Saturday, October 12, 2013

ಚೈತ್ರದ ಚಿಗುರು.....!

ಚೈತ್ರದ ಚಿಗುರು.....!


Wednesday, June 13, 2012

ಕುಶಲವೇ.........? ಕ್ಷೆಮವೇ............?

                ಒಂದು ವಾರದ ರಜೆ ಮುಗಿಸಿ ಮುಂಗಾರು ಮಳೆಯ ಸುಂದರ ಕ್ಷಣಗಳನ್ನು ಸಂತೋಷದಿಂದ ಅನುಭವಿಸಿ, ನಿನ್ನೆ ತಾನೇ ದೆಹಲಿಗೆ ಮರಳಿ ಬಂದಿದ್ದೆ. ಮಲೆನಾಡಿನ ಮಳೆಗಾಲದ ವಾತಾವರಣದಿಂದ ಮತ್ತೆ ದೆಹಲಿಯ ಬಿಸಿಲಿಗೆ ದೇಹ ತಕ್ಷಣ ಹೊಂದಿಕೊಳ್ಳದೆ ತುಂಬಾ ಸುಸ್ತಾಗಿತ್ತು. ಗಡದ್ದಾಗಿ ಒಂದು ನಿದ್ದೆ ಮುಗಿಸಿ ಎದ್ದಾದ ಮೇಲೆ ರೂಮನ್ನು ಶುಚಿಗೊಳಿಸುವ ಕಾರ್ಯ ಶುರುಮಾಡಿಕೊಂಡೆ. ಹಾಗೆ ಹಳೆಯ ಪೆಟ್ಟಿಗೆಯಲ್ಲಿದ್ದ ಹತ್ತಾರು ಪತ್ರಗಳು ಹತ್ತು ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕಿದವು.

          ಆಲ್ಲಿದ್ದ ಪತ್ರಗಳು ಒಂದೋ ಎರೆಡೋ? ಅಪ್ಪ ಬರೆದ ಪ್ರೀತಿಯ ಪತ್ರ, ಅಕ್ಕನ ವಾತ್ಸಲ್ಯದ ಪತ್ರ, ತಮ್ಮ ಏಳನೇ ಕ್ಲಾಸಲ್ಲಿ ಪಾಸಾದಾಗ ಬರೆದ ಹೆಮ್ಮೆಯ ಪತ್ರ, ಗೆಳೆಯ-ಗೆಳತಿಯರ ಸ್ನೇಹದ ಪತ್ರ, ಪೋಸ್ಟ್ ಮಾಡದೆ ಇಟ್ಟುಕೊಂಡ ಹಲವು ಹುಡುಗಿಯರಿಗೆ ಬರೆದ ಪ್ರೇಮ ಪತ್ರ, ನಿಯತಕಾಲಿಕ ಪತ್ರಿಕೆಗಳಿಗೆನಗಳಿಗೆ ಕಳುಹಿಸಲು ಬರೆದು ಭಯದಿಂದ ಪೋಸ್ಟ್ ಮಾಡದಿದ್ದ ಕತೆ ಕವನಗಳು..............    ಹೀಗೇ ಸಾಲು ಬೆಳೆಯುತ್ತ ಹೋಗುತ್ತದೆ.

           ಆ ದಿನಗಳೇ ಚನ್ನಾಗಿದ್ದವು, ಪತ್ರಕ್ಕಾಗಿ ಕಾಯುವ ಆ ಸುಖ ಇನ್ನೂ ಚನ್ನಾಗಿತ್ತು. ನಮಗೆ ಪತ್ರ ಓದಲು ಬರೆಯಲು ಸಾಕಷ್ಟು ಸಮಯವೂ ಇತ್ತು. ತಾಳ್ಮೆಯೂ ಇತ್ತು. ಅಪ್ಪನ ಪತ್ರ ತಿಂಗಳು ಕಳೆದರೂ ಬರದಿದ್ದಾಗ ಭಯ ಆಗುತ್ತಿತ್ತು. ಅಕ್ಕ ಪತ್ರ ಬರೆದು ಬುದ್ಧಿವಾದ ಹೇಳದಿದ್ದರೆ ಏನೋ ಕಳೆದು ಕೊಂಡಂತ ಅನುಭವವಾಗುತ್ತಿತ್ತು. ನಾನಾ ಊರುಗಳಲ್ಲಿ ನೆಲೆಸಿದ ಸ್ನೇಹಿತರ ಬಳಗದಿಂದ ದಿನಕ್ಕೆ ಒಬ್ಬರ ಪತ್ರವಾದರೂ ಇರುತ್ತಿತ್ತು. ಅವರ ಶಾಲಾ ಕಾಲೇಜಿನ ಅನುಭವಗಳು, ಪ್ರೇಮ ಪ್ರಸಂಗಗಳು ವಿನಿಮಯವಾಗುತ್ತಿದ್ದವು.

             ಈಗಿನ ಪಾಠ ಕ್ರಮದಲ್ಲಿ ಪತ್ರ ಬರೆಯುವ ಬಗ್ಗೆ ಬೋಧನೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕಾಲದಲ್ಲಂತೂ ಇತ್ತಪ್ಪ! ಆದರೂ ಅದಕ್ಕೂ ಮೊದಲೇ ನಮಗೆ ಪತ್ರ ಬರೆಯುವ ಕ್ರಮ ತಿಳಿದಿರುತ್ತಿತ್ತು. ಹಿರಿಯರಿಗೆ ಬರೆಯುವಾಗ, ಕಿರಿಯರನ್ನು ಸಂಬೋಧಿಸುವಾಗ, ಸಮವಯಸ್ಕರೊಡನೆ........... ಹೀಗೆ ನಾನ ವಿಧಾನಗಳು ನಮಗೆ ಗೊತ್ತಿರುತ್ತಿತ್ತು.

            ಪ್ರೌಢ ಶಾಲೆಯ ಮೆಟ್ಟಿಲು ಹತ್ತುವುದರೊಳಗೆ ಪ್ರೀತಿ ಪ್ರೇಮದ ನಾನ ಕನಸುಗಳು ನಮಗೆ ಶುರು ಆಗಿರುತ್ತಿದ್ದವು. ಎಲ್ಲಾ ಹೆಣ್ಣುಗಳಲ್ಲೂ ನಮ್ಮ ಸಂಗಾತಿಯನ್ನು ಹುಡುಕುತ್ತಿದ್ದೆವು. ಚಂದ ಕಂಡ ಮನಸ್ಸು ಒಪ್ಪಿದ ಎಲ್ಲರಿಗೂ ಪ್ರೇಮಪತ್ರ ಬರೆಯುತ್ತಿದ್ದೆವು. ಆದರೆ ಒಂದಾದರೂ ಪೋಸ್ಟ್ ಮಾಡಿದ್ದು ಇದೆಯಾ? ಊಹ್ನೂಂ........... ಎಲ್ಲವೂ ನಮ್ಮ ಪೆಟ್ಟಿಗೆಯ ಮೂಲೆಯಲ್ಲೇ ಉಳಿಯುತ್ತಿರಲಿಲ್ಲವೇ? ಪ್ರೇಮಪತ್ರ ಬರೆದ ಎಲ್ಲವೂ ಪ್ರಕಟಗೊಂಡಿದ್ದರೆ ಅದೆಷ್ಟು ಸಾಹಿತಿಗಳ ಉದ್ಭವ ಆಗುತ್ತಿತ್ತೋ. ಆದರೆ ಹಾಗಾಗುತ್ತಿರಲಿಲ್ಲ. ಯಾಕೆಂದರೆ ಪತ್ರ ಬರೆದವನಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ! (ನಾನು ಬರೆದ ಐದಾರು ಪತ್ರಗಳು ಈಗಲೂ ನನ್ನ ಬಳಿ ಇವೆ!)


           ನನ್ನ ಅತ್ತೆಯ ಮಗಳು ಮತ್ತು ನನ್ನ ನಡುವೆ ವಾರಕ್ಕೊಂದು ಪತ್ರ ವಿನಿಮಯವಾಗುತ್ತಿತ್ತು. ನನ್ನ ಅಕ್ಕನ ಸ್ಥಾನದಲ್ಲಿದ್ದ ಆಕೆ ಪ್ರತೀ ವಾರ ನನಗೆ ಪತ್ರ ಬರೆಯುತ್ತಿದ್ದಳು. ನಾನು ಅದಕ್ಕೆ ಉತ್ತರ ಬರೆಯುತ್ತಿದ್ದೆ. ವಿಷಯಗಳಿಗೇನು ಬರ ಇರಲಿಲ್ಲ.ಬರೆದಷ್ಟೂ ಇರುತ್ತಿದ್ದವು. (ಈಗ ಫೋನಲ್ಲಿ ಮಾತಾಡುವಾಗ ಎರೆಡು ನಿಮಿಷಕ್ಕೆ ಮತ್ತೆ ಮತ್ತೆ ಎಂದು ತೊದಲುತ್ತೇವೆ!) ಕೆಲವೊಮ್ಮೆ ಜಾಗ ಸಾಲದಾಗಿ ಪತ್ರದೊಳಗೊಂದು ಪತ್ರ ಕೂಡಾ ಇರುತ್ತಿತ್ತು. ಇತ್ತೀಚಿನವರೆಗೂ ಅಂದರೆ ಐದು ವರ್ಷದ ಹಿಂದಿನವರೆಗೂ ಈ ಕ್ರಮ ತಪ್ಪದೆ ನಡೆದುಬಂದಿತ್ತು. ನಂತರ ಕ್ಷಿಪ್ರಗತಿಯಲ್ಲಿ ಮೊಬೈಲ್ ಉಪಯೋಗ ಬೆಳೆದ ಮೇಲೆ ಈ ಕ್ರಮ ನಿಧಾನಕ್ಕೆ ನಿಂತು ಹೋಯಿತು.ಮೊನ್ನೆ ಹಲವು ದಿನಗಳ ನಂತರ ಫೋನ್ ಮಾಡಿದ್ದಾಗ ಆ ಸುಂದರ ಕ್ಷಣಗಳನ್ನು ನೆನೆದು ಸಂತೋಷ ಪಟ್ಟಿದ್ದೆವು.


          ಇದು ಮೊಬೈಲ್ ಯುಗ. ಕ್ಷಣ ಮಾತ್ರದಲ್ಲಿ ಪ್ರಪಂಚದ ಮೂಲೆಯಲ್ಲಿ ಯಾರೊಂದಿಗೆ ಬೇಕಾದರೂ ಸಂಪರ್ಕ ಸಾಧಿಸಬಹುದು. ಇಂಟರ್ನೆಟ್ಟಿನಲ್ಲಿ ವೀಡಿಯೋ ಛಾಟ್ ಮಾಡಬಹುದು. ಆದರೂ ನಮಗೆ ಸಂಬಂಧಗಳ ಭೆಲೆ ಗೊತ್ತಿಲ್ಲ. ಬ್ಯುಸಿ ದಿನಗಳಲ್ಲಿ ಯಾರೊಂದಿಗೂ ಮಾತನಾಡಲು ಸಮಯವೂ ಸಾಲುವುದಿಲ್ಲ. ಅಪ್ಪ ಅಮ್ಮನೊಂದಿಗೆ ಮಾತನಾಡಲು ನಮಗೆ ವಿಷಯಗಳೇ ಇರುವುದಿಲ್ಲ, ಗೆಳೆಯರ ಬಹುದೊಡ್ಡ ಗುಂಪೇ ಇದ್ದರೂ ಕನಿಷ್ಠ ವಾರಕ್ಕೊಂದು ಫೋನೂ ಮಾಡುವುದಿಲ್ಲ. ಯಾಕೆಂದರೆ ನಾವು ಬಹಳ ಮುಂದುವರೆದಿದ್ದೇವೆ. ಅಭಿವೃದ್ಧಿ ಹೊಂದಿದ್ದೇವೆ, ಹೆಸರು ದುಡ್ಡು ನಮ್ಮ ಕೈ ಸೇರುತ್ತಿದೆ.

          ಬಹುಶಃ ಇದು ನಮ್ಮ ಜನರೇಶನ್ ಗೆ ಮುಗಿಯಿತು ಎನಿಸುತ್ತದೆ. ಮುಂದಿನ ಪೀಳಿಗೆಗೆ ಪತ್ರ ವ್ಯವಹಾರ ಎಂದರೆ ಎಂಟನೆ ಅದ್ಭುತವಾಗಿ ತೋರಬಹುದು. ಮುಂದೆ ನಮ್ಮ ಮೊಮ್ಮಕ್ಕಳಿಗೆ ಕತೆ ಹೇಳುವಾಗ ಪುರಾಣಗಳ ಬದಲಾಗಿ ಇದನ್ನೇ ಹೇಳಬಹುದೇನೋ! ನೀವು ಏನಂತೀರಿ?


Friday, February 10, 2012

ಸಾವು ಅಷ್ಟು ಕಷ್ಟವೇ?(ಚಿತ್ರ ಕೃಪೆ : ಅಂತರ್ಜಾಲ)


ಶೀರ್ಷಿಕೆ ನೋಡಿ ವಿಚಿತ್ರ ಅನ್ನಿಸ್ತಾ ಇದೆಯಾ?

ಹೌದು, ಒಂತರಾ ವಿಚಿತ್ರವೇ! ಅಪರೂಪಕ್ಕೆ ಬ್ಲಾಗಿನತ್ತ ಬಂದು ವಿಚಿತ್ರ ಪ್ರಶ್ನೆ ಕೇಳ್ತಾ ಇದ್ದಾನೆ ಅನ್ಕೋಬೇಡಿ. ಮುಂದೆ ಓದಿ ನೀವೇ ನಿರ್ದರಿಸಿ :)
ಅದು ದ್ವಿತೀಯ  ಪಿ. ಯು. ಸಿ. ಓದುತ್ತಿದ್ದ ಸಮಯ.  ವಿಧ್ಯಾರ್ಥಿ ಜೀವನದ ಸುಂದರ ಕ್ಷಣಗಳು. ಅಷ್ಟೇನೂ ಜವಾಬ್ಧಾರಿ ಇಲ್ಲದೆ ಬರಿ ಜಮೀನಿನ ಕೆಲಸ, ಜೊತೆಗೊಂದಿಷ್ಟು ಓದು, ಬದುಕಿಗಾಗಿ ಊಟ, ನೆಮ್ಮದಿಯ ನಿದ್ದೆ ಅಷ್ಟೇ. 

ಆಗ ಬೀಸಿತು ನೋಡಿ ಪ್ರೇಮದ ಬಿರುಗಾಳಿ! ಸ್ವಾತಂತ್ರ್ಯ ದಿನಾಚರಣೆಯ ದಿನ ಚಾಕ್ಲೆಟ್ ಹಂಚಲು ಹೋಗಿ ಒಡ್ಡಿದ ಮುದ್ದಾದ ಕೈಗೆ ಬೆರಗಾಗಿ ಹೃದಯ ಕಳೆದುಕೊಂಡೇ ಬಿಟ್ಟೆ! 
ಹೌದು ಸ್ವಾಮಿ.........
ಊಟ ಬೇಡ, ನಿದ್ದೆ ಬೇಡ, ಪಾಠವಂತೂ ಬೇಡವೇ ಬೇಡ, ಆ ವಯಸ್ಸೇ ಅಂತಹದ್ದು, ಕುತೂಹಲ ಹೆಚ್ಚಾಗಿ ಆಕರ್ಷಣೆಯನ್ನೇ ಪ್ರೀತಿ ಎಂದುಕೊಂಡು ವಿಲವಿಲನೆ ಒದ್ದಾದತೊಡಗಿದೆ. ಜೊತೆಗೆ ತಂಗಿಯ ಸಹಾಯ ಬೇರೆ! ಇನ್ನೇನು ಬೇಕು? ಸ್ವರ್ಗಕ್ಕೆ ಮೂರೇ ಗೇಣು! 

ಕಾಲೇಜು ೨ ಘಂಟೆಗೆ ಮುಗಿದ ಮೇಲೂ ಹೈಸ್ಕೂಲು ಬಿಡುವವರೆಗೂ ಬಸ್ ಸ್ಟ್ಯಾಂಡಿನಲ್ಲಿ ಕಾಯುವಿಕೆ(ಆಕೆ ೧೦ನೆ ತರಗತಿ ಓದುತ್ತಿದ್ದಳು!) ಪ್ರೀತಿಸಿದಮೇಲೆ ಕಾಯಲೇ ಬೇಕಲ್ವಾ? ಕಾದಿದ್ದೂ ಆಯ್ತು, ಕೈ ಕೈ ಹಿಡಿದು ಮಾತಾಡಿದ್ದು ಆಯ್ತು, ಬಸ್ ಸ್ಟ್ಯಾಂಡಿನ ಇಟ್ಟಿಗೆ ಕಲ್ಲುಗಳಲ್ಲೆಲ್ಲಾ ನಮ್ಮ  ಪ್ರೀತಿಯ ಮೂಕ ಸಾಕ್ಷಿಗಲಾದವು.

ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸಬೂಬು! ಇವತ್ತು ಕ್ರಿಕೇಟ್ ಆದ್ರೆ ನಾಳೆ ವಾಲಿಬಾಲ್, ನಾಡಿದ್ದು ಸ್ಪೆಷಲ್ ಕ್ಲಾಸ್! ಪ್ರೀತಿ ಪರೀಕ್ಷೆಯಲ್ಲಿ ಪಾಸಾದರೆ, ಫೆಲಾಗದ ಸರದಾರ ದ್ವಿತೀಯ ಪಿ ಯು ಸಿ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಫೇಲಾಗಿ ಹೋದ. ಎಲ್ಲಾ ಪ್ರೀತಿಯ ಮಹಿಮೆ ಸ್ವಾಮೀ. ಪ್ರೀತಿ ಏನನ್ನೂ ಬದಲಾಯಿಸಬಲ್ಲದು ಅಲ್ವಾ? ನನ್ನ ದಿನಚರಿಯೂ ಬದಲಾಯ್ತು. ದಿನಾ ಅವಳ ಧ್ಯಾನ ಶುರುವಾಯ್ತು.

ಹಾಗೂ ಹೀಗೂ ಒಂದು ವರ್ಷ ಕಳೆದು ಹೋಯ್ತು. ಬಸ್ ಸ್ಟ್ಯಾಂಡಿನ ಗೋಡೆ ಗಳಿಗಷ್ಟೇ ಸೀಮಿತವಾಗಿದ್ದ ನಮ್ಮ ಪ್ರೀತಿಯ ಸುದ್ಧಿ ನಮ್ಮೂರ ಜನರ ಬಾಯಲ್ಲಿ ಹರಿದಾದತೊದಗಿತ್ತು. ಕೆಲವರಿಗೆ ಖುಷಿಯಾದ್ರೆ ಕೆಲವರಿಗೆ ಹೊಟ್ಟೆ ಉರಿ. ಹಲವರಿಗೆ ಬಿಸಿ ಕಜ್ಜಾಯ ಸವಿದಂತ ಸುದ್ಧಿ!

ಹೆಣ್ಣಿನ ಮನಸ್ಸು ಚಂಚಲ ಅಂತ ಅದ್ಯಾವ ಬ್ರಹ್ಮಜ್ಞಾನಿ ನುಡಿದನೋ ಅವನೇ ಬಲ್ಲ! ಆದರೆ  ಬ್ರಹ್ಮವಾಕ್ಯ ಸತ್ಯವೂ ಆಯಿತು. ಬಣ್ಣದ ಮಾತಿಗೆ ಹೆಣ್ಣು ಮರುಳಾದಳು. ಮೋಟಾರು ಬೈಕಿಗೆ ಆಕೆ ಮನಸೋತಳು. ಅದೊಂದು ಕರಾಳ ದಿನ ಹದಿನಾರರ ಚಲುವೆ ನಲವತ್ತರ ಯುವಕ(?)ನೊಂದಿಗೆ ಪರಾರಿಯಾದಳು!!!!

ಆ ಕ್ಷಣದಲ್ಲಿ ನಾನು ಏನಾಗಿರಬೇಡ ನೀವೇ ಯೋಚಿಸಿ! ಎದೆ ಒಡೆದು ಹೋಗಿತ್ತು, ಕಣ್ಣೀರು ಬತ್ತಿ ಹೋಗಿತ್ತು, ಹಸಿವು ನಿದ್ದೆಗಳಂತೂ ಮರೆತೇ ಹೋಗಿದ್ದವು. ಶತ್ರುಗಳು(?) ತಮಗೆ ಸಿಗದಿದ್ದರೂ ಪರವಾಗಿಲ್ಲ ಕೊನೆಗೆ ಅವನಿಗೂ ಸಿಗಲಿಲ್ವಲ್ಲಾ ಅಂತಾ ದಿನಾ ಸಂತೋಷದಲ್ಲಿ ಹಾಲು ಕುಡಿದು ಕೇಕೆ ಹಾಕಿ ನಗುತ್ತಿದ್ದರು.

ಇಷ್ಟೆಲ್ಲಾ ಅನುಭವಿಸಿದ ಮೇಲೆ ಯಾವ ಮನುಷ್ಯನಿಗೆ ತಾನೇ ಬದುಕು ಬೇಕು ಸ್ವಾಮಿ? ಬದುಕೇ ದುಸ್ತರವಾಯ್ತು, ಕುಂತಲ್ಲಿ ನಿಂತಲ್ಲಿ ಅವಳದೆ ಯೋಚನೆಯಾಯ್ತು. ಅವಳ ಆ ಮೀನ ಕಣ್ಣುಗಳು, ಮೊದಲ ಬಾರಿ ಕಂಡ ತ್ರಿವರ್ಣದ ಬಳೆ ದರಿಸಿದ್ದ ಬೆಳ್ಳನೆ ಕೈ, ಕಿವಿಯಲ್ಲೇ ನಾದಗೈವ ಮಧುರವಾದ ಅವಳ ಧ್ವನಿ,  ಒಂದಾ ಎರಡಾ? ದಿನಕ್ಕೊಂದು ಕತೆ ಹೇಳುವ ಬಸ್ ಸ್ಟ್ಯಾಂಡು, ಅವಳು ಬರೆದು ಕೊಟ್ಟಿದ್ದ ಪ್ರೇಮ ಪತ್ರಗಳು, ಅವಳ ನೆನಪಿಗೆಂದೇ ಕೇಳಿ ಪಡೆದಿದ್ದ ಅವಳ ಕಾಲ್ಗೆಜ್ಜೆ ನನ್ನನ್ನು ನೋಡಿ ಅಣಕಿಸುತ್ತಿದ್ದವು!

ಹಾಗೂ ಹೀಗೂ ಒಂದು ವಾರ ಕಳೆಯುವುದರಲ್ಲಿ ಹೈರಾಣಾಗಿ ಹೋದೆ. ಗುಡ್ಡದ ಮೇಲಿನ ಮಾವಿನ ಮರದ ಬುಡದಲ್ಲಿ ನಾ ಸುರಿಸಿದ ಕಣ್ಣೀರು ಬಹುಶಃ ಆ ಮರದ ಜೀವಮಾನಕ್ಕೆ ಸಾಕಾಗುವಷ್ಟು ನೀರಾಯ್ತೇನೋ! ಆದರೂ ಮನಸ್ಸು ತಣ್ಣಗಾಗಲಿಲ್ಲ. ನನ್ನ ನೋವಿಗೆ ತಂಗಾಳಿಯೂ ಬೀಸದೆ  ಮೌನವಾಯ್ತು. ಹೃದಯರೋಧನೆ ನಿಲ್ಲಲಿಲ್ಲ!

ಕೊನೆಗೂ ಅಂತಿಮ ನಿರ್ಧಾರಕ್ಕೆ ಬಂದೆ. ಆತ್ಮಹತ್ಯೆ! ಹೌದು, ದಿನಾ ನೋವಿನಲ್ಲಿ ಉಸಿರಾಡಿ ಸಾಯುವುದಕ್ಕಿಂತ ಒಮ್ಮೆಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎಂಬ ದೃಢ ನಿಶ್ಚಯ ಮಾಡಿಕೊಂಡೆ.

ಆಗ ಶುರುವಾಗಿದ್ದು ನೋಡಿ ನಿಜವಾದ ಸಮಸ್ಯೆ. ಹೇಗೆ ಸಾಯುವುದು? ಬಲು ದೊಡ್ಡ ಪ್ರಶ್ನೆ. ನನಗೆ ಅನುಭವ ಇಲ್ಲ. ಇದೇ ಮೊದಲ ಪ್ರಯತ್ನ. ಹಾಗಾದ್ರೆ ಯಾರನ್ನು ಕೇಳುವುದು, ಆತ್ಮಹತ್ಯೆ ಮಾಡಿಕೊಂಡು ಯಾರಾದ್ರೂ ಬದುಕಿದ್ದರೆ ಅದು ಯಶಸ್ವೀ ಅಲ್ವಲ್ಲ. ಅದೂ ಇದೂ ಓದುವ ಆಸಕ್ತಿ ಈಗ ಕೆಲಸಕ್ಕೆ ಬಂತು ನೋಡಿ!  ಸರಿ, ಒಂದೊಂದೇ ರೀತಿಯ ಬಗ್ಗೆ ಆಲೋಚನೆ ಶುರು.
ರೇಲ್ವೆ ಟ್ರ್ಯಾಕ್ ಅಂತೂ ನಮ್ಮಲ್ಲಿಲ್ಲ, ಬೆಂಕಿ ಹಾಕಿಕೊಳ್ಳೋಣ ಅಂದ್ರೆ ಸೀಮೆಣ್ಣೆ ವಾಸನೆ ಥೂ! ಅದೂ ಬೇಡ. ವಿಷ (ಮೆಟಾಸಿಡ್) ಕುಡಿಯಬಹುದಲ್ವಾ? ಗದ್ದೆಗೆ ಔಷದಿ ಹೊಡೆಯುವಾಗಲೇ ತಲೆ ತಿರುಗುತ್ತದೆ, ಇನ್ನು ಕುಡಿದರೆ ತಲೆ ತಿರುಗುವುದಿಲ್ವಾ? ಅದೂ ಬೇಡ..........
ಹಾಗಾದ್ರೆ ನೇಣು ಹಾಕಿ ಕೊಳ್ಳುವುದೇ ಸರಿ! ಹೌದು, ಆದ್ರೆ ನನ್ನ ಭಾರ ತಡೆಯಲು ಆಗದೆ ಹಗ್ಗ ತುಂಡಾದರೆ? ಮತ್ತೆ ಕೆಳಗೆ ಬಿದ್ದು ಕೈ ಕಾಲು ಮುರಿದರೆ ಇನ್ನೊಂದು ಸಮಸ್ಯೆ.  ಛೆ! ಸಾಯಲೂ ಏನೂ ದಾರಿಯೇ ಇಲ್ವೆ?

ಆಗ ಹೊಳೆದದ್ದೇ ಹೊಳೆಗೆ ಹಾರುವುದು! ಅದೇ ಸರಿ, ಹೇಗಿದ್ದರೂ ಹತ್ತಿರದಲ್ಲೇ ಹೊಳೆ ಇದೆ. ಭೀಮನರೆ ಗುಂಡಿಯಲ್ಲಿ ಕಡಿಮೆ ಅಂದ್ರೂ ೫-೬ ಆಳು ಗುಂಡಿ ಇರಬಹುದು. ಅಪ್ಪನ ಭಯವಿದ್ದರೂ ಒಮ್ಮೆ ಈಜಲು ಹೋಗಿ ಅಪ್ಪನಲ್ಲಿ ಪೆಟ್ಟು ತಿಂದಿದ್ದು ಇನ್ನೂ ಮರೆತಿರಲಿಲ್ಲ. ಅಲ್ಲಿ ಹಾರಿದರೆ ಸಾವು ಗ್ಯಾರಂಟಿ!

ಹುಟ್ಟಿದ ಆರು ವರ್ಷದಿಂದ ಎಮ್ಮೆ ಬಾಲ ಹಿಡಿದು ಈಜು ಕಲಿತ ಹೊಳೆ ಅದು. ಏನೋ ಒಂತರ ತಾಯಿ ಪ್ರೀತಿ, ಭಾಂಧವ್ಯ. ಅಂದಿನಿಂದ ಇಂದಿನವರೆಗೂ ತನ್ನ ಒಡಲಲ್ಲಿ ನಮ್ಮನ್ನು ಆಡಿಸಿಕೊಂಡ ತಾಯಿಯ ಮಮತೆ ಆ ಹೊಳೆಯದು. ಅಲ್ಲೇ ಹೊಳೆಯ  ತಿರುವು ಇರುವಲ್ಲಿ ಭೀಮನರೆ ಗುಂಡಿ ಇದೆ. ಭೀಮನರೆ ಗುಂಡಿ ಅಂದರೆ ಆ ಹೊಳೆಯಲ್ಲೇ ಒಂದು ಭಯಾನಕ ಜಾಗ! ಮಕ್ಕಳಾದ ನಮಗೆ ಅಲ್ಲಿ ಈಜಲು ನಿಷೇಧ! ಅಪಾಯಕಾರಿ ಜಾಗ ಎಂದು ಅಲ್ಲಿ ಈಜಲು ಎಲ್ಲರೂ ಹೆದರುತ್ತಿದ್ದರು. 

ಅಮ್ಮ, ಬಂದುಗಳು, ಆ ಹುಡುಗಿ ಎಲ್ಲವೂ ಹಳೆ ಕಪ್ಪು ಬಿಳುಪು ಚಿತ್ರದಂತೆ ಮನದಲ್ಲಿ ನಾ ಮುಂದು ತಾ ಮುಂದು ಎನ್ನುತ್ತಾ ನುಗ್ಗ ತೊಡಗಿದವು. ನನ್ನ ಶವದ ಮುಂದೆ ಅಮ್ಮ ಅಳುತ್ತಿರುವಂತೆ ಭಾಸವಾಯ್ತು. 

ನನ್ನ ಶವ ನೋಡಲು ಆ ಹುಡುಗಿಯೂ ಬರಬಹುದೇ? ಬಂದರೆ ಯಾಕೆ ಹೀಗೆ ಮಾಡಿದೆ ಅಂತ ಕೇಳಲು ತಂಗಿಗೆ ಹೇಳಿ ಬರಬೇಕಿತ್ತು, ಛೆ! ಮೊದಲು ನೆನಪೇ ಆಗಲಿಲ್ಲ. ಈ ವಾಪಾಸು ಹೋಗಿ ಹೇಳಿ ಬರಲು ಸಾಧ್ಯವಿಲ್ಲ. ಇರಲಿ, ಅವಳು ಚನ್ನಾಗಿರಲಿ ಬಿಡಿ.
ಹೊಳೆಯ ದಂಡೆಯ ಮೇಲೆ ನಿಂತು ಕೆಳಗೆ ನೋಡಿದಾಗ ಒಮ್ಮೆ ಭಯವಾಗಿ ಮೈ ಜುಮ್ ಎಂದಿತು. ಸಾಯುವವನಿಗೆ ಭಯ ಯಾಕೆ? ಅವಳನ್ನೇ ನೆನೆಯುತ್ತ ಧೈರ್ಯ ಮಾಡಿ ನೀರಿಗೆ ಹಾರೇ ಬಿಟ್ಟೆ! 

ಸಮಸ್ಯೆ ಶುರು ಆಗಿದ್ದೇ ಇಲ್ಲಿ ನೋಡಿ. ನೀರಿಗೆ ಹಾರಿ ತಳಭಾಗಕ್ಕೆ ಹೋದದ್ದೇನೋ ಸರಿ. ಉಸಿರು ಬಿಗಿಹಿಡಿದಂತೆ  ನನ್ನ ಅಪ್ಪಣೆ ಮೀರಿ ಕೈ ಕಾಲುಗಳು ಬಡಿಯಲಾರಂಬಿಸಿದವು! ಉಸಿರು ನಿಲ್ಲುವ ಮೊದಲೇ ಬಡಿಯುತ್ತಾ ಬಡಿಯುತ್ತಾ ಮೇಲೇರಿ ಬಂದೆ. ಛೆ! ಮಿಸ್ಸಾಗಿ ಹೋಯ್ತು. ಪರವಾಗಿಲ್ಲ, ಮತ್ತೊಮ್ಮೆ ಹಾರಿದೆ. ಎಷ್ಟೇ ಕಷ್ಟಪಟ್ಟರೂ ಊಂ ಹ್ಞೂಂ.........ಆಗಲೇ ಇಲ್ಲ! ಮತ್ತೆ ಮೇಲೆ ಬಂದೆ! ಆದರೆ ಪ್ರಯತ್ನ ನಿಲ್ಲಿಸುವ ಮಗನಲ್ಲ ನಾನು. ಇವತ್ತು ಸಾಯಲೇ ಬೇಕು. ಮತ್ತೆ ಹಾರಿದೆ ನೀರಿಗೆ. ಅದೇ ಪುನರಾವರ್ತನೆ. ಸಾವು ಹತ್ತಿರ ಸುಳಿಯುತ್ತಿಲ್ಲ. 

ಇದರ ಮಧ್ಯೆ ಯಾಕೆ ಹೀಗೆ ಎನ್ನುವ ಕುತೂಹಲದಲ್ಲಿ ಸಾಯಲು ಇದ್ದ ಕಾರಣ ಮರೆತೇ ಹೋಗಿತ್ತು, ಸಾಯಲು ಬಂದವ ಮುಳುಗದಿರಲು ಕಾರಣ ಹುಡುಕುತ್ತಾ ಸಂಶೋಧನೆ ಮಾಡತೊಡಗಿದೆ. ಹೆಚ್ಚು ಕಡಿಮೆ ೨೦-೨೨ ಬಾರಿ ಹಾರಿದರೂ ಯಾಕೆ ಮುಳುಗಲಿಲ್ಲ? ಈಜು ಕಲಿತಿದ್ದೇ ಇದಕ್ಕೆ ಕಾರಣ. ಒಂದೊಮ್ಮೆ ಈಜಲು ಬರದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂಬ ಸತ್ಯ ಗೋಚರವಾಯ್ತು. ಆತ್ಮಹತ್ಯೆ ಮರೆತು ಹೊಸ ವಿಷಯದ ಜ್ಞಾನೋದಯವಾದ ಖುಷಿಯಲ್ಲಿ ನಗುನಗುತ್ತಾ ಮನೆಯ ಕಡೆ ಹೆಜ್ಜೆ ಹಾಕಿದ್ದೆ.

ಅಂತೂ ಇಂತೂ ಆತ್ಮಹತ್ಯೆಯ ಕೊನೆ ಪ್ರಯತ್ನವೂ ಹೀಗಾಗಿ ಹೋಯ್ತು. ಜೊತೆಗೆ ಆತ್ಮಹತ್ಯೆಯ ಯೋಚನೆಯೂ ಕೊನೆಯಾಯ್ತು. ಅಂದಿನಿಂದ ಹೊಸ ಜೀವನ ಶುರು ಆಯ್ತು. ಅಂದೇನಾದ್ರೂ ಆತ್ಮಹತ್ಯೆ ಯಶಸ್ವಿಯಾಗಿದ್ದರೆ ಇಂದು ನೀವು ಇದನ್ನು ಓದಲು ಸಾಧ್ಯವಿತ್ತಾ?


ಈಗ ನೀವೇ ಹೇಳಿ, ಆತ್ಮಹತ್ಯೆ ಸುಲಭವಾ? ಸಾಯುವುದು ಅಂದ್ರೆ ಎಷ್ಟು ಕಷ್ಟ ಅಲ್ವಾ?:- ಬಹಳ ದಿನಗಳ ನಂತರ ಬ್ಲಾಗಿನತ್ತ ತಲೆ ಹಾಕಿದ್ದೇನೆ. ಇದು ನನ್ನ ಜೀವನದಲ್ಲಿ ನಡೆದ ನಿಜವಾದ ಘಟನೆ! ಅದನ್ನೇ ನಿಮ್ಮ ಮುಂದೆ ಸಂಕೋಚವಿಲ್ಲದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಸಹಿಸಿಕೊಳ್ಳುವ ಜವಾಬ್ಧಾರಿ ನಿಮ್ಮದು!

(ಆಗೊಮ್ಮೆ ಈಗೊಮ್ಮೆ ಆಕೆಯನ್ನು ಮನ ನೆನೆಯುವುದು ಸುಳ್ಳಲ್ಲ!)


Monday, November 7, 2011

ಅಮ್ಮನ ಮಡಿಲಿಗೆ

ಇತ್ತೀಚಿಗೆ ಕೆಲಸದಲ್ಲಿ ಬಹಳ ಬ್ಯುಸಿ. ಹಬ್ಬದ ದಿನಗಳು, ಮದುವೆಯ ದಿನಗಳು ಎಂದರೆ ನಮ್ಮಂತ ಹೋಟೆಲ್ ಉಧ್ಯಮದವರಿಗೆ ಎಲ್ಲಿಲ್ಲದ ಕೆಲಸ. ಹಗಲು ರಾತ್ರಿ ಪುರುಸೊತ್ತೇ ಇರಲ್ಲ!
ನಿಮ್ಮೆಲ್ಲರ ಬ್ಲಾಗ್ ಓದಿದರೂ ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. 

ಇದ್ದಿದ್ದರಲ್ಲಿ ಒಂದು ತಿಂಗಳ ರಜೆ ತೆಗೆದುಕೊಂಡು ಊರಿಗೆ ಹೊರಟಿದ್ದೇನೆ. ಅದೇ ಸಂತೋಷ. ಜೊತೆಗೆ ಒಂದು ತಿಂಗಳು ದೆಹಲಿಯ ಚಳಿಗಾಲವನ್ನು ಮಿಸ್ ಮಾಡಿಕೊಳ್ಳುವ ಬೇಸರ :( 

ನಿಮ್ಮೆಲ್ಲರೊಂದಿಗೆ ಇನ್ನೊಂದು ವಿಷಯವನ್ನು ಹಂಚಿಕೊಳ್ಳಲೇ ಬೇಕು. 

ನಾನು ನಮ್ಮ ಬ್ರಹ್ಮಚಾರಿ ಸಂಘಕ್ಕೆ ರಾಜಿನಾಮೆ ಕೊಡಲು ನಿರ್ಧರಿಸಿದ್ದೇನೆ!

ಹೌದು. ಇದೇ ತಿಂಗಳು ನನ್ನ ಬಾಳ ಸಂಗಾತಿಯಾಗುವ ಸುಪ್ರಿಯಾ ಳೊಂದಿಗೆ ನನ್ನ ನಿಶ್ಚಿತಾರ್ಥ. ನೀವೆಲ್ಲರೂ ನಮ್ಮನ್ನು ಹರಸುತ್ತೀರಾ ತಾನೇ? ನಿಶ್ಚಿತಾರ್ಥ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ನಿಮ್ಮನ್ನು ಕರೆಯುವುದಿಲ್ಲ! ಮದುವೆಗೆ ಖಂಡಿತಾ ಕರೆಯುತ್ತೇನೆ.Tuesday, September 27, 2011

ಇದೇ ರೀತಿ.....


ಪ್ರಕಾಶಣ್ಣ ಬರೆದ ರೀತಿ........  ಮತ್ತು ಅದನ್ನು ಮುಂದುವರೆಸಿ ದಿನಕರ್ ಸರ್ ಬರೆದ ಈ ರೀತಿ........  ಕಥೆಯನ್ನು ನಾನು ಮುಂದುವರೆಸುವ ಒಂದು ಸಣ್ಣ ಅಧಿಕಪ್ರಸಂಗತನ ಮಾಡಿದ್ದೇನೆ :)  'ONE MESSAGE RECEIVED.............!!!!!'

ಯಾವುದೋ MESSAGE ಬಂದಿದೆ.
ಯಾರದಿರಬಹುದು?

ಏನೋ ಇದೆ, INBOX ಖಾಲಿ ಆಗಿದೆ, SENT MAIL ಖಾಲಿ ಇದೆ, CALL LOG ಲ್ಲಿ ಯಾವ CALL ಗಳ ಸುಳಿವಿಲ್ಲ! 
ಹಾಗಾದರೆ ಏನು ಇದರ ಅರ್ಥ? ಮನಸ್ಸು ಕಹಿಯನ್ನು ನೆನೆಯತೊಡಗಿತು. ಯೋಚಿಸುತ್ತಿದ್ದಂತೆಯೇ ಮತ್ತೊಮ್ಮೆ ಮೊಬೈಲ್ "ಟೀವ್.... ಟೀವ್......" ಎಂದು ಹಾಡಿತು.

ನೋಡುತ್ತಿದ್ದಂತೆ ಕಾತುರ ತಡೆಯಲಾಗಲಿಲ್ಲ! ಯಾರ MESSAGE ಇದು? ನಿನ್ನೆ ರಾತ್ರಿ, ಇಂದು ಬೆಳಿಗ್ಗೆ ಯಾರಿಗೋ  MESSAGE  ಕಳಿಸುತ್ತಿದ್ದರು, ಅವರದೇ ಇರಬಹುದೇ?
ತೆಗೆದು ನೋಡಿಬಿದಲೇ?
ಛೆ! ತಪ್ಪು! ಹಾಗೆಲ್ಲ ಅನುಮಾನ ಪಟ್ಟು ಇವರ ಮೊಬೈಲ್ ತೆಗೆದು ನೋಡಬಾರದು!
ಆದರೆ...........
ಕುತೂಹಲ............!

ಅದು ತಣಿಯಲಿಲ್ಲ...........! 
ಮನಸ್ಸು ಕೇಳಲಿಲ್ಲ..........!

ಏನಾದರೂ ಅಗಲಿ ನೋಡೇ ಬಿಡುವುದು. ಇಷ್ಟು ಬೇಗ ಸ್ನಾನ ಮುಗಿಸಿ ಬರಲಾರರು. ಎಂದು ಆಲೋಚಿಸುತ್ತ ನಡುಗುವ ಕೈಗಳಿಂದ ಮೊಬೈಲ್ ಎತ್ತಿಕೊಂಡೆ.

ಎದೆ ಡವಗುಟ್ಟುತ್ತಿತ್ತು!
ಎರಡು Massage  ಗಳು!
ತೆರೆಯುತ್ತಿದ್ದಂತೆಯೇ..................
ಮೊದಲನೆಯದು ಯಾವುದೊ ಜಾಹಿರಾತಿನ SMS ಆಗಿತ್ತು............!


ನೆಮ್ಮದಿಯ ನಿಟ್ಟುಸಿರೊಂದು ಹೊರಟಿತು.


ಆದರೆ ಅದು ಹೆಚ್ಚು ಹೊತ್ತು ಇರಲಿಲ್ಲ! 


ಎರಡನೆಯ SMS ನೋಡುತ್ತಿದ್ದಂತೆಯೇ ಶಾಕ್.........!

ಅಲ್ಲಿ ಕಂಡಿದ್ದೇನು? 

SWEET HEART........!

ಒಮ್ಮೆಲೇ ಗುಡುಗು ಸಿಡಿಲು ಬಿರುಗಾಳಿ ಬಡಿದ ಅನುಭವ!
ಕೋಪ ಇನ್ನೂ ಹೆಚ್ಚಾಯಿತು.  ಎಷ್ಟು ಧೈರ್ಯ ಇವರಿಗೆ? ನಾನು ಬಂದ ಮೇಲೂ ಮೊಬೈಲಿನಲ್ಲಿ ಈ ತರ ಹೆಸರು ಇಟ್ಟುಕೊಂಡಿದ್ದಾರಲ್ಲ . ಇವರಿಗೆ ಯಾವುದೇ ಭಯವಿಲ್ಲವೇ? 

ಯಾರು ಈ SWEET HEART, ಅವಳೇ ಇರಬಹುದೇ? ನನ್ನಲ್ಲಿ ಏನೂ ಇಲ್ಲ ಎಂದು ಹೇಳಿದ್ದರಲ್ಲ, ಹಾಗಾದರೆ ಇವರಿಗೂ ಅವಳಿಗೂ ಏನೋ ಸಂಬಂಧವಿದೆ. ನನಗೆ ತಿಳಿಯಲೇ ಇಲ್ಲ. ನಾನು ಮೋಸ ಹೋದೆ!

ಏನು MESSAGE ಕಳಿಸಿರಬಹುದು? ಕಣ್ಣೀರು ಕಣ್ಣ ತುದಿಯವರೆಗೂ ಬಂದಿತ್ತು, ಅಕ್ಷರಗಳು ಮಂಜಾಗಿ ಕಾಣುತ್ತಿವೆ, 

'OK DEAR, THEN SEE YOU IN OFFICE!'

ಕಣ್ಣೀರು ಒರೆಸಿಕೊಳ್ಳುತ್ತಾ MESSAGE DELETE ಮಾಡಿ ಪಟಪಟನೆ ಅವಳ ನಂಬರ್ ಬರೆದುಕೊಂಡು ಮೊಬೈಲನ್ನು ಯಥಾಸ್ಥಾನದಲ್ಲಿಟ್ಟು ಮಂಚದ ಮೇಲೆ ಬೋರಲಾಗಿ ಮಲಗಿಕೊಂಡೆ.

ಪತಿರಾಯ ಸ್ನಾನ ಮುಗಿಸಿ ಸಿಳ್ಳು ಹಾಕುತ್ತ ಕನ್ನಡಿಯ ಮುಂದೆ ಸಿಂಗರಿಸಿಕೊಳ್ಳುತ್ತಿದ್ದರು. ವಾರೆಗಣ್ಣಿನಿಂದ ಅವರನ್ನೇ ನೋಡುತ್ತಿದ್ದ ನನಗೆ ಕೋಪ ಉಕ್ಕಿ ಬರುತ್ತಿತ್ತು.

ಮೋಸಗಾರ..............!

ನಂಬಿ ಬಂದ ನನಗೆ ಮೋಸ ಮಾಡಿದರು..............!
ದುಃಖ ಉಮ್ಮಳಿಸಿ ಬರುತ್ತಿತ್ತು.

'ಸರಿ ಹಾಗಾದ್ರೆ, ಮದುವೆಯ ಗಡಿಬಿಡಿಯಲ್ಲಿ ಮೂರು ದಿನ OFFICEಗೇ ಹೋಗಲಿಲ್ಲ. ನಾನು OFFICE ಗೆ ಹೊರಡುತ್ತೇನೆ. ಬೇಗ ತಿಂಡಿ ತಂದು ಕೊಡ್ತೀಯ PLEASE...........'

ಕೇಳುವುದು ನೋಡು, ಇವರ ಮನೆ ಆಳು ನಾನು..............

ಇರಲಿ, ಇವತ್ತು ಎರಡರಲ್ಲಿ ಒಂದು ತೀರ್ಮಾನ ಆಗಲೇ ಬೇಕು, ನಾನೋ ಇಲ್ಲ ಅವಳೋ ಅಂತ............

ತಂದು ಕೊಟ್ಟ ತಿಂಡಿಯನ್ನು ಬಕಾಸುರನಂತೆ ತಿಂದು ಮುಗಿಸಿದರು.
ಹೊರಡುತ್ತಾ ಹೇಳಿದರು.............

'ಸಂಜೆ ಬೇಗ ಮನೆಗೆ ಬರುತ್ತೇನೆ, ಸಿನೆಮಾ ನೋಡಲು ಹೋಗೋಣ, ಆಗಬಹುದಾ?'

ಓಹ್ಹೋ..............

ಬೆಣ್ಣೆ ಹಚ್ಚುವ ಬುದ್ಧಿಯೂ ಇದೆ, ಇರಲಿ ಬನ್ನಿ, ಯಾವ ಸಿನೆಮಾ ಅಂತ ತೀರ್ಮಾನ ಆಗಿರುತ್ತದೆ.

ಹ್ಞೂಂ.............., ನಿಧಾನಕ್ಕೆ ಹ್ಞೂಂಗುಟ್ಟಿದೆ ನೋವನ್ನು ತೋರ್ಪಡಿಸದೆ.


ಈಗ ನಿಜವಾದ ಚಡಪಡಿಕೆ ಆರಂಭವಾಗಿತ್ತು, ಏನು ಮಾಡುವುದು? ನಾನು ಮೋಸ ಹೋದೆನಲ್ಲ, ಮದುವೆಯಾದ ಮೊದಲದಿನದಿಂದಲೇ ಅನುಮಾನಕ್ಕೆ ಎಡೆ ಮಾಡಿಕೊಟ್ಟರಲ್ಲ?

ನಮ್ಮಿಬ್ಬರನ್ನೇ ಬಿಟ್ಟು ಇವರ ಅಮ್ಮ ಮತ್ತು ಅಪ್ಪ ನಗರದ ಹೊರವಲಯದಲ್ಲಿರುವ GUEST HOUSE ನಲ್ಲಿ ಉಳಿದುಕೊಂಡಿದ್ದಾರೆ. ಅವರಿದ್ದಿದ್ದರೆ ಅವರನ್ನೇ ದಬಾಯಿಸಿ ಅವರ ಮಗನ ಲೀಲೆಗಳನ್ನು ತೋರಿಸುತ್ತಿದ್ದೆ. ಛೆ! ಏನು ಮಾಡಲಿ? ಏನಾದವು ನನ್ನ ಆದರ್ಶಗಳೆಲ್ಲ?

ಅಮ್ಮನಿಗೆ ಹೇಳಿಬಿಡಲೇ? 
ಉಪಯೋಗವಿಲ್ಲ, ಅಮ್ಮ ಏನು ಹೇಳಿಯಾಳು............

ಆದರೂ.........

ಅಮ್ಮನಿಗೆ ಹೇಳುವುದೇ ಸರಿ, ಅವಳೇ ಈ ಸಮಯದಲ್ಲಿ ನನಗೆ ಸ್ನೇಹಿತೆ.........

ಎಂದು ಯೋಚಿಸುತ್ತ ಅಮ್ಮನಿಗೆ PHONE ಮಾಡಿದೆ..........

"ಹಲೋ......."

ಅತ್ತ ಕಡೆಯಿಂದ ಅಮ್ಮನ ಧ್ವನಿ, 

"ಹಲೋ.........ಅಮ್ಮ ನಾನಮ್ಮ........"

ಅಮ್ಮನ ಸ್ವರ ಕೇಳುತ್ತಿದ್ದಂತೆಯೇ ಕಣ್ಣೀರ ಕಟ್ಟೆ ಒಡೆದಿತ್ತು, ಬಿಕ್ಕಿ ಬಿಕ್ಕಿ ಅಳುತ್ತಿದ್ದ ನನ್ನ ಧ್ವನಿ ಕೇಳಿ ಅಮ್ಮ ಗಾಭಾರಿಯಾಗಿದ್ದಳು, 

"ಯಾಕೆ ಮಗಳೇ ಅಳುತ್ತಿದ್ದೀಯಾ? ಏನಾಯ್ತು ಕಂದಾ?"

"ಅಮ್ಮ..............."

ಮಾತೇ ಹೊರಡುತ್ತಿಲ್ಲ!

"ಯಾಕೆ ಮಗಳೇ, ಏನಾಯ್ತೆ, ಅಲ್ಲಿ ಯಾರಾದ್ರೂ ಏನಾದ್ರೂ ಅಂದ್ರಾ?"

"ಇಲ್ಲಮ್ಮ, ಯಾಕೋ ನಿನ್ನ ನೆನಪಾಯ್ತು ಅದಕ್ಕೆ PHONE ಮಾಡಿದೆ"

"ಯಾಕೆ ಮಗಳೇ ಸುಳ್ಳು ಹೇಳ್ತೀಯ, ನಿನ್ನ ಹೆತ್ತಮ್ಮ ನಾನು, ಒಮ್ಮೆಯೂ ನೀನು ಅತ್ತ ನೆನಪಿಲ್ಲ. ಈಗ ಯಾಕೆ? ಏನಾಯ್ತು ಅಂತ ಹೇಳು"

ಅಮ್ಮನ ಪ್ರೀತಿಯ ಮಾತಿಗೆ ಕರಗಿ ಹೋದೆ, ಈ ಪ್ರೀತಿಯನ್ನು ನಾನೆಂದೂ ಅರ್ಥ ಮಾಡಿಕೊಳ್ಳಲಿಲ್ಲ, ನನ್ನ ಹಠ ಪ್ರೀತಿಯ ಅಪ್ಪ ಅಮ್ಮನನ್ನು ಅರ್ಥ ಮಾಡಿಕೊಳ್ಳಲೇ ಬಿಡಲಿಲ್ಲ! ಛೆ! ಎಂತಹ ಪಾಪಿಷ್ಟೆ ನಾನು?

ಅಮ್ಮನಿಗೆ ನಡೆದ ಎಲ್ಲಾ ಸಂಗತಿಗಳನ್ನೂ ವಿವರಿಸಿದೆ...........

"ನೋಡು ಮಗಳೇ, ನಿನ್ನಷ್ಟು ಓದಿಕೊಂಡ ವಿಧ್ಯಾವಂತೆ, ಬುದ್ಧಿವಂತೆ ನಾನಲ್ಲ. ಆದರೆ ಜೀವನದ ಎಲ್ಲ ಆಗುಹೋಗುಗಳನ್ನೂ ಅನುಭವಿಸಿದ್ದೇನೆ. ಆ ಅನುಭವದಲ್ಲೇ ಒಂದೆರೆಡು ಮಾತು ಹೇಳ್ತೇನೆ ಕೇಳು, ನಿನಗೆ ಮದುವೆಯಾಗಿ ಎರಡನೆಯ ದಿನ. ಇಷ್ಟು ಬೇಗ ಗಂಡನ ಜೊತೆ ಮುನಿಸು ಕಟ್ಟಿಕೊಳ್ಳಬೇಡ. ಗಂಡು ಯಾವತ್ತಿದ್ದರೂ ಗಂಡಸೇ, ಹೊರಗೆ ದುಡಿಯುವ ಅವರಿಗೆ ಎಲ್ಲರೊಂದಿಗೂ ಒಡನಾಟ ಬೇಕು. ಇಷ್ಟಕ್ಕೂ ನೀನು ಏನು ನೋಡಿದೆ ಅಂತ ಅಷ್ಟು ಅನುಮಾನ ಪಡ್ತೀಯ? ಕೇವಲ MESSAGE ನೋಡಿದ ಮಾತ್ರಕ್ಕೆ ಅಲ್ಲಿ ಏನೋ ನಡೆಯುತ್ತಿರಬಹುದೆಂದು ಅನುಮಾನ ಪಡುವುದು ಸರಿಯಲ್ಲ. ಮೊದಲು ನೀನು ನೋಡಿದ್ದನ್ನು ಪ್ರರೀಕ್ಷಿಸಿ ನೋಡು. ಒಂದು ವೇಳೆ ನಿಜವೇ ಆಗಿದ್ದಲ್ಲಿ ನಿನಗದು ಪರೀಕ್ಷೆಯ ಕಾಲ. ಗಂಡನ ಪ್ರೀತಿಯನ್ನು ಗೆಲ್ಲು. ಹೆಂಗಸರಾದ ನಾವು ಸಹನೆ ತಾಳ್ಮೆಯಿಂದ ವರ್ತಿಸಬೇಕು.

ಗಂಡನಾದವನಿಗೆ ಮನೆಯಲ್ಲಿ ಪ್ರೀತಿ ಸಿಗಲಿಲ್ಲ ಅಂದರೆ ಆ ಪ್ರೀತಿಯನ್ನು ಹೊರಗೆ ಹುಡುಕುವ ಮನಸ್ಸು ಮಾಡುತ್ತಾನೆ. 

ಅದಕ್ಕೆ ಎಂದಿಗೂ ನಿನ್ನ ಕಯ್ಯಾರೆ ಅವಕಾಶ ಕೊಡಬೇಡ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಮ್ಮೆ ಚನ್ನಾಗಿ ಯೋಚಿಸು."

"ಹಾಗೆ ಆಗ್ಲಮ್ಮಾ" ಎಂದಷ್ಟೇ ಹೇಳಿ PHONE ಇಟ್ಟೆ.

ಅಮ್ಮನ ಮಾತುಗಳೇ ನನ್ನ ತಲೆಯಲ್ಲಿ ಕೊರೆಯುತ್ತಿದ್ದವು.

ಹೌದು............

ನಾನು ತಪ್ಪು ಮಾಡಿದೆ, ಅನುಮಾನ ಒಳ್ಳೆಯದಲ್ಲ. 
ಹಾಲಿನಂತ ಸಂಸಾರದಲ್ಲಿ ಹುಳಿ ಹಿಂಡುವುದು ಈ ಅನುಮಾನ
ಚಂದದ ಪ್ರೇಮಿಗಳು ಬೆರಾಗುವುದಕ್ಕೆ ಕಾರಣ ಈ ಅನುಮಾನ
ಹೆಚ್ಚು ಯಾಕೆ, ಸೀತೆಯ ಅಗ್ನಿಪರೀಕ್ಷೆಗೂ ಕಾರಣ ಈ ಅನುಮಾನವೇ ಅಲ್ಲವೇ?

ನನ್ನ ಮನಸ್ಸಿನಲ್ಲಿ ಮೂಡಿದ ಅನುಮಾನವನ್ನು ನಾನೇ ಪರಿಹರಿಸಿಕೊಳ್ಳಬೇಕು 

ಆದರೆ ಹೇಗೆ?

ಬೆಳಗ್ಗಿನ ತಿಂಡಿ ಮುಗಿಸಿ ಟೀವಿ ನೋಡುತ್ತಾ ಕುಳಿತಿದ್ದೆ.........
ಮನೆಯಲ್ಲಿ ಏನೂ ಕೆಲಸವಿರಲಿಲ್ಲ. ಯಾಂತ್ರಿಕವಾಗಿ ಟೀವಿ ನೋಡುತ್ತಾ ಆಲೋಚನೆಯಲ್ಲಿ ಮುಳುಗಿ ಹೋದೆ.

ಟ್ರಿಣ್ ಟ್ರಿಣ್........
ಟ್ರಿಣ್ ಟ್ರಿಣ್..........

ಮನೆಯ PHONE ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು.
ಅತ್ತ ಕಡೆಯಿಂದ ಅವರ ಧ್ವನಿ,

"ಪುಟ್ಟಣ್ಣಿ........., ಯಾಕೆ ನಿನ್ನ ಮೊಬೈಲ್ ಎತ್ತುತ್ತಿಲ್ಲ? ಅಡುಗೆ ಮನೆಯಲ್ಲಿದ್ಯಾ?"

ಹೆಂಗಸರೆಂದರೆ ಅಡುಗೆ ಮನೆಗೆ ಮಾತ್ರ ಸೀಮಿತವೇ?
"ಹ್ಞಾಂ.........ಹೌದು............"

ಮಾತಾಡುವ ಮನಸ್ಸಿಲ್ಲದೆ ಸಮಯಕ್ಕೊಂದು ಸುಳ್ಳು ಹೇಳಿದೆ. 

"ಏನಿಲ್ಲ, ನಾನು ಊಟಕ್ಕೆ ಮನೆಗೆ ಬರ್ತೇನೆ, ಜೊತೆಗೆ ನನ್ನ SWEET HEART ಕೂಡ ಬರ್ತಾ ಇದ್ದಾಳೆ"

ಇವರಿಗೆ ತಲೆ ಸರಿ ಇಲ್ವಾ?
ಎಷ್ಟು ಧೈರ್ಯ?

ನನ್ನ ಎದುರಿಗೇ ಅವರ SWEET HEART ಅನ್ನೋ ಹೆಸರು? ಆ ಹಾಳಾದವಳು ಬೇರೆ ಬರಬೇಕಾ? SWEET HEART ಅಂತೆ SWEET HEART.......!

"ಹಾಗೆ ಅಪ್ಪ ಕೂಡ ಬರ್ತಾ ಇದ್ದಾರೆ........... "

ಅಂದರೆ.........
ಓ ದೇವರೇ,

ಇದೆಂತ ಸಂಸಾರವಪ್ಪ, ಇವರ ಅಪ್ಪನಿಗೆ ಗೊತ್ತಿದ್ದೂ ನನ್ನ ಜೀವನ ಹಾಳುಗೆಡವಿದರೆ????

"ಹಲೋ, ಕೇಳಿಸ್ತಾ? ನೀನು ಊಟಕ್ಕೆ ಏನಾದರೂ ಅಡುಗೆ ಮಾಡು, ಅಪ್ಪನಿಗೆ ಕೆಲಸದವರ ಅಡುಗೆ ಹಿಡಿಸುವುದಿಲ್ಲ. ಆಯ್ತಾ, ಇಡ್ತೇನೆ. ಮಧ್ಯಾಹ್ನ ಸಿಗ್ತೇನೆ, ಬೈ ಬೈ............"

ಇಷ್ಟು ಕೆಲಸದವರಿದ್ದೂ ನಾನೇ ಅಡುಗೆ ಮಾಡಬೇಕಂತೆ, ಯಾಕೆ ಇವರಿಗೆ ಕೆಲಸದವರು ಮಾಡಿದ ಅಡುಗೆ ಗಂಟಲ ಕೆಳಗೆ ಇಳಿಯುವುದಿಲ್ಲವೇ?

ಇರಲಿ, ಎಲ್ಲರೂ ಬರಲಿ, ಮಾವನವರ ಮುಂದೆಯೇ ತೀರ್ಮಾನವಾಗಲಿ, ನಾನು ಇನ್ನು ಈ ಮನೆಯಲ್ಲಿ ಇರಲಾರೆ. ಅಮ್ಮನ ಮನೆಗೆ ಹೋಗುತ್ತೇನೆ. ನನ್ನ ಕಾಲಮೇಲೆ ನಾನು ನಿಂತುಕೊಳ್ಳುತ್ತೇನೆ.

ನನಗೆ ಆಲೋಚನೆ ಶುರುವಾಯ್ತು. ಹೇಗಿರಬಹುದು ಮಿಟುಕಲಾಡಿ, ನನಗಿಂತಾ ಚನ್ನಾಗಿದ್ದಾಳ? ಮದುವೆಗೂ ಮೊದಲೇ ಹೇಳಬಹುದಿತ್ತಲ್ಲಾ? ನನ್ನನ್ನು ಮದುವೆಯಾಗಿ ನನ್ನ ಜೀವನ ಯಾಕೆ ಹಾಳು ಮಾಡಿದರು?

ಅಡುಗೆಯ ಕೆಲಸವನ್ನೆಲ್ಲಾ ಮುಗಿಸಿ ಬರುವಷ್ಟರಲ್ಲಿ ಕರೆಗಂಟೆ ಶಬ್ದ ಮಾಡಿತು, 
ಅವರೇ ಇರಬೇಕು. ನನಗೆ ಕುತೂಹಲ ತಡೆಯಲಾಗಲಿಲ್ಲ, ಹೇಗಿರಬಹುದು ಅವಳು? 

"ರಾಮೂ....... ಯಾರು ನೋಡು?" ಕುತೂಹಲವನ್ನು ತಡೆದುಕೊಂಡು ಕೆಲಸದವನಿಗೆ ಹೇಳಿದೆ............

ಬಾಗಿಲಲ್ಲಿ ನಗುಮುಖದ ಸುಂದರಾಂಗ ನಿಂತಿದ್ದರು!

ಅವರ ಆ SWEET HEART ಗಾಗಿ ಕಣ್ಣಾಡಿಸಿದೆ, ಮಾವಯ್ಯ ಕಾರಿನಿಂದ ಇಳಿಯುತ್ತಿದ್ದರು,

ಅವರ ಜೊತೆಗೆ...........

ಹಿಂದಿನಿದ ಬಂಗಾರದ ಬಣ್ಣದ ರೇಷ್ಮೆ ಸೀರೆ ಉಟ್ಟ ಮಹಾ ಲಕ್ಷ್ಮಿಯಂತೆ ಅತ್ತೆ ನಡೆದು ಬರುತ್ತಿದ್ದರು!

ದಾರಿಯುದ್ದಕ್ಕೂ ಕಣ್ಣರಳಿಸಿ ನೋಡಿದೆ ಬೇರಾರೂ ಕಾಣಲಿಲ್ಲ..............!

ಎಲ್ಲಿ ಇವರ SWEET HEART? ಬರಲಿಲ್ಲವೇ?
ಅಥವಾ ಹಿಂದಿನಿಂದ ಬರುತ್ತಿದ್ದಾಳೆಯೇ?

ಎಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಕುಳಿತರು.

"ನೀನ್ಯಾಕೆ ನಿಂತಿದ್ದೀಯಮ್ಮ, ಬಾ ಕುಳಿತುಕೋ, ಕೆಲಸದವರು ಬಡಿಸುತ್ತಾರೆ" ಅತ್ತೆ ಪ್ರೀತಿಯಿಂದ ಕರೆದರು.

"ಇಲ್ಲ ನೀವು ಊಟ ಮಾಡಿ, ಇವರ ಸ್ನೇಹಿತೆ ಬರ್ತಾರಲ್ಲ, ನಾನು ಅವರ ಜೊತೆ ಊಟ ಮಾಡುತ್ತೇನೆ" 

"ನನ್ನ ಸ್ನೇಹಿತೆಯಾ? ಯಾರು?"

ಇದೇನಿದು? ಹೀಗೆ ಕೇಳ್ತಾ ಇದ್ದಾರೆ? ಅಮ್ಮ ಬಂದಿದ್ದಾರೆ ಅಂತ ರಾಯರು ಮಾತು ಬದಲಿಸಿದರೋ ಹೇಗೆ? ಹಾಗಾದ್ರೆ ಈಗಲೇ ಹೇಳಿಬಿಡಬೇಕು.

"ಅದೇ............

ನಿಮ್ಮ SWEET HEART ಬರ್ತಾರೆ ಅಂದಿದ್ರಲ್ಲ?" 

SWEET HEART ಅನ್ನುವುದನ್ನು ಒತ್ತಿ ಹೇಳಿದೆ.

"ನನ್ನ SWEET  HEART  ಇಲ್ಲೇ ಇದ್ದಾರಲ್ಲ?" 

 ಬಿಟ್ಟ ಬಾಯಿ ಬಿಟ್ಟಂತೆಯೇ ಇತ್ತು..............
ಮಾತೇ ಹೊರಡಲಿಲ್ಲ..............
ಅಘಾತದಿಂದ ಹೊರಬರಲು ಕೆಲವು ಕಾಲವೇ ಬೇಕಾಯಿತು.................!

"ಈಗ ಬಂದೆ, ಕೈ ಕಾಲು ತೊಳೆದು ಬರುತ್ತೇನೆ" ಎಂದಷ್ಟೇ ಹೇಳಿ ಓಡುವ ನಡಿಗೆಯಲ್ಲಿ ರೂಮಿಗೆ ಬಂದು ದಪ್ಪನೆ ಬಿದ್ದೆ..........

ಕಣ್ಣೇರು ಕೋಡಿಯಾಗಿ ಹರಿಯುತ್ತಿತ್ತು.

"ಯಾಕೆ ಪುಟ್ಟಣ್ಣಿ........... ಏನಾಯ್ತು?"
ನನ್ನವರು ನನ್ನ ಹಿಂದೆಯೇ ಬಂದಿದ್ದರು.......

ತಿರುಗಿ ನೋಡಿದೆ, ಮಹಾಪುರುಷ ಶ್ರೀರಾಮನಂತೆ ದಿವ್ಯರೂಪನಾಗಿ ನಿಂತಿದ್ದರು. 

ಓಡಿ ಹೋಗಿ ತಬ್ಬಿಕೊಂಡೆ, ಮನದಲ್ಲಿ ಮೂಡಿದ ಅನುಮಾನವೆಂಬ ವಿಷ ಕಣ್ಣೀರಾಗಿ ಕರಗಿ ಬೀಳುತ್ತಿತ್ತು.

"ರೀ, ನನ್ನ ಕ್ಷಮಿಸ್ತೀರಾ?"

ಕಷ್ಟಪಟ್ಟು ನನ್ನ ಬಾಯಿಂದ ಹೊರಟಿದ್ದು ಇಷ್ಟೇ!

"ಅಯ್ಯೋ ಹುಚ್ಚಿ, ಯಾಕೆ ಹೀಗೆ ಮಗು ತರ ಆಡ್ತೀಯ? ನೀನು ಮಗೂನೆ ಬಿಡು, ಒಂದು ಕ್ಷಣ ಕೋಪ, ಒಮ್ಮೊಮ್ಮೆ ಪ್ರೀತಿ, ಇನ್ನೊಮ್ಮೆ ಅಳು............ ನನ್ನ ಮುದ್ದು ಕಣೆ ಪುಟ್ಟಣ್ಣಿ ನೀನು, ಏಳು, ಅಳಬಾರದು, 

ಅದ್ಸರಿ........... ವಿಷಯ ಏನೂ ಅಂತ ಹೇಳಲೇ ಇಲ್ಲ?"

ನನ್ನವರ ಪ್ರೀತಿಯ ಮುಂದೆ ನಾನು ಕುಬ್ಜಲಾಗಿ ಹೋಗಿದ್ದೆ, ನಿನ್ನೆಯಿಂದ ನನ್ನ ಮನದಲ್ಲಿ ಮೂಡಿದ ಎಲ್ಲಾ ಅನುಮಾನವನ್ನು ಒಂದೂ ಬಿಡದಂತೆ ಹೇಳಿದೆ.

ನನ್ನ ಮನ್ಮಥ ಗಹಗಹಿಸಿ ನಗಲಾರಂಭಿಸಿದರು.

"ಹ್ಹ ಹ್ಹ ಹ್ಹಾ..........
ಒಳ್ಳೆ ಕತೆ ನಿನ್ನದ್ದು. ಅಷ್ಟಕ್ಕೂ ತಪ್ಪು ನನ್ನದೇ, ಅಮ್ಮನೊಂದಿಗೆ ಯಾವಾಗಲೂ ಮೊಬೈಲಲ್ಲಿ MESSAGE ಕಳಿಸ್ತಾ ಇರ್ತೇನೆ. ನಿನ್ನೆ ನೀನು ಸಿಟ್ಟು ಮಾಡಿಕೊಂಡಿದ್ದು ಅಮ್ಮನಿಗೆ ಹೇಳಿದ್ದೆ. ನನ್ನ ಅಭ್ಯಾಸ ಬಲದಂತೆ ಎಲ್ಲಾ CALL ಮತ್ತು MESSAGE ಅನ್ನು ಮಾಡಿದ್ದೆ........

ಮತ್ತೆ ನನ್ನ ಅಮ್ಮ ಅಂದ್ರೆ ನನಗೆ ಪಂಚಪ್ರಾಣ. ಎಲ್ಲರೂ ತಾವು ಇಷ್ಟಪಟ್ಟ ಹುಡುಗಿಗೆ ಚಿನ್ನ ರನ್ನ ಮುದ್ದು ಬಂಗಾರ ಅಂತ ಏನೇನೋ ಹೆಸರಿಟ್ಟು ಕರಿತಾರೆ. ಆದರೆ ಒಂಬತ್ತು ತಿಂಗಳು ಹೊತ್ತು, ಹೆತ್ತು ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ ನಮ್ಮ ಜೀವನ ರೂಪಿಸುವ ದೇವತೆಗೆ ಯಾಕೆ ಕರೆಯಬಾರದು?

 ಅದಕ್ಕೆ ನಾನು ಅಮ್ಮನಿಗೆ SWEET HEART ಅಂತ ಕರೆಯುವುದು. ಅದನ್ನು ನಿನಗೆ ಹೇಳದೆ ನಾನು ತಪ್ಪು ಮಾಡಿದೆ.
ಏಳು, ಅಪ್ಪ ಅಮ್ಮ ಕಾಯ್ತಾ ಇದ್ದಾರೆ, ಊಟಕ್ಕೆ ಬಾ, ಆಮೇಲೆ ನಿಧಾನಕ್ಕೆ ಎಷ್ಟು ಬೇಕೋ ಅಷ್ಟು ಅಳುವಿಯಂತೆ!"

ನನ್ನಿನಿಯನ ತೋಳ್ತೆಕ್ಕೆಯಲ್ಲಿ ಹುದುಗಿದ ನನಗೆ ನನ್ನ ಮನಸ್ಸಿಗೆ ಮುಸುಕಿದ ಮೋಡ ಪಶ್ಚಾತ್ತಾಪದ ಕಣ್ಣೀರಾಗಿ ಕರಗಿ ಹೋಗಿತ್ತು. ಈ ಜನ್ಮದಲ್ಲಿ ಇವರ ಬಾಹುಬಂಧನ ಬಿಡಿಸಿಕೊಳ್ಳಬಾರದೆಂದು ಮನಸ್ಸು ದೃಢ ನಿರ್ಧಾರ ಮಾಡಿತು!

ಟೀವಿಯಲ್ಲಿ ಹಾಡು ಮೊಳಗುತ್ತಿತ್ತು.................
"ಈ ಬಂಧನ....................
               ಜನುಮ ಜನುಮದ ಅನುಬಂಧನ......................"

ಇದನ್ನೂ ಓದಿ.....
ಭಾಗ ಒಂದು: ಪ್ರಕಾಶಣ್ಣನ ಕಥೆ 

ಭಾಗ ಎರಡು: ದಿನಕರಣ್ಣನ ಕಥೆ 

 Thursday, September 15, 2011

ಮಾಡರ್ನ್ ಹರಿ


ಶೇಷ ಶಯನನೆ, ಪಾಪ
ಯಾವಾಗಲೂ ಶೇಷನ ಮೇಲೆ
ಮಲಗುವೆಯಲ್ಲಾ, ಒಮ್ಮೆ ಯೋಚಿಸು
ಅದಕೂ ಜೀವವಿಲ್ಲವೇನೋ?

ಇಷ್ಟೆಲ್ಲಾ ತರತರದ
ಹಾಸಿಗೆ ಮಂಚಗಳಿರುವಾಗ
ಅದೇನು ಹೇಸಿಗೆ ಹಾವೇ ಹಾಸಿಗೆ
ಅದರ ಮೇಲೆ ಕರುಣೆ ಇಲ್ಲವೇನೋ?
 
ಲಕ್ಷ್ಮಿಯ ಕೈ ನೋಯದೇನೋ
ಒತ್ತಿ ಒತ್ತಿ ನಿನ್ನ ಕಾಲ
ನಾಲ್ಕು ದಿವಸ ರಜೆ
ಅವಳಿಗೂ ಕೊಡಬಾರದೇನೋ?

ಅಲ್ಲಲ್ಲಿ ನೋಡಲ್ಲಿ ಕಾಣಿಸದೆ
ಪಾರ್ಲರುಗಳು ಮಸ್ಸಾಜು
ಸೆಂಟರುಗಳು ಈ ಕಾಲದಲ್ಲೂ
ಅವಳಿಗೆ ಸುಖ ಬೇಡವೇನೋ?

ವಾಕಿಂಗು ಜಾಗಿಂಗು ರನ್ನಿಂಗು
ಒಂದೂ ಇಲ್ಲದೆ ಹಾಗೆ ಇರುವೆಯಲ್ಲಾ
ಬೊಜ್ಜು ಬಂದರೆ ಲಕುಮಿ
ಸಿಡುಕುವುದಿಲ್ಲವೇನೋ?

ಸಾಗರವ ಬಿಟ್ಟು ಭುವಿಗಿಳಿದು ಬಾ
ಇಲ್ಲಿ ಮೈದಾನವಿಲ್ಲ ರಸ್ತೆಯಲ್ಲೇ
ಜಾಗಿಂಗು ವಾಕಿಂಗು ಮಾಡಿ
ಜಿಮ್ಮುಗಳಲ್ಲಿ ಮೆಂಬರ್ ಆಗ್ಬಾರದೇನೋ?

ಬ್ರಹ್ಮನನು ನಾಭಿಯ
ಕಮಲದ ಮೇಲೆ ಕೂರಿಸಿಕೊಂಡೆ,
ನಿನ್ನೊಂದಿಗೆ ಏಕಾಂಗಿತನ
ಲಕುಮಿಗೆ ಬೇಡವೇನೋ?

ಸಿಂಗಲ್ ಫ್ಲೋರಿನ ಫ್ಲಾಟಲ್ಲಿ
ಲಕುಮಿಯೊಂದಿಗೆ ಸಂಸಾರ
ಮಾಡಿ ಮಾಡರ್ನ್ ಹರಿ
ನೀನಾಗಬಾರದೇನೋ?


ಸರ್ಕಾರಿ ಕೆಲಸವೂ ಸಿಗಬಹುದು
ಪ್ರೈವೆಟಲ್ಲೂ ದುಡ್ಡಿದೆ
ಏನೂ ಇಲ್ಲದಿದ್ದರೆ
ರಾಜಕೀಯ ನೀ ಮಾಡಬಾರದೇನೋ?

(ಲಕ್ಷ್ಮಿವೆಂಕಟರಮಣನಲ್ಲಿ ಕ್ಷಮೆ ಕೋರಿ...........)

Thursday, July 28, 2011

ವಿಧಿ ವಿಲಾಸ.........

ಆಘಾತ!!!!
ಅನಿರೀಕ್ಷಿತ!!!!
ನಂಬಲೂ ಆಗದ ಆಘಾತ!!!!

ಅಲ್ಲದೆ ಮತ್ತೇನು? ಪಾದರಸದಂತೆ ಚುರುಕಾಗಿ ಓಡಾಡಿಕೊಂಡು ವ್ಯವಹಾರದ ಬಗ್ಗೆಯೇ ಸದಾ ಯೋಚಿಸುತ್ತಾ, ಐದು ನಿಮಿಷಕ್ಕೊಂದರಂತೆ ಸಿಗರೆಟ್ ಸುಟ್ಟು ಒಗೆಯುತ್ತಿದ್ದ ನಮ್ಮ ಬಾಸ್ ಇಂದು ಇಹ ಲೋಕ ತ್ಯಜಿಸಿದ್ದು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ!!!

ಅಂದು ನನ್ನ ಪಾಡಿಗೆ ದುರ್ದಿನ. ಸುಮಾರು ಮಧ್ಯಾಹ್ನ 12 ಘಂಟೆಯ ಸಮಯ. ಇತ್ತೀಚೆಗಷ್ಟೇ ತೆರೆದ ಹೊಸ ರೆಸ್ಟೋರೆಂಟಿನ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ಫೋನ್ ಮಾಡಿದರು ಬಾಸ್. ಇಂದು ನಾನು ಬರುವುದಿಲ್ಲ, ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತೇನೆ, ಎಲ್ಲಾ ಕಡೆ ನೋಡಿಕೋ ಎಂದು ಹೇಳಿದ್ದರು, 15 ನಿಮಿಷದ ನಂತರ ಮ್ಯಾನೇಜರ್ ಫೋನ್ ಮಾಡಿ ' ಸರ್, ಅನಿಲ್ ಸರ್ ಗೆ ಹುಷಾರಿಲ್ಲ, ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ, ನೀವು ಬೇಗ ಬನ್ನಿ' ಎಂದ. ಅರ್ಧ ಗಂಟೆಯಲ್ಲೇ ಆಸ್ಪತ್ರೆ ತಲುಪಿ ನೋಡಿದರೆ ಸರ್ ನಾಲ್ಕು ಜನ ಡಾಕ್ಟರ್ ಮತ್ತು ಮಿಶಿನ್ನುಗಳ ಮಧ್ಯೆ ಮಲಗಿದ್ದರು.
ಹೊರ ಬಂದ ವೈಧ್ಯರು ಹೇಳಿದ್ದು ಕೇಳಿದಾಗಲೇ ಆಘಾತ! Brain Hemorrhage ಎಂಬ ಹೆಮ್ಮಾರಿಗೆ  ಬಲಿಯಾಗಿದ್ದರು ನಮ್ಮ ಮಾಲೀಕರು! ಮೆದುಳಿನಲ್ಲಿ ರಕ್ತ ಹರಿದು ಹೆಪ್ಪುಗಟ್ಟಿ ಇಡೀ ಮೆದುಳೇ ಕಪ್ಪಾಗಿ ಹೋಗಿದ್ದು CT Scan ರಿಪೋರ್ಟಿನಲ್ಲಿ ನೋಡಿ ಮಾತೇ ಹೊರಡಲಿಲ್ಲ.

Medanta Medicity ಆಸ್ಪತ್ರೆಯಲ್ಲಿ ನಾಲ್ಕು ದಿನ ಕೊಮಾ ದಲ್ಲಿದ್ದು ಐದನೇ ದಿನ ಹೊರ ಬಂದಿದ್ದು ನಿರ್ಜೀವವಾಗಿ. ಹೆಂಡತಿ ಮತ್ತು ಎಂಟು ವರ್ಷದ ಮಗಳ ಅಳು, ಗೋಳಾಟ ಹೃದಯ ವಿದ್ರಾವಕ ಸನ್ನಿವೇಶ. ಏನು ಹೇಳುವುದು? ಅವರಿಗೆ ಧೈರ್ಯ ಯಾವರೀತಿ ಹೇಳಬೇಕೆಂಬುದೇ ತಿಳಿಯದ ಪರಿಸ್ಥಿತಿ.

ನಮ್ಮ ಹತ್ತಿರದವರ ಸಾವು ನಮ್ಮನ್ನೆಷ್ಟು ತಲ್ಲಣಗೊಳಿಸುತ್ತದೆ ಎಂಬುದು ನನಗೆ ಅರಿವಾಗಿತ್ತು. ಆರು ವರ್ಷದಿಂದ ನಾನು ಅವರೊಂದಿಗಿದ್ದು ಕಲಿತಿದ್ದು, ಪಡೆದಿದ್ದು ಬಹಳ. ಎಂದೆಂದೂ ತೀರಿಸಲಾಗದ ಋಣ ನಾ ಹೊತ್ತಿದ್ದೇನೆ. ನನಗೆ ಗುರುವಾಗಿ, ಅಣ್ಣನಾಗಿ ತಿದ್ದಿ ತೀಡಿ ದೆಹಲಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊತ್ತವರು ನಮ್ಮ ಬಾಸ್.

ಊಟ ತಿಂಡಿ ನಿದ್ದೆ ಮರೆತು ನಾಲ್ಕು ದಿನವೂ ಆಸ್ಪತ್ರೆಯಲ್ಲೇ ಇದ್ದು ನೋಡಿಕೊಂಡೆವು. ಆದರೆ ಎಂದೂ ತಿರುಗಿ ಬಾರದ ಲೋಕಕ್ಕೆ ಹೊರಟು ಹೋದರು. ಶನಿವಾರ ಅವರು ಮರಣ ಹೊಂದಿದ ದಿನ. ವಿಪರ್ಯಾಸ ಅಂದರೆ ಅಂದೇ ಅವರ ಜನ್ಮ ದಿನ ಕೂಡಾ! ಸರಿಯಾಗಿ ನಲವತ್ತ ನಾಲ್ಕು ವಸಂತಗಳನ್ನು ಪೂರೈಸಿ ಈ ಲೋಕದ ಜಂಜಡಗಳಿಂದ ಮುಕ್ತಿ ಪಡೆದರು.

ಆ ದಿನ ಅವರ ಕಳೆಬರದ ಮುಂದೇ ಶೋಕತಪ್ತರಾಗಿ ಕುಳಿತಿದ್ದಾಗ ನನಗೆ ವಿಪರೀತ ಹಸಿವು! ಒಮ್ಮೆ ಪ್ರಕಾಶಣ್ಣನ ಬ್ಲಾಗಿನಲ್ಲಿ ಸಾವಿನಲ್ಲಿ ಹಸಿವಾದರೆ ಆಗುವ ಕಷ್ಟ ಏನೆಂದು ಓದಿದ್ದೆ. ಆದರೆ ಅಂದು ನನಗೆ ಆ ಸತ್ಯದ ಅರಿವಾಗಿತ್ತು. ನಾಲ್ಕು ದಿನ ಉಪವಾಸ ಇದ್ದರೂ ಒಮ್ಮೆಯೂ ಕೂಡ ಹಸಿವಾಗಲಿಲ್ಲ ಆದರೆ ಆ ಸಮಯದಲ್ಲಿ ಮಾತ್ರ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಪ್ರಕಾಶಣ್ಣ ಹೇಳುವಂತೆ ಅತೀ ಕಷ್ಟದ ಸಮಯವೆಂದರೆ ಇದೇ!

ಈಗ ಉಳಿದಿರುವುದು ಅವರ ನೆನಪು, ಅವರು ಬಿಟ್ಟು ಹೋದ ವ್ಯವಹಾರ. ಜೊತೆಗೆ ಹಲವಾರು ನಿಗೂಡ ಪ್ರಶ್ನೆಗಳನ್ನು ಮಾತ್ರ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂಬುದೊಂದೇ ನಮ್ಮೆಲ್ಲರ ಹಾರೈಕೆ...........


Tuesday, February 15, 2011

ವರ್ಷವೊಂದು ಉರುಳಿತು


ವರ್ಷವೊಂದು ಉರುಳಿತು 
ಬ್ಲಾಗೆಂಬ ಸ್ವರ್ಗದಲಿ
ಸಮಯವ ಅರಿಯದೆ ಹೋದೆ
ನಿಮ್ಮ ಪ್ರೀತಿಯ ಮಡಿಲಲಿ.......... 

ಗೆಳೆಯರೆ, 

ನನ್ನ ಬ್ಲಾಗಿಗೆ ಒಂದು ವರ್ಷ ಆಯ್ತು!
ಹೌದು, ಆಶ್ಚರ್ಯವೇ ಸರಿ............
ಕೆಲಸದ ಒತ್ತಡದಲ್ಲಿ ಬ್ಲಾಗಿನ ಹುಟ್ಟಿದ ದಿನ ಗೊತ್ತೇ ಆಗಲಿಲ್ಲ!
ಬ್ಲಾಗೆಂದರೆ ಏನೆಂದು ಅರಿಯದ ನಾನು ಇಂದು ನಿಮ್ಮೊಂದಿಗಿದ್ದೇನೆ ಎಂದರೆ ಆಶ್ಚರ್ಯವಾಗದೆ ಇನ್ನೇನು ಹೇಳಿ. ಕನ್ನಡದ ಕಂಪಿಗಾಗಿ ಹಪಹಪಿಸುತ್ತಿದ್ದ ನನಗೆ ಬ್ಲಾಗೆಂಬ ಮಾಮರದ ಪರಿಚಯ ಮಾಡಿಕೊಟ್ಟ ವಿಜೇತ ನಾಯಕ್ ಗೆ ನಾನು ಚಿರಋಣಿ. ಕನ್ನಡ ಪುಸ್ತಕಗಳೂ ಸಿಗದ ಈ ದೆಹಲಿಯಲ್ಲಿ ಕನ್ನಡ ಓದಲು ಅನುವು ಮಾಡಿಕೊಟ್ಟಿದ್ದು ಬ್ಲಾಗ್ ಎಂಬ ಸ್ವರ್ಗಲೋಕ. ಮೊಟ್ಟಮೊದಲಾಗಿ ಓದಿದ್ದು ಪ್ರಕಾಶಣ್ಣನ "ಇಟ್ಟಿಗೆ ಸಿಮೆಂಟು..........ಸೆಂಟಿಮೆಂಟು" ಬ್ಲಾಗು. ಆ ಇಟ್ಟಿಗೆ ಸಿಮೆಂಟು  ನನ್ನ ಮತ್ತು ನಿಮ್ಮೆಲ್ಲರ ನಡುವೆ ಭದ್ರ ಬುನಾದಿ ಹಾಕಿ ಈ ಸೆಂಟಿಮೆಂಟು ಬೆಸೆಯಲು ಕಾರಣ ಎಂದರೆ ಅತಿಶಯೋಕ್ತಿಯೇನಲ್ಲ! ನಿಮ್ಮಂತಹ ಗೆಳೆಯರ ಬಳಗವನ್ನು ದೊರಕಿಸಿಕೊಟ್ಟ ಈ ಬ್ಲಾಗ್ ಲೋಕಕ್ಕೆ ನನ್ನ ವಂದನೆಗಳು.
ನನ್ನ ಮನಸ್ಸಿಗೆ ತೋಚಿದ್ದನ್ನು ಗೀಚಿ ನಿಮ್ಮ ಮುಂದಿಟ್ಟರೂ ನೀವೆಲ್ಲರೂ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ತಿದ್ದಿ ತೀಡಿ ಪ್ರೀತಿಯಿಂದ ಗುದ್ದಿ ಬುದ್ಧಿ ಹೇಳಿ ಈ ಹಂತಕ್ಕೆ ತಂದು ನಿಲ್ಲಿಸಿದ್ದೀರಾ. ಯಾರೆಂದು ಅರಿಯದ ಯಾವುದೇ ಸಂಬಧವೂ ಇಲ್ಲದ ನನ್ನನ್ನು ಪ್ರೀತಿಯಿಂದ ಮಮತೆಯಿಂದ ಸ್ನೇಹದಿಂದ ನಿಮ್ಮೊಳಗೊಬ್ಬನನ್ನಾಗಿ ಮಾಡಿಕೊಂಡಿದ್ದೀರಾ. ನನ್ನ ಕಾಟವನ್ನು ಸಹಿಸಿಕೊಂಡಿದ್ದೀರಾ. ನಿಮ್ಮೆಲ್ಲರ ಈ ಪ್ರೀತಿ, ಆದರ, ಸ್ನೇಹ, ವಿಶ್ವಾಸ ಸದಾ ಹೀಗೇ ಇರಲಿ........
ಆಗಾಗ ಬಂದು ಕಷ್ಟ ಕೊಡುವ ನನ್ನನ್ನು ಸಹಿಸಿಕೊಳ್ಳಿ!
ನಾನು ಈ ಬ್ಲಾಗಿಗಾಗಿ ಮೊಟ್ಟಮೊದಲು ಬರೆದ ಕತೆಯನ್ನು ಮತ್ತೆ ಹಾಕಿದ್ದೇನೆ. ಓದಿ................
          "ಅಮ್ಮ, ಅಳಬೇಡಮ್ಮಾ"

ಆಹಾಹಾ! ತುಂಭಾ ಚಳಿ! ದೆಹಲಿಯ ಚಳಿಗಾಲ ಅಂದ್ರೆ ದೇಹ ಮರಗಟ್ಟಿ ಹೋಗುತ್ತದೆ. ಹೀಗೆ ಯೋಚಿಸುತ್ತಾ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯತ್ತ ತೆರಳಿದೆ. ನನ್ನನ್ನು ನೋಡಿದ ಅಂಗಡಿಯಾತ ಬಿಸಿಬಿಸಿ ಟೀ, ಒಂದು ಸಿಗರೇಟನ್ನು ತೆಗೆದು ಕೊಟ್ಟ.ದಿನಾ ಬೆಳಿಗ್ಗೆ ಆಫೀಸ್ಸಿಗೆ ಹೋಗುವಾಗ ದಾರಿಯಲ್ಲಿ ಸಿಗುವ ಈ ಅಂಗಡಿಯ ಬದಿಯಲ್ಲಿ ಬೈಕ್ ನಿಲ್ಲಿಸಿ ಸಿಗರೇಟು, ಟೀ ಕುಡಿದು ಹೋಗುತ್ತೇನೆ. ಹೊಟ್ಟೆಯೊಳಗೆ ಬಿಸಿ ಸೇರಿದಂತೆ ಒಂದು ರೀತಿಯ ಉಲ್ಲಾಸ!

ಟೀ ಕುಡಿಯುತ್ತಾ ರಸ್ತೆಯ ಆ ಬದಿ ನೋಡುತ್ತಿದ್ದೇನೆ, ಅರೆ! ಅದೇನದು? ಮತ್ತದೇ ದೃಶ್ಯ! ದಿನಂಪ್ರತಿ ನಡೆಯುವಂತೆ ಇಂದು ಕೂಡ ನಡೆಯುತ್ತಿದೆ. ಒಬ್ಬ ಗಂಡಸು, ಬಟ್ಟೆಯಲ್ಲಾ ಕೊಳಕಾಗಿದೆ. ಸ್ನಾನ ಮಾಡದೇ ಅದೆಷ್ಟು ದಿನಗಳಾಗಿವೆಯೋ? ಆತ ಒಂದು ಮಧ್ಯ ವಯಸ್ಕ ಹೆಗಸಿಗೆ ಹೊಡೆಯುತ್ತಿದ್ದಾನೆ. ಬಹುಶಃ ಆಕೆ ಆತನ ಹೆಂಡತಿ ಇರಬೇಕು. ಪಶುವಿಗೆ ಹೊಡೆದಂತೆ ಬಡಿಯುತ್ತಿದ್ದಾನೆ. ಪಾಪ! ಚಿಕ್ಕ ಮಗುವೊಂದು ಆ ದೃಶ್ಯವನ್ನು ನೋಡಲಾರದೆ ಜೋರಾಗಿ ಅಳುತ್ತಿದೆ.ಆಗ ಸ್ವಲ್ಪ ದೊಡ್ಡದಾದ ಹುಡುಗನೊಬ್ಬ ಆ ಮಗುವನ್ನು ಎತ್ತಿಕೊಂಡು ಸಂತಯ್ಸತೊಡಗಿದ. ಆ ಮಗುವಿನ ಅಣ್ಣನಿರಬೇಕು, ಆತನಿಗೆ 9-10 ವರ್ಷವಿರಬಹುದು.

"ಅಪ್ಪ ಬಿಡಪ್ಪ, ಅಮ್ಮನಿಗೆ ಹೊಡೆಯಬೇಡ, ಸಂಜೆ ದುಡ್ಡು ತಂದು ಕೊಡುತ್ತೇನೆ." ಎಂದು ಹೇಳಿ ಅವನಪ್ಪನನ್ನು ಎಳೆದಾಡತೊಡಗಿದ.

ಆತ ಆ ಹುಡುಗನನ್ನು ಕೆಂಗಣ್ಣಿನಿಂದ ದುರುಗುಟ್ಟಿ ನೋಡುತ್ತಾ, ಹೆಂಡತಿಗೆ ಹೊಡೆಯುವುದನ್ನು ನಿಲ್ಲಿಸಿದ. "ಇನ್ನೊಂದು ಘಂಟೆಯಲ್ಲಿ ದುಡ್ಡು ತಂದು ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲ, ಕೊಂದೇ ಹಾಕುತ್ತೇನೆ" ಎಂದು ಜೋರಾಗಿ ಕೂಗುತ್ತಾ ಎತ್ತಲೋ ಹೊರಟು ಹೋದ.

ಆ ಹೆಂಗಸು ತನ್ನಿಬ್ಬರು ಮಕ್ಕಳನ್ನು ತಬ್ಬಿಕೊಂಡು ಜೋರಾಗಿ ಅಳುತ್ತಿದ್ದಾಳೆ. ಯಾರು ಆಕೆಯನ್ನು ಸಮದಾನಗೊಳಿಸುವವರು? ಎಲ್ಲರಿಗೂ ಅದೊಂದು ಮನರಂಜನೆ ಮಾತ್ರ. ಆಕೆಯ ಬದುಕಿನ ಹೋರಾಟ ಯಾರಿಗೂ ಅರ್ಥವಾಗುವುದಿಲ್ಲ. ನಮಗೇಕೆ ಇಲ್ಲದ ಉಸಾಬರಿ. ಇದು ಈ ಬಿಕ್ಷುಕರ ದಿನನಿತ್ಯದ ಗೋಳು ಎಂಬ ತಾತ್ಸಾರ ಭಾವ ಎಲ್ಲರಲ್ಲೂ ತುಂಬಿದೆ.

ಸಾದಾರಣವಾಗಿ ದೆಹಲಿಯಂತ ನಗರಗಳಲ್ಲಿ ಈ ದೃಶ್ಯ ಸಾಮಾನ್ಯ. ಇವರು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಬಿಕ್ಷೆ ಬೇಡಿ ಜೀವನ ಸಾಗಿಸುವ ನಿರ್ಗತಿಕರು. ಇವರಿಗೆ ವಾಸಕ್ಕೆ ಮನೆಯಿಲ್ಲ. ಹಾಕಲು ಬಟ್ಟೆಬರಿಗಲಿಲ್ಲ, ವಿಧ್ಯೆ-ಬುದ್ಧಿಗಳನ್ನಂತೂ ಕೇಳುವುದೇ ಬೇಡ. ಭಿಕ್ಷೆ ಬೇಡಿ ಬಂದ ಹಣವೆಲ್ಲ ಗಂಡಸರ ಕುಡಿತದಂತ ಚಟಗಳಿಗೆ ಸರಿಯಾಗುತ್ತದೆ. ಯಾರಾದರೂ ಏನಾದರೂ ತಿನ್ನಲು ಕೊಟ್ಟರೆ ಇವರ ಹೊಟ್ಟೆ ತುಂಬುತ್ತದೆ. ಇಲ್ಲದಿದ್ದರೆ ಇಲ್ಲ!

ಕುಡಿದು ಬಂದ ಗಂಡಸರು ಹೆಂಡತಿ-ಮಕ್ಕಳಿಗೆ ಹೊಡೆಯುವ ದೃಶ್ಯ ಇಲ್ಲಿ ಸಾಮಾನ್ಯ. ಯಾಕೋ ಇಂದು ನನ್ನ ಕಣ್ಣ ಮುಂದೆ ಆ ಭಿಕ್ಷುಕಿ ಬಿಕ್ಕಳಿಸುತ್ತಿರುವ ದೃಶ್ಯವೇ ಕಾಣಿಸುತ್ತಿತ್ತು. ಮನಸ್ಸೇಕೋ ಕಸಿವಿಸಿಗೊಂಡಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಕೆಲಸ ಮುಗಿಸಿ ಮನೆಯತ್ತ ಹೊರಟೆ.

ರಸ್ತೆಯಲ್ಲಿ ಹೋಗುತ್ತಿರುವಾಗ ಅದೇ ಜಾಗದಲ್ಲಿ ಜನರ ಗುಂಪು ಸೇರಿದೆ. ಬೈಕ್ ನಿಲ್ಲಿಸಿ ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ಅಲ್ಲಿನ ದೃಶ್ಯವನ್ನು ನೋಡಿ ಮೂಕವಿಸ್ಮಿತನಾದೆ!

ಆ ಹೆಂಗಸು ಇಬ್ಬರು ಮಕ್ಕಳನ್ನು ತಬ್ಬಿಕೊಂಡು ಬಿಕ್ಕುತ್ತಿದ್ದಾಳೆ. ಹುಡುಗನ ಮೈ ರಕ್ತಸಿಕ್ತವಾಗಿದೆ. ಸ್ವಲ್ಪ ದೂರದಲ್ಲಿ ರಕ್ತದಿಂದ ತೋಯ್ದು ಹೋದ ದೇಹವೊಂದು ಬಿದ್ದಿದೆ. ಅದು ಆ ಕುಡುಕ ಬಿಕ್ಷುಕನದ್ದೆ ಎಂದು ತಿಳಿಯಲು ತಡವಾಗಲಿಲ್ಲ. ಆ ಜಾಗದಲ್ಲಿ ನಿಲ್ಲಲಾರದೆ ಗೂಡಂಗಡಿಗೆ ಹೋಗಿ ಸಿಗರೇಟ್ ಹತ್ತಿಸಿಕೊಂಡು ಅಂಗಡಿಯಾತನತ್ತ ಪ್ರಶ್ನಾರ್ತಕವಾಗಿ ನೋಡಿದೆ. ಅಂಗಡಿಯಾತ ಹೇಳಿದ ಕತೆಯನ್ನು ಕೇಳಿ ನನ್ನಿಂದ ಮಾತುಗಳೇ ಹೊರಡಲಿಲ್ಲ!

ಸ್ವಲ್ಪ ಸಮಯದ ಮೊದಲು ಆತ ಮತ್ತೆ ಅಲ್ಲಿಗೆ ಬಂದಿದ್ದ. ಬಂದವನೇ ಜೋರಾಗಿ ಕೂಗತೊಡಗಿದ. ಎಲ್ಲಿ ದುಡ್ಡು ಕೊಡು ಎಂದು ಹೆಂಡತಿಗೆ ಹೊಡೆಯುತಿದ್ದ.ಅಲ್ಲೇ ಇದ್ದ ಆ ಹುಡುಗ ಇದನ್ನು ನೋಡಿ ಸಹಿಸಿಕೊಳ್ಳಲು ಆಗದೆ ರೋಷದಿಂದ ತಂದೆಯತ್ತ ನುಗ್ಗಿದ. ಪಕ್ಕದಲ್ಲೇ ಇದ್ದ ಚಾಕುವಿನಿಂದ ತನ್ನ ತಂದೆಗೆ ಇರಿದೇ ಬಿಟ್ಟ!
ಆವೇಶಗೊಂಡವನಂತೆ ಎಲ್ಲೆಂದರಲ್ಲಿ ಇರಿಯತೊಡಗಿದ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಇಷ್ಟೆಲ್ಲಾ ನಡೆದು ಹೋಗಿತ್ತು! ತನ್ನ ತಾಯಿಗೆ ಆಗುತ್ತಿರುವ ಹಿಂಸೆಯನ್ನು ನೋಡಲಾರದೆ, ತಾಯಿಯ ಮೇಲಿನ ಪ್ರೀತಿಯಿಂದ ತಂದೆಯನ್ನೇ ಕೊಂದು ಮುಗಿಸಿದ್ದ ಆ ಮಗ!

ಆ ಕ್ಷಣದಲ್ಲಿ ಹುಡುಗನ ಮನಸ್ಸು ಏನು ಯೋಚಿಸಿತ್ತು? ಈಗಲೂ ಆತನ ಮುಖದಲ್ಲಿ ಯಾವುದೇ ಚಿಂತೆ ಕಾಣಿಸುತ್ತಿಲ್ಲ. ಭಾರವಾದ ನಿಟ್ಟುಸಿರು ಚೆಲ್ಲುತ್ತಾ ಮನೆಯ ದಾರಿ ಹಿಡಿದೆ. ನನ್ನ ಕಿವಿಯಲ್ಲಿ ಆ ಹುಡುಗನ ಧ್ವನಿ ಪದೇ ಪದೇ ಕೇಳಿಸುತಿತ್ತು.
"ಅಮ್ಮಾ, ಅಳಬೇಡಮ್ಮಾ!"

Monday, January 3, 2011

ಕವಿಶೈಲ

ಸೊಗಸಾದ ಕುಳಿರ್ಗಾಳಿ
ತರುಲತೆಗಳ ವಯ್ಯಾರ
ಝರಿ ತೊರೆಗಳ ಕಲರವ
ಹಕ್ಕಿ ಪಕ್ಕಿಗಳ ಪಕ್ಕವಾದ್ಯ
ಎಲ್ಲಾ ಒಂದೆಡೆ ಮೇಳೈಸೆ
ಇನ್ನಾವ ಸ್ವರ್ಗದ ಬಯಕೆ ಬಂದೀತು?

ಹೌದು ಗೆಳೆಯರೆ,
ನಾನು ಹೇಳಹೊರಟಿರುವುದು ಮಲೆನಾಡಿನ ಬಗ್ಗೆಯೇ!
ಊರಿನಿಂದ ಬಂದ ನಂತರ ನಿಮ್ಮೊಂದಿಗೆ ಹಂಚಿಕೊಳ್ಳಲು ಹಲವಾರು ವಿಷಯಗಳಿದ್ದವು. ಸಮಯದ ಅಭಾವವೋ ಅಥವಾ ನನ್ನ ಸೋಮಾರಿತನವೋ ಬ್ಲಾಗ್ ಕಡೆ ಬರುವುದು ಅಪರೂಪವಾಗಿತ್ತು. ನಿರಂತರ ಬ್ಲಾಗ್ ಬೇಟಿ ಕೇವಲ ಮನದಲ್ಲೇ ಉಳಿಯಿತೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಆದರೂ ಪರವಾಗಿಲ್ಲ. ನಾನೂ ನಿಮ್ಮೊಳಗೊಬ್ಬನಲ್ಲವೆ, ಕ್ಷಮಿಸಿ ಪೋಷಿಸುತ್ತೀರಾ ಅನ್ನೊ ನಂಬಿಕೆಯಿಂದ ಮತ್ತೆ ನಿಮಗೆಲ್ಲಾ ಕಷ್ಟ ಕೊಡಲು ಬಂದಿದ್ದೇನೆ! ನೀವು ಸಹಿಸಿಕೊಳ್ಳಲೇಬೇಕು, ಇದು ಅನಿವಾರ್ಯ!

ಏನೇನೊ ಹೇಳುತ್ತ ಮುಖ್ಯ ವಿಷಯವನ್ನೇ ಮರೆತೆ. ನಾನು ಇಂದು ಹೇಳಹೊರಟಿದ್ದು ನನ್ನ ಕುಪ್ಪಳ್ಳಿ ಭೇಟಿಯ ಕುರಿತು. ಹೌದು, ಇತ್ತೀಚೆಗೆ ಕುಪ್ಪಳ್ಳಿಗೆ ಹೋಗಿದ್ದೆ. ಕವಿವರ್ಯರ ತಪೋವನ ಕವಿಶೈಲದಲ್ಲಿ ಕಳೆದ ಒಂದೊಂದು ಕ್ಷಣವೂ ಅವಿಸ್ಮರಣೀಯ! ಬಣ್ಣಿಸಲಾಗದ ಆ ಸುಖದ ಕೆಲವು ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಹೊರಟಿದ್ದು ಇಬ್ಬರಾದರೂ ಕವಿಶೈಲವನ್ನು ಮುಟ್ಟುವಾಗ ನಾನೊಬ್ಬನೇ ಇದ್ದಿದ್ದು! ಹ್ನಾಂ! ಇರಿ, ಹೇಳಿ ಮುಗಿಸುವುದರೊಳಗೆ ಆಶ್ಚರ್ಯ ಪಡ್ತೀರಲ್ಲ? ನನ್ನ ಸ್ನೇಹಿತ ಮಹಾಶಯ ಮಧ್ಯದಲ್ಲೇ ಕೈ ಕೊಟ್ಟು ತನ್ನ ಮನದನ್ನೆಯನ್ನು ಭೇಟಿಯಾಗಲು ಹೊರಟು ಹೋದ! ಇನ್ನೇನು ಮಾಡಲಿ, ಒಬ್ಬನೆ ಆದರೆ ಏನಾಯ್ತು ಎಂದು ಹೊರಟೇ ಬಿಟ್ಟೆ. 

ಕವಿಶೈಲ ತಲುಪಿದಾಗಲೇ ಅರಿವಾಗಿದ್ದು, ನಾನೊಬ್ಬನೆ ಬಂದಿದ್ದು ಒಳ್ಳೆಯದೇ ಆಯಿತೆಂದು. 

ನೂರಾರು ಸತ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡು ನಿಶ್ಚಿಂತವಾಗಿ ಹರಡಿದ್ದ ಸಹ್ಯಾದ್ರಿಯ ಗಿರಿಶೃಂಗ, ದೂರದಿಂದ ಕೇಳಿಬರುತ್ತಿರುವ ತುಂಗೆಯ ಬೋರ್ಗರೆತ, ಕುಹುಗುಡುವ ಕಾಜಾಣಗಳ ಹಿಂಡು, ಹಕ್ಕಿಯ ಹಾಡಿಗೆ ತಲೆದೂಗುವ ಬಿದಿರು, ಜಿಟಿಪಿಟಿ ಮಳೆಯ ಶೃಂಗಾರ ಕಾವ್ಯ..... ಸುಖದ ಸುಪ್ಪತ್ತಿಗೆಯಲ್ಲಿ ಮೈ ಮರೆತು ಇಹಲೋಕದ ಜಂಜಡಗಳಿಲ್ಲದೇ ಚಿರನಿದ್ರೆಯಲ್ಲಿರುವ ರಾಷ್ಟ್ರಕವಿ ನಮ್ಮೆಲ್ಲರ ಮೆಚ್ಚಿನ ಕುವೆಂಪಜ್ಜ!!!!!

ಹೌದು, ಕವಿಶೈಲದ ಮಹಿಮೆಯೇ ಅಂತಹುದು, ಎಂಥಾ ಅರಸಿಕನಾದರೂ ಕಾವ್ಯದ ರುಚಿ ಸವಿಯಬಲ್ಲ! ಕವಿಯಾಗಬಲ್ಲ,  ರವಿಯನ್ನೇ ಶಾಂತವಾಗಿಸಿ ಚಂದ್ರನಂತೆ ತಣ್ಣಗಾಗಿಸಬಲ್ಲ. ಸಂಗೀತದ ಕಾರಂಜಿ ಹರಿಸಬಲ್ಲ, ತಕದಿಮಿ ಕುಣಿಯಬಲ್ಲ! ಯಾಕೆಂದರೆ ಅಲ್ಲಿ ಕುವೆಂಪಜ್ಜನ ತಪೋಬಲವಿದೆ, ಅವರ ಶಕ್ತಿಯಿದೆ, ಅಲ್ಲಿಯ ಪರಿಸರದಲ್ಲಿ ಪಸರಿಸಿರುವ ಅವರ ನೆನಪು ಈ ಶಕ್ತಿಯನೆಲ್ಲಾ ಕೊಡಬಲ್ಲದು!

ಬೆಳಿಗ್ಗೆಯಿಂದ ಸಂಜೆಯವರೆಗೂ ಒಬ್ಬನೇ ಕುಳಿತೇ ಇದ್ದೆ. ಏನೋ ರೋಮಾಂಚನ, ಮೈಯೆಲ್ಲಾ ಪುಳಕಗೊಂಡ ಅನುಭವ! ಆ ಕ್ಷಣದ ಸುಖ ಯಾವ ಸುಖಕ್ಕೂ ಸಮನಲ್ಲ. ಕೋಟ್ಯಂತರ ಖರ್ಚುಮಾಡಿ ಪಡೆಯುವ ಕೃತಕ ಸುಖಕ್ಕಿಂತ ಕವಿಶೈಲದಲ್ಲಿ ಸಿಗುವ ನೆಮ್ಮದಿ ಸಂತೋಷದ ಕ್ಷಣಗಳು ಎಷ್ಟೋ ಮೇಲು. ಅದಕ್ಕೆ ಸಾಟಿಯೆಂಬುದಿಲ್ಲ!

ಕುಳಿತೆ, ಕುಳಿತೆ ಕುಳಿತೇ ಇದ್ದೆ, ಕಾವಲುಗಾರ ಬಂದು ಎಚ್ಚರಿಸದಿದ್ದರೆ ಅಲ್ಲೇ ಇರುತಿದ್ದೆನೋ ಏನೋ! ನಂತರ ನಿದಾನಕ್ಕೆ ಎದ್ದು ಮಗದೊಮ್ಮೆ ಕವಿವರ್ಯರ ಸಮಾದಿಗೆ ವಂದಿಸಿ ಒಲ್ಲದ ಮನಸ್ಸಿನಿಂದ ಕೆಳಗಿಳಿದು ಬಂದೆ. ಕುವೆಂಪಜ್ಜ ವಾಸಿಸುತ್ತಿದ್ದ ಮನೆಗೆ ಬಂದು ಅವರ ಜೀವನದ ಅವಿಭಾಜ್ಯ ಅಂಗಗಳಾದ ಎಷ್ಟೊ ವಸ್ತುಗಳನ್ನು ನೋಡಿ ಕಣ್ದುಂಬಿಕೊಂಡೆ. ಕತ್ತಲಾವರಿಸತೊಡಗಿದಂತೆ ಅನಿವಾರ್ಯವಾಗಿ ಮನೆಯ ದಾರಿ ಹಿಡಿದೆ. ಕರ್ತವ್ಯದ ಕರೆಗೆ ಓಗೊಡಲೇಬೇಕಾದ ಅನಿವಾರ್ಯತೆ ಮನೆಯತ್ತ ಕೈಬೀಸಿ ಕರೆದಿತ್ತು.

ಕುವೆಂಪಜ್ಜನ ಹಲವಾರು ಕವನಗಳನ್ನು ಕಲ್ಲಿನಲ್ಲಿ ಕೆತ್ತಿ ಅಲ್ಲಿ ಪ್ರತಿಷ್ಟಾಪಿಸಿದ್ದಾರೆ. ಅವುಗಳಲ್ಲೊಂದು ಕವಿಶೈಲದ ಬಗ್ಗೆ ಬರೆದ ಕವನ.


"ಮಿತ್ರರಿರೆ, ಮಾತಿಲ್ಲಿ ಮೈಲಿಗೆ,ಸುಮ್ಮನಿರಿ,
ಮೌನವೇ ಮಹತ್ತಿಲ್ಲಿ, ಈ ಬೈಗು ಹೊತ್ತಿನಲಿ
ಕವಿಶೈಲದಲಿ, ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥ ಯೋಗಿಯಾಗಿದೆ ಮಹಾ ಸಹ್ಯಗಿರಿ!

ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ
ಕೊಂಕು ಬಿಂಕವ ಬೀರಿ ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತ ಮತ್ತೆ ಮರೆಯಾಗುತ್ತ ತೇಲುತಿರೆ
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೋ ತರುಲತ ಧರಾತಲದಿ!

ಪಟ್ಟಣದಿ, ಬೀದಿಯಲಿ, ಮನೆಯಲ್ಲಿ ಸರ್ವತ್ರ
ಇದ್ದೇ ಇದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೇ ಮಹಾಸ್ತೊತ್ರ!

ಯೋಚಿಸಿನೋಡಿ, ಇಷ್ಟೊಂದು ಅದ್ಭುತ ಕವನದ ಹುಟ್ಟು ಅವರಿಗೆ ಕವಿಶೈಲದ ಮೇಲಿದ್ದ ಅಘಾದ ಭಕ್ತಿಗೆ ಸಾಕ್ಷಿಯಲ್ಲವೇ? ತನ್ನ ತಾಯಿಯಂತೆ ಪೂಜಿಸಿ ಗೌರವಿಸುತ್ತಿದ್ದ ಕವಿಶೈಲ ಮೈಲಿಗೆಗೊಳಗಾಗುವುದು ಅರಗಿಸಲಾಗದ ಕಷ್ಟ ಅವರಿಗೆ!

ಗೆಳೆಯರೆ, ನೀವೂ ಹೋಗಿಬನ್ನಿ ಕವಿಯ ತಪೋವನ ಕವಿಶೈಲಕೆ, ಅಲ್ಲಿ ಸಿಗುವ ಸಂತೋಷವನ್ನು ನಾ ಹೇಳಲಾರೆ, ಅನುಭವಿಸಿ ಬನ್ನಿ. ನೀವೇ ಹೇಳಿ!


ಮಿತ್ರರಿರೆ,
ಸುಮ್ಮನಿರಿ, ಸದ್ದು ಮಾಡದಿರಿ
ವಿಶ್ವಮಾನವ ಸಂದೇಶ ಸಾರಿದ
ಮಹನೀಯನಿಹರಿಲ್ಲಿ
ಮಲಗಿಹರಿಲ್ಲಿ ಚಿರನಿದ್ರೆಯಲಿ
ಮಹಾಕವ್ಯ ಬರೆದ ದಣಿವಿನಲಿ
ಸಾಹಿತ್ಯ ಕೃಷಿಯ ಹರಿಕಾರ
ಜ್ನಾನಪೀಠ ಪಡೆದ ಸರದಾರ
ಮಲಗಿಹರಿಲ್ಲಿ, ಚಿರನಿದ್ರೆಯಲಿ............
ಸದ್ದು ಮಾಡದಿರಿ...........


ಅಲ್ಲಿ ನಾನು ತೆಗೆದ ಒಂದಿಷ್ಟು ಫೋಟೋಗಳು ನಿಮಗಾಗಿ........

Thursday, November 18, 2010

ವಿಪರ್ಯಾಸ.........

ಗೆಳತಿ,
ಹೂವಾಗಿ, ಹಣ್ಣಾಗಿ
ಕನಸಾಗಿ, ಕಣ್ಣಾಗಿ
ಹಿತದ ಗೆಳತಿಯಾಗಿ
ನನಗೆಲ್ಲಾ ನೀನಾಗಿ
 ದೇವತೆಯಾಗಿ 
ನನ್ನ ಮನದಲ್ಲಿ ನೀನಿದ್ದೆ............


ಆ ಒಂದು ಕ್ಷಣ
ಬಿಟ್ಟೆ ಎಲ್ಲಾ ಚಿಂತೆ
ಬಾಳ ಗುರಿಯ ಕತೆ
ಭವಿಸಿದ ಎಲ್ಲಾ ವ್ಯಥೆ
ಕೊನೆಗೆ ನನ್ನನ್ನೇ ಮರೆತೆ
ಆದರೂ
ಕೆಡಿಸಿ ಬಿಟ್ಟೆಯಲ್ಲೆ ನೀ ನಿದ್ದೆ.............!ಸ್ನೇಹಿತರೇ,
ಬ್ಲಾಗ್ ಲೋಕದಿಂದ ದೂರ ಉಳಿದು ತುಂಬಾ ದಿನಗಳಾದವು. ಎಂದೋ ಗೀಚಿದ್ದ ಈ ಸಾಲುಗಳು ಇಂದು ನೆನಪಾಗಿ ನಿಮ್ಮ ಮುಂದಿಟ್ಟಿದ್ದೇನೆ.
ಈ ಮಧ್ಯೆ ದೀಪಾವಳಿ ಬಂದು ಹೋಯಿತು, ಕನ್ನಡ ರಾಜ್ಯೋತ್ಸವ ಆಚರಣೆಯಾಯ್ತು, ಆದರೂ ನನ್ನ ಬ್ಲಾಗ್ ಮನೆಯ ಶೃಂಗಾರವಿಲ್ಲ, ತಳಿರು ತೋರಣಗಳಿಲ್ಲ. ಹಬ್ಬವಿಲ್ಲ, ನಿಮಗೆಲ್ಲ ಶುಭಾಷಯಗಳನ್ನೂ ಹೇಳಲಿಲ್ಲ. ಯಾರ ಮನೆಗೂ ಭೇಟಿಯಿಲ್ಲ, ನಿಮ್ಮ ಬರಹಗಳನ್ನೆಲ್ಲ ಓದಲೂ ಇಲ್ಲ.
ಹೌದು ನಾನು ತಪ್ಪು ಮಾಡಿದ್ದೇನೆ. 
ಆದರೆ ಏನು ಮಾಡುವುದು ಹೇಳಿ, ಕೆಲಸದ ಒತ್ತಡ ಅದೆಷ್ಟಿದೆಯೆಂದರೆ ಊಟ ನಿದ್ದೆಗೂ ಸಮಯವಿಲ್ಲ. ಹೊತ್ತು ಗೊತ್ತೆಂಬುದಿಲ್ಲ. ಹೊಸದಾಗಿ ಆರಂಭಗೊಂಡ 3 ತಾರಾ ಹೋಟೆಲ್ಲಿನ ಸಂಪೂರ್ಣ ಜವಬ್ದಾರಿ ನನಗೆ ಸಿಕ್ಕಿದ್ದರ ಕೊಡುಗೆ ಇದು! ಕೋಟ್ಯಾಂತರ ಖರ್ಚು ಮಾಡಿ ಪ್ರಾರಂಭಿಸಿದ ಈ ಹೋಟೆಲ್ಲನ್ನು ಮಗುವಿನಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯ ಅಲ್ಲವಾ? ಮಗು ಬೆಳೆದು ದೊಡ್ಡದಾದ ಮೇಲೆ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಇದೂ ಕೂಡ!
ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಇಣುಕಿ ಹೋಗುತ್ತಿದ್ದೇನೆ. ಆದಷ್ಟು ಬೇಗ ಸಮಯ ಮಾಡಿಕೊಂಡು ಎಲ್ಲರ ಮನೆಗೂ ಬಂದು ತರ್ಲೆ ಮಾಡುತ್ತಾ ಇರುತ್ತೇನೆ! ಉದಾಹರಣೆಗೆ 
ತಡವಾಗಿ ಮತ್ತು ಮುಂದಿನ ವರ್ಷಕ್ಕೆ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು!

ಅಲ್ಲಿಯವರೆಗೂ ಪ್ರೀತಿ ಮಮತೆ ಇಂದಿನಂತೆಯೇ ಇರಲಿ!
ನಿಮ್ಮವ........
ಮನದಾಳದಿಂದ.....   ಪ್ರವೀಣ್....

Sunday, September 26, 2010

ಭತ್ತದ ನಾಟಿ(ನಟ್ಟಿ)             ಸಾಸಿರಾರು ನೆನಪುಗಳನ್ನು ಹೊತ್ತು ಊರಿನಿಂದ ಮರಳಿ ಬಂದು ಹಲವು ದಿನಗಳೇ ಕಳೆದು ಹೋದವು. ದುಡಿಮೆಯ ನಿರಂತರ ಓಟದಲ್ಲಿ ಸುಂದರ ಕ್ಷಣಗಳಿಗಾಗಿ ಹುಡುಕಾಟ ನಡೆದೇ ಇದೆ. ಆದರೂ ನೆನಪುಗಳು ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುತ್ತವೆ. ನೆನಪುಗಳ ಹರಿವಿನ ನಡುವೆ ಜೀವನಕ್ಕಾಗಿ ಪರದಾಟ ಇದ್ದೇ ಇದೆ. 
             ಮಲೆನಾಡು ಎಂದರೆ ಸುಂದರ ಪ್ರಕೃತಿಯ ಬೀಡು. ದೇವರು ತನ್ನ ಶಕ್ತಿಯನ್ನೆಲ್ಲಾ ಸೌಂದರ್ಯದ ರೂಪದಲ್ಲಿ ಮಲೆನಾಡಿಗೇ ರವಾನಿಸಿರಬಹುದೇನೊ ಎಂಬ ಅನುಮಾನ ಬರುವುದು ಸಹಜ. ಸದಾ ಕಾಲವೂ ಹಸಿರಾಗಿ ಸುಂದರವಾಗಿ, ತಂಪಾಗಿ, ಸಮಾನ ಉಷ್ಣಾಂಶದಿಂದ ನಳನಳಿಸೊ ಸೌಂದರ್ಯ ರಾಶಿ ನಮ್ಮ ಮಲೆನಾಡು.
             ಮಲೆನಾಡಿನ ರೈತರಿಗೆ ವರ್ಷವಿಡೀ ಕೆಲಸವೇ. ಎಂದಿಗೂ ಕೆಲಸ ಇಲ್ಲ ಎಂಬ ದಿನವೇ ಇಲ್ಲ. ಜೂನ್ ತಿಂಗಳಿನಿಂದ ಶುರು ಆಗುವ ಕೆಲಸಗಳು ಮೇ ಅಂತದ ವರೆಗೂ ಇರುತ್ತವೆ. ಭತ್ತದ ನಾಟಿಯ ಕೆಲಸ, ತೋಟದ ಕಳೆ, ಅಡಕೆಯ ಔಷದಿ, ಗದ್ದೆ ಕೊಯ್ಲು, ಅಡಕೆ ಸುಲಿತ, ಎರಡನೆ ಬೆಳೆಯಾಗಿ ಮತ್ತೆ ಭತ್ತ, ಹುರುಳಿ, ಎಳ್ಳು, ಹೆಸರು, ಉದ್ದಿನಂತ ಬೇಳೆಕಾಳುಗಳು, ಬೇಸಿಗೆಯಲ್ಲಿ ಸೌತೆ, ಬದನೆ, ಕುಂಬಳ, ಮೆಣಸು, ಬೆಂಡೆ ಮುಂತಾದ ತರಕಾರಿಗಳ ಹಿತ್ತಿಲು, ಮಳೆಗಾಲಕ್ಕೆ ಕಟ್ಟಿಗೆಯ ಸಂಗ್ರಹ.............ಹೀಗೆ ನಿರಂತರ ಕೆಲಸಕಾರ್ಯಗಳೇ!
              ಇಂತಹ ಕೆಲಸಗಳಲ್ಲೇ ಭತ್ತದ ನಾಟಿ(ನಟ್ಟಿ) ಮುಖ್ಯವಾದ ಕೆಲಸ. ಮೊದಲೆಲ್ಲಾ ಮಳೆಯ ಕಣ್ಣುಮುಚ್ಚಾಲೆ ಅಷ್ಟಾಗಿ ಇರಲಿಲ್ಲ. ಅದ್ದರಿಂದ ಮೇ ತಿಂಗಳಲ್ಲೇ ಬೀಜ ಹಾಕಿ ಆಗಿರುತ್ತಿತ್ತು. ಜುಲೈ ಅಂತ್ಯದಲ್ಲಿ ನಟ್ಟಿಯ ಕೆಲಸ ಮುಗಿದಿರುತ್ತಿತ್ತು. ಮಳೆಗಾಲದ ಕಾಲಚಕ್ರ ಬದಲಾದಂತೆ, ನಿಯಮಗಳೂ ಬದಲಾದವು. ಈಗ ಮಳೆ ಶುರು ಆದ ನಂತರವೇ ಬೀಜ ಹಾಕುತ್ತಾರೆ. ಹಾಗಾಗಿ ಸೆಪ್ಟೆಂಬರ್ ಬಂದರೂ ನಟ್ಟಿ ಮುಗಿದಿರುವುದಿಲ್ಲ! 
               ಬೀಜ ಹಾಕಿ ತಿಂಗಳು ಕಳೆಯುವಷ್ಟರಲ್ಲಿ ಸಸಿ ಬೆಳೆದು ನಾಟಿಯ ಹಂತಕ್ಕೆ ಬರುತ್ತದೆ. ಅಷ್ಟರಲ್ಲಾಗಲೇ ಗದ್ದೆ ಉಳುಮೆ ಮಾಡಿ ಹದಗೊಳಿಸಿರಲಾಗುತ್ತದೆ. ಮೂರರಿಂದ ನಾಲ್ಕು ಸಾಲು ಹೂಟೆ ಮುಗಿದಿರುತ್ತದೆ. ಆಮೇಲೆ ಶುರು ಆಗುವುದೇ ನಿಜವಾದ ನಟ್ಟಿಯ ಚಿತ್ರಣ! ಗದ್ದೆಯಲ್ಲಿ ಎಲ್ಲಿ ನೋಡಿದರೂ ಗೊರಬು, ಕಂಬಳಿ ಕೊಪ್ಪೆ, ಎತ್ತು ಕೋಣಗಳು.....!ಜನರಲ್ಲಿ ಏನೋ ಉತ್ಸಾಹ, ಇಡೀ ವರ್ಷದ ಅನ್ನಕ್ಕಾಗಿ ಬೆವರಿಳಿಸುವ ತವಕ! 
               ಈಗ ಕೂಲಿಕಾರ್ಮಿಕರ ಸಮಸ್ಯೆ ನಮಗಿಲ್ಲ. ಏಕೆಂದರೆ ನಮ್ಮಲ್ಲಿ ಕೂಲಿಗಳೇ ಇಲ್ಲ! ಅನಿಯಮಿತ ಸಹಕಾರ ಪದ್ಧತಿ ನಮ್ಮ ಮಲೆನಾಡಿನಲ್ಲಿದೆ. ಅದಂರತೆ ಊರಲ್ಲಿ ಕೆಲವಷ್ಟು ಮನೆಯವರೆಲ್ಲಾ ಸೇರಿ ಒಟ್ಟಾಗಿ ಕೆಲಸಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಅವರ ಕೆಲಸಕ್ಕೆ ನಾವು ಹೋಗುವುದು, ನಮ್ಮ ಕೆಲಸಕ್ಕೆ ಅವರು ಬರುವುದು. ಮಲೆನಾಡಿನಲ್ಲಿ ಪರಸ್ಪರ ಮನೆಗಳ ಅಂತರ ಬಹಳ ದೂರ. ಒಂದು ಕಿಲೋಮೀಟರ್ ಅಂತರದಲ್ಲಿ ಎರಡು ಅಥವಾ ಮೂರು ಮನೆಗಳು ಸಿಗಬಹುದು. ಹಾಗಾಗಿ ಆದಷ್ಟು ಹತ್ತಿರದ ಮನೆಗಳ ಜನರು ಒಂದಾಗಿ ಕೆಲಸ ಮಾಡುತ್ತಾರೆ. ಯಾವುದೇ ಕೆಲಸವಾದರೂ ಸೈ, ಎಲ್ಲರೂ ಒಟ್ಟಾಗಿ ಕೆಲಸ ಮುಗಿಸುತ್ತಾರೆ.
               ಈಗೀಗ ಇನ್ನೊಂದು ಸಮಸ್ಯೆ ಎಲ್ಲಾ ಹಳ್ಳಿ ರೈತರಿಗೂ ತಲೆದೋರುತ್ತಿದೆ. ಅದೇನೆಂದರೆ ನಮ್ಮಂತ ಯುವ ಪೀಳಿಗೆಯ ನಗರ ಪಲಾಯನ ಸೂತ್ರ! ನಾಲ್ಕಕ್ಷರ ಕಲಿತ ಕೋಡು ಮೂಡಿ ನಾವು ನಗರಕ್ಕೆ ಪಲಾಯನ ಮಾಡುತ್ತಿದ್ದೇವೆ. ಕಾರಣ ಹಳ್ಳಿಯಲ್ಲಿ ಭವಿಷ್ಯ ಇಲ್ಲ ಎಂಬ ದೂರು. ರೈತ ಕೆಲಸಕ್ಕೆ ಯಾರೂ ಇಲ್ಲ. ಕೆಲವಷ್ಟು ಕಾರ್ಯಗಳನ್ನು ಯಂತ್ರಗಳು ನಿರ್ವಹಿಸಬಲ್ಲವು. ಆದರೆ ಸಂಪೂರ್ಣ ಕೆಲಸಗಳನಲ್ಲ!
ಇರಲಿ, ವಿಷಯಕ್ಕೆ ಬರೋಣ!
             ನಟ್ಟಿಯ ಮೊದಲ ದಿನ ಸಸಿ ಕೀಳುವ ಕಾರ್ಯ. ಕಿತ್ತ ಸಸಿಯನ್ನು ಕಟ್ಟು ಮಾಡಿ ಇಡುವುದು. ಹೀಗೆ ಒಬ್ಬ ಹೆಂಗಸು ಒಂದು ದಿನದಲ್ಲಿ ಕೀಳುವ ಸಸಿ ಕಟ್ಟಿನ ಸಂಖ್ಯೆ ಸುಮಾರು 9 ರಿಂದ 11 ಮೆದೆ(ಒಂದು ಮೆದೆ ಎಂದರೆ ಇಪ್ಪತ್ತು ಕಟ್ಟು). ಸಾದಾರಣವಾಗಿ ಹೆಂಗಸರೇ ಸಸಿ ಕೀಳುವುದು ಹೆಚ್ಚು! ಕಿತ್ತ ಸಸಿಗಳನ್ನು ನೀರಿಂದ ಮೇಲೆ ಎತ್ತಿಡುವುದು , ಹಾಗೆ ಎತ್ತಿಟ್ಟ ಸಸಿ ಕಟ್ಟಿನ ನೀರು ಇಳಿದ ಮೇಲೆ ಹೆಡಗೆ(ಬುಟ್ಟಿ)ಯಲ್ಲೋ, ಹಗ್ಗ ಕಟ್ಟಿಯೋ ನೆಡುವ ಜಾಗಕ್ಕೆ ಕೊಂಡೊಯ್ದು ಹಾಕುವುದು ಗಂಡಸರ ಕೆಲಸ! ಇದಿಷ್ಟು ಮೊದಲ ದಿನದ ಚಿತ್ರಣ.
             ನಾಟಿಯ ದಿನ ಹೂಟೆ ಮುಂಚಿತವಾಗಿ ಆರಂಭವಾಗುತ್ತದೆ.  ಎತ್ತು/ಕೋಣಗಳ ಜೋಡಿ ಸಾಲು ಹೂಟೆಯಲ್ಲಿ ಕಂಡುಬರುತ್ತವೆ. ನಾಟಿ ಮಾಡಲು ಇರುವ ಜನರ ಸಂಖ್ಯೆಯ ಮೇಲೆ ಎಷ್ಟು ಜೋಡಿ ಎತ್ತುಗಳು ಬೇಕೆಂಬುದನ್ನು ನಿರ್ಧರಿಸುತ್ತದೆ. ಉದಾಹರಣೆಗೆ ೧೨ರಿಂದ ೧೫ ಜನರಿಗೆ ೪ರಿಂದ ೫ ಜೋಡು ಬೇಕಾಗುತ್ತದೆ.(ಹೂಟೆಯ ಜೋಡಿ ಎತ್ತು/ಕೋಣಗಳಿಗೆ ಜೋಡು ಎಂದು ಕರೆಯುತ್ತಾರೆ.) ಹೂಟೆಯು ಮುಂದುವರೆದಂತೆ ನಟ್ಟಿ ಶುರು ಆಗುತ್ತದೆ. ನಳ್ಳಿ ಹೊಡೆದು ಸಮತಟ್ಟಾದ ನಂತರ ಸಸಿ ಕಟ್ಟಿನ ತಲೆಭಾಗ ಸ್ವಲ್ಪ ಕೊಯ್ದು ಗದ್ದೆಗೆ ಎಸೆಯಲಾಗುತ್ತದೆ. ಆ ಕಟ್ಟುಗಳನ್ನು ಬಿಚ್ಚಿ ೩-೫ ಸಸಿಗಳನ್ನು ಒಟ್ಟೊಟ್ಟಿಗೆ ನೆಡುತ್ತಾರೆ. 
ಈಗಲೂ ಕೂಡಾ ನಮ್ಮಲ್ಲಿ ನಟ್ಟಿ, ಗದ್ದೆಕೊಯ್ಲಿನ ಸಂದರ್ಭದಲ್ಲಿ ಹೆಂಗಸರು ಹಾಡು ಹೇಳುತ್ತಾರೆ. ಆದರೆ ವ್ಯತ್ಯಾಸ ಇಷ್ಟೆ. ಹಿಂದೆ ಜನಪದ ಗೀತೆಗಳ ಸೊಗಡು ತುಂಬಿದ್ದರೆ ಈಗ ಚಲನಚಿತ್ರ ಗೀತೆಗಳು. ಆಗೊಮ್ಮೆ ಈಗೊಮ್ಮೆ ಹಳೆಯ ತಲೆಗಳಿಂದ ಜಾನಪದ ಗೀತೆಗಳೂ ಕೇಳಿ ಬರುವುದುಂಟು. ಆದರೆ ತುಂಬಾ ಕಡಿಮೆ. ಈಗಿನ ಹೆಣ್ಣುಮಕ್ಕಳು ಹಳಬರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟು ಬೆಳೆಸಿಕೊಳ್ಳದೆ ತಿರಸ್ಕಾರ ಮಾಡಿದ್ದು ನಾನು ಕಣ್ಣಾರೆ ಕಂಡ ಸತ್ಯ! ಆದರೂ ಒಂದು ತೃಪ್ತಿ ಎಂದರೆ ಎಲ್ಲವೂ ಕನ್ನಡ ಹಾಡುಗಳೇ ಎಂಬುದು. ಮುಂದೊಂದು ದಿನ ಆ ಸ್ಥಾನವನ್ನು ಹಿಂದಿಯ ಹಾಡುಗಳೋ, ಅಥವಾ ತಮಿಳು ತೆಲುಗಿನ ಹಾಡುಗಳು ಆಕ್ರಮಿಸಿಕೊಂಡರೆ ಆಶ್ಚರ್ಯವೇನಿಲ್ಲ! ಬದಲಾವಣೆ ಪ್ರಕೃತಿಯ ನಿಯಮ.......
            ನಟ್ಟಿಯ ಸಂದರ್ಭದಲ್ಲಿ ಊಟ ತಿಂಡಿಗಳು ಗದ್ದೆಯಲ್ಲಿಯೇ ನದೆಯುತ್ತವೆ. ಸಾಧಾರಣವಾಗಿ ತಿಂಡಿಯೆ ಹೆಚ್ಚು. ಬೆಳಿಗ್ಗೆ ಊಟ ಮಾಡುವ ಪದ್ಧತಿಯನ್ನು ನಮ್ಮೂರಲ್ಲಿ ನೋಡಬಹುದು. ಕುಚ್ಚಲಕ್ಕಿಯ ಗಂಜಿ ಈಗ ಅಲ್ಲಲ್ಲಿ ಮರೆಯಾಗಿದೆ. ಮೊದಲೆಲ್ಲಾ ಬೆಳಿಗ್ಗೆ ಕಂಚಿನ ಬಟ್ಟಲಲ್ಲಿ ಎರಡುಬಟ್ಟಲು ಗಂಜಿ ಉಂಡು ಗದ್ದೆಗೆ ಹೋಗುತ್ತಿದ್ದರು. ಈಗ ಕುಚ್ಚಲಕ್ಕಿ ಊಟ ಕಡಮೆಯಾಗಿದೆ. ಬೆಳಗ್ಗಿನ ಊಟದ ಪದ್ದತಿ ಇದೆ. ಗದ್ದೆಗೆ ಮಧ್ಯಾಹ್ನ ಕಡುಬು ತಿಂಡಿಯ ರೂಪದಲ್ಲಿ ತರಲಾಗುತ್ತದೆ. ಕಡುಬು ಸಕಲರಿಗೂ ಮೆಚ್ಚು, ಮಾಡುವುದೂ ಸುಲಭ. ಏನಾದರೂ ಒಂದು ಸಾರು ಮಾಡಿದರೆ ಆಯ್ತು. ಹೆಚ್ಚು ಕಷ್ಟವೇ ಇಲ್ಲ.
ಬಿಸಿ ಬಿಸಿ ಕಾಫಿಯ ಸೇವೆ ಮಧ್ಯ ಒಂದೆರೆಡು ಬಾರಿ ಇರುತ್ದೆ. ಆಗಾಗ ಎಲೆ ಅಡಿಕೆಯಂತೂ ಇದ್ದೇ ಇರುತ್ತದೆ. ಬಿರುಮಳೆಯಿಂದ ಉಂಟಾದ ಚಳಿಯ ರಕ್ಷಣೆಗೆ ಎಲೆ ಅಡಿಕೆ ಸರ್ವೋಚ್ಛ ಸಾಧನ. ಎಳೆಯರಿಂದ ಮುದುಕರವರೆಗೂ ಎಲ್ಲರೂ ಎಲೆ ಅಡಿಕೆಯ ದಾಸಾನುದಾಸರೇ!  
             ಅದೇ ಮೊದಲ ದಿನದ ನಟ್ಟಿಯಾದರೆ "ದೊಡ್ನಟ್ಟಿ" ಎಂದು ಕರೆಸಿಕೊಳ್ಳುತ್ತದೆ. ಸಂಜೆ ನಟ್ಟಿ ಮುಗಿದ ನಂತರ ಗದ್ದೆ ಮಧ್ಯೆ ಮುಂಡುಗವನ್ನು ನೆಟ್ಟು ಹಲಸಿನ ಹಣ್ಣನ್ನು ಕಡಿದು ಎಲ್ಲರಿಗೂ ಹಂಚಲೇ ಬೇಕು. ಆ ದಿನ ಹಲಸಿನ ಹಣ್ಣಂತೂ ಇರಲೇಬೇಕು!
             ಅಂತೂ ನಟ್ಟಿಯನ್ನು ಮುಗಿಸಿ, ಜೋಪಾನವಾಗಿ ನೋಡಿಕೊಂಡು ಬರಲಾಗುತ್ತದೆ. ಹತ್ತರಿಂದ ಹದಿನೈದು ದಿನಗಳಲ್ಲೆ ಹೊಸ ಚಿಗುರು ಬರಲಾರಂಭಿಸುತ್ತದೆ. ಎರೆಡು ತಿಂಗಳು ಕಳೆಯುವಷ್ಟರಲ್ಲಿ ತನೆಗಳು ಮೂಡಲಾರಂಭಿಸುತ್ತವೆ. 
ಮಧ್ಯದಲ್ಲಿ ಎಲ್ಲಾದರೂ ಮಳೆ ಕೈ ಕೊಟ್ಟು ಹೆಚ್ಚೊ  ಕಡಿಮೆಯೋ ಆದರೆ ಮುಗಿಯಿತು. ರೈತ ರಕ್ತದಂತೆ ಇಳಿಸಿದ ಬೆವರಿಗೆ ಕವಡೆ ಕಿಮ್ಮತ್ತೂ ಇಲ್ಲದಂತಾಗುತ್ತದೆ. ಪಟ್ಟ ಕಷ್ಟಕ್ಕೆ ಬೆಲೆಯೆ ಇಲ್ಲವಾಗುತ್ತದೆ. ಆದರೂ ದೇಶದ ಬೆನ್ನೆಲುಬಾಗಿ ರೈತ ನಾಳೆಯ ಭರವಸೆಯೊಂದಿಗೆ ಬದುಕುತ್ತಾನೆ. ಈ ವರ್ಷ ಏನೂ ತೊಂದರೆ ಆಗಲಾರದು ಎಂಬ ನಂಬಿಕೆ ತುಂಬಿರುತ್ತದೆ. ಚೌಡಿಗೆ ಕೊಡುವ ಹರಕೆಯಲ್ಲಿ ಒಂದು ಸಂಖ್ಯೆ ಹೆಚ್ಚಾಗುತ್ತದೆ. ಕಾಕತಾಳೀಯವೋ ಎಂಬಂತೆ ಅತೀ ಹೆಚ್ಚಲ್ಲದಿದ್ದರೂ ತೊಂದರೆಯಿಲ್ಲದೆ ಈ ವರ್ಷ ಕೆಲಸ ಕಾರ್ಯಗಳು ಮುಗಿದು ಬೆಳೆ ಕೈಗೆ ಸಗುತ್ತದೆ. ಚೌಡಿಗೆ ಒಂದು ಜಾಸ್ತಿ ಕೊಟ್ಟಿದ್ದು ವ್ಯರ್ಥವಾಗಲಿಲ್ಲ ಎಂಬ ಸಂತೋಷ ರೈತನ ಮೊಗದಲ್ಲಿ ನಲಿದಾಡುತ್ತದೆ.


ನಮ್ಮ ಮನೆಯ ನಟ್ಟಿಯ ಸಮಯದ ಕೆಲವು ಚತ್ರಗಳು ಇಲ್ಲಿ ನಿಮಗಾಗಿ, ನೊಡಿ.........ನಳ್ಳಿ ಹೊಡೆಯುತ್ತಿರುವ ನನ್ನ ತಮ್ಮ (ನಳ್ಳಿ ಎಂದರ ಹೂಟೆ ಮಾಡಿದ ಭೂಮಿಯ ಉಬ್ಬುತಗ್ಗುಗಳನ್ನು ಮುಚ್ಚಲು ಬಳಸುವ ಸಾಧನ)
ಸಸಿ ಕೀಳುತ್ತಿರುವ ನಮ್ಮೂರ ಮಹಿಳೆಯರುಕಿತ್ತಿಟ್ಟ ಸಸಿ ಕಟ್ಟುಗಳು.


 
ನೀವು ಕಾಫಿ ಕುಡೀರಿ, ನಾನು ಹಾಗೆ ಸ್ವಲ್ಪ ಹುಲ್ಲು ಮೇಯ್ತೇನೆ. ಆಮೇಲೆ ಬರಲು ಆಗಲ್ಲ!
ಅಬ್ಬ....ಎಷ್ತು ತಣ್ಣಗಾಗ್ತ ಇದೆ ಈ ಕೆಸರಲ್ಲಿ.......
ಎತ್ತು ಮತ್ತು ಕೋಣಗಳು ವಿಶ್ರಾಂತಿಯಲ್ಲಿ.


 
 ನೆಗಿಲ ಯೋಗಿ........
ಸೀನಣ್ಣ ಮತ್ತು ನಮ್ಮ ಚಿಕ್ಕಪ್ಪ ಹೂಟೆಯಲ್ಲಿ ನಿರತ....
  ಹೀಗೆ ನಮ್ಮಲ್ಲಿ ನಾಟಿ ಮಾಡುವುದು......

   ತಲೆ ಕತ್ತರಿಸಿಕೊಂಡ ಭತ್ತದ ಸಸಿ ಕಟ್ಟುಗಳು.

 ನೀವು ಎಲೆ ಅಡಿಕೆ ತಿನ್ನಿ, ನಾವು ಹಾಗೆ ಸ್ವಲ್ಪಹೊತ್ತು ಕೆಸರಲ್ಲಿ ಮಲಗಿ ವಿಶ್ರಮಿಸುತ್ತೇವೆ ಎನ್ನುವ ಕೋಣಗಳು
ಇರಿ ಬಂದೆ, ತಮ್ಮ ಒಬ್ನೆ ಹೂಡ್ತಾ ಇದ್ದಾನೆ, ನಾನು ಸ್ವಲ್ಪ ಹೊತ್ತು ನಳ್ಳಿ ಹೊಡಿತೀನಿ
ನಾನೂ ಕೆಲ್ಸ ಮಾಡ್ತಾ ಇದ್ನಪ್ಪಾ.......ತಿಂಡಿ, ಎಲೆಅಡಿಕೆ ಎಲ್ಲ ಗದ್ದೆಯಲ್ಲೇ.....!