೂಗುತ್ತಿದ್ದವರ ಧನಿ ಉಡುಗಿ ಹೊಗಿತ್ತು!

ಮಳೆಗಾಲದಲ್ಲಿ ಗುಡ್ಡದ ಮೆಲಿಂದ ನೀರು ಹರಿದು ಬರುವ ಸಣ್ಣ ಹಳ್ಳದಂತ ಕಾಲುವೆಯಲ್ಲಿ ನಾನೂ ರಮೆಶಣ್ಣನ ಜೊತೆ ಸಾಗುತ್ತಿದ್ದೆ. ಹಳ್ಳ ಕಡಿದಾಗಿತ್ತು. ಬಳ್ಳಿಯ ಸಹಾಯದಿಂದ ಮಾತ್ರ ಮೇಲೆ ಹತ್ತಬಹುದಾಗಿತ್ತು. ಎಲೆ ಅಡಿಕೆ ಜಗಿಯುತ್ತಾ ಯಾವುದೋ ಮಾತಿನಲ್ಲಿ ಮೈಮರೆತಿದ್ದ ನಮ್ಮಿಬ್ಬರಿಗೂ ಅದು ಹಳ್ಳ ಎಂಬುದು ತಿಳಿಯಲೇ ಇಲ್ಲ!

ರಮೆಶಣ್ಣನ ನಗೆಚಟಾಕಿಗೆ ಹೊಟ್ಟೆ ಹಿಡಿದು ನಗುತ್ತಾ ಸಾಗುತ್ತಿದ್ದಂತೆಯೇ ಹಿಂದಿನಿಂದ ದಡದಡ ಎಂಬ ಶಬ್ಧ! ಹಂದಿಯೋ ಕಡವೋ ಕಾಡುಕೋಣವೋ ಮೇಲೆ ಓಡಿರಬೇಕು. ರಮೇಶಣ್ಣ ಹಿಡ್ಡೀಡ್ಡೀ ಎಂದು ಕೂಗಿದಂತೆ ಶಬ್ಧ ಇನ್ನೂ ಹತ್ತಿರವಾಯಿತು. ಕಣ್ಮುಚ್ಚಿ ಬಿಡುವುದರೊಳಗೆ ಇಳಿಜಾರಿನ ಹಳ್ಳದಲ್ಲಿ ಆನೆಗಾತ್ರದ ಹಂದಿಯೊಂದು ನಮ್ಮತ್ತಲೇ ನುಗ್ಗಿ ಬರುತ್ತಿತ್ತು!

 ಹಂದಿ ಓಡಿ ಬರುತ್ತಿರುವ ಶಬ್ಧ ಕೇಳಿದ್ದೇ ತಡ ರಮೇಶಣ್ಣ ಕೂಗಿದ,
 
"ಪೈ ಓಡು, ಮರ ಹತ್ತು"
 

ಅವನು ಅದ್ಯಾವ ಮಾಯದಲ್ಲಿ ಓಡಿ ಹಳ್ಳದೊಳಗೇ ಬೆಳೆದಿದ್ದ ಸಣ್ಣ ಮರವೊಂದನ್ನು ಹತ್ತಿದನೋ ತಿಳಿಯಲಿಲ್ಲ! ಮೇಲಿನಿಂದ ನೋಡುತ್ತಾನೆ ನಾನಿನ್ನೂ ಅಲ್ಲೇ ನಿಂತಿದ್ದೇನೆ.
"ಸಾಯ್ತಿಯಲ್ಲೋ............ ಒಡ್ಬಾರೋ ಬೇಗ" 

ರಮೇಶಣ್ಣ ಕೂಗುತ್ತಿದ್ದಾನೆ!

ನನಗೋ ಜಂಗಾಬಲವೇ ಉಡುಗಿಹೋದ ಅನುಭವ! ಓಡಲು ಕಾಲುಗಳೇ ಬರಲೊಲ್ಲವು. ದೆಹವಿಡೀ ತರಗುಟ್ಟುತ್ತಿದೆ.  ಬೆವರಿನಿಂದ ತೋಯ್ದು, ಗಂಟಲ ಪಸೆ ಆರಿ ಹೊಗಿತ್ತು. ಕೂಗಲು ಬಾಯಿಯಿಂದ ಸ್ವರವು ಮುಷ್ಕರ  ಹೂಡಿತ್ತು. ರಮೇಶಣ್ಣನ ಕೂಗು ನನ್ನ ಕಿವಿಗೆ ಬೀಳುತ್ತಲೇ ಇರಲಿಲ್ಲ!

ಹಂದಿ ನನ್ನ ಹತ್ತಿರ ಬಂದಾಗಿತ್ತು. ನನಗೆ ಒಮ್ಮೆಲೇ ಎಲ್ಲಾ ನೆನಪಾಗತೊಡಗಿತು. ಮನೆ ಅಮ್ಮ, ಅಪ್ಪ, ಮಾವ, ಸ್ಕೂಲು, ಟೀಚರ್ರು, ಅಜ್ಜ, ಹಂದಿ...................
ಒಂಬ್ಬೊಬ್ಬರಾಗಿ ಕಣ್ಮುಂದೆ ಮಿಂಚಿ ಮರೆಯಾದರು.  ನಾನೇನು ಮಾಡಲಿ? ನನ್ನ ಕತೆ ಮುಗಿಯಿತು. ಬೆಂಗಳೂರಿನ ಲಾಲ್ ಬಾಗ್ ನೋಡಬೆಕೆಂಬ ನನ್ನ ಗುರಿ ಈಡೆರುವ ಮೊದಲೇ ನಾನು ಸಾಯುತ್ತೇನೆಂಬ ಯೋಚನೆ ಅಂತಹ ಸಮಯದಲ್ಲಿಯೂ ಶುರುವಾಯಿತು!

ಅಯ್ಯೋ ದೆವರೇ, ಎನ್ನುತ್ತಾ ಕಾಣದ ದೇವರಿಗಾಗಿ ಆಗಸದತ್ತ ನೊಡಿದೆ. ಅಷ್ಟೇ! ಪಳ್ಳನೆ ಮಿಂಚೊಂದು ಮಿಂಚಿತು. ಗಾಡಂಧಕಾರದ ಕಗ್ಗತ್ತಲಲ್ಲಿ ಸೂರ್ಯನೇ ಉದಯಿಸಿದಂತೆ ಬೆಳಕೊಂದು ಮೂಡಿತು. ಮುಳುಗುತ್ತಿರುವ ನನಗೆ ಹುಲ್ಲು ಕಡ್ಡಿಯ ಆಸರೆ ಸಿಕ್ಕಿತ್ತು!

ನಾನು ನಿಂತ ಸ್ಥಳದಲ್ಲಿ ಸರಿಯಾಗಿ ನನ್ನ ನೆತ್ತಿಯ ಮೇಲೆ ಮರವೊಂದು ಅಡ್ಡಡ್ಡ ಬಿದ್ದಿತ್ತು. ಕೈಗೆಟುವ ಎತ್ತರದಲ್ಲಿ ಬಿದ್ದಿದ್ದ ಮರ ಎರೆಡೂ ದಡಗಳನ್ನು ಸೇರಿಸಿತ್ತು. ತಡಮಾಡಲಿಲ್ಲ! ಒಂದೇ ನೆಗೆತಕ್ಕೆ ಹಾರಿ ಎರಡೂ ಕೈಗಳಿಂದ ಮರವನ್ನು ಹಿಡಿದು ಜೋತುಬಿದ್ದೆ! ಅದೇ ಕ್ಷಣದಲ್ಲಿ ಹಂದಿ ನನ್ನ ಕೆಳಗಿನಿಂದಲೇ ಗುರುಗುಟ್ಟುತ್ತಾ ದಾಟಿಹೊಯಿತು. ಅದರ ಓಡಿದ ಶಬ್ಧ ಮರೆಯಾಗುವವರೆಗೂ ಕೈಬಿಡಲೇ ಇಲ್ಲ!

ಇಡೀ ಕಾಡೇ ನಿಶ್ಯಬ್ಧ! ಹಂದಿ ತುಂಬಾ ದೂರ ಹೋಗಿರಬೇಕು. ಎಂದು ಯೋಚಿಸುತ್ತಾ ಕೆಳಗಿಳಿಯುವ ನಿರ್ದಾರ ಮಾಡಿ ಕೈ ಬಿಟ್ಟೆ!
 
ಅಷ್ಟೇ!
 
ಅಯ್ಯೋ......... ಅಮ್ಮಾ.................ಸತ್ತೇ..................!
ನನ್ನ ಬಾಯಿಂದ ಚೀತ್ಕಾರ ಹೊರಟಿತ್ತು!

ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹಿಂದೆ ಮುಂದೆ ಯೋಚಿಸದೇ  ಹಳ್ಳದ ಮೇಲೆ ಅಡ್ಡಲಾಗಿ ಬಿದ್ದ ಮರವನ್ನು ನೆಗೆದು ಹಿಡಿದುಕೊಂಡು ಹಂದಿಯಿಂದ ಪ್ರಾಣವನ್ನೇನೋ ಉಳಿಸಿಕೊಂಡಿದ್ದೆ. ಆದರೆ ಆ ಭಯದಲ್ಲಿ ನಾನು ಹಿದಿದುಕೊಂಡಿದ್ದು ಕಾಡುಸಂಪಿಗೆ ಮರವಾಗಿತ್ತು. ಅದರಲ್ಲೇನು ವಿಶೇಷ ಅಂತೀರಾ? ಮಲೆನಾಡಿನಲ್ಲಿ ಅತೀ ಹೆಚ್ಚು ಮುಳ್ಳುಗಳು  ಮತ್ತು  ನಂಜಿನ ಮುಳ್ಳುಗಳಿರುವ ಮರ ಕಾಡುಸಂಪಿಗೆ ಮರ! ಅದನ್ನೇ ನಾನು ಹಿಡಿದು ನೇತಾಡಿದ್ದು!

ದಬ್ಬಣದಂತ ಮುಳ್ಳುಗಳು ನನ್ನ ಕೈಯನ್ನು ಚುಚ್ಚಿಕೊಂಡಿದ್ದವು. ಎಷ್ಟೇ ಒದ್ದಾಡಿ ಬೊಬ್ಬೆ ಹೊಡೆದರೂ ಕೈ ಬಿಡಿಸಿಕೊಳ್ಳಲು ಆಗದೇ ಇನ್ನಷ್ಟು ನೋವಾಗುತ್ತಿತ್ತು. ಕೊನೆಗೆ ರಮೇಶಣ್ಣ ನನ್ನ ಬೊಬ್ಬೆ ಕೆಳಿ ಓಡಿ ಬಂದು ಕೈ ಬಿಡಿಸಿದ್ದ. ನನ್ನನ್ನು ಕೆಳಗಿಳಿಸಿದ ನಂತರ ಕೈಯ್ಯಲ್ಲಿ ಮುರಿದು ಉಳಿದುಕೊಂಡಿದ್ದ ಮುಳ್ಳುಗಳನ್ನು ಕೀಳಲು ಪ್ರಯತ್ನಿಸಿ ಇನ್ನಷ್ಟು ನೋವು ಹೆಚ್ಚಿಸುತ್ತಿದ್ದ.

ರಕ್ತ ಕೋಡಿಯಾಗಿ ಹರಿಯುತ್ತಿತ್ತು. ಬೆರಳುಗಳೂ ಸೀಳಿಕೊಂಡು ಅಸಾಧ್ಯ ನೊವಾಗುತ್ತಿತ್ತು. ಹಂದಿ ಓಡಿಬಂದು ನನ್ನ ಕೈ ಜಗಿಯುತ್ತಿರುವ ಅನುಭವ! ಸುತ್ತಲೂ ಕತ್ತಲು ಕವಿದಂತಾಯಿತು. ಕಣ್ಣು ಬಿಡಲೂ ತ್ರಾಣವಿಲ್ಲ. ಯಾರೊ ನೀರು ಕುಡಿಸಿದರು. ನನಗೆ ತಲೆ ಸುತ್ತಿ ಪ್ರಜ್ನೆ ತಪ್ಪಿತು. ಕಾಡಿನ ಔಶಧಿ ಮಾಡಿ ಕೂಡಲೇ ಆಸ್ಪತ್ರೆಗೆ ಹೊತ್ತು ಓಡಿದರು.

ನನ್ನ ಕೈ ನೊಡಿದ ಡಾಕ್ಟ್ರು ಬೆರಗಾಗಿ ಇಕ್ಕಳದಿಂದ ಮುರಿದು ಉಳಿದಿದ್ದ ಮುಳ್ಳುಗಳನ್ನೆಲ್ಲಾ ಎಳೆದು ತೆಗೆದಿದ್ದೂ, ಹರಿದ ಗಾಯಗಳಿಗೆ ಹೊಲಿಗೆ ಹಾಕಿದ್ದೂ ನನಗೆ ಗೊತ್ತಾಗಿದ್ದು ಪ್ರಜ್ನೆ ಬಂದಾದ ಮೆಲೆ ರಮೆಶಣ್ಣ ಹೇಳಿದಾಗಲೇ! ನನಗೆ ಈ ಗತಿಯಾಗಲು ಕಾರಣವಾದ ಹಂದಿಯನ್ನು ನನ್ನಜ್ಜನೇ ಹೊಡೆದದ್ದಂತೂ ಗಾಯದ ನೋವನ್ನೆಲ್ಲಾ ಮರೆಸಿತ್ತು!

ಹಂದಿ ನೋಡುವ ಆಸೆ ಹೆಚ್ಚಾಯಿತು. ಡಾಕ್ಟರನ್ನು ಕಾಡಿ ಬೇಡಿ ರಮೇಶಣ್ಣನೊಂದಿಗೆ ಮನೆಗೆ ಹೊರಟೇಬಿಟ್ಟೆ. ಕೈ ಗಾಯಗಳು, ನೋವು, ರಕ್ತ ಯಾವುದರ ಪರಿವೆಯೂ ಇಲ್ಲ. ಮನಸಿನ ತುಂಬಾ ಹಂದಿ ಹಂದಿ! ಹಂದಿ ಹೊಡೆದ ಖುಶಿ ಅಷ್ಟೇ!

ನನ್ನ ಜೀವಮಾನದಲ್ಲಿ ಎಂದೆಂದೂ ಮರೆಯದ ಶಿಕಾರಿಯೊಂದು ಹೀಗೆ ನಡೆದಿತ್ತು. ಅಂದು ನಾನು ಪ್ರಾಣಭಯದಿಂದ ಮುಳ್ಳೆನ್ನುವುದನ್ನು ಮರೆತು ಮರವನ್ನು ಹಿಡಿದು ಜೋತುಬಿದ್ದಿದ್ದೆ. ಆ ಕ್ಷಣ ಮುಳ್ಳು ಚುಚ್ಚಿದ ನೋವೇ ಆಗಲಿಲ್ಲ. ಯಾಕೆಂದರೆ ಹಂದಿಯಿಂದ ಪ್ರಾಣ ಉಳಿಸಿಕೊಳ್ಳಬೆಕಿತ್ತು. ಆ ಭಯವೇ ಹೆಚ್ಚಾಗಿತ್ತು. ಆದರೆ ಹಂದಿಯ ಪರಿಸ್ಥಿತಿಯೂ ಹೆಚ್ಚು ಕಡಿಮೆ ನನ್ನಂತೆಯೇ ಇತ್ತು ಎಂದು ಈಗಲೂ ಒಮ್ಮೊಮ್ಮೆ ಮನದಲ್ಲೇ ಯೋಚಿಸಿ ಕೊರಗುತ್ತೇನೆ! ಈಗಂತೂ ನಮ್ಮ ಮನೆಯಲ್ಲಿ ಶಿಕಾರಿ ನಿರ್ಭಂದಿಸಿದ್ದೆನೆ. ಎರಡೂ ಕೋವಿಗಳೂ ಕೇವಲ ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳಲು ಮಾತ್ರ ಎಂಬಂತೆ ನಮ್ಮ ಮನೆ ಜಗುಲಿಯ ತೊಲೆಯಲ್ಲಿ ರಾರಾಜಿಸುತ್ತಿವೆ! ದೀಪಾವಳಿಯ ದಿನ ಪೂಜೆಗೆ ಕುಳಿತುಕೊಳ್ಳುತ್ತವೆ, ಚುನಾವಣೆಯ ಸಮಯದಲ್ಲಿ ಪೋಲಿಸ್ ತಾಣೆಯೆಂಬ ನೆಂಟರ ಮನೆಗೆ ಹೋಗಿ ಬರುತ್ತವೆ ಅಷ್ಟೆ.


(..........ಮುಗಿಯಿತು...........)  

Friday, May 21, 2010

ಶಿಕಾರಿ (ಭಾಗ-2)

 ಎಲ್ಲರೂ ನಗ್ತಿದ್ದಾರೆ,
ನಾನೂ ನಗತೊಡಗಿದೆ. ಎಲ್ಲರೂ ನಗುವಾಗ ನಾನ್ಯಾಕೆ ಸುಮ್ನಿರಲಿ?  ನಮ್ಮ ಗಂಟೇನು ಹೋಗಲ್ವಲ್ಲ ನಕ್ಕರೆ!
ಕಾರಣ ಹೇಗಿದ್ರೂ ಆಮೇಲೆ ಗೊತ್ತಾಗುತ್ತೆ!

ಎಲ್ಲರ ದೃಷ್ಟಿ ನನ್ನತ್ತಲೇ ನೆಟ್ಟಿದೆ. ನನ್ನನ್ನೇ ನೋಡಿ ನಗುತ್ತಿದ್ದಾರೆ!

" ಏ ಪೈ,  ಮುಂಡೆಗಂಡ ಕುರ್ದೆ...!  ನಿನ್ನ ಚಡ್ಡಿ ಬಿದ್ದು ಹೋಗ್ಯದಲ್ಲೋ.......! ನಿನ್ನ ಮ್ಯಾಣೆ ತಿರ್ಪಾ.... ಹೆಂಗೆ ದುಂಡಗೆ ನಿತ್ತಾನೆ ನೋಡು" 

 ಎಲ್ಲರ ನಗುವಿಗೆ ಕಾರಣ ನನ್ನ ಚಡ್ಡಿ ಬಿದ್ದು ಹೋಗಿ ಉಚಿತ ದರ್ಶನ ಆಗಿದ್ದು ಎಂದು ತಿಳಿಯುವ ಹೊತ್ತಿಗೆ ನನ್ನ ಅರ್ಧ ಮಾನ -ಮರ್ಯಾದೆ ಹೋಗಿಯಾಗಿತ್ತು! ಸ್ವಲ್ಪವಾದರೂ ಉಳಿಯಲಿ ಅಂತ ಬೇಗ ಬೇಗ ಚಡ್ಡಿ ಏರಿಸಿಕೊಂಡೆ!

ಗುಂಡಿ ಕಿತ್ತುಹೊಗಿದ್ದ ಚಡ್ಡಿ ಕೆಳಗೆ ಜಾರಿತ್ತು. ಹಾಳಾದ ಉಡಿದಾರ ಬೇರೆ ಅವತ್ತೇ ಕಿತ್ತು ಹೋಗಬೇಕಿತ್ತಾ? ಈಗ ಏನು ಮಾಡೋದು? ಒಂದು ಕೈಯ್ಯಲ್ಲಿ ಚಡ್ಡಿ ಹಿಡ್ಕೊಂಡು ಹೋಗಲು ಸಾಧ್ಯವಿಲ್ಲ. ದೈನ್ಯದಿಂದ ರಮೆಶಣ್ಣನ ಕಡೆ ನೋಡಿದೆ.

ನನ್ನ ಕಳೆಗುಂದಿದ ಮುಖಾರವಿಂದವ ನೋಡಿ ರಮೇಶಣ್ಣನಿಗೆ  ಅರ್ಥವಾಯಿತೇನೋ? ಅಲ್ಲಿ ಇಲ್ಲಿ  ಹುಡುಕಿ ಒಂದು ಬಳ್ಳಿ ಕಿತ್ತು ತಂದು ನನ್ನ ಸೊಂಟಕ್ಕೆ ಕಟ್ಟಿದ. ಇನ್ನು ನಾನು ತೆಗೆಯುವವರೆಗೆ ಚಡ್ಡಿ ಬಿದ್ದು ಹೋಗುವುದಿಲ್ಲ ಎಂಬ ದೃಡವಾದ ನಂಬಿಕೆಯೊಂದಿಗೆ ಎಲ್ಲರ ಹಿಂದೆ ಹೊರಟೆ!  ನನ್ನ ಚಡ್ಡಿ ಪ್ರಸಂಗ ಎಲ್ಲರ ಬಾಯಲ್ಲೂ ಎಲೆ ಅಡಿಕೆ ರಸದಂತೆ ಕೆಂಪಾಗಿ ಹೋಗಿತ್ತು. ಥೂ ಹಾಳಾದ ಚಡ್ಡಿ! ನನ್ನ ಮರ್ಯಾದೆ ಎಲ್ಲಾ ತೆಗೆಸಿತು. ನಾಳೆಯಿಂದ ಈ ಚಡ್ಡಿ ಮುಟ್ಟೋದೇ ಇಲ್ಲ! ಹೀಗೊಂದು ಶಪಥ ನನ್ನ ಮನದಲ್ಲಿ ಮೂಡಿ ಮರೆಯಾಯಿತು!

 ಅಂತೂ ಇಂತೂ ಹಳು ಸೋಯುವ ಕಾರ್ಯ ಶುರುವಾಯಿತು. ನಾನು ರಮೆಶಣ್ಣನ ಬೆನ್ನು ಬಿಡಲೇ ಇಲ್ಲ. ಎಷ್ಟಾದರೂ ನನ್ನ ಮರ್ಯಾದೆ ಕಾಪಾದಿದವನಲ್ವಾ?  ಎಲೆ ಅಡಿಕೆಯ ಆಸೆ ಬೇರೆ! ಅದು ಬೇರೆ ಮಕ್ಕಳು ದೊಡ್ಡವರ ಜೊತೆಗೇ ಇರಬೇಕೆಂಬ ನಿಯಮ ಇದೆಯಲ್ಲ! ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅದು ಕ್ಷೇಮವಾಗಿತ್ತು.

ಹೀಡ್ಕಾ.....  ಹೀಡ್ಕಾ...........
 ಕ್ರೂ.......... ಕ್ರೂ..............
ಹಿಡ್ಡಿಡ್ದೋ.............

ಕೂಗಾಟ ಚೀರಾಟ ಕಾಡಿನ ಪ್ರಶಾಂತತೆಯ ಸಾಗರವನ್ನು ಕಲಕಿತು. ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳೆಲ್ಲ ಭಯಗೊಂಡು ಓಡಿದವು. ಮರದ ಮೇಲಿದ್ದ ನಮ್ಮ ಪೂರ್ವಜರಿಗೆ ಮಾತ್ರ ಯಾವುದೇ ಭಯ ಆದಂತೆ ಕಾಣಲಿಲ್ಲ! ಆಗಾಗ ಹಳ್ಳಿಗೂ ಬರುತ್ತಿದ್ದ ಮಂಗಗಳಿಗೆ ನಮ್ಮ ಕೂಗಾಟ ಹಾರಾಟ ಸಾಮಾನ್ಯ ಸಂಗತಿಯೇನೋ ಎಂಬಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ದವು!
ಕಾಡಿನ ತುಂಬಾ ಕೂಗಾಟ ಮುಗಿಲು ಮುಟ್ಟಿತು. ಕೋಲಿನಿಂದ ಬಡಿಯುತ್ತಾ ಕಲ್ಲು ಹೊಡೆಯುತ್ತಾ ಮುನ್ನುಗ್ಗತೊದಗಿದೆವು.

ಸೂರ್ಯ ನೆತ್ತಿಗೆ ಬಂದಾಗಿತ್ತು. ಇಷ್ಟು ದೂರ ಬಂದರೂ ಒಂದೂ ಪ್ರಾಣಿಯಾ ಸದ್ದೇ ಇಲ್ಲ! ದಿನಾ ರಾತ್ರಿ ಬಾಳೆತೋಟಕ್ಕೋ ಕಬ್ಬಿಣ ಗದ್ದೆಗೋ ಬಂದು ಲೂಟಿ ಮಾಡುವ ಹಂದಿಗಳು ಎಲ್ಲಿ ಹೋದವು? ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಕಡಗಳೆಲ್ಲಿ ಹೋದವು? ಕೊನೆಗೊಂದು ಕುರಿಯೂ ಸಿಗಲಿಲ್ವಲ್ಲ ಛೆ! 
ಹಂದಿ ಮುಂದೇ.....................! ಹಂದಿ ಮುಂದೇ.................!

 ಯಾರೋ ಕೂಗಿದ್ದು ಕೇಳಿ ತಟ್ಟನೆ ಯೋಚನೆಗೆ ಲಗಾಮು ಹಾಕಿ ಒಕ್ಕೊರಲಿಂದ ಎಲ್ಲರೂ ಮತ್ತೆ ಕೂಗತೋಡಗಿದೆವು! ಆದರೆ ನಾವ್ಯಾರೂ ಹಂದಿ ನೋಡಲಿಲ್ಲ, ಅದು ಓಡಿದ ಸದ್ದೂ ಕೇಳಲಿಲ್ಲ! ಆದರೆ ಮೊದಲು ಕೂಗಿದವನ ಮೇಲೆ ಅಚಲ ನಂಬಿಕೆ! ಪತಿ-ಪತ್ನಿಯರ ನಡುವೆ ಇಷ್ಟು ನಂಬಿಕೆ ಇರುವುದಾಗಿದ್ದರೆ ಹಲವಾರು ಸಂಸಾರಗಳು ಒಡೆಯದೆ ಉಳಿಯುತ್ತಿದ್ದವು ಅನ್ನುವುದು ಬೇರೆ ಮಾತು!

ನಾವು ಕೂಗಿದ ಕೆಲವೇ ಕ್ಷಣದಲ್ಲಿ ಕಾಡನ್ನೇ ನಡುಗಿಸುವಂತೆ ಕೇಳಿಸಿತು ಕೋವಿ ಈಡಿನ ಶಬ್ದ!
ಗುಡುಂ!

ಇಡೀ ಕಾಡೇ ನಿಶ್ಯಬ್ಧ! ಹಂದಿ ಹೊಡೆದರು, ಆ ಜಾಗಕ್ಕೆ ಓಡಬೇಕು, ಆದರೆ ಅತ್ತಲಿಂದ ಯಾವದೇ ಸಂದೇಶ ಇಲ್ಲ! ಬರೀ ಕಾದಿದ್ದೇ ಬಂತು. ಅಷ್ಟರಲ್ಲೇ ಮತ್ತೊಂದು ಈಡು! ಹ್ಹೋ! ಹಂದಿ ಈಗ ಬಿತ್ತು ಎಂಬ ಆಸೆ ಮೂಡಿತು.
ಆದರೆ ಹೊಡೆದವರು ಯಾಕೆ ಕೂಗು ಹಾಕಲಿಲ್ಲ. ಬಹುಶಃ ಹಂದಿ ತಪ್ಪಿಸಿಕೊಂಡಿರಬೇಕು. ಇವತ್ತು ಯಾಕೋ ಸಮಯಾನೆ ಸರಿಯಿಲ್ಲ. ಒಂದೂ ಒಳ್ಳೆದಾಗ್ತಾ ಇಲ್ಲ! ಹಾಳಾದವರು ಎರೆಡು ಈಡು ಹೊಡೆದರೂ ಒಂದು ಹಂದಿ ಬೀಳಲಿಲ್ಲ.

"ಸತ್ರು ಮುಂಡೆಗಂಡ್ರು! ಎಲ್ಲಿ ಈಡು ಹೊಡ್ಡ್ರೋ? ಹಂದಿನ ಅಚೇ ಕಾಡಿಗೆ ದಾಟ್ಸೆ ಬಿಟ್ರು!"
ಎಲೆ ಅಡಿಕೆ ರಸ ಉಗಿಯುತ್ತ ಬಿಲ್ಲಿನವರಿಗೆ ಮಂಗಳಾರತಿ ಮಾಡಿದ ರಮೇಶಣ್ಣ! ನನಗೆ ಬೇಸರವಾಯಿತು. 
ಇದು ಸಿದ್ಧನ ಈಡು ಅಂತ ಕೆಲವರು, ಅಲ್ಲ ಅದು ಅಯ್ಯಣ್ಣಜ್ಜನ ಈಡು ಅಂತ ಮತ್ತೊಬ್ಬರು ಚರ್ಚಿಸತೊಡಗಿದರು. ಎರಡನೆಯ ಈಡಿನ ಶಬ್ದ ಅಜ್ಜನ ಕೊವಿದೆ ಇರ್ಬೇಕು. ಆದರೆ ಅಜ್ಜನ ಈಡು ತಪ್ಪಿತ? ಹಾಗಾದ್ರೆ ಹಂದಿ ಬಲವಾದ್ದೆ ಅನುಮಾನವೇ ಇಲ್ಲ.

ಇಷ್ಟೊತ್ತು ಇಲ್ಲದ ಬಳಲಿಕೆ ಈಗ ಶುರುವಾಯಿತು. ನಿರಾಶೆ ಎಲ್ಲರ ಮುಖದಲ್ಲೂ ಮಿಂಚಿ ಮರೆಯಾಯಿತು. ಸರಿ, ಒಂದು ತಪ್ಪಿದರೇನು. ಇನ್ನೂ ಸಮಯ ಬೇಕಾದಷ್ಟಿದೆ. ಮುಂದುವರೆಯುವ ನಿರ್ಧಾರ ಮಾಡಿ ಮುನ್ನುಗ್ಗತೊಡಗಿದೆವು.

ಆದರೆ ಈಡು  ಹೊಡೆದ ಸ್ಥಳದಲ್ಲಿ ನಡೆದದ್ದೇ ಬೇರೆ. ಹಂದಿ ಮುಂದೇ ಎಂಬ ಕೂಗು ಕೇಳಿ ಬಿಲ್ಲಿಗೆ ಕೂತಿದ್ದ ಸಿದ್ಧನ ಕಿವಿ ನೆಟ್ಟಗಾಗಿತ್ತು! ಇಳಿಜಾರಿನಲ್ಲಿ ಹಂದಿ ದಡದಡದಡ ಓಡಿ ಬರುವ ಸದ್ದು ಹತ್ತಿರವಾಗುತ್ತಿದ್ದಂತೆ ಕೋವಿಯ ಚಾಪು ಎಳೆದು ಸದ್ದು ಬಂದ ಕಡೆಗೆ ನೋಡತೊಡಗಿದ. ಹಂದಿ ಹತ್ತಿರ ಹತ್ತಿರ ಬರುತ್ತಿದೆ, ಸ್ವಲ್ಪ ಬಯಲಿದ್ದಲ್ಲಿ ಹಂದಿ ಅವನಿಗೆ ಕಾಣಿಸಿತು. ಅದನ್ನು ನೋಡುತ್ತಲೇ ಒಂದು ಕ್ಷಣ ಸಿದ್ಧನ ಎದೆ ಜಲ್ಲೆಂದಿತು! ಅವನ ಜೀವಮಾನದಲ್ಲೇ ಅಷ್ಟು ದೊಡ್ಡ ಹಂದಿ ನೋಡಿರಲಿಲ್ಲ! ಆದರೂ ಧೈರ್ಯ ಮಾಡಿ ಗುಂಡು ಹೊಡೆದೇ ಬಿಟ್ಟ! ಗುಂಡು ಹಾರಿದ್ದೆ ತಡ, ಸಿದ್ಧಣ್ಣ ಕೊವಿಯನ್ನೂ ಬಿಟ್ಟು ಕ್ಷಣಾರ್ಧದಲ್ಲಿ ಮರವೇರಿದ್ದ!

ಹಂದಿಗೆ ಈಡೇನೋ ಬಿದ್ದಿತ್ತು. ಆದರೆ ಅದು ಸಾಯಲು ಆ ಈಡು  ಸಾಕಾಗಲಿಲ್ಲ. ನೋವಿನಿಂದ ಕೋಪಗೊಂಡು ಚೀರುತ್ತಾ ಸಿದ್ಧನನ್ನು ತಿವಿಯಲು ಹೋಗಿ ಅವನು ಸಿಗದಿದ್ದಾಗ ಆ ಮರವನ್ನೇ ಜೋರಾಗಿ ತಿವಿದಿತ್ತು. ಆ ತಿವಿತ ಅದೆಷ್ಟು ಬಲವಾಗಿತ್ತೆಂದರೆ ಮರದ ಮೇಲಿದ್ದ ಸಿದ್ಧ ಕೂಡ ಒಮ್ಮೆ ಹೌಹಾರಿದ! ಅದರ ಆರ್ಭಟ ನೋಡಿ ಗಂಟಲು ಒಣಗಿ ಯಾರನ್ನಾದರೂ ಕರೆಯಬೇಕೆಂಬುದನ್ನೂ ಮರೆತ!

ಸ್ವಲ್ಪ ದೂರದಲ್ಲಿದ್ದ ನನ್ನಜ್ಜನಿಗೆ ಏನೋ ಯಡವಟ್ಟು ಆಗಿದೆ ಎಂದು ಮನವರಿಕೆ ಆಯಿತು. ಕೋವಿ ಹಿಡಿದು ಸಿದ್ಧನ ಹತ್ತಿರ ಓಡಿದ. ನೋಡುತ್ತಾನೆ ಕೆಂಗಣ್ಣು ಬಿಡುತ್ತ ಹಂದಿ ಸಿದ್ಧ ಹತ್ತಿದ ಮರದ ಬುಡದಲ್ಲಿ ನಿಂತು ಅಜ್ಜನನ್ನು ದುರಗುಟ್ಟಿ ನೋಡುತ್ತಿದೆ. ಅದರ ಕೋರೆ ಹಲ್ಲು, ಕೆಂಗಣ್ಣು, ಆಕಾರ ನೋಡಿದ ಎಂತವರಿಗಾದರೂ ಒಮ್ಮೆ ಭಯವಾಗದೆ ಇರಲಾರದು. ಆದರೆ ಅಜ್ಜ ಭಯಪಡಲಿಲ್ಲ. ತನ್ನ ಜೀವಮಾನದಲ್ಲಿ ಅಂತಹ ಅದೆಷ್ಟು ಹಂದಿಗಳನ್ನು ಹೊಡೆದಿದ್ದನೋ ಲೆಕ್ಕ ಇಟ್ಟವರಾರು? ತನ್ನೆಡೆಗೆ ನುಗ್ಗಿ ಬರುವ ಹವಣಿಕೆಯಲ್ಲಿದ್ದ ಹಂದಿಯ ತಲೆಯನ್ನು ಬಗೆದು ಹಾಕಿತ್ತು ಅಜ್ಜನ ಕೋವಿಯ ಈಡಿನ ಗುಂಡು! ಒಂದು ನೆಗೆತ ಮುಂದೇ ಹಾರಿ ವಿಲವಿಲ ಒದ್ದಾಡಿ ಹಂದಿ ತನ್ನ ಪ್ರಾಣ ಬಿಟ್ಟಿತು. ಹಂದಿ ಸತ್ತಿಲ್ಲವೆಂಬ ಅನುಮಾನದಿಂದ ಇನ್ನೊಂದು ಈಡು ಹಾಕಿ ಅಜ್ಜ ಕಾಯತೊಡಗಿದ.

ಆದರೆ ಸಿದ್ಧನ ಸುಳಿವೇ ಇಲ್ಲ! ಕೋವಿ ಅಲ್ಲೇ ಕೆಳಗೆ ಬಿದ್ದಿತ್ತು. ಅಜ್ಜನ ಮನ ಅಳುಕಿತು. ಆ ಹುಡುಗನೆಲ್ಲಿ ಹೋದ? 

"ಸಿದ್ಧ...... ಓ ಸಿದ್ಧ............."

"ಅಯ್ಯಾ, ನಾನಿಲ್ಲಿದ್ದೀನಿ"

ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಅಜ್ಜ ಹುಡುಕಾಡಿದ.

"ಎಲ್ಲಿ ಸತ್ತ್ಯೋ ಮುಂಡೆಗಂಡ?"

ನಡುಗುತ್ತಾ ಮರದ ಮೇಲಿಂದ ಇಳಿಯುತ್ತಿದ್ದ ಸಿದ್ಧನನ್ನು ನೋಡಿ ಅಜ್ಜನಿಗೆ ನಗು ತಡೆಯಲಾಗಲಿಲ್ಲ! 

"ನಿನ್ನ ಸಾಯದೆ ಹೋಗಾ....., ಕೋವಿ ಎಸ್ದು ಮರ ಹತ್ತಿಯಲ್ಲಾ.......... ಬಂಡ, ಗಂಡ್ಸನ ನೀನು.....?"

ಎಲೆ ಅಡಿಕೆಯ ಕರೆಗಟ್ಟಿದ ಹಲ್ಲಿನ ಬಾಯಿ ಕಿರಿಯುತ್ತಾ ಕೈ ಕಟ್ಟಿ ನಿಂತಿದ್ದ ಸಿದ್ಧ ಅವಮಾನಗೊಂಡು! ಏನು ಮಾಡಿಯಾನು ಪಾಪ, ಜೀವ ಭಯ ಯಾರಪ್ಪಂದು? ಹಂದಿ ಹೋದ್ರೆ ಹೋಯ್ತು. ಇನ್ನೊದು ಸಿಗುತ್ತೆ. ಜೀವ ಹೋದ್ರೆ ಮತ್ತೆ ಸಿಗಲ್ವಲ್ಲ?

"ನೀವ್ ಸುಮ್ನಿರಿ ಅಯ್ಯಾ............ ಜೀವ ಉಂದಿದ್ರೆ ಬ್ಯಲ್ಲ ಬೇಡ್ಕು ತಿನ್ಬೋದು, ಅದ್ರ ಕ್ವಾರೆ ಹಲ್ಲು ನೋಡಿದ್ರ? ಉಂದೆ ಗುದ್ದಿಗೆ ಹೊಟ್ಟೆ ಬಗ್ದ್ ಹಾಕ್ತಿತ್ತು......"

ತಾನು ಕೋವಿ ಬಿಟ್ಟು ಮರ ಹತ್ತಿದ್ದನ್ನು ಸಮರ್ಥಿಸಿಕೊಂಡ ಸಿದ್ಧನೆಂಬ ಬೂಪ! ಅಜ್ಜ ನಕ್ಕು ಸುಮ್ಮನಾದ. ಸಿದ್ಧನಿನ್ನೂ ಹಂದಿ ಸತ್ತಿರುವ ನಂಬಿಕೆ ಬಾರದೆ ಅಜ್ಜನನ್ನೂ, ಅಜ್ಜನ ಕೊವಿಯನ್ನೂ ಮೆಚ್ಚುಗೆಯಿಂದ ನೋಡಿದ!

"ಅಯ್ಯಾ.... 
ಕೂಗಿ ಎಲ್ಲರ್ನೂ ಕರೀಲಾ?"

"ಬ್ಯಾಡ ಸುಮ್ನಿರು. ಸೋವಿನವರು ಇನ್ನೂ ಅರ್ಧ ಕಾಡಿನಲ್ಲೇ ಇದ್ದಾರೆ. ಸುಮ್ಮನೆ ಯಾಕೆ ಬರಬೇಕು? ಕಾಡು ಸೋಯುತ್ತಾ ಬರಲಿ"

ಅಜ್ಜನ ತರ್ಕವನ್ನು ಸಿದ್ಧ ಒಪ್ಪಿಕೊಂಡು ಸುಮ್ಮನಾದ!                                                                                                       (......................ಮುಂದುವರೆಯುವುದು)

Thursday, May 13, 2010

ಶಿಕಾರಿ....! ಹಂದಿ ಹೊಡೆದದ್ದು!................
 ....................................................................
"ಏ ಪವಿ.....,  ಇವತ್ತು ದೊಡ್ಡ ಬೇಟೆ ಇದೆ"


ಬೆಳಿಗ್ಗೆ ಎದ್ದು ಉಪ್ಪು ಮಸಿ ಕೆಂಡದಿಂದ ಸರ್ವ ಶಕ್ತಿಯನ್ನು ಉಪಯೋಗಿಸಿ
ಹಲ್ಲುಜ್ಜುತ್ತಿದ್ದಾಗ ಅಜ್ಜ ಬಂದು ಪಿಸುಗುಟ್ಟಿದರು ಯಾವುದೋ ಗುಟ್ಟು ಹೇಳುವಂತೆ! ಶಿಕಾರಿಯ ಹೆಸರು ಕೇಳುತ್ತಲೇ ದೇಹದ ಕೂದಲ ಎಳೆ ಎಳೆಯೂ ನಾ ಮುಂದು ತಾ ಮುಂದು ಎಂದುಕೊಳ್ಳುತ್ತಾ ಸೆಟೆದು ನಿಂತವು!


ಶಾಲೆಗೆ ಚಕ್ಕರ್ ಹೊಡೆದು ಬೇಟೆಗೆ ಹೋಗುವ ಮಜಾ ಅನುಭವಿಸಿದವನಿಗೆ ಗೊತ್ತು.ಶಾಲೆಗೆ ಹೋಗಿ ಆ ಮಾಸ್ಟರ ಬೆತ್ತದ ಪೆಟ್ಟು ತಿನ್ನುವುದು ತಪ್ಪಿದ ಖುಷಿ ಒಂದು ಕಡೆ, ಶಿಕಾರಿಯ ಮಜಾ ಇನ್ನೊಂದೆಡೆ! ಯಾರಿಗೆ ಬೇಕು ಶಾಲೆ ಓದು ಎಲ್ಲಾ? ಶಿಕಾರಿ ಮಾಡಿ ನಾಲ್ಕು ಹಂದೀನೋ ಕಡನೋ ಹೊಡೆದರೆ ಸಾಕು. ಜೀವನ ಪರ್ಯಂತ ಹೆಸರು ಉಳಿಯುತ್ತದೆ!

 
ಆಹಾ! ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!

ನಿತ್ಯಕರ್ಮಗಳನ್ನೆಲ್ಲಾ ಮುಗಿಸಿ, ತುಳುಸಿ ಕಟ್ಟೆಗೆ ನೀರು ಹಾಕಿ ಕೈ ಮುಗಿದು ತಿಂಡಿಗೆ ಓಡಿದೆ. ಭಕ್ತಿಯ ಗಂಧ ಗಾಳಿಯೇ ಅರಿಯದ ನನಗೆ ಅದೊಂದು ದಿನನಿತ್ಯದ ಕರ್ಮ ಅಷ್ಟೇ! ಅಜ್ಜಿ ಬೈಗುಳವನ್ನು ಸೇರಿಸಿ ಹಾಕಿಕೊಟ್ಟ ಅಕ್ಕಿ ರೊಟ್ಟಿ ಬೆಣ್ಣೆ ಬೆಲ್ಲವನ್ನು ಕಿವಿ ಮುಚ್ಚಿಕೊಂಡು ಮೆಲ್ಲತೊಡಗಿದೆ.


ಮೈ ಹುಷಾರಿಲ್ಲ ಎಂದು ರಜಾ ಅರ್ಜಿ ಬರೆದು ನಮ್ಮ ಕ್ಲಾಸಿಗೆ ತಲುಪಿಸುವಂತೆ ಮಾವನ ಮಗಳ ಹತ್ತಿರ ಕೊಟ್ಟೆ. ಸರ್ವರ ಸಹಿಯಲ್ಲೂ ಪಾರಂಗತನಾದ ನಾನು ಹಾಕಿದ್ದು ನನ್ನ ಮಾವನ ಸಹಿ ಅಂತ ಪಾಪ! ನಮ್ಮ ಟೀಚರಿಗೆ ಹೇಗೆ ಗೊತ್ತಾಗಬೇಕು? ಮಾರ್ಕ್ಸ್ ಕಾರ್ಡ್, ಲೀವ್ ಲೆಟರ್ ಕೊನೆಗೆ ಸ್ಕಾಲರ್ ಶಿಪ್ ಫಾರಂ ಮೇಲೂ ನಾನೇ ಸಹಿ ಮಾಡಿದ್ದು ಅಂತ ಯಾವ ದೊಡ್ಡ IAS ಅಧಿಕಾರಿಗಳೂ ಇನ್ನೂ ಕಂಡು ಹಿಡಿದಿಲ್ಲ! ಯಾವ ಯಾವ ಸ್ಥಳದಲ್ಲಿ ಯಾರ್ಯಾರ ಸಹಿ ಬೇಕು ಅಂತ ಗೊತ್ತುಂಟಲ್ಲ! ಹೀಗೆ ಒಮ್ಮೆ ವಿಜ್ಞಾನದಲ್ಲಿ ಫೇಲಾದ ಕಾರಣ ಮಾರ್ಕ್ಸ್ ಕಾರ್ಡಿಗೆ ಪೋರ್ಜರಿ ಸಹಿ ಮಾಡಿದ್ದೆ. ಅದು ಹೇಗೋ ಮಾವನಿಗೆ ಗೊತ್ತಾಗಿ ಬಾರುಕೋಲಿನಿಂದ ತಿಂದ ಪೆಟ್ಟು ಮರೆಯಲು ಬಾರುಕೊಲನ್ನೇ ಮರೆಯಬೇಕಾಯ್ತು! ಒಮ್ಮೊಮ್ಮೆ ಬಾರುಕೋಲನ್ನು ನೋಡಿ ಮೈ ಜುಮ್ ಅನ್ನೋದುಸುಳ್ಳಲ್ಲ!


ಮಾವ ಕೊಟ್ಟಿಗೆಗೆ ಸೊಪ್ಪಿನ ಹೊರೆ ಹೊತ್ತು ಬರುತ್ತಿದ್ದ. ಕೆಲಸ ಕೆಟ್ಟಿತು! ಗೊತ್ತಾದರೆ ಬಲಿ ಬಿಡಿಸುತ್ತಾನೆ. ಸಂಜೆ ಮನೆಗೆ ಬಂದ ಮೇಲೆ ತೊಂದರೆ ಇಲ್ಲ! ಎರಡು ಪೆಟ್ಟು ಬಿದ್ದರೂ ಸಹಿಸಿಕೊಳ್ಳಬಹುದು. ಶಿಕಾರಿ ಆಗಿರುತ್ತದಲ್ಲ. ಆ ಉತ್ಸಾಹದಲ್ಲಿ ಅಷ್ಟೇನೂ ನೋವು ಆಗುವುದಿಲ್ಲ. ಆದರೆ ಈಗ ಬೇಡ ಎಂದು ಬೈದರೆ! ಅಪಶಕುನ! ಮತ್ತೆ ಶಿಕಾರಿಗೆ ಹೋಗುವ ಹಾಗಿಲ್ಲ!


ಇಲ್ಲ! ಹಾಗಾಗಬಾರದು. ಹಿಂದಿನ ಬಾಗಿಲಿನಿಂದ ಓಡುವುದೊಂದೇ ದಾರಿ! ಸೊಂಟಕ್ಕೆ ಕಟ್ಟಿಕೊಂಡ ಟವಲ್ ಬಿಚ್ಚಿ ಚಡ್ಡಿ ಹಾಕಿಕೊಳ್ಳುವಷ್ಟು ಸಮಯ ಇಲ್ಲ. ಹಾಗೆಯೇ ಓಡಿದೆ ಕೈಗೆ ಸಿಕ್ಕ ಚಡ್ಡಿ ಹಿಡಿದುಕೊಂಡು!


ನಾಗರಬನ ದಾಟಿ ಮೈದಾನಕ್ಕೆ ಹೋಗುವಾಗ ದಾರಿ ಬದಿಯಲ್ಲೇ ಚಡ್ಡಿ ಹಾಕಿಕೊಂಡೆ. ಚಡ್ಡಿಯ ಎರಡೂ ಗುಂಡಿಗಳೂ ಕಿತ್ತು ಹೋಗಿವೆ ತಿಳಿದಿದ್ದು ಆಗಲೇ ತಿಳಿದಿದ್ದು! ಛೆ! ಓಡಿ ಬರುವ ಗಡಿಬಿಡಿಯಲ್ಲಿ ಚಡ್ಡಿಯ ಗುಂಡಿಯನ್ನು ಗಮನಿಸಲೇ ಇಲ್ಲ! ವಾಪಸ್ಸಂತೂ ಹೋಗುವ ಹಾಗಿಲ್ಲ! ಕಂಸ ಮಾವ ಆಗಲೇ ಕೂಗುವುದು ಕೇಳಿಸಿತ್ತು. ಇನ್ನೇನು ಮಾಡಲು ಸಾಧ್ಯ? ಒಂದು ಕೈಯ್ಯಲ್ಲಿ ಚಡ್ಡಿ ಹಿಡಿದು ಎಲ್ಲರೂ ಸೇರುವ ಬ್ಯಾಣದ ಹೆಬ್ಬಲಸಿನ ಮರದತ್ತ ಸಾಗಿ ಜನರ ಹಿಂಡಿನಲ್ಲಿ ಒಂದಾಗಿ ಕುಳಿತೆ.  ನಾಗಪ್ಪಣ್ಣನ ಹೊಸ ಕೋವಿ ನೋಡುವ ಕುತೂಹಲದಲ್ಲಿ ನನ್ನ ಚಡ್ಡಿಯನ್ನು ಯಾರು ಗಮನಿಸಲೇ ಇಲ್ಲ! ಸಧ್ಯ ಸಮಾದಾನವಾಯಿತು. 


ನಾಗಪ್ಪಣ್ಣನ ಹೊಸ ಕೋವಿ ಪಳಪಳನೆ ಹೊಳೆಯೋತ್ತಿತ್ತು. ಬೀಟೆಯ ಹತ್ತೆಯ ಕೋವಿ. ಎಣ್ಣೆ ಹಚ್ಚಿ ಹೊಳೆಯುವಂತೆ ಮಾಡಿದ್ದ. ನಾನೊಮ್ಮೆ ಮುಟ್ಟುವ ಬಯಕೆಯನ್ನು ತೋಡಿಕೊಂಡಾಗ ನಾಗಪ್ಪಣ್ಣ ಕೆಂಗಣ್ಣು ಬಿಟ್ಟು ಗತ್ತಿನಿಂದ ಹೆದರಿಸಿದ್ದ.
" ನೆಟ್ಟಗೆ ಒಂದು ದೊಣ್ಣೆ ಹಿಡ್ಕುಣಾಕೆ ಬರಲ್ಲ. ಮೊದ್ಲು ಅದನ್ನ ಕಲ್ತ್ಗಾ,  ಆಮೇಲೆ ಕೋವಿ ನೋಡ್ಬೈದಿ, ಹ್ಹ ಹ್ಹ ಹ್ಹಾ, ಕೋವಿ ನೋಡ್ತಾನಂತೆ"
ಎಂದು ವ್ಯಂಗ್ಯವಾಡಿದ. 


ಹೊಸ ಕೋವಿ ಎತ್ತಿ ನೋಡುವ ಮುಟ್ಟುವ ಆಸೆ ಆಸೆಯಾಗಿಯೇ ಉಳಿಯಿತು. ಮನಸ್ಸಿನಲ್ಲಿ ನಾಗಪ್ಪಣ್ಣನ ಮೇಲೆ ಕೋಪ ಬಂದು ಶಪತ ಮಾಡಿದ್ದೆ!
  
" ಮಾಡಿಸ್ತೀನಿ ನಿಂಗೆ ಇರು. ನಾನು ದೊಡ್ಡವನಾದ ಮೇಲೆ ನಿನ್ನ ಕೊವಿಗಿಂತಲೂ ಚೆಂದದ ಎರೆಡು ಕೋವಿ ಇಟ್ಟುಕೊಳ್ಳುತ್ತೇನೆ. ಆಮೇಲೆ ನಿನಗೆ ಮುಟ್ಟಲೂ ಬಿಡುವುದಿಲ್ಲ"


ರಮೇಶಣ್ಣ, ನನ್ನಜ್ಜ ಬರುತ್ತಿರುವುದು ನನಗೆ ಖುಶಿ ತಂತು. ಅಜ್ಜ ನನಗೆ ಒಂದು ದೊಣ್ಣೆ, ಒಂದು ಕತ್ತಿಯನ್ನು ಕೊಟ್ಟರು. ಅದೆ ನಮಗೆ ರಕ್ಷಾ ಆಯುಧ! ಅಜ್ಜನ ಕೋವಿ ಹೆಗಲ ಮೇಲೆ ಹೊತ್ತು ಬರುವ ಗತ್ತನ್ನು ನೋಡಿ ನನ್ನ ಮೈ ಮನವೆಲ್ಲಾ ರೋಮಾಂಚನಗೋಳ್ಳುತ್ತಿತ್ತು. ಆ ಗತ್ತೇ ಅಲ್ಲವೇ ನನ್ನನ್ನು ಶಿಕಾರಿಗಾಗಿ ತುಡಿಯುವಂತೆ ಮಾಡಿದ್ದು? ಆ ಕೊವಿಯೇ ಅಲ್ಲವೇ ಈ ಚಪಲತೆಗೆ ಕಾರಣ? 


ಎಲೆ ಅಡಿಕೆ ಹಾಕಿಕೊಂಡು, ಬೀಡಿ ಸೇದುವವರು ಬೀಡಿ ಸೇದತೊದಗಿದರು. ನನ್ನ ಕವಳಕಂತೂ ರಮೇಶಣ್ಣ ಇದ್ದನಲ್ಲಾ. ಅವನಿಂದ ಎಲೆ ಅಡಿಕೆ ತೆಗೆದು ಹಾಕಿಕೊಂಡೆ. ಮಲೆನಾಡಿನಲ್ಲಿ  ಮಕ್ಕಳು ಎಲೆ ಅಡಿಕೆ ಹಾಕುವುದು ಅಂತ ದೊಡ್ಡ ವಿಷಯವೇನಲ್ಲ!


" ಪೈ, ನಿನ್ಮಾವ ನೋಡದ್ರೆ ನನ್ನ ಕೊಂದೇ ಹಾಕ್ತಾನೆ" 


ಪ್ರವೀಣನೆಂಬ ಕ್ಲಿಷ್ಟ ಪದ ರಮೆಶಣ್ಣನ ಬಾಯಲ್ಲಿ ಪೈ ಆಗಿತ್ತು. ರಮೇಶಣ್ಣ  ನನ್ನ ಅಚ್ಚು ಮೆಚ್ಚು ಆಗಲು ಕಾರಣ ಎಲೆ ಅಡಿಕೆ ಸಂಬಂಧವೇ ಇರ್ಬೇಕು!


ಯಾವ ಕಾಡಿನಿಂದ ಹಳು ನುಗ್ಗಲು ಶುರುಮಾಡುವುದು? ಯಾರ್ರ್ಯಾರು ಎಲ್ಲೆಲ್ಲಿ ಬಿಲ್ಲಿಗೆ ಕೂರುವುದು ಎಂದು ನಿರ್ಧಾರವಾಗಲು ದೊಡ್ಡ ತರ್ಕ, ವಿವಾದ, ವೈಮನಸ್ಸುಗಳೇ ನಡೆದವು. ಯಾವ ರಾಜಕೀಯ ನಾಯಕರಿಗೂ ಕಡಿಮೆ ಇಲ್ಲದಂತೆ ಚರ್ಚೆಗಳು ನಡೆದವು. ಕೊನೆಗೆ ನನ್ನಜ್ಜನ ತೀರ್ಮಾನವೇ ಅಂತಿಮ. ಹಿರಿಯರೆಂಬ ಗೌರವದಿಂದ ಅಜ್ಜನ ಮಾತನ್ನು ಒಪ್ಪಿಕೊಂಡು ಎಲ್ಲರೂ ಎದ್ದು ನಿಂತರು. ನಾನೂ ದೊಣ್ಣೆಯನ್ನೇ ಕೊವಿಯಂತೆ ಹೆಗಲ ಮೇಲೆ ಇಟ್ಟುಕೊಂಡು ಗತ್ತಿನಿಂದ ಎದ್ದು ನಿಂತೆ. 


ಅಷ್ಟೇ!


ಜೋರಾಗಿ ನಗು! ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ! 


ಯಾಕೆ ಎಲ್ಲಾ ನಗ್ತಿದ್ದಾರೆ? 


ಅರೆ.......!


                                                                   (ಮುಂದುವರೆಯುವುದು..................)


ಮಲೆನಾಡಿನಲ್ಲಿ ಶಿಕಾರಿ ರೈತರ ಮನರಂಜನಾ ಕಾರ್ಯಗಳಲ್ಲಿ ಒಂದು. ಜೊತೆಗೆ ಕಾಡುಕೋಣ, ಹಂದಿಯಂತ ಪ್ರಾಣಿಗಳಿಂದ ಬೆಳೆಯನ್ನು ಕಾಪಾಡಿಕೊಳ್ಳಲು ಶಿಕಾರಿ ಅನಿವಾರ್ಯ. ಅಂತಹ ಶಿಕಾರಿಯ ಒಂದು ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 


ಮಲೆನಾಡಿನ ಪ್ರತಿಯೊಬ್ಬ ಮಗುವೂ ಕೂಡ ಬೇಟೆಯ ಆಸಕ್ತಿ ಹೊಂದಿರುತ್ತದೆ. ಸಾದಾರಣವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೋವಿ ಇದ್ದೆ ಇರುತ್ತದೆ. ಹಿರಿಯರೊಂದಿಗೆ ರಾತ್ರಿ ಹೊತ್ತಿನಲ್ಲಿ ಶಿಕಾರಿಗೆ ಮಕ್ಕಳೂ ಹೋಗುತ್ತಾರೆ. ದೊಡ್ಡ ಶಿಕಾರಿಯಷ್ಟು ಅಪಾಯ ರಾತ್ರಿ ಇರುವುದಿಲ್ಲವಾದದ್ದರಿಂದ, ರಾತ್ರಿ ಸಣ್ಣ ಸಣ್ಣ ಪ್ರಾಣಿಗಳು ಮಾತ್ರ ಸಿಗುವುದರಿಂದ ಮಕ್ಕಳನ್ನು ಕರೆದೊಯ್ಯುತ್ತಾರೆ. ಎಷ್ಟೋ ಸಾರಿ ಮಧ್ಯೆ ಕಾಡಿನಲ್ಲಿ ಪ್ರಾಣಿ ಕಂಡು ಕಣ್ತಪ್ಪಿಸಿ ಓಡಿದಾಗ ಅದನ್ನು ಬೆನ್ನಟ್ಟಿ ಹೋಗಬೇಕಾಗುತ್ತದೆ. ಅಂತ ಸಂದರ್ಭದಲ್ಲಿ ಒಬ್ಬರನ್ನೇ ಕಾಡಿನಲ್ಲಿ ಬಿಟ್ಟು, ಪ್ರಾಣಿಯ ಬೆನ್ನಟ್ಟಿ ಹೋಗುತ್ತಾರೆ. ಎಷ್ಟೋ ಬಾರಿ ಕತ್ತಲೆಯಲ್ಲಿ ದಿಕ್ಕು ತಪ್ಪಿ ಬೆಳಗಿನೊರೆಗೂ ಮಕ್ಕಳು ಕಾಡಿನಲ್ಲೇ ನಿಂತಿದ್ದು ಉಂಟು! ಇದು ನನ್ನ ಸ್ವಂತ ಅನುಭವ ಕೂಡ! ಆ ಕತೆಯನ್ನು ಇನ್ನೊಮ್ಮೆ ಹಂಚಿಕೊಳ್ಳುತ್ತೇನೆ. 

ಅಂತಹ ಶಿಕಾರಿಯ ಬಗ್ಗೆ, ಅದರ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅಭಿಲಾಷೆಯಿಂದ ನಿಮ್ಮ ಮುಂದೆ ಇಟ್ಟಿದ್ದೇನೆ. ಇಲ್ಲಿ ಕೆಲವು ವಾಕ್ಯಗಳನ್ನು ಮಲೆನಾಡಿನ ಗ್ರಾಮ್ಯ ಬಾಷೆಯಲ್ಲಿ ಬರೆದಿದ್ದೇನೆ. ಅರ್ಥ ಆಗದೆ ಇದ್ದಲ್ಲಿ ದಯವಿಟ್ಟು ಕೇಳಿ. ಅರ್ಥ ನೀಡುವ ಪ್ರಯತ್ನ ಮಾಡುತ್ತೇನೆ..